Home ರಾಜಕೀಯ ಮಣಿಪುರ ಹಿಂಸಾಚಾರದ ಹಕೀಕತ್ತುಗಳಲ್ಲಿದೆ ’ಕಾಂತಾರ’ ಕಥೆ!

ಮಣಿಪುರ ಹಿಂಸಾಚಾರದ ಹಕೀಕತ್ತುಗಳಲ್ಲಿದೆ ’ಕಾಂತಾರ’ ಕಥೆ!

0

ಕೇವಲ ಮಣಿಪುರ ರಾಜ್ಯದ ಮಾಫಿಯಾ ಮಾತ್ರವಲ್ಲದೇ, ರಾಷ್ಟ್ರೀಯ ಮಟ್ಟದ ಕೂಟವೇನಾದರೂ ಮಣಿಪುರದ ಅರಣ್ಯಸಂಪತ್ತಿನ ಮೇಲೆ ಕಣ್ಣುಹಾಕಿ ಈ ದಳ್ಳುರಿಯನ್ನು ಡಿಸೈನ್ ಮಾಡಿದ್ದಾರಾ? ಅದಕ್ಕಾಗಿಯೇ ಪ್ರಧಾನಿಗಳು ಕೂಡಾ ಮಣಿಪುರದ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಇಷ್ಟು ಅಸಡ್ಡೆ ತೋರಿದಂತೆ ನಿರ್ಲಕ್ಷಿಸುತ್ತಿದ್ದಾರಾ? ಈ ಪ್ರಶ್ನೆಗಳಿಗಿನ್ನೂ ಸ್ಪಷ್ಟ ಉತ್ತರಗಳು ಸಿಗಬೇಕಿವೆ – ಗಿರೀಶ್ ತಾಳಿಕಟ್ಟೆ, ಪತ್ರಕರ್ತರು

ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರದಲ್ಲಿ ದಳ್ಳುರಿ ಶುರುವಾಗಿ ಎರಡು ತಿಂಗಳ ಮೇಲಾಯ್ತು. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಸಾವಿರಾರು ಜನ ಮನೆಮಠ ತೊರೆದು ನಿರಾಶ್ರಿತರಾಗಿದ್ದಾರೆ. ನೆರೆ ದೇಶದೊಂದಿಗೆ ಭೂಗಡಿಯನ್ನು ಹಂಚಿಕೊಂಡ ಯಾವುದೇ ಗಡಿರಾಜ್ಯವೊಂದು ಇಷ್ಟು ಸುದೀರ್ಘ ದಿನಗಳ ಕಾಲ ಅಸ್ಥಿರತೆಯಲ್ಲಿರುವುದು ಆ ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯ ದೃಷ್ಟಿಯಿಂದ ನಿಜಕ್ಕೂ ಅಪಾಯಕಾರಿಯಾದುದು. ಆದಾಗ್ಯೂ ಮಣಿಪುರದ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಿರಾಸಕ್ತಿ ವಹಿಸಿರುವುದು ನಿಜಕ್ಕೂ ದಿಗ್ಭ್ರಮೆ ಮೂಡಿಸುತ್ತದೆ.

ಮಣಿಪುರದ ಈ ವಿವಾದಕ್ಕೆ ಕಾರಣವೇನು?

ಈ ಪ್ರಶ್ನೆಯನ್ನು ಕೇಳಿದಾಗಲೆಲ್ಲ ಮೈತಿ ಮತ್ತು ಕುಕಿ ಸಮುದಾಯಗಳ ನಡುವಿನ ಕಲಹ; ಹಾಗೂ ಮೈತಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡುವ ಕುರಿತು ಅಲ್ಲಿನ ಹೈಕೋರ್ಟ್ ಸರ್ಕಾರಕ್ಕೆ ನೀಡಿದ ನಿರ್ದೇಶವನ್ನೇ ಪ್ರಧಾನವಾಗಿ ತೋರಿಸಲಾಗುತ್ತದೆ. ಆದರೆ ಇದು ಅರ್ಧಸತ್ಯ ಮಾತ್ರ! ಅಸಲೀ ವಿಚಾರವನ್ನು ಕೆದಕುತ್ತಾ ಹೋದಂತೆ ಬೇರೆಯದೇ ಸತ್ಯಗಳು ಅನಾವರಣಗೊಳ್ಳುತ್ತವೆ. ಅಲ್ಲದೇ, ಸ್ವತಃ ಅಲ್ಲಿನ ಸರ್ಕಾರವೇ ವ್ಯವಸ್ಥಿತವಾಗಿ ಈ ದಂಗೆಗೆ ಕಾರಣವಾಯಿತಾ? ಎಂಬ ಅನುಮಾನಗಳೂ ದಟ್ಟವಾಗುತ್ತವೆ.

ಅದಕ್ಕೂ ಮುನ್ನ, ಇತ್ತೀಚೆಗಷ್ಟೆ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ ಕನ್ನಡದ ‘ಕಾಂತಾರ’ ಸಿನಿಮಾವನ್ನು ಇಲ್ಲಿ ತುಲನೆಗೆ ಬಳಸಿಕೊಳ್ಳಬಹುದು. ಯಾಕೆಂದರೆ ಆ ಸಿನಿಮಾದ ಕಥಾ ಹಂದರವು ಕಾಡಿನ ಬುಡಕಟ್ಟು ಸಮುದಾಯಗಳ ಮೇಲೆ ನಾಗರಿಕ ಸಮಾಜದ ಅತಿಕ್ರಮಣದ ಹುನ್ನಾರವನ್ನು ಆಧರಿಸಿರುವಂತದ್ದು. ಮಣಿಪುರದ ದಳ್ಳುರಿಗು ಸಹಾ ಇಂತದ್ದೇ ಹಿನ್ನೆಲೆಯಿದೆ. ಸಿನಿಮಾದಲ್ಲಿ ಬರುವ ನಾಯಕ ಹಾಗೂ ಅವನ ಬುಡಕಟ್ಟು ಸಮುದಾಯವನ್ನು ನಾವು ಮಣಿಪುರದ ಕುಕಿ ಬುಡಕಟ್ಟುಗಳಿಗೆ ಹೋಲಿಕೆ ಮಾಡುವುದಾದರೆ, ಆ ಜನರ ಜಾಗವನ್ನು ಅತಿಕ್ರಮಿಸಿಕೊಳ್ಳಲು ಯತ್ನಿಸುವ ಧಣಿಯ ಪಾತ್ರವನ್ನು ಮೈತಿ ಸಮುದಾಯಕ್ಕೆ ಹೋಲಿಸಬಹುದು. ಆದರೆ ಒಂದೇ ವ್ಯತ್ಯಾಸವೆಂದರೆ, ಚಿತ್ರವನ್ನು ಜನಪ್ರಿಯ ಕ್ಲೈಮ್ಯಾಕ್ಸ್‌ನತ್ತ ಒಯ್ಯುವ ಸಲುವಾಗಿ ನಿರ್ದೇಶಕರು, ಆರಂಭದಲ್ಲಿ ಬುಡಕಟ್ಟು ಜನರಿಗೆ ತೊಂದರೆ ಕೊಟ್ಟ ಫಾರೆಸ್ಟ್ ಡಿಪಾರ್ಟ್‌ಮೆಂಟ್ ಅನ್ನು, ಅರ್ಥಾತ್ ಸರ್ಕಾರವನ್ನು ಬುಡಕಟ್ಟು ಜನರ ಹಿತೈಷಿಯಂತೆ ಅವಾಸ್ತವಿಕವಾಗಿ ಬಿಂಬಿಸಿದ್ದಾರೆ. ಆದರೆ ಮಣಿಪುರದ ಸನ್ನಿವೇಶದಲ್ಲಿ ಫಾರೆಸ್ಟ್ ಡಿಪಾರ್ಟ್‌ಮೆಂಟ್, ಅರ್ಥಾತ್ ರಾಜ್ಯ ಸರ್ಕಾರವೇ ನಿಜವಾದ ಖಳನಾಯಕನಂತೆ ಈ ದಳ್ಳುರಿಯ ಕಿಡಿ ಹೊತ್ತಿಸುತ್ತಾ ಬಂದಿದೆ. ಅದು ಹೇಗೆ? ಬನ್ನಿ ನೋಡೋಣ….

ಇಂಫಾಲ ಸಿಟಿ

ಮೂಲತಃ ಎಲ್ಲಾ ಏಳು ಈಶಾನ್ಯ ಸೋದರಿಯರಂತೆ ಮಣಿಪುರ ಕೂಡಾ ಗುಡ್ಡಗಾಡು ನಾಡು. ಭೌಗೋಳಿಕವಾಗಿ ಇದನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದ್ದು, ಇಂಫಾಲ ಕಣಿವೆ; ಎರಡನೆಯದ್ದು, ಬುಡಕಟ್ಟು ಜನರು ನೆಲೆಸಿರುವ ಗುಡ್ಡಗಾಡು ಪ್ರದೇಶ. ಇಂಫಾಲ ಕಣಿವೆಯು ಕೃಷಿಯೋಗ್ಯ ಜಮೀನು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದು ಮೈತಿ ಸಮುದಾಯದ ಜನ. ಇವರು ಕೃಷಿಯನ್ನೇ ಜೀವನಾಧಾರ ಮಾಡಿಕೊಂಡ, ಆಧುನಿಕ ನಾಗರಿಕತೆಯ ಜನ. ಮಣಿಪುರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.53ರಷ್ಟು ಈ ಸಮುದಾಯವರಿದ್ದಾರೆ. ಪ್ರಧಾನವಾಗಿ ಇವರು ಹಿಂದೂ ಧರ್ಮೀಯರು. ಇವರಲ್ಲದೆ ಮುಸ್ಲೀಮರು, ಬೌದ್ಧರು ಮತ್ತು ಮೂಲನಿವಾಸಿಗಳಾದ ಸನಮಹಿಗಳು ಕೂಡಾ ಈ ಮೈತಿ ಸಮುದಾಯದ ಭಾಗವಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಗುಡ್ಡಗಾಡು ಅರಣ್ಯ ಪ್ರದೇಶಗಳಲ್ಲಿ ಬೇರೆಬೇರೆ ಬುಡಕಟ್ಟು ಸಮುದಾಯಗಳು ನೆಲೆ ಕಂಡುಕೊಂಡಿವೆ. ಅವುಗಳ ಪೈಕಿ ಕುಕಿ ಮತ್ತು ನಾಗಾ ಬುಡಕಟ್ಟುಗಳು ಪ್ರಮುಖವಾದವು. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರು ಶೇ.40% ರಷ್ಟಿದ್ದಾರೆ. ಅದರಲ್ಲೂ ಕುಕಿ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಕುಕಿ ಬಡಕಟ್ಟುಗಳಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ ಧರ್ಮೀಯರು! ವಸಾಹತು ಕಾಲದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಈ ಬುಡಕಟ್ಟು ಜನರ ಏಳಿಗೆಗಾಗಿ ಕೆಲಸ ಮಾಡಿದ್ದರಿಂದ, ಬಹಳಷ್ಟು ಮಂದಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 1876ರಲ್ಲಿ ಜಿ.ಪಿ. ಸ್ಯಾಂಡರ್ಸನ್ ಎಂಬ ಬ್ರಿಟಿಷ್ ಅಧಿಕಾರಿ ಮೈಸೂರು ಸಂಸ್ಥಾನದಿಂದ ಚಿತ್ತಗಾಂಗ್ ಕಾಡಿನಲ್ಲಿ ಆನೆ ಹಿಡಿಯುವ ಕಾರ್ಯಾಚರಣೆಗೆ ನೇಮಕಗೊಂಡಿದ್ದಾಗ ಈ ಕುಕೀ ಬುಡಕಟ್ಟು ಸಮುದಾಯಗಳ ಆಕ್ರಮಣಕಾರಿ ಗುಣದ ಬಗ್ಗೆ ತನ್ನ ಬರಹದಲ್ಲಿ ಪ್ರಸ್ತಾಪಿಸಿದ್ದಾನೆ. ಗುಡ್ಡಗಾಡುಗಳಲ್ಲಿ ನೆಲೆಸುತ್ತಿದ್ದ ಇವರು, ಪ್ರತಿ ವರ್ಷ ಒಂದು ನಿಗದಿತ ಸಮಯದಲ್ಲಿ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿ, ಅಲ್ಲಿನ ಸಮುದಾಯಗಳ ಜನರ ನೆಲೆಗಳನ್ನು ಧ್ವಂಸ ಮಾಡಿ, ನರಮಾನವ ಒತ್ತೆಯಾಳುಗಳನ್ನು ಸೆರೆಯಾಗಿ ಕೊಂಡೊಯ್ಯುತ್ತಿದ್ದರು ಎಂದು ಉಲ್ಲೇಖಿಸಿದ್ದಾನೆ. ಇಂತಹ ಆಕ್ರಮಣಶೀಲ ಸಮುದಾಯದೊಟ್ಟಿಗೂ ಬ್ರಿಟಿಷರು ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 1871ರ ಲೂಷಾಯ್ ದಂಡಯಾತ್ರೆಯ ಮೂಲಕ ಆರಂಭದಲ್ಲಿ ಕುಕಿ ಸಮುದಾಯದೊಟ್ಟಿಗೆ ಸಂಘರ್ಷ ನಡೆಸಿದರೂ, ನಂತರ ದಿನಗಳಲ್ಲಿ ಸೌಹಾರ್ದಯುತ ಮಾತುಕತೆ ಮೂಲಕ ವಿಶ್ವಾಸ ಸಂಪಾದಿಸಿಕೊಂಡರು. ಮಧ್ಯೆದಲ್ಲಿ ಸಣ್ಣಪುಟ್ಟ ಸಂಘರ್ಷಗಳ ಹೊರತಾಗಿಯೂ  ಇವರು ಬ್ರಿಟಿಷರ ಜೊತೆ ಒಪ್ಪಂದಕ್ಕೆ ಆಗಿನಿಂದಲೂ ಕಟ್ಟುಬೀಳುತ್ತಾ ಬಂದರು. ಇಂತಹ ಒಡನಾಟದಿಂದಾಗಿ ಕುಕೀ ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ ಧರ್ಮೀಯರಿದ್ದಾರೆ.

ಮಣಿಪುರದ ರಾಜಕೀಯ ಸನ್ನಿವೇಶ

ಒಟ್ಟು 60 ಸಂಖ್ಯಾಬಲದ ಮಣಿಪುರ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಬುಡಕಟ್ಟು ಸಮುದಾಯಗಳಿಗೆ (ಎಸ್‌ಟಿ) ಮೀಸಲಿಡಲಾಗಿದೆ. 40 ಸ್ಥಾನಗಳು ಸಾಮಾನ್ಯ ಕ್ಷೇತ್ರಗಳು. ಇವುಗಳ ಪೈಕಿ 39 ಮಂದಿ ಮೈತಿ ಸಮುದಾಯಕ್ಕೆ ಸೇರಿದ ಶಾಸಕರೇ ಈ ಸಲ ಗೆದ್ದಿದ್ದಾರೆ. ಅಂದರೆ ಮಣಿಪುರದ ಚುನಾವಣಾ ರಾಜಕಾರಣದಲ್ಲಿ ಮೈತಿ ಸಮುದಾಯದ ಪ್ರಭಾವ ದಟ್ಟವಾಗಿರುವುದು ಇದರಿಂದ ಸಾಬೀತಾಗುತ್ತದೆ. ಪ್ರಸಕ್ತ ಅವಧಿಯಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ಬಿರೇನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ 32 ಬಿಜೆಪಿ ಶಾಸಕರಿದ್ದಾರೆ. ಇವರ ಪೈಕಿ 37 ಮಂದಿ ಮೈತಿ ಸಮುದಾಯಕ್ಕೆ ಸೇರಿದವರು. ಅಂದರೆ, ಮಣಿಪುರದಲ್ಲಿ ಬಿಜೆಪಿ ಪಕ್ಷದ ಪ್ರಧಾನ ವೋಟ್‌ಬ್ಯಾಂಕ್ ‘ಮೈತಿ’ ಸಮುದಾಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ಈಗ ಮೈತಿ ಮತ್ತು ಕುಕಿ ಬಡುಕಟ್ಟು ಸಮುದಾಯಗಳ ನಡುವೆ ಭುಗಿಲೆದ್ದಿರುವ ಗಲಭೆಯ ವಿಚಾರಕ್ಕೆ ಮರಳೋಣ. ಸಾಮಾನ್ಯವಾಗಿ ಯಾವುದೇ ಜನಾಂಗೀಯ ಗಲಭೆಗಳ ಹಿಂದೆ ಮೇಲ್ನೋಟಕ್ಕೆ ಸಮುದಾಯಗಳ ನಡುವಿನ ದ್ವೇಷ ಮುಖ್ಯ ಕಾರಣವೆನ್ನುವಂತೆ ಕಂಡುಬಂದರೂ, ಅದರ ಹಿಂದೆ ಒಂದು ವ್ಯವಸ್ಥಿತ ವ್ಯಾವಹಾರಿಕ/ಲಾಭದಾಯಕ ಆರ್ಥಿಕ ಉದ್ದಿಮೆಯ ಹುನ್ನಾರವಿರುತ್ತದೆ. ಮಣಿಪುರದ ಗಲಭೆಯಲ್ಲೂ ಅದರ ಕುರುಹುಗಳು ಗೋಚರಿಸುತ್ತವೆ. ಅಧಿಕೃತವಾಗಿ ಈ ಗಲಭೆ ಶುರುವಾಗಿದ್ದು ಮೇ 3 ರಂದು. ಅವತ್ತು ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಮಣಿಪುರ (ಎಟಿಎಸ್‌ಯುಎಂ) ಎಂಬ ಸಂಘಟನೆ ಒಂದು ಐಕ್ಯತಾ ರ‍್ಯಾಲಿಯನ್ನು ಹಮ್ಮಿಕೊಂಡಿತ್ತು. ಅದಕ್ಕು ಕೆಲ ದಿನಗಳ ಹಿಂದಷ್ಟೇ (ಏಪ್ರಿಲ್ 20, 2023) ಮಣಿಪುರ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಒಂದು ನಿರ್ದೇಶನ ನೀಡಿ ಆದೇಶಿಸಿತ್ತು. ಮೈತಿ ಸಮುದಾಯವನ್ನು ಎಸ್‌ಟಿ ಪಂಗಡಕ್ಕೆ ಸೇರಿಸಲು ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ನೀಡಲಾಗಿದ್ದ ಆದೇಶ ಅದು. ಇದರ ವಿರುದ್ಧ ಆ ಸಂಘಟನೆ ರ‍್ಯಾಲಿ ಹಮ್ಮಿಕೊಂಡಿತ್ತು. ವಿವಿಧ ಬುಡಕಟ್ಟಿನ ಸುಮಾರು 6೦,೦೦೦ಕ್ಕೂ ಹೆಚ್ಚು ಪ್ರತಿಭಟನಾಕಾರರು ಅಲ್ಲಿ ನೆರೆದಿದ್ದರು ಎಂದು ಅಂದಾಜಿಸಲಾಗಿದೆ.

ಹೈಕೋರ್ಟ್ ಆದೇಶದ ವಿರುದ್ಧ ಪ್ರತಿರೋಧ ಭುಗಿಲೆದ್ದಿದ್ದು ಏಕೆ?

ಹೈಕೋರ್ಟ್ ಆದೇಶದ ವಿರುದ್ಧ ಇಷ್ಟು ದೊಡ್ಡ ಮಟ್ಟದ ಪ್ರತಿರೋಧ ಭುಗಿಲೆದ್ದಿದ್ದು ಏಕೆ? ಎಂದು ನೋಡುತ್ತಾ ಸಾಗಿದಂತೆ ನಮಗೆ ಇನ್ನೊಂದಷ್ಟು ಒಳಹುಗಳು ಗೋಚರಿಸುತ್ತವೆ. ಫಾರೆಸ್ಟ್ ಆಕ್ಟ್-1927 ಮತ್ತು 1976ರ ತಿದ್ದುಪಡಿಗಳ ಅನ್ವಯ ಮಣಿಪುರ ರಾಜ್ಯದಲ್ಲಿ ಒಂದು ವಿಶೇಷ ಕಾನೂನು ಜಾರಿಯಲ್ಲಿದೆ. ಅದರನ್ವಯ, ಬುಡಕಟ್ಟು ಪಂಗಡಕ್ಕೆ ಸೇರದವರು, ಕಾಯ್ದಿರಿಸಿದ ಅರಣ್ಯ ಪ್ರದೇಶಗಳು ಎಂದು ಗುರುತಿಸಲ್ಪಟ್ಟ ಭಾಗಗಳಲ್ಲಿರುವ ಜನವಸತಿ ಪ್ರದೇಶಗಳಲ್ಲಿ ಯಾವುದೇ ಜಮೀನುಗಳನ್ನು, ಆಸ್ತಿಗಳನ್ನು ಖರೀದಿ ಮಾಡುವಂತಿಲ್ಲ. ಅಂದರೆ ಇಂಫಾಲ ಕಣಿವೆಯಲ್ಲಿ ನೆಲೆಸಿರುವ ಬಲಾಢ್ಯ ಮೈತಿ ಸಮುದಾಯದವರು, ಕುಕಿ ಮೊದಲಾದ ಬುಡಕಟ್ಟುಗಳು ವಾಸಿಸುವ ಗುಡ್ಡಗಾಡು ಜನವಸತಿ ಪ್ರದೇಶಗಳಲ್ಲಿ ಯಾವುದೇ ಆಸ್ತಿ ಖರೀದಿ ಮಾಡುವಂತಿಲ್ಲ. ಅರಣ್ಯ ಸಂಪತ್ತು ಮತ್ತು ಬುಡಕಟ್ಟು ಜನರ ಮೇಲಿನ ನಾಗರಿಕ ಅತಿಕ್ರಮಣವನ್ನು ತಡೆಯುವ ಸಲುವಾಗಿ ಈ ಕಾನೂನು ಜಾರಿಯಲ್ಲಿದೆ. ರಾಜಕೀಯ ಪ್ರಾಬಲ್ಯವನ್ನು ಸಂಪಾದಿಸಿಕೊಂಡ ಒಂದಷ್ಟು ಮೈತಿ ಹಿತಾಸಕ್ತಿಗಳಿಗೆ ಈಗ ಅರಣ್ಯ ಸಂಪತ್ತಿನ ಮೇಲೆ ಕಣ್ಣು ಬಿದ್ದಿದೆ. ತಮ್ಮ ಸಮುದಾಯವನ್ನೂ ಎಸ್‌ಟಿ ಪಂಗಡಕ್ಕೆ ಸೇರಿಸಿದರೆ, ಆಗ ಬುಡಕಟ್ಟು ಜನವಸತಿ ಪ್ರದೇಶಗಳಲ್ಲಿ ಆಸ್ತಿಯನ್ನು ಖರೀದಿಸಿ, ಅರಣ್ಯ ಸಂಪತ್ತಿಗೆ ಸನಿಹವಾಗಬಹುದೆನ್ನುವುದು ಇದರ ಹಿಂದಿರುವ ಲೆಕ್ಕಾಚಾರ. ಮೈತಿ ಸಮುದಾಯದ ಬಹಳಷ್ಟು ರಾಜಕಾರಣಿಗಳು ಬಿಜೆಪಿಯೊಟ್ಟಿಗೆ ಗುರುತಿಸಿಕೊಂಡಿರುವುದರಿಂದ ಅಲ್ಲಿನ ಬಿರೇನ್ ಸಿಂಗ್ ನೇತೃತ್ವದ ಸರ್ಕಾರವು ಕುಕೀ ಬುಡಕಟ್ಟು ಸಮುದಾಯದವರ ಹಕ್ಕು ಕಸಿಯುವಂತಹ ಹೆಜ್ಜೆಗಳನ್ನು ಒಂದೊಂದಾಗಿ ಇರಿಸುತ್ತಲೇ ಬಂದಿತ್ತು.

ಮ್ಯಾನ್ಮಾರ್ ದೇಶವು ಮಣಿಪುರದ ಗಡಿ ಭಾಗವಾಗಿದ್ದು, ಅಲ್ಲಿಂದ ‘ಚಿನ್’ ಎಂಬ ಸಮುದಾಯ ಅಕ್ರಮವಾಗಿ ಗಡಿನುಸುಳಿ ಮಣಿಪುರದಲ್ಲಿ ನೆಲೆಸುತ್ತಿದೆ ಎಂಬ ಆರೋಪ ತುಂಬಾ ದಿನಗಳಿಂದ ಕೇಳುತ್ತಾ ಬಂದಿತ್ತು. ಆ ಅಸ್ತ್ರವನ್ನು ಬಳಸಿಕೊಂಡ ಬಿಜೆಪಿ ರಾಜ್ಯ ಸರ್ಕಾರವು ಅಂತಹ ವಲಸಿಗರನ್ನು ಗುರುತಿಸಲು ಮತ್ತು ರಕ್ಷಿತಾರಣ್ಯ ಪ್ರದೇಶದಲ್ಲಿ ಓಪಿಯಂನಂತಹ ಮಾದಕದ್ರವ್ಯ ತಯಾರಿಕೆ ಬಳಸಲಾಗುವ ಪಾಪ್ಪಿ ಸಸ್ಯಗಳನ್ನು ಅಕ್ರಮವಾಗಿ ಬೆಳೆಯಲಾಗುತ್ತಿದ್ದು, ಅಂತಹ ಜಾಗಗಳನ್ನು ಪತ್ತೆಹಚ್ಚಲು ರಕ್ಷಿತ ಅರಣ್ಯ ಪ್ರದೇಶದ ಸರ್ವೇ ಕಾರ್ಯ ಮಾಡುತ್ತೇನೆಂದು ಸರ್ಕಾರ ಆ ಕೆಲಸಕ್ಕೆ ಮುಂದಾಯ್ತು. ಆದರೆ ವಾಸ್ತವದಲ್ಲಿ ಕುಕೀ, ನಾಗಾ ಮೊದಲಾದ ಬುಡಕಟ್ಟು ಸಮುದಾಯಗಳನ್ನು ರಕ್ಷಿತ ಅರಣ್ಯ ಪ್ರದೇಶದ ಅವರ ವಸತಿತಾಣಗಳಿಂದ ಒಕ್ಕಲೆಬ್ಬಿಸುವುದು ರಾಜ್ಯ ಸರ್ಕಾರದ ಇರಾದೆ ಎಂದು ಆ ಬುಡಕಟ್ಟುಗಳು ಭಾವಿಸಿದವು. ಯಾಕೆಂದರೆ, ಮೊದಲೇ ವಿವರಿಸಿದಂತೆ ಈ ಸಮುದಾಯಗಳು ಹೆಚ್ಚಾಗಿ ಕ್ರಿಶ್ಚಿಯನ್ ಧರ್ಮದೊಂದಿಗೆ ಗುರುತಿಸಿಕೊಂಡಿದ್ದವು. ಅದನ್ನು ಪುಷ್ಠೀಕರಿಸುವಂತೆ ಏಪ್ರಿಲ್ 11ರಂದು, ಅನಧಿಕೃತ ಕಟ್ಟಡಗಳೆಂದು ಇಂಫಾಲ ಕಣಿವೆಯಲ್ಲಿ ರಾಜ್ಯ ಸರ್ಕಾರ ಹೊಡೆದುರುಳಿಸಿದ್ದು ಬುಡಕಟ್ಟು ಜನವಸತಿ ಪ್ರದೇಶದಲ್ಲಿದ್ದ ಮೂರು ಚರ್ಚುಗಳನ್ನು!

1966ರಿಂದಲೂ ರಕ್ಷಿತಾರಣ್ಯವೆಂದು ಗುರುತಿಸಲ್ಪಟ್ಟಿದ್ದ ಚುರ್‌ಚಂದ್‌ಪುರ್-ಖೋಪುಮ್ ಅರಣ್ಯದಲ್ಲಿ ಸರ್ಕಾರದ ಅರಣ್ಯ ಇಲಾಖೆ ಹಠಾತ್ತನೆ ಸರ್ವೇ ಕಾರ್ಯ ಕೈಗೊಂಡಿದ್ದನ್ನು, ಕುಕೀ ಸಮುದಾಯಕ್ಕೆ ಸೇರಿದ ಸ್ವತಃ ಬಿಜೆಪಿ ಶಾಸಕರೂ ಆಗಿರುವ ಪೌಲಿನ್‌ಲಾಲ್ ಹೌಕೀಪ್ ಎಂಬಾತ ತಮ್ಮದೇ ಬಿಜೆಪಿ ಸರ್ಕಾರದ ಪರಿಸರ ಮಂತ್ರಿ ಬಿಸ್ವಜಿತ್ ಸಿಂಗ್‌ಗೆ ಪತ್ರ ಬರೆಯುವ ಮೂಲಕ ಪ್ರತಿಭಟಿಸಿದ್ದು ಇಲ್ಲಿ ಉಲ್ಲೇಖಾರ್ಹ. ಈ ಮೊದಲು ಅಸಿಸ್ಟೆಂಟ್ ಸೆಟ್ಲ್‌ಮೆಂಟ್ ಆಫೀಸರ್ (ಎಎಸ್‌ಒ) ಆಗಿದ್ದವರು, ’ರಕ್ಷಿತಾರಣ್ಯದ ಕೆಲವು ಪ್ರದೇಶಗಳಲ್ಲಿ ಬುಡಕಟ್ಟು ಜನರು ತುಂಬಾ ವರ್ಷಗಳಿಂದ ನೆಲೆಸುತ್ತಿರುವುದರಿಂದ ಆ ಜಾಗಗಳಿಗೆ ಅರಣ್ಯ ನಿರ್ಬಂಧಗಳಿಂದ ವಿನಾಯ್ತಿ ನೀಡಿ, ವಸತಿ ಪ್ರಮಾಣಪತ್ರ ನೀಡಬೇಕು’ ಎಂದು ತುಂಬಾ ದಿನಗಳ ಹಿಂದೆಯೇ ವರದಿ ಕೊಟ್ಟಿದ್ದರು. ಅದನ್ನು ಹಿಂದಿನ ಸರ್ಕಾರಗಳು ಮಾನ್ಯ ಮಾಡಿದ್ದವು. ಆದರೆ ಬಿರೇನ್ ಸಿಂಗ್ ಅವರ ಬಿಜೆಪಿ ಸರ್ಕಾರ ದಿಢೀರನೆ ಆ ವರದಿಯನ್ನು ರದ್ದು ಮಾಡಿತು. ಅರ್ಥಾತ್ ಅಲ್ಲಿದ್ದ ಕುಕೀ ಬುಡಕಟ್ಟು ಸಮುದಾಯಗಳನ್ನು ಅವರ ನೆಲೆಯಿಂದ ಹೊರಹಾಕಲು ಸರ್ಕಾರ ಸಿದ್ದವಾಗಿತ್ತು. ಇದನ್ನೇ ಆ ಬಿಜೆಪಿ ಶಾಸಕ ಪ್ರತಿಭಟಿಸಿ ಪತ್ರ ಬರೆದದ್ದು. 

ಸರ್ಕಾರ ಇಲ್ಲಿ ಇನ್ನೊಂದು ಯಡವಟ್ಟು ಮಾಡಿಕೊಂಡಿತು. ರಕ್ಷಿತಾರಣ್ಯ ಪ್ರದೇಶದ ಸರಿಯಾದ ಕಂದಾಯ ನಕ್ಷೆಗಳೇ ಸರ್ಕಾರದ ಬಳಿ ಇರಲಿಲ್ಲ. ಆಗ ಗೂಗಲ್ ಮ್ಯಾಪ್ ಅನ್ನು ಆಧರಿಸಿ, ಅರಣ್ಯ ಪ್ರದೇಶದ ಗಡಿಯನ್ನು ನಿರ್ಧರಿಸಲು ಮುಂದಾಯ್ತು. 2020ಕ್ಕೂ ಮೊದಲು ಗೂಗಲ್ ಮ್ಯಾಪ್‌ನಲ್ಲಿ ಇಲ್ಲಿ ಯಾವುದೇ ಜನವಸತಿ ಪ್ರದೇಶಗಳು ಕಾಣಿಸುತ್ತಿಲ್ಲ, ಹಾಗಾಗಿ ನೀವು ಇತ್ತೀಚೆಗಷ್ಟೆ ಅತಿಕ್ರಮಿಸಿದ ಅಕ್ರಮ ವಸತಿಗರು, ಈ ಕೂಡಲೇ ಜಾಗ ಖಾಲಿ ಮಾಡಿ ಎಂದು ಚುರ್‌ಚಂದಾಪುರ್ ಮತ್ತು ನೋನಿ ಜಿಲ್ಲೆಗಳ ಸುಮಾರು 38 ಹಳ್ಳಿಗಳ ಜನರಿಗೆ ನೋಟೀಸು ನೀಡಿತು. ಅದರನ್ವಯ ಫೆಬ್ರವರಿ 21ರಂದು, ಕೆ.ಸಾಂಗ್ಜಾಂಗ್ ಹಳ್ಳಿಯ ಬುಡಕಟ್ಟು ಜನರನ್ನು ಬಲವಂತವಾಗಿ ಸರ್ಕಾರ ತೆರವುಗೊಳಿಸಿತ್ತು. ಆದರೆ ಕುಕೀ ಜನರು ಹೇಳುವ ಪ್ರಕಾರ ಆ 38 ಹಳ್ಳಿಗಳ ಸುಮಾರು 1೦೦೦ಕ್ಕೂ ಹೆಚ್ಚು ಜನರು ಕಳೆದ 5೦-6೦ ವರ್ಷಗಳಿಂದ ಅಲ್ಲಿ ನೆಲೆಸುತ್ತಾ ಬಂದಿದ್ದರು. ಅವರಿಗೆ ಸರ್ಕಾರದ ಸೆಟ್ಲ್‌ಮೆಂಟ್ ಅಧಿಕಾರಿಯೇ ಈ ಹಿಂದೆ ವಸತಿ ಪ್ರಮಾಣ ಪತ್ರವನ್ನೂ ನೀಡಿದ್ದರು. ಆದರೆ ಸರ್ಕಾರ ನೀಡಿದ ನೋಟಿಸಿನಲ್ಲಿ ಈ ಪ್ರಮಾಣಪತ್ರ ನೀಡಿದ ಅಧಿಕಾರಿಗೆ, ಹಾಗೆ ವಸತಿ ಪ್ರಮಾಣಪತ್ರ ನೀಡುವ ಹಕ್ಕೇ ಇಲ್ಲವೆಂದು ವಾದಿಸಿತ್ತು. ಕುಕೀ ಬಡುಕಟ್ಟು ಸಮುದಾಯಗಳ ಒಕ್ಕೂಟವಾದ ’ಕುಕೀ ಇಂಕಿ ಮಣಿಪುರ್ (ಕೆಐಎಂ) ಸಂಘಟನೆಯು ’ಸಿಎಂ ಬಿರೇನ್ ಸಿಂಗ್ ಅವರ ಹೇಳಿಕೆಯೇ ದೋಷಪೂರಿತವಾದದ್ದು, ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಸರ್ವಾಧಿಕಾರ ಧೋರಣೆಯ ವಿರುದ್ಧ ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಾಗುತ್ತಿರುವ ಆಕ್ರೋಶವನ್ನು ಬೇರೆಡೆ ತಿರುಗಿಸಲು ಹೀಗೆ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿತ್ತು.

ಶಾಂತಿ ಮರುಸ್ಥಾಪನೆಗಾಗಿ ಮೈರಾ ಪೈಬಿಸ್‌ ಮಹಿಳಾ ಹೋರಾಟಗಾರರು

ಕುಕೀ ಸಮುದಾಯದೊಳಗೆ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ಭುಗಿಲೇಳುತ್ತಿದ್ದರು ಸಹಾ, ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಹಠಕ್ಕೆ ಬಿದ್ದವರಂತೆ ತಮ್ಮ ಕಾರ್ಯಾಚರಣೆ ಮುಂದುವರೆಸತೊಡಗಿದರು. ಏಪ್ರಿಲ್ 11ರಂದು, ಲಾಂಗೋಲ್ ರಕ್ಷಿತಾರಣ್ಯದಲ್ಲಿದ್ದ ಸುಮಾರು 26 ಬುಡಕಟ್ಟು ಜನರ ಮನೆಗಳನ್ನು ತೆರವುಗೊಳಿಸಲಾಯಿತು. ರಾಜ್ಯ ಸರ್ಕಾರ ಕುಕೀ ಬುಡಕಟ್ಟು ಸಮುದಾಯವನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡುತ್ತಿದೆ ಎನ್ನುವುದಕ್ಕೆ ಇವುಗಳಲ್ಲದೆ ಇನ್ನೂ ಅನೇಕ ಕಾರಣಗಳುಂಟು. ತನ್ನ ಈ ಕ್ರಮದಿಂದ, ಆಕ್ರಮಣಶೀಲ ಮನೋಭಾವದ ಕುಕೀ ಜನಾಂಗ ಬಂಡಾಯವೇಳುವ ಸಾಧ್ಯತೆಯನ್ನು ಮುಂಗಂಡಿದ್ದ ಬಿರೇನ್ ಸಿಂಗ್ ಅವರ ಸರ್ಕಾರ ಮಾರ್ಚ್ 11ರಂದು ಕುಕೀ ನ್ಯಾಶನಲ್ ಆರ್ಮಿ ಮತ್ತು ಝೋಮಿ ರೆವ್ಯೂಲಷನರಿ ಆರ್ಮಿ ಎಂಬ ಸಶಸ್ತ್ರ ಬಂಡುಕೋರ ಸಂಘಟನೆಗಳ ಜೊತೆ 2008ರಲ್ಲಿ ಮಾಡಿಕೊಂಡಿದ್ದ ಕದನವಿರಾಮ ಒಪ್ಪಂದವನ್ನು ರದ್ದುಪಡಿಸಿ, ಅವುಗಳ ಮೇಲೆ ಪೊಲೀಸ್ ಕಾರ್ಯಾಚರಣೆಗಳಿಗೆ ಅಣಿಯಾಗಿತ್ತು. ಇದು ತಮ್ಮ ಕುಕೀ ಬುಡಕಟ್ಟು ಸಮುದಾಯದ ಹೋರಾಟದ ಬೆನ್ನೆಲುಬನ್ನು ಮುರಿಯುವ ಪ್ರಯತ್ನ ಎಂದು ಆ ಜನ ಭಾವಿಸಿದರು. ಇದೊಂಥರ ಕಾಂತಾರ ಸಿನಿಮಾದ ಧಣಿಯು ಬುಡಕಟ್ಟು ಜನರ ನಂಬಿಕೆಯ ದನಿಯಂತಿದ್ದ ದೈವನರ್ತಕ ಗುರುವನನ್ನು ಕೊಂದಂತಹ ಕ್ರಮವಾಗಿತ್ತು. ಅಲ್ಲದೇ, ಸರ್ಕಾರದ ಈ ಕ್ರಮಗಳ ವಿರುದ್ಧ ನಡೆಯುತ್ತಿದ್ದ ಕುಕೀ ಬುಡಕಟ್ಟು ಜನರ ಸರಣಿ ಪ್ರತಿಭಟನೆಗಳ ಪ್ರತಿಭಟನೆಕಾರರನ್ನು ಸಿಎಂ ಬಿರೇನ್ ಸಿಂಗ್ ಅವರು “ಅತಿಕ್ರಮಣಕಾರರು, ಪಾಪ್ಪಿ ಮಾದಕದ್ರವ್ಯ ಬೆಳೆಗಾರರು, ಡ್ರಗ್ಸ್ ಸಾಗಾಣಿಕೆದಾರರು, ಅನಧಿಕೃತ ನುಸುಳುಕೋರರು” ಎಂಬ ಪದಗಳನ್ನು ಬಳಸಿ ಅಸಂವೇದನಾತ್ಮಕವಾಗಿ ಟೀಕಿಸುತ್ತಾ ಬಂದದ್ದು, ಕುಕೀ ಜನಾಂಗವನ್ನು ನಿಜಕ್ಕೂ ಪ್ರಕ್ಷುಬ್ಧಗೊಳಿಸುತ್ತಾ ಬಂದಿತ್ತು. ಬಿರೇನ್ ಸಿಂಗ್ ಸರ್ಕಾರದ ವಿರುದ್ಧ ಕುಕೀ ಸಮುದಾಯದ ಸಿಟ್ಟು ಯಾವ ಮಟ್ಟಕ್ಕೆ ಹೋಗಿ ತಲುಪಿತೆಂದರೆ, ಏಪ್ರಿಲ್ 28ರಂದು ಚುರಚಂದಾಪುರ್ ಜಿಲ್ಲೆಯ ಒಂದು ಪಾರ್ಕ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಸಾರ್ವಜನಿಕ ಜಿಮ್ ಅನ್ನು ಸಿಎಂ ಉದ್ಘಾಟಿಸುವುದೆಂದು ನಿಗದಿಯಾಗಿತ್ತು. ಆದರೆ ಅದರ ಹಿಂದಿನ ದಿನವೇ ರೊಚ್ಚಿಗೆದ್ದ ಕುಕೀ ಜನ, ಆ ಜಿಮ್‌ಗೆ ನುಗ್ಗಿ ಬೆಂಕಿ ಹಚ್ಚಿ ಧ್ವಂಸ ಮಾಡಿದ್ದರು. ನಂತರ ಕಾರ್ಯಕ್ರಮವೇ ರದ್ದಾಯ್ತು. ಈ ಘಟನೆಯು ಮಣಿಪುರದ ಹಿಂಸಾಚಾರ ಕುಕೀ ಬುಡಕಟ್ಟು ಜನರು ಮತ್ತು ಬಿಜೆಪಿ ಸರ್ಕಾರದ ನಡುವಿನ ಸಂಘರ್ಷ ಎನ್ನುವುದನ್ನು ಸಾಬೀತು ಮಾಡುತ್ತದೆ. ತನ್ನ ವಿರುದ್ಧದ ಈ ಸಂಘರ್ಷವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ದಂಗೆಯನ್ನು ನಿಯಂತ್ರಿಸುವ ಬದಲು, ಆ ದಂಗೆಯ ನೆಪದಲ್ಲೇ ಕುಕೀ ಬುಡಕಟ್ಟು ಪ್ರತಿರೋಧವನ್ನು ಶಾಶ್ವತವಾಗಿ ಮಟ್ಟಹಾಕಲು ನಿರ್ಲಕ್ಷ್ಯದ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆಯಾ? ಎಂಬ ಅನುಮಾನವನ್ನು ಹಲವು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. 

ಇಂತಹ ಪ್ರಕ್ಷುಬ್ಧ ಸಮಯದಲ್ಲಿ ಮಣಿಪುರ ಹೈಕೋರ್ಟ್ ಮೈತಿ ಸಮುದಾಯಕ್ಕೆ ಎಸ್‌ಟಿ ಮಾನ್ಯತೆ ನೀಡುವ ಪ್ರಕ್ರಿಯೆಯ ಕುರಿತು ತನ್ನ ತೀರ್ಪು ಹೇಳಿತು. ಒಂದುಕಡೆ ಸರ್ಕಾರದಿಂದ ತಮ್ಮ ವಸತಿ ಪ್ರದೇಶಗಳನ್ನೇ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ನ್ಯಾಯಾಲಯ ಕೂಡಾ ಯಾವಾಗ ತಮ್ಮ ಅಸ್ತಿತ್ವನ್ನೇ ಆತಂಕಕ್ಕೆ ದೂಡುವಂತಹ ಪ್ರಕ್ರಿಯೆಗೆ ನಿರ್ದೇಶನ ನೀಡಿತೋ ಆಗ ಬುಡಕಟ್ಟು ಸಮುದಾಯಗಳು ಒಟ್ಟಾಗಿ, ಸುಮಾರು 6೦,೦೦೦ ಪ್ರತಿಭಟನಾಕಾರರೊಂದಿಗೆ ಮೇ 3ರಂದು ಐಕ್ಯತಾ ರ‍್ಯಾಲಿಯ ಮೂಲಕ ಬೀದಿಗಿಳಿದರು. ಪ್ರಕ್ಷುಬ್ಧಗೊಂಡಿದ್ದ ವಾತಾವರಣಕ್ಕೆ ಕಿಡಿ ತಾಕಿಸಿದಂತಾಯ್ತು. ಆ ರ‍್ಯಾಲಿಯಲ್ಲಿ ಭುಗಿಲೆದ್ದ ಹಿಂಸಾಚಾರ ಇವತ್ತಿನವರೆಗೂ ಮಣಿಪುರವನ್ನು ನಲುಗುವಂತೆ ಮಾಡುತ್ತಿದೆ. 

ಮಣಿಪುರದ ಬಿಜೆಪಿ ಸರ್ಕಾರವೇ ಇಂತಹ ಬೆಂಕಿಗೆ ಕಾರಣವಾಯಿತೇ?

ಕುಕೀ ಬುಡಕಟ್ಟು ಸಮುದಾಯದಲ್ಲಿ ಕ್ರಿಶ್ಚಿಯನ್ನರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಆ ಸಮುದಾಯದವ ವಿರುದ್ಧ ತನ್ನ ಕೋಮುವಾದಿ ಅಜೆಂಡಾವನ್ನು ಬಳಸಲು ಹೋಗಿ ಮಣಿಪುರ ರಾಜ್ಯದ ಬಿಜೆಪಿ ಸರ್ಕಾರವೇ ಇಂತಹ ಬೆಂಕಿಗೆ ಕಾರಣವಾಯಿತೇ? (‘ಮಣಿಪುರದಲ್ಲಿ ಬಿಜೆಪಿ ಕ್ರಿಶ್ಚಿಯನ್ ವಿರೋಧಿಯಾಗಿದೆ’ ಎಂದು ಆರೋಪಿಸಿ ಇತ್ತೀಚೆಗೆ ಮಿಜೋರಾಂ ಬಿಜೆಪಿಯ ಉಪಾಧ್ಯಕ್ಷ ಸ್ಥಾನಕ್ಕೆ ಆರ್.ವನ್ರಂಚುಆಂಗಾ ರಾಜೀನಾಮೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು) ಅಥವಾ ಅಪಾರ ಅರಣ್ಯ ಸಂಪತ್ತನ್ನು ಲೂಟಿ ಹೊಡೆಯುವ ವ್ಯಾವಹಾರಿಕ ಹುನ್ನಾರದ ಭಾಗವಾಗಿ ರಾಜಕೀಯ ಹಿತಾಸಕ್ತಿಗಳು ಬುಡಕಟ್ಟು ಜನರನ್ನು ಬಲವಂತದಿಂದ ಮಣಿಸಲು ಹೋಗಿ ಈ ಅನಾಹುತ ಭುಗಿಲೆದ್ದಿತೇ? ಕೇವಲ ಮಣಿಪುರ ರಾಜ್ಯದ ಮಾಫಿಯಾ ಮಾತ್ರವಲ್ಲದೇ, ರಾಷ್ಟ್ರೀಯ ಮಟ್ಟದ ಕೂಟವೇನಾದರೂ ಮಣಿಪುರದ ಅರಣ್ಯಸಂಪತ್ತಿನ ಮೇಲೆ ಕಣ್ಣುಹಾಕಿ ಈ ದಳ್ಳುರಿಯನ್ನು ಡಿಸೈನ್ ಮಾಡಿದ್ದಾರಾ? ಅದಕ್ಕಾಗಿಯೇ ಪ್ರಧಾನಿಗಳು ಕೂಡಾ ಮಣಿಪುರದ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಇಷ್ಟು ಅಸಡ್ಡೆ ತೋರಿದಂತೆ ನಿರ್ಲಕ್ಷಿಸುತ್ತಿದ್ದಾರಾ? ಈ ಪ್ರಶ್ನೆಗಳಿಗಿನ್ನೂ ಸ್ಪಷ್ಟ ಉತ್ತರಗಳು ಸಿಗಬೇಕಿವೆ. ಆದರೆ ಒಂದಂತೂ ಸತ್ಯ, ಕಾಂತಾರ ಸಿನಿಮಾದಲ್ಲಿ ಬಂದಂತೆ ಇಲ್ಲಿ ಯಾವ ದೈವವೂ ಬಂದು ಮಣಿಪುರದ ಕುಕೀ ಬುಡಕಟ್ಟು ಜನರ ಅಸ್ಮಿತೆಯನ್ನು ಕಾಪಾಡಲಾರದು. ನಾಗರಿಕ ಸಮಾಜ ತುರ್ತಾಗಿ ಸ್ಪಂದಿಸಬೇಕಿದೆಯಷ್ಟೆ.

ಕೊನೆಗೊಂದು ಮಾತು: ಸಿನಿಮಾದಲ್ಲಿ, ಬುಡಕಟ್ಟು ಜನರ ಜಾಗದ ಮೇಲಿನ ಲಾಲಸೆಯ ಹೊರತಾಗಿ ಧಣಿಗೆ ಅವರ ಜಾತಿಯ ಮೇಲೆ ಅಸಹನೆಯಿತ್ತು; ಇಲ್ಲಿ, ಅರಣ್ಯ ಸಂಪತ್ತಿನ ಮೇಲೆ ಲಾಭಕೋರ ಹುನ್ನಾರದ ಹೊರತಾಗಿ ಕುಕೀ ಬುಡಕಟ್ಟು ಜನರ ಕ್ರಿಶ್ಚಿಯನ್ ಧರ್ಮದ ಮೇಲೆ ಅಸಹನೆ ಇದ್ದಂತಿದೆ……

ಗಿರೀಶ್ ತಾಳಿಕಟ್ಟೆ

ಪತ್ರಕರ್ತರು

ಇದನ್ನೂ ಓದಿ-ಮಣಿಪುರ ಯಾಕೆ ಹೊತ್ತಿ ಉರಿಯುತ್ತಿದೆ?

You cannot copy content of this page

Exit mobile version