Home ಬ್ರೇಕಿಂಗ್ ಸುದ್ದಿ ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡುವಲ್ಲಿ ಕೇಂದ್ರವೂ ಹೊಣೆಗಾರಿಕೆ ವಹಿಸಬೇಕು – ಸಚಿವ ಕೆ.ಎಂ. ಶಿವಲಿಂಗೇಗೌಡ

ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡುವಲ್ಲಿ ಕೇಂದ್ರವೂ ಹೊಣೆಗಾರಿಕೆ ವಹಿಸಬೇಕು – ಸಚಿವ ಕೆ.ಎಂ. ಶಿವಲಿಂಗೇಗೌಡ

ಹಾಸನ: ರೈತರು ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು. ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ಪಾವತಿಸುತ್ತಿರುವ ಹಿನ್ನೆಲೆಯಲ್ಲಿ ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡುವಲ್ಲಿ ಕೇಂದ್ರವೂ ಹೊಣೆಗಾರಿಕೆ ವಹಿಸಬೇಕು ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಆಗ್ರಹಿಸಿದರು.

ಹಾಸನ ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗದಿಂದ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗಿದ್ದು, ರೈತರಿಗೆ ಪರಿಹಾರ ದೊರಕಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಬೆಳೆ ವಿಮೆ ನೀಡದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುವ ಎಚ್ಚರಿಕೆಯನ್ನೂ ನೀಡಿದರು.

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ಆರೋಪ ಬಂದ ಮಾತ್ರಕ್ಕೆ ಯಾರನ್ನೂ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದರು. “ಸಿಬಿಐ ತನಿಖಾ ಸಂಸ್ಥೆ ಅವರು ತಪ್ಪಿತಸ್ಥ ಎಂದು ಹೇಳಿಲ್ಲ. ತನಿಖೆ ನಡೆಸಿ ತಪ್ಪಿತಸ್ಥರೆಂದು ವರದಿ ನೀಡಿದ ಬಳಿಕ ಕ್ರಮದ ಬಗ್ಗೆ ಮಾತನಾಡಲಿ. ಬಿಜೆಪಿಯವರು ಪಾದಯಾತ್ರೆ ಮಾಡಲಿ, ಅದು ಒಳ್ಳೆಯದೇ. ಜನರು ಬುದ್ಧಿವಂತರಿದ್ದು, ಸತ್ಯಾಸತ್ಯತೆ ನಿರ್ಧರಿಸುತ್ತಾರೆ,” ಎಂದು ಹೇಳಿದರು. ಗೋವಾದಿಂದ ತೆರಿಗೆ ಪಾವತಿಸದೆ ಮದ್ಯವನ್ನು ತಂದು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ಇದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.“ನನ್ನ ಬಳಿ ಹಿಂದಿನಂತೆ ಅಬಕಾರಿ ಇಲಾಖೆ ನಡೆಯುವುದಿಲ್ಲ. ನಿಗದಿತ ಸ್ಥಳ ಹೊರತುಪಡಿಸಿ ಕಾನೂನು ಮೀರಿ ಮದ್ಯದಂಗಡಿ ತೆರೆದರೆ ಲೈಸೆನ್ಸ್ ರದ್ದು ಮಾಡುತ್ತೇನೆ,” ಎಂದು ಎಚ್ಚರಿಸಿದರು.

ಹಾಸನ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ತಂದಿರುವುದಾಗಿ ಸಚಿವರು ಹೇಳಿದರು. ಭೂಮಿ ಸ್ವಾಧೀನಪಡಿಸಿಕೊಂಡಿದ್ದರೂ ಐಐಟಿ ಮಂಜೂರಾಗದಿರುವುದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಳಂಬ, ನೂತನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದು ಹಾಗೂ ಹಣ ಬಿಡುಗಡೆ ಮಾಡಬೇಕಿರುವ ವಿಚಾರಗಳನ್ನು ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸಿದ್ದೇನೆ ಎಂದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಜಿಲ್ಲಾಧಿಕಾರಿ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.ತಹಶೀಲ್ದಾರ್ ಕಳುಹಿಸಿದ ವರದಿಯನ್ನೇ ಜಿಲ್ಲಾಧಿಕಾರಿ ಅಂತಿಮವಾಗಿ ಒಪ್ಪಿಕೊಳ್ಳಬೇಕೆಂದಿಲ್ಲ. ದಾಖಲೆಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಿ ಮಂಡಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ ಎಂದರು. ಜಿಲ್ಲಾಧಿಕಾರಿ ತಪ್ಪು ಮಾಡಿದ್ದರೆ ದಾಖಲೆಗಳ ಸಮೇತ ಆರೋಪ ಮಾಡಿ, ಕಾನೂನುಬದ್ಧವಾಗಿ ತನಿಖೆ ನಡೆಸಲಿ. ಆದರೆ ಅಧಿಕಾರಿಯ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲಾಧಿಕಾರಿಗೆ ಆತ್ಮಸ್ಥೈರ್ಯ ತುಂಬುವುದು ನನ್ನ ಕರ್ತವ್ಯ ಎಂದು ಹೇಳಿದರು.ಹಾಸನ ತಾಲ್ಲೂಕಿನ ಹಂದಿನಕೆರೆ ಏತ ನೀರಾವರಿ ಯೋಜನೆಯಿಂದ ಸತ್ಯಮಂಗಲ ಹಾಗೂ ಚನ್ನಪಟ್ಟಣ ಕೆರೆಗಳನ್ನು ತುಂಬಿಸುವ ಕಾಮಗಾರಿ ಕಳೆದ ಐದು ವರ್ಷಗಳಿಂದ ವಿಳಂಬವಾಗಿದೆ. ಕಾಮಗಾರಿಗೆ ಅಗತ್ಯವಿರುವ 32 ಗುಂಟೆ ಜಮೀನಿಗೆ ಪರಿಹಾರ ನೀಡದೆ ಭೂಮಿ ನೀಡುವುದಿಲ್ಲ ಎಂದು ಐವರು ರೈತರು ಪಟ್ಟು ಹಿಡಿದಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಸಚಿವ ಕೆ.ಎಂ. ಶಿವಲಿಂಗೇಗೌಡ, ಶಾಸಕ ಎಚ್.ಪಿ. ಸ್ವರೂಪ್‌ಪ್ರಕಾಶ್ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ರೈತರೊಂದಿಗೆ ಮಾತುಕತೆ ನಡೆಸಿದರು.ರೈತರಿಗೆ ಪರಿಹಾರ ನೀಡುವಂತೆ ಸೂಚಿಸಿದ ಸಚಿವರು, ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿ ಎರಡು ದಿನಗಳಲ್ಲಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ಒಂದೇ ಕುಟುಂಬದ ನಾಲ್ವರು ಸಹೋದರರ ನಡುವೆ ಪರಿಹಾರ ಹಂಚಿಕೆ ವಿಚಾರದಲ್ಲಿ ವಾಗ್ವಾದ ನಡೆಯಿತು. ವೆಂಕಟೇಗೌಡ ಅವರಿಗೆ ನೀಡಬೇಕಿದ್ದ ಸುಮಾರು 15 ಲಕ್ಷ ರೂ. ಪರಿಹಾರವನ್ನು ಉಳಿದ ಸಹೋದರರಿಗೂ ಸಮನಾಗಿ ಹಂಚಬೇಕೆಂದು ಒತ್ತಾಯಿಸಲಾಯಿತು. ಪರಿಹಾರದ ಆದೇಶ ಪ್ರತಿ ಪಡೆದ ನಂತರ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಚಿವರು ಆದೇಶದ ಪ್ರತಿಯನ್ನು ವಾಪಸ್ ಪಡೆದು ಜಿಲ್ಲಾಧಿಕಾರಿಗೆ ನೀಡಿದರು. ಸಮಸ್ಯೆ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ತಮ್ಮ ಅಧಿಕಾರಾವಧಿಯಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಮಾತನಾಡಿದ ಸಚಿವರು, “ನಾನು ಮಂತ್ರಿಯಾದಾಗ ಬರಗಾಲ ಬಂದಿದೆ. ನಮ್ಮ ನೀರನ್ನು ತಮಿಳುನಾಡಿನವರು ಕಿತ್ತುಕೊಳ್ಳುತ್ತಿದ್ದಾರೆ. ಈಗ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ಬಂದಿದೆ. ರೈತರಿಗೆ ಪರಿಹಾರ ನೀಡಲು ಎಷ್ಟೊಂದು ಹಣ ಬೇಕು ಎಂಬುದನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ,” ಎಂದು ಹೇಳಿದರು. ಹಾಸನ ಜಿಲ್ಲೆಯ ಅಭಿವೃದ್ಧಿ ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದರು.

You cannot copy content of this page

Exit mobile version