ಅಹಮದಾಬಾದ್: ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿರುವ 2023 ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪೈಪೋಟಿ ನೀಡಲಿವೆ.
ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ತಂಡವನ್ನು, ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಗೆದ್ದು ಫೈನಲ್ ಗೇರಿವೆ. ಉಭಯ ತಂಡಗಳು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸುಮಾರು 1,30,000 ಪ್ರೇಕ್ಷಕರ ಮುಂದೆ ಕೊನೆಯ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿವೆ.
ಭಾರತ ತಂಡವು ಈ ಪಂದ್ಯಾವಳಿಯಲ್ಲಿ ಇದುವರೆಗೆ ಅಜೇಯವಾಗಿಯೇ ಉಳಿದಿದೆ. ನ್ಯೂಜಿಲೆಂಡ್ ತಂಡವನ್ನು ಹೊರತುಪಡಿಸಿ ಇನ್ಯಾವುದೇ ತಂಡವೂ ಸಹ ಭಾರತದ ಎದುರು ತಕ್ಕ ಸ್ಪರ್ಧೆ ನೀಡಲು ವಿಫಲವಾದವು. ಬಹುತೇಕ ಪಂದ್ಯಗಳನ್ನು ಭಾರತ ಅಧಿಕಾರಯುತವಾಗಿ ಗೆದ್ದು ಫೈನಲ್ ವರೆಗೆ ಸಾಗಿ ಬಂದಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿ ಬೆಳೆದುನಿಂತಿದ್ದು, ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಆತ್ಮವಿಶ್ವಾಸದಲ್ಲಿದೆ.
ಲೀಗ್ ಹಂತದ ಮೊದಲ ಎರಡು ಪಂದ್ಯಗಳನ್ನು ಸೋತರೂ ನಂತರ ಚೇತರಿಸಿಕೊಂಡ ಆಸ್ಟ್ರೇಲಿಯಾ ಸತತ ಗೆಲುವನ್ನು ಸಾಧಿಸುತ್ತ ಫೈನಲ್ ತಲುಪಿಕೊಂಡಿದೆ. ಒಟ್ಟು ಐದು ವಿಶ್ವಕಪ್ ಗಳನ್ನು ಗೆದ್ದಿರುವ ಆಸ್ಟ್ರೇಲಿಯಾ 1999, 2003, 2007ರ ವಿಶ್ವಕಪ್ ಪಂದ್ಯಾವಳಿಗಳನ್ನು ಸತತ ಗೆದ್ದು ಹ್ಯಾಟ್ರಿಕ್ ಸಾಧಿಸಿ ವಿಶ್ವಕಪ್ ಕ್ರಿಕೆಟ್ ನಲ್ಲಿ ತನ್ನ ಪಾರಮ್ಯವನ್ನು ಸ್ಥಾಪಿಸಿತ್ತು. ಆದರೆ ಆಗಿನ ಆಸ್ಟ್ರೇಲಿಯಾ ತಂಡದಷ್ಟು ಪ್ರಬಲವಾಗಿಲ್ಲ ಇಂದಿನ ತಂಡ. ಆದರೂ ಅದು ದುರ್ಬಲವಾಗಿಯೂ ಇಲ್ಲ. ಡೇವಿಡ್ ವಾರ್ನರ್, ಮಿಚಲ್ ಮಾರ್ಶ್, ಮಾನಸ್ ಲಾಬುಶೇನ್ ಎಂಥ ಸಂದರ್ಭದಲ್ಲೂ ಸ್ಫೋಟಕ ಆಟ ನಡೆಸಬಲ್ಲರು. ವಿರಾಟ್ ಕೊಹ್ಲಿಗೆ ಪ್ರತಿಯಾಗಿ ಆಸ್ಟ್ರೇಲಿಯಾ ಬಳಿ ಸ್ಟೀವ್ ಸ್ಮಿತ್ ಇದ್ದಾರೆ. ಈ ಪಂದ್ಯಾವಳಿಯಲ್ಲಿ ಅಷ್ಟೇನು ದೊಡ್ಡ ಕೊಡುಗೆ ನೀಡದ ಸ್ಮಿತ್ ಫೈನಲ್ ನಲ್ಲಿ ಸಿಡಿದರೆ ಆಶ್ಚರ್ಯವಿಲ್ಲ. ಗ್ಲೆನ್ ಮ್ಯಾಕ್ಸ್ ವೆಲ್ ಅಫಘಾನಿಸ್ತಾನ ವಿರುದ್ಧ ಹೊಡೆ ಡಬಲ್ ಸೆಂಚುರಿ ಕಂಡು ಜಗತ್ತೇ ಬೆರಗಾಗಿದೆ. ಇನ್ನು ಟ್ರಾವಿಸ್ ಹೆಡ್ ಕೆಲವು ಪಂದ್ಯಗಳ ನಂತರ ಬಂದು ತಂಡವನ್ನು ಕೂಡಿದರೂ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಲೈನ್ ಅಪ್ ಗೆ ಬಲ ತುಂಬಿದ್ದಾರೆ.
ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ತಂಡದ ನಾಯಕ ಪ್ಯಾಟ್ ಕಮಿನ್ಸ್ ಜೊತೆಗೆ ಮಿಚೆಲ್ ಸ್ಟಾಕ್, ಹೇಜಲ್ ವುಡ್ ವೇಗದ ಬೌಲಿಂಗ್ ನಲ್ಲಿ ಎದುರಾಳಿ ತಂಡಗಳು ಪರದಾಡಿವೆ. ಸ್ಪಿನ್ನರ್ ಆಡಂ ಜಂಪಾ ಕೂಡ ತಿರುಗುವ ಪಿಚ್ ನಲ್ಲಿ ಅಪಾಯಕಾರಿಯಾಗಬಲ್ಲರು.
ಭಾರತ ತಂಡದ ಇದುವರೆಗಿನ ಯಶಸ್ಸು ನೋಡಿದರೆ, ನಿಸ್ಸಂಶಯವಾಗಿ ಅದು ಆಸ್ಟ್ರೇಲಿಯಾಗಿಂದ ಬಲಶಾಲಿಯಾಗಿದೆ. ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಸ್ಫೋಟಕ ಆರಂಭ ನೀಡುತ್ತಿದ್ದಾರೆ. ಇವರಿಬ್ಬರು ಹಾಕಿಕೊಟ್ಟ ಬುನಾದಿಯ ಮೇಲೆ ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ಕೆ.ಎಲ್ ರಾಹುಲ್ ಭರ್ಜರಿ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಟೀಂ ಮ್ಯಾನೇಜ್ ಮೆಂಟ್ ಎಲ್ಲ ಆಟಗಾರರಿಗೂ ಭಿನ್ನ ಭಿನ್ನ ಟಾಸ್ಕ್ ಕೊಟ್ಟಿದ್ದು, ಅದೇ ಪ್ರಕಾರವಾಗಿ ಎಲ್ಲರೂ ಆಡಿ ಸಫಲರಾಗಿದ್ದಾರೆ. ಈ ಐದೂ ಆಟಗಾರರ ನಂತರ ರವೀಂದ್ರ ಜಡೇಜಾ ಕೂಡ ಉಪಯುಕ್ತ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ.
ಬ್ಯಾಟಿಂಗ್ ಗಿಂತಲೂ ಭಾರತದ ಬೌಲಿಂಗ್ ಪಡೆ ಎದುರಾಳಿಗಳ ನಿದ್ದೆಗೆಡಿಸಿದೆ. ಜಸ್ಪಿತ್ ಬುಮ್ರಾ ಎಂದೂ ಲಯ ಕಳೆದುಕೊಂಡಿದ್ದೇ ಇಲ್ಲ. ಈ ಟೂರ್ನಿಯಲ್ಲೂ ಅವರ ನಿಖರ ಬೌಲಿಂಗ್ ಮುಂದುವರೆದಿದೆ. ಮಹಮದ್ ಸಿರಾಜ್ ಸ್ವಿಂಗ್ ಮತ್ತು ಸೀಮ್ ಗಿಂತಲೂ ತನ್ನ ವಿಭಿನ್ನ ಲೈನ್ ಗಳ ಮೂಲಕ ಬ್ಯಾಟ್ಸ್ಮನ್ ಗಳ ಏಕಾಗ್ರತೆಯನ್ನು ಕದಡುತ್ತಿದ್ದಾರೆ. ಇವರಿಬ್ಬರೂ ಹೊಸ ಚೆಂಡ್ ನಲ್ಲಿ ಬೌಲ್ ಮಾಡುತ್ತಿದ್ದರೆ ರನ್ ಗಳಿಸುವುದು ಅಷ್ಟು ಸುಲಭವಲ್ಲ. ಇನ್ನು ಮಹಮದ್ ಶಮಿ ಈ ಪಂದ್ಯಾವಳಿಯಲ್ಲಿ ಸುನಾಮಿಯಂತೆ ಅಬ್ಬರಿಸಿದ್ದಾರೆ. ಮೊದಲ ನಾಲ್ಕು ಪಂದ್ಯಗಳನ್ನು ಆಡದೇ ಇದ್ದರೂ ಈ ಪಂದ್ಯಾವಳಿಯಲ್ಲಿ ಮಹಮದ್ ಶಮಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವುದೇ ಇದಕ್ಕೆ ಸಾಕ್ಷಿ. ಈಗಾಗಲೇ ಮೂರು ಬಾರಿ ಪಂದ್ಯ ಪುರುಷ ಪ್ರಶಸ್ತಿ ಪಡೆದಿರುವ ಶಮಿ ಫೈನಲ್ ನಲ್ಲೂ ಅದೇ ಪ್ರದರ್ಶನ ಮುಂದುವರೆಸುತ್ತಾರಾ ಎಂದು ಕಾದುನೋಡಬೇಕಿದೆ. ಭಾರತದ ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್, ರವೀಂದ್ರ ಜಡೇಜಾ ಎಂಥ ಸಂದರ್ಭದಲ್ಲೂ ವಿಕೆಟ್ ಗಳಿಸುವ ಶಕ್ತಿ ಹೊಂದಿದ್ದಾರೆ. ಇಬ್ಬರೂ ಭಿನ್ನ ಬಗೆಯ ಸ್ಪಿನ್ನರ್ ಗಳಾದ್ದರಿಂದ ಇಪ್ಪತ್ತರಿಂದ ನಲವತ್ತನೇ ಓವರ್ ಗಳಲ್ಲಿ ಎದುರಾಳಿ ತಂಡ ರನ್ ಗಳಿಸುವುದು ಕಷ್ಟ.
ಭಾರತ-ಆಸ್ಟ್ರೇಲಿಯಾ ಫೈನಲ್ ಹಣಾಹಣಿ ಭಾರತೀಯ ಕಾಲಮಾನ 2 ಗಂಟೆಗೆ ಆರಂಭವಾಗಲಿದ್ದು, ಭಾರತ ಮಾತ್ರವಲ್ಲದೇ ಜಗತ್ತಿನ ಕೋಟ್ಯಂತರ ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಕಾದುನಿಂತಿದ್ದಾರೆ.