Wednesday, November 27, 2024

ಸತ್ಯ | ನ್ಯಾಯ |ಧರ್ಮ

ನೆಲದ ತವಕ – 3 : ಅಪ್ಪಣೆಯಿಲ್ಲದೆ ಒಳಗೆ ಪ್ರವೇಶವಿಲ್ಲ

“..ಈ ಮೇಲಿನ ಶೀರ್ಷಿಕೆಯನ್ನು ನಾವೆಲ್ಲರೂ ಓದಿದ್ದೇವೆ, ಕೇಳಿದ್ದೇವೆ. ನೆನಪು ಮಾಡಿಕೊಳ್ಳುತ್ತಿದ್ದೀರಾ? ಓಹೋ.. ಸಾಮಾನ್ಯವಾಗಿ ಎಲ್ಲಾ ಹೋಟೆಲ್‌ಗಳ ಅಡುಗೆಮನೆಯನ್ನು ಪ್ರವೇಶಿಸುವ ಮುನ್ನ ಕೆಂಪು ಅಕ್ಷರದಲ್ಲಿ ಸಾಮಾನ್ಯವಾಗಿ ಈ ತೆರನಾದ ನಾಮಫಲಕವನ್ನು ತೂಗು ಹಾಕಿರುತ್ತಾರೆ…” ಒಂದು ಸ್ವಾರಸ್ಯಕರ ಅನುಭವಕ್ಕಾಗಿ ಈ ಬರಹ ಓದಿ.. ಲೇಖಕರಾದ ಶ್ರೀಪತಿ ಹಳಗುಂದ ಅವರ ಬರಹದಲ್ಲಿ

ಒಮ್ಮೆ ಹೀಗಾಯಿತು. ನಾನು ನನ್ನ ಗೆಳೆಯ ಹೋಟೆಲೊಂದಕ್ಕೆ ಹೋಗಿದ್ದೆವು. ಸಹಜವಾಗಿಯೇ ಸರ್ಕಾರಿ ನೌಕರರು ಎಂಬ ಗತ್ತಿನಿಂದಲೇ ಒಳಹೋದೆವು. ಗಂಭೀರವಾಗಿ ಕುಳಿತೆವು. ನನ್ನ ಗೆಳೆಯ ಕೈಬೆರಳಿನಿಂದಲೇ ಸಪ್ಲೆಯರನ್ನು ಕರೆದು ಇನ್ನೂ ಈ ಹಿಂದೆ ತಿಂದು ಹೋದ ಗಿರಾಕಿಯ ಪ್ಲೇಟನ್ನು ತೆಗೆಯದೇ ಇರುವುದರಿಂದ ಗಟ್ಟಿ ಧ್ವನಿಯಲ್ಲಿ “ಏನಯ್ಯ ಇದು ಹೋಟೆಲ್ಲಾ.. ಬಸ್ ಸ್ಟ್ಯಾಂಡಾ..” ಎಂದು ಗದರಿಸಿದ. ಮುಂದುವರಿದು “ಕ್ಲೀನ್ ಮಾಡೋ” ಎಂದ.

“ಸರ್ ಇದು ಹೋಟೆಲ್, ಬಸ್‌ಸ್ಟ್ಯಾಂಡ್ ಅಲ್ಲ” ಎಂದ. ಗೆಳೆಯನ ಮುಖ ಕೆಂಪಾಯಿತು.
“ಮತ್ತೇನು?” ಅಂದ.
ಅದಕ್ಕೆ ಸಪ್ರೈಯರ್‌ ನಗುತ್ತಲೇ “ಬಸ್‌ಸ್ಟ್ಯಾಂಡ್ ಹೋಟೆಲ್ ಅಂತ ಕರೀತಾರೆ” ಎಂದ.

ಅವನ ಜಾಣ್ಮೆಗೆ ನನಗೆ ನಗು ಬಂತು. ಗೆಳೆಯ ಇನ್ನೂ ಸಿಟ್ಟಿನಿಂದ ಇದ್ದ ಕಾರಣ ನಾನು ನಕ್ಕು ಅಪಹಾಸ್ಯಕ್ಕೋ ಅವನಿಗೆ ಮುಜುಗರ ಉಂಟುಮಾಡಲು ಇಷ್ಟವಾಗಲಿಲ್ಲ. ಒಳಗೊಳಗೆ ನಕ್ಕು ಒಂದು ಕಾಲದಲ್ಲಿ ನಾನು ಹೋಟೆಲ್ ಸಪ್ಲೆಯರ್ ಆಗಿದ್ದನ್ನು ನೆನಸಿಕೊಂಡು ಸುಮ್ಮನಾದೆ.

ಮುಂದುವರಿದ ಸಫೈಯರ್ “ಸರ್ ಕ್ಲೀನಿಂಗ್‌ಗೆ ಕಳಿಸ್ತೀನಿ. ನಾನು ಸಪ್ಲೆಯರ್ ಎಂದು ಸ್ವಾಭಿಮಾನದಿಂದ ಹೇಳಿದ. “ಏ ಬಾರೋ ಇಲ್ಲಿ, ಕ್ಲೀನ್ ಮಾಡೋ” ಎಂದು ಗಟ್ಟಿದನಿಯಲ್ಲಿ ಕೂಗಿದ ಕ್ಲೀನರ್‌ಗೆ

ಆ ದನಿಯಲ್ಲಿ ಸರ್ ನಮಗೆ ನೀವು ಗದರಿಸಿದರೆ ನಾನು ಇನ್ನೊಬ್ಬರಿಗೆ ಗದರಿಸುವ ಹಕ್ಕಿದೆ ಎಂದು ನಮ್ಮಿಬ್ಬರಿಗೆ ಚಾಟಿ ಬೀಸುವಂತೆ ಹೇಳುವಂತಿತ್ತು. ನಾನು ಕೇಳಿದೆ “ಸರಿ ತಿಂಡಿ ಏನಿದೆ” ಎಂದು.
ಅದಕ್ಕವನು 18-19 ತಿಂಡಿ ಹೆಸರು ಪಟಪಟನೆ ಹೇಳಿದ. ಅವನ ನೆನಪಿನ ಶಕ್ತಿಗೆ ಮಾರುಹೋದೆವು. ನಾವಿಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡೆವು. ಗೆಳೆಯನ ದನಿ ಸ್ವಲ್ಪಮಟ್ಟಿಗೆ ತಗ್ಗಿತ್ತು.

ನನ್ನನ್ನು ಕೇಳಿದ “ಆತ ಹೇಳಿದ ತಿಂಡಿಗಳ ಹೆಸರು ನಿನಗೆ ನೆನಪಿದೆಯಾ” ಎಂದು.
ನಾನು “ಮೊದಲ ತಿಂಡಿಯ ಹೆಸರು ನೆನಪಿದೆ” ಎಂದೆ.
ಅದಕ್ಕವನು “ನನಗೆ ಕೊನೆಯ ತಿಂಡಿ ನೆನಪಿದೆ” ಎಂದ.

ನಮ್ಮಿಬ್ಬರ ಅಹಂ ಸ್ವಲ್ಪ ಮಾಯವಾಗಿತ್ತು. ಸಪ್ಲೆಯರ್ ಎದೆಯುಬ್ಬಿಸಿ ನಿಂತಿದ್ದ. ಅವನಿಗೂ ನಮ್ಮ ಅಸಹಾಯಕತೆ ಗೊತ್ತಾಗಿತ್ತು.
ಸರ್ ಬೇಗ ಹೇಳಿ” ಎಂದ.
ಪಕ್ಕದ ಟೇಬಲ್ಲಿನವರು “ಏ ಮರಿ.. ಬಾರೋ” ಎನ್ನುತ್ತಿದ್ದರು.

ಆತ ಅತ್ತಿತ್ತ ನೋಡಿ ನಮ್ಮ ಕಡೆಗೂ ನೋಡಿದ. ಇನ್ನೊಮ್ಮೆ ಹೇಳಲಿ ಎನ್ನುವ ಆಸೆಯಿತ್ತು ಸಪ್ಲೇಯರಿಗೆ. ಮರ್ಯಾದೆ ಪ್ರಶ್ನೆ ಎದುರಾಗಿ ಇಬ್ಬರೂ ನಮನಮಗೆ ನೆನಪಿರುವ ತಿಂಡಿ ಆರ್ಡರ್ ಮಾಡಿದೆವು. ಆ ಮೂಲಕ ಹೋಗಲಿದ್ದ ಮರ್ಯಾದೆಯನ್ನು ಉಳಿಸಿಕೊಂಡೆವು. ದುರಾದೃಷ್ಟವಶಾತ್ ಆ ಎರಡೂ ತಿಂಡಿಗಳು ನಮಗೆ ಇಷ್ಟವಿರಲಿಲ್ಲ. ನಮ್ಮ ಅಹಂಗೆ ನಾವೇ ಪ್ರತಿಫಲ ಉಂಡೆವು.

ಅಷ್ಟರಲ್ಲಿ “ಸರ್” ಎಂದ ಸಪ್ಲೆಯರ್ “ಕಾಫಿ, ಟೀ, ಹಾರ್ಲಿಕ್ಸ್, ಕೋಲಾ, ಮಾಜಾ..” ಎಂದು “ಇವುಗಳಲ್ಲಿ ಯಾವುದು ಬೇಕು” ಎಂದ.
“ಬೈ ಟು ಕಾಫಿ” ಎಂದೆವು.

ಹೋದವನೇ ಒಂದೇ ಕೈಯಿನ ಮೂರು ಬೆರಳಲ್ಲಿ ತಂದು ಗೆಳೆಯನ ಎದುರಿಗೆ ಒಂದಿಟ್ಟು ನನ್ನ ಬಳಿ ಇನ್ನೊಂದನ್ನು ಬಡಿದ. ಅವನ ಕೈಚಳಕಕ್ಕೆ ಮಾರುಹೋದೆವು.

ಗೆಳೆಯ ಹೇಳಿದ “ಲೋ ಇಂಥವರೆಲ್ಲ ಸರ್ಕಾರಿ ಕೆಲಸಕ್ಕೆ ಬರಬೇಕು” ಎಂದ.
ನಾನು ಕೇಳಿದೆ “ಏಕೆ” ಎಂದು,
“ಅವನ ನೆನಪಿನ ಶಕ್ತಿ, ಕ್ರಿಯಾಶೀಲ ವ್ಯಕ್ತಿತ್ವ, ಕೈಚಳಕ ನೋಡಿ ಖುಷಿಯಾಯಿತು” ಎಂದ.
ನಾನು ಹೇಳಿದೆ “ಎಲ್ಲರೂ ಅವರವರ ಕ್ಷೇತ್ರದಲ್ಲಿ ಪರಿಣಿತರೇ ಮಾರಾಯ, ಯಾರನ್ನೂ ಹಗುರವಾಗಿ ಪರಿಗಣಿಸಬೇಡ.” ನಸುನಗುತ್ತಲೇ ಒಪ್ಪಿಕೊಂಡ.
ಇಬ್ಬರ ಗಮನ ಅಡುಗೆಮನೆಯ ಪ್ರವೇಶದಲ್ಲಿ ತೂಗುಹಾಕಿದ ಕೆಂಪುಬಣ್ಣದ ‘ಆಪ್ಪಣೆಯಿಲ್ಲದೆ ಒಳಗೆ ಪ್ರವೇಶವಿಲ್ಲ’ ಎಂಬ ನಾಮಫಲಕದತ್ತ ಹೋಯಿತು.

ಆತ ಕೇಳಿದ ನನ್ನನ್ನು “ಲೋ ಶ್ರೀಪತಿ, ಎಲ್ಲಾ ಹೋಟೆಲ್‌ನಲ್ಲಿ ಈ ಫಲಕ ಯಾಕೆ ಹಾಕುತ್ತಾರೆ” ಎಂದು.
ನಾನು ಹೇಳಿದೆ “ಒಳಗೆಲ್ಲ ಹುಳುಕು ಮೇಲೆಲ್ಲ ತಳುಕು” ಎಂದು. ಅದಕ್ಕವನು ಕುತೂಹಲದಿಂದ “ಬಿಡಿಸಿ ಹೇಳು ಮಾರಾಯ” ಎಂದ. “ಹೌದು ಕಣೋ.. ಒಳಗಿನ ಚಿತ್ರಣವೇ ಬೇರೆ, ಹೊರಗಿನ ಚಿತ್ರಣನೇ ಬೇರೆ” ಎಂದೆ.
“ಸಾವಿರಾರು ಜನರಿಗೆ ಅಡುಗೆ ಮಾಡುವಾಗ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಕಷ್ಟ. ಒಳಗೆ ನೋಡಿದವರು ಹೊರಗೆ ತಿಂಡಿ ತಿನ್ನುವುದಿಲ್ಲ” ಎಂದೆ.

ಮತ್ತಷ್ಟು ಕುತೂಹಲದಿಂದ ಕುಳಿತ ಗೆಳೆಯ. ಕುಳಿತಲ್ಲಿಂದಲೇ ಅಡುಗೆಮನೆಯತ್ತ ಕಣ್ಣಾಯಿಸಿದೆವು. ನಾಮಫಲಕದ ಕೆಳಗಡೆ ಉದ್ದನೆಯ ನೀಲಿ ಬಣ್ಣದ ಪರದೆಯನ್ನು ತೂಗು ಹಾಕಿದ್ದರು. ಅದು ಗಾಳಿಗೆ ಅಪರೂಪಕ್ಕೊಮ್ಮೆ ಹಾರಿ ಅಡುಗೆಮನೆಯ ವಾಸ್ತವ ಚಿತ್ರಣವನ್ನು ಬಂದ ಗಿರಾಕಿಗಳಿಗೆ ತೋರಿಸುತ್ತಿತ್ತು. ಪೂರ್ಣವಾಗಿ ನೋಡಬೇಕು ಎನ್ನುವಷ್ಟರಲ್ಲಿ ಹೋಟೆಲ್ ಮಾಲಿಕನ ಅನ್ನದ ಋಣವು ನೆನಪಾಗಿ ಅಡುಗೆಮನೆಯ ಮರ್ಯಾದೆಯನ್ನು ಹರಾಜು ಹಾಕದಂತೆ ತಡೆಯುತ್ತಿತ್ತು.

ಆದರೂ ನಾವಿಬ್ಬರೂ ಕ್ಷಣಮಾತ್ರದಲ್ಲಿ ನೋಡಿಕೊಂಡೆವು. ನನಗೆ ಅಷ್ಟೊಂದು ಆಶ್ಚರ್ಯವಾಗಲಿಲ್ಲ. ಏಕೆಂದರೆ ಸುಮಾರು ಆರೇಳು ವರ್ಷ ಸಾಗರದ ಕೆಲವು ಹೋಟೆಲ್‌ಗಳಲ್ಲಿನ ಕೆಲ ಚಿತ್ರಣಗಳನ್ನು ಈ ಕಣ್ಣು ತುಂಬಿಕೊಂಡಿತ್ತು. ಗೆಳೆಯ ಹೌಹಾರಿದ.

“ಲೋ ಇದೇನೋ, ಅಲ್ಲೇ ತೊಳೀತಾರೆ, ಅಲ್ಲೇ ರುಬ್ಬುತಾರೆ. ಅಲ್ಲೇ ಬೋಂಡಾ ಬಿಡ್ತಾರೆ, ಅಲ್ಲೇ ಕಾಫಿ, ಟೀ ಕಾಯಿಸ್ತಾರೆ. ತಿಂದದ್ದೆಲ್ಲಾ ವಾಪಸ್ ಬರುವ ಅನುಮಾನ ಕಣೋ” ಎಂದ ಮುಖ ಹಿಸುಕಿಕೊಂಡು,
“ಲೇ ಸಮಾಧಾನ ಮಾಡಿಕೋ”
“ಅಲ್ಲೋ ಮಾರಾಯ ನಾಲೈದು ಜನ ಇರುವ ನಮ್ಮ ನಮ್ಮ ಮನೆಗಳಲ್ಲೇ ಒಮ್ಮೊಮ್ಮೆ ಅನ್ನದಲ್ಲಿ ಕೂದಲು, ಸಾರಿನಲ್ಲಿ ಇದ್ದಿಲು ಸಿಕ್ಕುವಾಗ ಹೋಟೆಲ್‌ಗಳಲ್ಲಿ ಹೀಗೆ ಸ್ವಚ್ಛ ಮಾಡಲು ಹೇಗೆ ಸಾಧ್ಯ” ಎಂದೆ.
ಅದಕ್ಕವನು “ಶ್ರೀಪತಿ, ಏನೇ ಹೇಳು ಹೋಟೆಲ್‌ನಲ್ಲಿ ತಿನ್ನುವುದೇ ಮಹಾಪರಾಧ ಎಂದ.
ನಾನು ನಗುತ್ತಲೇ “ತಿನ್ನಬೇಡ ಬಿಡು”ಎಂದೆ.
ನಗುತ್ತಲೇ ಆತ “ತಿಂದಾಯ್ತಲ್ಲ” ಎಂದ!

“ಸಾರಿಗೆ ಇಲಾಖೆಯವರು ಡ್ರೈವಿಂಗ್ ಲೈಸೆನ್ಸ್, ಹೆಲ್ಮೆಟ್, ಆರ್.ಸಿ. ಬುಕ್ ಚೆಕ್ ಮಾಡುವಂತೆ ಈ ಹೋಟೆಲೊಳಗೆ ಯಾವ ಅಧಿಕಾರಿನೂ ಚೆಕ್ ಮಾಡೋದಿಲ್ಲ. ಇಂತಹ ಹೋಟೆಲ್‌ಗಳಿಗೆ ದಂಡ ಹಾಕಬೇಕು” ಎಂದ.
“ಲೇ ನೀ ಎಂತ ದಡ್ಡ ಮಾರಾಯ. ಇದಕ್ಕೂ ಅಧಿಕಾರಿಗಳಿದ್ದಾರೆ. ಆದರೆ ಅವರನ್ನು ಹೇಗಿಟ್ಟುಕೊಳ್ಳಬೇಕೆಂದು ಹೋಟೆಲ್ ಮಾಲಿಕರಿಗೆ ಗೊತ್ತು” ಎಂದೆ.
ಆತ “ಹೇಗೆ” ಎಂದ.
“ಸುಲಭ ಮಾರಾಯ, ಅಧಿಕಾರಿಗಳು ಅಧಿಕಾರಿಗಳ ಕಡೆಯವರು ಯಾರಾದರೂ ಬಂದರೆ ಚೆನ್ನಾಗಿ ತಿಂಡಿ ಕಾಫಿ ಕೊಟ್ಟು ಮನೆಯಲ್ಲಿದ್ದವರಿಗೆ ಪಾರ್ಸಲ್ ಕೊಟ್ಟರೆ ಆ ಅಧಿಕಾರಿ ಬಂದ ವೇಗದಲ್ಲಿಯೇ ಅಡುಗೆಮನೆ ಕಡೆ ತಲೆ ಹಾಕದೇ ತೆರಳುತ್ತಾನೆ” ಎಂದೆ.

ಆತ “ಹೌದಲ್ವ” ಎಂದು ತಲೆಯಲ್ಲಾಡಿಸಿದ. ಇದು ಈ ದೇಶದ ವ್ಯವಸ್ಥೆ.
“ನಿಜ ನೀ ಹೇಳಿದ್ದು ಮಾರಾಯ. ಅದಕ್ಕೆ ಈ ಹೋಟೆಲ್ ತಿಂಡಿಗಳು ಬಹಳ ರುಚಿ” ಎಂದ ಗೆಳೆಯ. ಕ್ಲೀನರ್ ಹುಡುಗ ಟೇಬಲ್ ಮೇಲಿದ್ದ ಗಿರಾಕಿಗಳ ಎಂಜಲನ್ನು ತಳ್ಳುವ ಗಾಡಿಗೆ ಹಾಕಿಕೊಂಡ. ಬಟ್ಟೆಯಲ್ಲಿ ಒರೆಸಿಕೊಂಡ. ಆತ ಒರೆಸುವ ಪರಿಯಂತೂ ಯಾವ ಬಸ್, ಕಾರ್‌ನ ಚಾಲಕನಿಗೂ ಇರುವಂತಿಲ್ಲ. ಆತನಿಗೆ ಅದೇ ಖುಷಿ ಇರಬೇಕು. ಆತನ ಕಲ್ಪನೆಯಲ್ಲಿ ಆತ ಬಸ್ಸನ್ನೋ, ಕಾರನ್ನೋ ಓಡಿಸುವ ಕಲ್ಪನಾಲೋಕದಲ್ಲಿದ್ದ. ಸರಸರನೆ ತಳ್ಳಿಕೊಂಡು ಬಚ್ಚಲುಮನೆಗೆ ಕೊಂಡೊಯ್ದು ಒಮ್ಮೆಗೆ ಅದರೊಳಗಿದ್ದ ತಟ್ಟೆ ಲೋಟ ಚಮಚಗಳನ್ನು ಗಾಡಿಯನ್ನು ಹಿಮ್ಮುಖವಾಗಿ ಎತ್ತಿ ರಭಸದಿಂದ ಸುರಿದ. ಸುರಿದ ರಭಸಕ್ಕೆ ತಟ್ಟೆ ಲೋಟ ಚಮಚ ಬಚ್ಚಲಮನೆಯ ಗುಂಡಿಗೆ ತಾ ಮುಂದು, ನಾ ಮುಂದು ಎನ್ನುತ್ತಾ ಬಿದ್ದರೆ ಅವುಗಳ ಒಳಗಿರುವ ನೀರು ಪಕ್ಕದಲ್ಲಿ ಇದ್ದ ದೋಸೆಭಟ್ಟರ ಹಿಟ್ಟಿನ ಪಾತ್ರೆಯೊಳಗೆ ಬೀಳುತ್ತಿತ್ತು. ಇದನ್ನೆಲ್ಲಾ ನೋಡುತ್ತಿದ್ದ ಗೆಳೆಯ “ಇದಕ್ಕೇ ಕಣೋ ಹೋಟೆಲ್ ದೋಸೆ ಬಹಳ ರುಚಿ” ಎಂದ.
ನಾನೆಂದೆ “ಸದ್ಯ ನಾವು ದೋಸೆ ತೆಗೆದುಕೊಳ್ಳಲಿಲ್ಲ ಮಾರಾಯ.” ಅವನು ಸಮಾಧಾನಪಟ್ಟ.

ದೋಸೆ ಭಟ್ಟರಂತೂ ಟವೆಲ್ ಉಟ್ಟುಕೊಂಡು ತಮ್ಮ ತಲೆ, ಕೈ, ತೋಳು, ಎದೆಯಲ್ಲಿನ ಬೆವರಿನ ರಾಶಿಯನ್ನೇ ಇಟ್ಟುಕೊಂಡಿದ್ದರು. ಅದು ಬೆವರೋ ಅಥವಾ ದೋಸೆಗೆ, ದೋಸೆ ಕಾವಲಿಗೆ ಹಚ್ಚಬೇಕಾದ ಎಣ್ಣೆ ಎಣ್ಣೆಯೋ ಎಂಬ ಅನುಮಾನ ಕಾಡಿತು. ನನ್ನ ಗೆಳೆಯನ ಸಮಸ್ಯೆ ಆತನ ಬೆವರಿನದ್ದಲ್ಲ. ಆ ಬೆವರು ಎಲ್ಲಾದರೂ ದೋಸೆಯ ಮೇಲೆ ಬಿದ್ದರೆ ಎಂಬುದಾಗಿತ್ತು.

ನಾನು ಹೇಳಿದೆ “ಈ ಕಡೆ ತಿರುಗು ಮಾರಾಯ.”
ಅದಕ್ಕವನು ತಲೆ ಕೆಡಿಸಿಕೊಳ್ಳದೆ ತದೇಕಚಿತ್ತದಿಂದ ಅತ್ತಲೇ ನೋಡುತ್ತಿದ್ದ. ‘ಹೋಟೆಲ್ ಒಳಗೆ ಮತ್ತು ಹೊರಗೆ-ಒಂದು ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ಮಾಡುವ ವಿದ್ಯಾರ್ಥಿಯಂತೆ ನನಗೆ ಕಾಣತೊಡಗಿದೆ. “ಲೋ ಶ್ರೀಪತಿ.. ಹೋಟೆಲ್‌ನವರಿಗೆ 60/40 ಅಂತೆ ಲಾಭ, ಹೌದಾ” ಎಂದ ಗೆಳೆಯ.
“ನೀನೇನು ತಿಂಡಿ ತಿನ್ನಲಿಕ್ಕೆ ಬಂದಿದ್ದೀಯಾ. ಪಿಎಚ್.ಡಿ. ಮಾಡಲಿಕ್ಕೆ ಬಂದಿದೀಯಾ” ಅಂದೆ.

ಅದಕ್ಕವನು “ತಿಳಿದುಕೊಳ್ಳುವುದು ತಪ್ಪಾ” ಎಂದ. ನನ್ನ ಬಳಿ ಉತ್ತರವಿರಲಿಲ್ಲ. ಮುಂದುವರೆದ ಗೆಳೆಯ “ಹೊಸನಗರದ ಈ ಬಸ್ ಸ್ಟ್ಯಾಂಡ್ ಹೋಟೆಲ್‌ನಲ್ಲಿ ಒಂದು ಇಡ್ಲಿಗೆ 12 ರೂಪಾಯಿ. ಆಸ್ಪತ್ರೆ ಹತ್ರ ಗೋವಿಂದಣ್ಣನ ಹತ್ರ 10 ರೂಗೆ ಮೂರು ಇಡ್ಲಿ” ಎಂದ.

ನಾನು “ಅಲ್ಲೇ ಹೋಗು ಮಾರಾಯ” ಎಂದೆ. “ಹಂಗಲ್ಲ, ವಿಷಯ ಹೇಳಿದ್ದು ” ಅಂದ.
ನಾನು ವಿವರವಾಗಿ ಹೇಳಿದೆ “ಗೆಳೆಯಾ.. ಇಡ್ಲಿಯ ಬೆಲೆ ಹೆಚ್ಚಾಗುವುದಿಲ್ಲ ಅಥವಾ ಕಡಿಮೆ ಆಗುವುದಿಲ್ಲ. ಅದೇ ಅಕ್ಕಿ, ಉದ್ದು, ಉಪ್ಪು, ಸರಗಲ್. ಆದ್ರೆ ಇಡ್ಲಿ ಕೊಡುವ ಜಾಗದ ಮೇಲೆ ಇಡ್ಲಿಯ ಮೌಲ್ಯ ಹೆಚ್ಚು ಕಡಿಮೆ ಆಗುತ್ತದೆ” ಎಂದೆ.

ಅರ್ಥವಾಗದ ಅವನು ಕಣ್ಣರಳಿಸಿದ.
“ನೋಡೋ.. ಗೋವಿಂದಣ್ಣನದು ತಳ್ಳುವ ಗಾಡಿ. ಜಾಗಕ್ಕೆ ಬಾಡಿಗೆಯಿಲ್ಲ. ಒಂದೇ ಬಲ್ಬು, ಕೆಲಸಗಾರರಿಲ್ಲ. ಹಂಗಾಗಿ ಗೋವಿಂದಣ್ಣನಿಗೆ ಖರ್ಚು ಕಡಿಮೆ. ಗಿರಾಕಿಗಳು ಕೂರಂಗಿಲ್ಲ. ನಿಂತ್ಕಂಡೇ ತಿಂತಾರೆ. ಇಲ್ಲಿ ನೋಡು ತರತರದ ಟೇಬಲ್ ಕುರ್ಚಿಗಳು, ಸಮವಸ್ತ್ರವಿರುವ ಸಪ್ಪೆಯರ್‌ಗಳು, ಬಣ್ಣದ ಲೈಟುಗಳು, ವಿವಿಧ ಆಕೃತಿಯ ತಟ್ಟೆ, ಲೋಟ, ಚಮಚಗಳು, ಇಲ್ಲಿ ನೀನು ಕೊಡುತ್ತಿರುವ ಹಣ ಇಡ್ಲಿಗಲ್ಲ. ಬಾಡಿಗೆ, ಲೈಟು, ಆಸನ ಇತ್ಯಾದಿಗಳಿಗೆ” ಎಂದೆ.

ಅರ್ಥವಾದಂತಿತ್ತು, ತಲೆಯಲ್ಲಾಡಿಸಿದ ಗೆಳೆಯ, “ಮುಂದೆ ಹೋಟೆಲ್ ಇಡುವ ಆಲೋಚನೆ ಇದೆಯಾ” ಅಂದೆ. ನಕ್ಕು “ಹಂಗಲ್ಲಾ ಮಾರಾಯ. ನೀ ಬಿಡಿಸಿ ಹೇಳಿದ್ದಕ್ಕೆ ಖುಷಿ ಆಯ್ತು” ಎಂದ.

ಆದರೂ ಅವನ ಕಣ್ಣುಗಳು ಅಡುಗೆಯಮನೆಯತ್ತ ಹೊರಳುತ್ತಿತ್ತು, ಕಾಫಿ, ಟೀ ಮಾಡುವವ ಒಂದು ಲೋಟದಿಂದ ಇನ್ನೊಂದು ಲೋಟಕ್ಕೆ ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ ಲಯಬದ್ಧವಾಗಿ ಹಾಕುತ್ತಿದ್ದ, ಒಂದು ಹನಿಯೂ ಚೆಲ್ಲುತ್ತಿರಲಿಲ್ಲ.

“ಏನ್ ಮಾರಾಯ ಒಬ್ಬೊಬ್ಬರೂ ಕಲೆಗಾರರು” ಎಂದ.
“ಈಗ ನಾನು ಹೇಳಿದ್ದು ನಿಜ ಆಯ್ತಾ” ಎಂದೆ. ಒಪ್ಪಿಕೊಂಡ.

ಆದರೂ ಹೋಟೆಲ್ ಕಾರ್ಮಿಕರ ವಸ್ತ್ರಗಳ ಬಗ್ಗೆ ಅಸಮಾಧಾನ ತೋಡಿಕೊಳ್ಳಲು ಶುರು ಮಾಡಿದ. “ಇವರ ಬಟ್ಟೆಯೆಲ್ಲ ಶುದ್ಧವಿಲ್ಲ. ನಮ್ಮಂತೆ ಆಫೀಸರ್‌ಗಳು ಈ ಹೋಟೆಲ್ಲಿಗೆ ಬರುವಾಗ ಇವರ ಬಟ್ಟೆ ಬಗ್ಗೆ ಗಮನ ಇಟ್ಟಬೇಕು. ಬಟ್ಟೆಯ ಮೇಲೆ ಸಾರಿನ ಕಲೆ, ಕಾಫಿ, ಟೀ ಕಲೆ, ಥೂ” ಎಂದ.

ನಾನು ಏನೋ ಹೇಳಲು ಮುಂದಾಗುವುದನ್ನು ಅರಿತ ಆತ “ನೀ ಎಲ್ಲದಕ್ಕೂ ಸಮರ್ಥನೆ ಮಾಡಬೇಡ” ಎಂದ.
“ಅದು ಹಾಗಲ್ಲ ಮಾರಾಯ, ಅವರಿರುವುದೇ ಸಾರು, ಅನ್ನ, ತಿಂಡಿ ಚಟ್ಟಿ, ಕಾಫಿ, ಟೀ ನಡುವೆ, ಗಡಿಬಿಡಿಯ ಗಿರಾಕಿಗಳು ಬಂದಾಗ ಮೈ ಮೇಲೆ ಬೀಳುವುದು ಸಹಜ. ಅವರೇನು ಗಂಟೆಗೆ ಒಂದು ಸಾರಿ ಬಟ್ಟೆ ಬದಲಾಯಿಸಕಾಗುತ್ತಾ” ಎಂದೆ.

“ಲೋ ನೆಕ್ಸ್ ಟೈಮ್ ಫೈವ್ ಸ್ಟಾರ್ ಹೋಟೆಲ್‌ಗೆ ಹೋಗೋಣ” ಎಂದ. “ಅಣ್ಣ ಗೆಳೆಯಾ.. ಸ್ಟಾರ್ ಹೋಟೆಲ್‌ಗಳ ಕತೆ ಬೇರೇನೂ ಇರೋದಿಲ್ಲ. ಸಣ್ಣಪುಟ್ಟ ಹೋಟೆಲ್‌ಗಳ ಅಡುಗೆಮನೆ ಕಣ್ಣಿಗೆ ಕಾಣುತ್ತದೆ. ನೀ ಇಷ್ಟೆಲ್ಲ ಪ್ರಶ್ನೆ ಕೇಳ್ತಾ ಇದೀಯ, ದೊಡ್ಡ ದೊಡ್ಡ ಹೋಟೆಲ್‌ಗಳ ಅಡುಗೆಮನೆ ಕಾಣಿಸುವುದಿಲ್ಲ. ಅವರುಗಳು ಇದಕ್ಕಿಂತ ಬಹಳ ಚೆನ್ನಾಗೇನೂ ಇರುವುದಿಲ್ಲ” ಎಂದೆ.

“ಒಳಮನೆ ಒಳಮನೆಯೇ. ಕೆಲವುಗಳ ಮೂಲವನ್ನು ಹುಡುಕಬಾರದು. ಅದರ ಸಾರವನ್ನಷ್ಟೆ ಸವಿಯಬೇಕು” ಎಂದೆ.
ಆತನಿಗೆ ಸಮಾಧಾನವಾಗಲಿಲ್ಲ. ಮೂಲವನ್ನು ನೋಡಿಯೂ ಸಾರವನ್ನು ಸವಿಯುವಾಗ ಪ್ರಶ್ನಿಸುವ ಪ್ರತಿಭಟಿಸುವ ಪ್ರತಿರೋಧಿಸುವ ಜಾಯಮಾನ ನನ್ನದು ಎಂದು ಹುಟ್ಟು ಹೋರಾಟಗಾರನಂತೆ ಏರುದನಿಯಲ್ಲಿ ಮಾತನಾಡಿದ.

“ನಾನು ಈಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುತ್ತೇನೆ” ಎಂದ.
ಅದಕ್ಕೆ ನಾನು “ಆ ಅಧಿಕಾರಿ ಬರುವುದಿಲ್ಲ. ಆತನಿಗೆ ಎಲ್ಲಾ ಹೋಟೆಲ್‌ಗಳ ಅನ್ನದ ಋಣವಿರುತ್ತದೆ. ಅನ್ನದೇವರ ಮುಂದೆ ಇನ್ನುದೇವರು ಉಂಟೆ” ಎಂದೆ. “ನೀನು ಕನ್ನಡದ ಮೇಷ್ಟ್ರು ಅಂತ ಇಲ್ಲಿ ತೋರಿಸ್ಬೇಡ” ಎಂದ. “ಕನ್ನಡದ ಮೇಷ್ಟ್ರಾಗಿ ಹೇಳುತ್ತಿಲ್ಲ, ಕನ್ನಡಿಗನಾಗಿ ಸಹೃದಯನಾಗಿ ಹೇಳುತ್ತೀನಿ” ಎಂದೆ.

“ಗೆಳೆಯ.. ಈ ಹೋಟೆಲಿನವರು ಸಂತೆಗೆ ಹೋಗೋದು ಸಂಜೆ 6.30ರ ಮೇಲೆ” ಎಂದೆ. ಗಾಬರಿಯಾದ ಆತ.
ಏಕೆಂದು ಒಂದೇ ಉಸುರಿಗೆ ಪ್ರಶ್ನಿಸಿದ. “ನಿಧಾನವಾಗಿ ಕೇಳು. ಈ ಉದ್ಯಮದಲ್ಲಿ 60/40 ಲಾಭ ಆಗಬೇಕೆಂದರೆ ಫ್ರೆಶ್ ತರಕಾರಿ ತಂದರೆ ಆಗುವುದಿಲ್ಲ. ಬೆಳ್ಳಂಬೆಳಗ್ಗೆ ಸಂತೆಗೆ ಹೋದರೆ ಟೊಮ್ಯಾಟೋ 80. ಈರುಳ್ಳಿ 100 ಹೀಗಿರುತ್ತದೆ ದರಗಳ ಪಟ್ಟಿ, ಸಂಜೆ ಹೋದರೆ ವ್ಯಾಪಾರಿಗಳು ತರಾತುರಿಯಲ್ಲಿರುತ್ತಾರೆ. ಅವರಿಗೂ ತರಕಾರಿಗಳ ಭಾರ ಕಡಿಮೆಯಾಗಿರಬೇಕಾಗಿರುತ್ತದೆ. ಆ ಕಾರಣಕ್ಕೆ ದರವೂ ಕಡಿಮೆಯಾಗಿರುತ್ತದೆ. ಹೋಟೆಲ್ಲಿನವರು ಈ ಸತ್ಯವನ್ನು ಅರಿತು ಮುನ್ನುಗ್ಗುತ್ತಾರೆ” ಎಂದೆ.

ನಾಲೈದು ಜನ ಇರುವ ಕುಟುಂಬಗಳಲ್ಲಿಯೇ ಒಮ್ಮೊಮ್ಮೆ ನಮ್ಮ ಅಮ್ಮಂದಿರು ತರಕಾರಿ ಸ್ವಚ್ಛಗೊಳಿಸುವಾಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಹೀಗಿರುವಾಗ ದಿನಕ್ಕೆ ಕ್ವಿಂಟಾಲ್ ತರಕಾರಿ ಸ್ವಚ್ಛಗೊಳಿಸುವ ಹೋಟೆಲ್ ಸಿಬ್ಬಂದಿಗಳು ಎಷ್ಟು ಜಾಗರೂಕತೆ ವಹಿಸಿಯಾರು? ಹೋಟೆಲ್‌ನಲ್ಲಿ ರುಬ್ಬುವವ, ಹೆಚ್ಚುವವ, ಕಾಫಿ, ಟೀಯವ, ಮುಖ್ಯ ಬಾಣಸಿಗ, ದೋಸೆಯವ, ಸಪ್ಲೆಯರ್, ಕ್ಲೀನರ್ ಎಂಬ ವಿವಿಧ ವರ್ಗವಿರುತ್ತದೆ. ಅವರವರು ಆಯಾ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಬೇಕಾಗುತ್ತದೆ. ಪಾಪ ಅವರೇನು ಮಾಡಿಯಾರು ಮಾರಾಯ, ಕ್ವಿಂಟಾಲ್ ಈರುಳ್ಳಿ ಹೆಚ್ಚುವಾಗ ಒಂದೊಂದೇ ಈರುಳ್ಳಿಯ ಹಿಂದು-ಮುಂದು ಒಳಗೆ- ಹೊರಗೆ ನೋಡುತ್ತಾ ಕುಳಿತರೆ ಮುಖ್ಯ ಬಾಣಸಿಗ ಏನು ಮಾಡಿಯಾನು? ಮಾಲಿಕನಿಗೆ ದೂರು ಹೋಗುತ್ತದೆ. ಈ ಕಾರಣಕ್ಕೆ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದು ಹೇಗೆ? ಸ್ವಚ್ಛಭಾರತ್-ಶ್ರೇಷ್ಠ ಭಾರತ್ ಹೌದು. ಎಲ್ಲಿಂದ ಸ್ವಚ್ಛ ಮಾಡುವುದು?” ಟೊಮ್ಯಾಟೊ ಕತೆಯಂತೂ ಹೇಳತೀರದು. ಮನೆಯಲ್ಲಿ ಟೊಮ್ಯಾಟೊವನ್ನು ಒತ್ತಿ, ಹಿಸುಕಿ ತಿರುಗಿಸಿ ಮೂಸಿ ಹೆಚ್ಚುತ್ತಾರೆ. ಅಲ್ಲಿ ಸಮಯವಿದೆ. ಹೋಟೆಲ್‌ನಲ್ಲಿ ಇವೆಲ್ಲಾ ಮಾಡುತ್ತಾ ಕುಳಿತರೆ ಹೋಟೆಲ್ ಬಾಗಿಲು ತೆಗೆಯುವುದೇ ಕಷ್ಟ ಎಂಬ ಸತ್ಯ ಗೆಳೆಯನಿಗೆ ತಿಳಿಯದು ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ಈ ಎಲ್ಲಾ ಕಾರಣಕ್ಕೆ ಅಪ್ಪಣೆಯಿಲ್ಲದೆ ಒಳಗೆ ಪ್ರವೇಶವಿಲ್ಲ ಎಂಬ ನಾಮಫಲಕವನ್ನು ಕಣ್ಣಿಗೆ ರಾಚುವಂತೆ ಹಾಕಿರುವುದು. ಇವೆಲ್ಲವನ್ನೂ ಗಿರಾಕಿಯೊಬ್ಬ ಅಪ್ಪಿತಪ್ಪಿ ನೋಡಿದರೆ ಪ್ರಜ್ಞೆ ತಪ್ಪಿ ಬೀಳುವುದು ಗ್ಯಾರಂಟಿ ಎಂಬ ಸತ್ಯ ಮೂಲತಃ ಹೋಟೆಲ್ ಕಾರ್ಮಿಕನಾದ ನನಗೆ ಮಾತ್ರ ತಿಳಿದಿರುವ ಸತ್ಯ.

“ಆದರೂ ಹೋಟೆಲ್ ತಿಂಡಿಗಳು ರುಚಿಯಾಗಿರುತ್ತವೆ” ಎಂದ ಗೆಳೆಯ. ಅವನ ಪ್ರಶ್ನಿಸುವ, ಪ್ರತಿಭಟಿಸುವ, ಪ್ರತಿರೋಧಿಸುವ ಜಾಯಮಾನ ಕಡಿಮೆಯಾದಂತಿತ್ತು.
“ಈ ವ್ಯವಸ್ಥೆಯೇ ಹಾಗಿದೆ. ಸರಿ ಮಾಡಲಾರದಷ್ಟು ದೂರ ಸಾಗಿದ್ದೇವೆ, ಬದಲಾವಣೆ ಅನ್ನೋದು ರಾತ್ರೋ ರಾತ್ರಿ ಆಗುವಂಥದ್ದಲ್ಲ. ಸಮಯ ಬೇಕಷ್ಟೆ ಆದರೆ ಅಧಿಕಾರಿಗಳಿಗೆ ಬದ್ಧತೆ ಮತ್ತು ಪ್ರಬುದ್ಧತೆ ಇರಬೇಕಲ್ಲ!! ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತಾಗಿದೆ ನಮ್ಮ ಸ್ಥಿತಿ.”

“ನಾನೇ ಅಧಿಕಾರಿಯಾಗಿದ್ದರೆ ಈ ಹೋಟೆಲ್‌ನವರಿಗೆ ಪಾಠ ಕಲಿಸುತ್ತಿದ್ದೆ” ಎಂದ ಗೆಳೆಯ.
ನಾನಂದೆ “ನಿನ್ನ ಮನೆಗೂ ತರತರಹದ ತಿಂಡಿಗಳು ಪಾರ್ಸಲ್ ಬಂದಾಗ ರಾತ್ರೋ ರಾತ್ರಿ ಈ ವ್ಯವಸ್ಥೆಯೊಂದಿಗೆ ರಾಜಿಯಾಗುತ್ತಿದ್ದೆ ಎಂದೆ. “ಅಧಿಕಾರ ಇದ್ದವರಿಗೆ ಆಸೆ ಇರುವುದಿಲ್ಲ, ಆಸೆ ಇದ್ದವರಿಗೆ ಅಧಿಕಾರ ಇರುವುದಿಲ್ಲ” ಎಂದೆ. ಗೆಳೆಯನ ಮುಖ ಸಪ್ಪಗಾಗಿತ್ತು.

ಹೋಟೆಲ್ ಎನ್ನುವುದು ಒಂದು ಉದ್ಯಮ. ಉದ್ಯಮ ಎನ್ನುವುದೇ ಹಣ. ಉದ್ಯಮದ ಮೂಲ ಉದ್ದೇಶ ಹಣ ಗಳಿಸುವುದೇ ಆಗಿದೆ. ಹೀಗಿರುವಾಗ ಶುಚಿತ್ವ, ಆರೋಗ್ಯ, ಭಾವನಾತ್ಮಕ ಸಂಬಂಧ ದೂರ ಮಾತು. ಹಿಂದೆ ಶುಚಿತ್ವ ಇತ್ತೇನು? ಕೆಲವರ್ಗದವರು ಕೆಲವರಿಗಾಗಿ ಮಾತ್ರ ಹೋಟೆಲ್ ಉದ್ಯಮ ನಡೆಸುತ್ತಿದ್ದರು.

ಉದಾಹರಣೆಗೆ ಉಡುಪಿ ಬ್ರಾಹ್ಮಣರ ಉಪಾಹಾರ ಮಂದಿರ. ಉಡುಪಿಯವರೇ ಆಗಿ ಬ್ರಾಹ್ಮಣರೇ ಆಗಿರುತ್ತಿದ್ದರು. ನಾಮಬಲದಿಂದ ಕೆಲವು ಹೋಟೆಲ್‌ಗಳು ನಡೆದ ಉದಾಹರಣೆಗಳಿವೆ. ಈಗ ನಾಮಫಲಕ ಮಾತ್ರ ಉಡುಪಿ ಬ್ರಾಹ್ಮಣರು. ಒಳಗೆ ಉಡುಪಿಯವರೂ ಇಲ್ಲ, ಬ್ರಾಹ್ಮಣರೂ ಇಲ್ಲ ಎನ್ನುವುದೇ ವಿಪರ್ಯಾಸ. ಹಾಗೆ ಹುಡುಕಲಿಕ್ಕೆ ಹೋದರೆ ಯಾವ ಹೋಟೆಲ್‌ಗಳೂ ನಡೆಯುವುದಿಲ್ಲ. ಈಗಂತೂ ಮಹಿಳೆಯರು ಹೋಟೆಲ್‌ಗಳಲ್ಲಿ ಕೆಲಸಕ್ಕೆ ಧುಮುಕಿದ್ದಾರೆ. ಆಕರ್ಷಣೀಯ ಕೇಂದ್ರಬಿಂದುವಾಗಿದ್ದಾರೆ. ಸಪ್ಲೆಯರ್ ಆದರೆ ಪರವಾಗಿಲ್ಲ!! ಒಳಗಡೆ ಪಾತ್ರೆ ತೊಳೆಯುವುದಕ್ಕೂ ಅವರೇ, ಪಾಪ ಅವರಾದರೂ ಏನು ಮಾಡಬಲ್ಲರು? ಮೂರೊತ್ತು ಊಟ, 500 ಸಂಬಳ. ಎಲ್ಲಾ ಸೇರಿ ದಿನಕ್ಕೆ 700 ಆಗುತ್ತದೆ. ಯಾರು ಬಿಟ್ಟಾರು?! ಬಿಸಿಲಿನಲ್ಲಿ ಕೂಲಿ ಮಾಡಿ 300-400 ಗಳಿಸುವುದಕ್ಕಿಂತ ನೆರಳಲ್ಲಿ 500ರಿಂದ 700 ಉತ್ತಮವಲ್ಲವೇ?

ಕೆಲ ಹೆಂಗಸರ ಕೈ ಕಾಲುಗಳಲ್ಲಿ ಬಿಳಿಯ ಪಾಚಿ ಕಟ್ಟಿರುತ್ತದೆ. ನಮ್ಮ ಕಡೆ ಹೇಸುವುದು ಎನ್ನುತ್ತಾರೆ. ಹಾಗಾದರೆ ಅವರ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು ಯಾರು? ಸ್ವಚ್ಛ ಭಾರತ್-ಶ್ರೇಷ್ಠ ಭಾರತ್ ಎತ್ತ ಸಾಗುತ್ತಿದೆ? ಈ ಕಾರಣಕ್ಕೆ ಸಪ್ರೈಯರ್‌ಗಳು ಕೊಡುವ ತಿಂಡಿ ಕಾಫಿ ನೋಡಬೇಕೇ ಹೊರತು ಅವರುಗಳ ಬೆರಳನ್ನು ನೋಡಬಾರದು ಎನ್ನುವುದು.

ಋಷಿಮೂಲ, ಸ್ತ್ರೀಮೂಲ, ನದಿಮೂಲ, ಸಪ್ಲೆಯರ್ ಮೂಲ, ಹೋಟೆಲ್‌ ಅಡುಗೆಮನೆಯ ಮೂಲವನ್ನು ಹುಡುಕಬಾರದು ಅಲ್ಲವೇ? ಆದಷ್ಟೂ ಹೋಟೆಲ್ಲಿನ ಅಡುಗೆಮನೆಯ ಸುದ್ದಿಯಂತೂ ಬೇಡವೇ ಬೇಡ. ಈ ಸನ್ನಿವೇಶಕ್ಕೆ ಒಂದು ಸಣ್ಣ ದೃಷ್ಟಾಂತ ನೆನನಪಾಗುತ್ತಿದೆ.

ಒಮ್ಮೆ ಶ್ರೀಮಂತ ಹೆಣ್ಣೊಬ್ಬಳು ಶ್ರೀಮಂತ ಗಂಡನ್ನು ಮದುವೆಯಾಗುತ್ತಾಳೆ. ಶ್ರೀಮಂತರು, ಅತಿ ಶ್ರೀಮಂತರು ಇಬ್ಬರೂ, ಕೇಳಬೇಕೇ ಖರ್ಚು ವೆಚ್ಚಕ್ಕೆ? ದಿನಾಲೂ ಫೈವ್‌ ಸ್ಟಾ‌ರ್ ಹೊಟೆಲ್‌ನಲ್ಲಿ ಊಟ, ಐಷಾರಾಮಿ ಜೀವನ, ಆದರೂ ಹೆಂಡತಿಯ ಮುಖದಲ್ಲಿ ನಿರಾಸೆ. ಗಂಡನಿಗೆ ಗಾಬರಿಯಾಯಿತು. ನಾನು ನೋಡಿಕೊಳ್ಳುವುದರಲ್ಲಿ ನೋವಾಯಿತೇನು ಎಂಬ ಆತಂಕ ಶುರುವಾಯಿತು. ದಿನದಿಂದ ದಿನಕ್ಕೆ ಒಳ್ಳೆಯ ಹೋಟೆಲ್ಲಿಗೆ ಕರೆದುಕೊಂಡು ಹೋಗಲು ಪ್ರಾರಂಭಿಸಿದ. ಆದರೂ ರಾತ್ರಿ ಮಲಗುವಾಗ ಅವಳ ಮುಖದಲ್ಲಿ ಅದೇ ಬೇಸರ.

ಒಂದು ದಿನ ಗಂಡ ಕೇಳಿದ “ಏಕೆ ಬೇಸರವಾಗಿದೆ? ಈ ಊರಿನಲ್ಲಿ ಇರುವ ಎಲ್ಲಾ ಒಳ್ಳೆಯ ಹೋಟೆಲ್‌ನಲ್ಲಿ ತಿನ್ನಿಸಿದೆ. ನಿನಗೇನಾಗಿದೆ?” ಎಂದು ಮೃದುವಾಗಿಯೇ ಕೇಳಿದ. ಅವಳು ಮೆಲ್ಲನೆ ಹೇಳಿದಳು “ರೀ ಬೇಸರಿಸಬೇಡಿ. ನನಗೆ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ತಿನ್ನುವ ತಿಂಡಿ ಊಟ ಇಷ್ಟವಿಲ್ಲ. ಬಸ್‌ಸ್ಟ್ಯಾಂಡ್ ಪಕ್ಕದಲ್ಲಿ ಪಾನಿಪೂರಿ ಅಂಗಡಿಯಿಂದ ಒಂದು ಪ್ಲೇಟ್ ಪಾನಿಪೂರಿ ತಂದುಕೊಡಿ” ಎಂದಳು. “ಅಯ್ಯೋ ನಿನ್ನ ಖುಷಿ ನಿಜವಾದ 2 ಲಕ್ಷದಲ್ಲಿಲ್ಲ. 20ರೂ.ನಲ್ಲಿದೆಯೋ” ಎಂದು ತನ್ನ ಮೂರ್ಖತನಕ್ಕೆ ತಾನೇ ಶಪಿಸಿಕೊಂಡ.

ಅಂದರೆ ಕೆಲವರಿಗೆ ಹೋಟೆಲ್‌ನ ಊಟ ಉಪಾಹಾರವೇ ಇಷ್ಟ, ನನ್ನನ್ನೂ ಸೇರಿದಂತೆ!? ರಾಜಿ ಮಾಡಿಕೊಳ್ಳೋಣ ವ್ಯವಸ್ಥೆಯೊಂದಿಗೆ. ಬಂದದ್ದೆಲ್ಲ ಬರಲಿ ಎದುರಿಸುವ ಚೈತನ್ಯ ಒಂದಿದ್ದು ನೂರಾಗಲಿ. ತಿನ್ನುವುದೆಲ್ಲ ತಿನ್ನೋಣ. ತಿಂದೂ ಆರೋಗ್ಯವನ್ನು ಕಾಪಾಡಿಕೊಳ್ಳೋಣ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page