Home ಸಿನಿಮಾ ಕಾಶ್ಮೀರ್‌ ಫೈಲ್ಸ್‌ ಎನ್ನುವ ಮಾರುವೇಷದ ಸಿನೆಮಾ

ಕಾಶ್ಮೀರ್‌ ಫೈಲ್ಸ್‌ ಎನ್ನುವ ಮಾರುವೇಷದ ಸಿನೆಮಾ

0

ಇತ್ತೀಚಿಗೆ ಇಸ್ರೇಲ್ ದೇಶದ ಪ್ರಖ್ಯಾತ ನಿರ್ದೇಶಕ ನದಾವ್ ಲ್ಯಾಪಿಡ್ ಅವರು ದ ಕಾಶ್ಮೀರಿ ಫೈಲ್ಸ್ ಸಿನಿಮಾ ಕುರಿತು ಪ್ರತಿಷ್ಟಿತ IFFI ನಲ್ಲಿ ಮಾಡಿದ್ದ ಟೀಕೆ ಬಹಳ ಆಕ್ರೋಶಕ್ಕೆ ಗುರಿಯಾಗಿತ್ತು. ಅವರು ಈ ಚಿತ್ರದ ಕುರಿತು ಮಾತನಾಡುತ್ತಾ ʼಇದೊಂದು ಅಸಭ್ಯ ಮತ್ತು ಕಳಪೆ ಚಿತ್ರ ಎಂದು ಹೇಳಿದ್ದರು. ಮತ್ತು ಇದು ಬಹಳ ಚರ್ಚೆಗೆ ಒಳಗಾಗಿತ್ತು. ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಬರೆದ ಇಂಗ್ಲಿಷ್‌ ಲೇಖನದ ಕನ್ನಡ ಅವತರಣಿಕೆ ನಿಮ್ಮ ಓದಿಗಾಗಿ

“ಕಾಶ್ಮೀರ್‌ ಫೈಲ್ಸ್‌ ಕುರಿತು ನಾನು ಆಡಿದ ಮಾತುಗಳ ಕುರಿತು ನನಗೆ ಯಾವುದೇ ವಿಷಾದವಿಲ್ಲ. ಆ ಮಾತುಗಳನ್ನು ಅಲ್ಲಿ ಹೇಳಲೇಬೇಕಾದ ಅನಿವಾರ್ಯತೆಯಿದೆಂದು ನನಗೆ ಅನ್ನಿಸಿತ್ತು. ನಾನು ಆ ಮಾತುಗಳನ್ನು ಆಡಿದ ನಂತರದ ಘಟನೆಗಳು ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡಿದ್ದೇನೆನ್ನುವುದನ್ನು ಎತ್ತಿ ತೋರಿಸುವಂತಿದ್ದವು. ಹೌದು ಈ ಮಾತುಗಳನ್ನು ನಾನು ಆಡಲೇಬೇಕಿತ್ತು.”

ನಾನಿರುವುದು ಪ್ಯಾರಿಸ್ಸಿನಲ್ಲಿ. ನಾನು ಭಾರತದ ಜನಜೀವನದ ಭಾಗವಲ್ಲ, ನಾನು ಹೋಗಿದ್ದು ಜ್ಯೂರಿಯಾಗಿ ಒಂದು ಸಣ್ಣ ಜವಬ್ದಾರಿಯನ್ನು ನಿಭಾಯಿಸಲು. ನನ್ನ ಮಾತುಗಳು ಇಂತಹದ್ದೊಂದು ತಿರುವು ಪಡೆದುಕೊಳ್ಳಬಹುದೆನ್ನುವ ಕನಿಷ್ಟ ಅರಿವೂ ನನಗಿರಲಿಲ್ಲ. ಅದೇನೇ ಇದ್ದರೂ ಇದೆಲ್ಲ ಎರಡು ಮೂರು ದಿನಗಳಲ್ಲಿ ಜನರಿಗೆ ಮರೆತುಹೋಗಲಿದೆ.
ಇಲ್ಲಿ ವಿಷಯ ನನ್ನದಲ್ಲ. ಕಾಶ್ಮೀರ್‌ ಫೈಲ್ಸ್‌ ಸಿನೆಮಾದ್ದೂ ಅಲ್ಲ. ಮೂಲ ಪ್ರಶ್ನೆ ಸ್ವಲ್ಪ ಬೇರೆಯದು. ಜನರು ನನ್ನ ಮಾತುಗಳನ್ನು ಒಪ್ಪದಿರಬಹುದು, ನಾನು ಮಾತಾಡುತ್ತಿರುವ ವಿಷಯದ ಕುರಿತು ನನಗೆ ಏನೂ ತಿಳಿದಿಲ್ಲ ಎನ್ನಬಹುದು. ನನ್ನ ಬಗ್ಗೆ ಬಹಳ ಕೆಟ್ಟದಾಗಿ ಯೋಚಿಸಬಹುದು. ಜನರು ಸಿನೆಮಾವನ್ನು ಮೆಚ್ಚಬಹುದು, ಮೆಚ್ಚಿಕೊಳ್ಳದಿರಬಹುದು. ಅದನ್ನು ಪ್ರೀತಿಸಬಹುದು ಅಥವಾ ದ್ವೇಷಿಸಬಹುದು. ಇದೆಲ್ಲವೂ ನನಗೆ ಒಪ್ಪಿತವೇ ಆಗಿದೆ. ಹಾಗೆಯೇ ಭಾವುಕವಾಗಿ ಒಂದು ವಿಚಾರವನ್ನು ಚರ್ಚಿಸುವುದನ್ನು ಕೂಡಾ ವಿರೋಧಿಸುವುದಿಲ್ಲ. ಆದರೆ ನನ್ನ ಮಾತುಗಳಿಗೆ ಬಂದ ಪ್ರತಿಕ್ರಿಯೆಗಳಲ್ಲಿ ಹುಚ್ಚುತನದ ಮಾತುಗಳೇ ಹೆಚ್ಚಿದ್ದವು. ಹೌದು ಅದು ನಿಮ್ಮ ದೇಶ, ನಿಮ್ಮದೇ ಸಮಾಜ, ಆದರೆ ನನ್ನ ಪ್ರಶ್ನೆಯೇನೆಂದರೆ ಹಿಂಸೆಗೆ ಕಾರಣವಾಗುತ್ತದೆನ್ನುವ ಕಾರಣಕ್ಕಾಗಿ, ಬೆದರಿಕೆಗಳ ಸರಮಾಲೆಯೇ ಬರುತ್ತದೆನ್ನುವ ಕಾರಣಕ್ಕೆ ನೀವು ಸತ್ಯ ಹೇಳದೆ ಉಳಿಯಬಲ್ಲಿರಾ? ಮಾಧ್ಯಮಗಳಲ್ಲಿ ಒಂದು ಸಿನೆಮಾ ವಿಮರ್ಶೆಗೆ ಬಂದ ಪ್ರತಿಕ್ರಿಯೆಯನ್ನು ನೋಡಿ ನನ್ನ ಮನಸ್ಸಿನಲ್ಲಿ ಒಂದು ಸಿನಿಮಾ ವಿಮರ್ಶೆಗೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು ಸಹಜವೇ ಅನ್ನುವ ಪ್ರಶ್ನೆ ಮೂಡಿತು.

ನನಗೆ ಇಷ್ಟವಾಗದ ಹಲವು ಸಿನಿಮಾಗಳಿರಬಹುದು‌, ಆದರೆ, ದಿ ಕಾಶ್ಮೀರ್‌ ಫೈಲ್ಸ್‌ ಒಂದು ನಕಲಿ ಸಿನೆಮಾ. ಇದು ಒಂದು ಬಗೆಯ ನಿರೂಪಣೆ ಹೊಂದಿರುವ ಪ್ರಚಾರದ ಉದ್ದೇಶ ಹೊಂದಿರುವ ಚಿತ್ರ. ಈ ಚಿತ್ರವು ಒಂದು ಕಾಲಘಟ್ಟದಲ್ಲಿ ಜನರ ಬದುಕು, ಅಸ್ತಿತ್ವ, ಅವರ ಬದುಕಿನ ಐತಿಹಾಸಿಕ ಘಟನೆಗಳನ್ನು ಇತರ ಚಿತ್ರಗಳಂತೆ ದಾಖಲಿಸಲು ಪ್ರಯತ್ನಿಸುವ ಒಂದು ಕಲಾಕೃತಿ ಎಂದು ಬಿಂಬಿಸಿಕೊಳ್ಳುತ್ತದೆ. ಆದರೆ ನಿಜದಲ್ಲಿ ಅದು ಕೊನೆಗೆ ಕೇವಲ ಪ್ರಚೋದನೆಯಷ್ಟೇ ಅದರ ಫಲಿತಾಂಶವಾಗಿ ಕಾಣುತ್ತದೆ. ನನ್ನ ಪ್ರಕಾರ ಇದೊಂದು ಅತ್ಯಂತ ಅಗ್ಗದ ಮತ್ತು ಅಸಭ್ಯ ರಾಜಕೀಯ ನಿಲುವುಗಳ ಒಂದು ಗುಚ್ಛ. ಮತ್ತು ಇದು ನಾನು ಅತ್ಯಂತ ಅಗ್ಗವೆಂದು ಭಾವಿಸುವ ಚಿತ್ರಸಂಬಂಧಿ ಕೌಶಲಗಳನ್ನು ಬಳಸಿಕೊಂಡಿದೆ.
ಒಂದು ಚಿತ್ರವಾಗಿ ನಾನು ಇದನ್ನುಗಂಭೀರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಇದು ನೋಡಲು ಹೊರಗಿನಿಂದ ಒಂದು ಜೋಕ್ ಆಗಿ ಮಾತ್ರ ತೋರುತ್ತದೆ. ಆದರೆ ಅದರ ತಯಾರಕರು ಮತ್ತು ಅದರ ನೋಡುಗರು ಈ ಚಿತ್ರವನ್ನು ಗಂಭೀರವಾಗಿ ಪರಿಗಣಿಸಿರುವುದನ್ನು ನೋಡಿ ಮತ್ತು ಪ್ರತಿಷ್ಟಿತ ಸ್ಪರ್ದೆಗಳಿಗೂ ಆಯ್ಕೆ ಮಾಡಲು ತೀರ್ಮಾನಿಸಿರುವುದನ್ನು ನೋಡಿದಾಗ ಮಾತ್ರ ಇದರ ಕುರಿತು ಒಂದು ನಿಲುವನ್ನು ತಳೆಯಲೇಬೇಕಾಗಿ ಬಂದಿದೆ.

ಕಲಾಕೃತಿ ಎಂದು ಹೇಳಿದಾಗ ಅದರ ರೂಪವೇ (form) ಸಾರವಾಗಿರುತ್ತದೆ (content) ಮತ್ತು ಸಾರವೇ ರೂಪವೂ ಆಗಿರುತ್ತದೆ.‌
ಅದರ ಔಪಚಾರಿಕತೆ ಮತ್ತು ಸೌಂದರ್ಯವೂ ಸೈದ್ಧಾಂತಿಕ ಅರ್ಥವನ್ನು ಹೊಂದಿರುತ್ತವೆ. ಕಾಶ್ಮೀರ್‌ ಫೈಲ್ಸ್‌ ಪ್ರಕರಣದಲ್ಲಿ ಎಷ್ಟು ಜನ ಸತ್ತರು ಎನ್ನವುದನ್ನು ನಿರ್ಧರಿಸಲು ನನ್ನ ಬಳಿ ಯಾವುದೇ ಮಾನದಂಡಗಳಿಲ್ಲ. ಎಷ್ಟು ಜನರನ್ನು ಕಗ್ಗೊಲೆ ಮಾಡಲಾಗಿದೆ ಎನ್ನುವದನ್ನು ಹೇಳಬಲ್ಲ ಸಾಮರ್ಥ್ಯ ನನಗಿಲ್ಲ. ಈ ಚಿತ್ರದಲ್ಲಿ ತೋರಿಸಿರುವ ಈ ಭಯಾನಕ ಸಂಗತಿಗಳು ನಿಜವಾಗಿಯೂ ನಡೆದಿವೆಯೋ ಇಲ್ಲವೋ ಎಂದು ಕೂಡಾ ನಾನು ಹೇಳಲಾರೆ. ಪ್ರಶ್ನೆಯಿರುವುದು ಅಂತಹ ಭಯಾನಕತೆಯನ್ನು ಈ ಚಿತ್ರದಲ್ಲಿ ಚಿತ್ರಿಸಿರುವಂತೆ ಚಿತ್ರಿಸಬೇಕಿತ್ತೇ ಎನ್ನುವುದು ನನ್ನ ಪ್ರಶ್ನೆ. ಚಿತ್ರದಲ್ಲಿ ಕೆಟ್ಟ ಜನರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಅವರು ಇಲ್ಲಿ ಮನುಷ್ಯರೇ ಅಲ್ಲ ಕೆಟ್ಟತನದ ಪ್ರತಿರೂಪ ಎಂಬಂತೆ ಚಿತ್ರಿಸಲಾಗಿದೆ.

ಅತ್ಯಂತ ಕೆಟ್ಟ ಮನುಷ್ಯರು ಕೂಡಾ ತಾವು ಸರಿ ಎಂದೇ ನಂಬಿರುತ್ತಾರೆ. ನನ್ನ ಮಟ್ಟಿಗೆ ಬದುಕನ್ನು ಸಂಕೀರ್ಣಗೊಳಿಸಿ, ಭಯಾನಕವಾಗಿಸಿ ಬಿಕ್ಕಟ್ಟಿಗೆ ತಿರುಗಿಸ ಸಂಗತಿ ಇದೇ.
ಈ ಚಿತ್ರದಲ್ಲಿ ನಿಮಗೆ ಈ ಭಾವ ಹುಟ್ಟುವುದೇ ಇಲ್ಲ. ನಿಮಗೆ ಇದರಲ್ಲಿ ಅಜೆಂಡಾ ಕಂಡುಹಿಡಿಯುವುದು ತೀರಾ ಸುಲಭ ಮತ್ತು ಅದನ್ನು ಬಹಳ
ಅಸಭ್ಯ ರೀತಿಯಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ಒಂದು ವೇಳೆ ನಿಮ್ಮ ಉದ್ದೇಶ ಪ್ರೊಪಗಾಂಡಾ ಮಾಡುವುದೇ ಆಗಿದ್ದಲ್ಲಿ ಅದನ್ನಾದರೂ ಸೊಗಸಾಗಿ ಮಾಡಬೇಕು ಎಂದು ಹೇಳುತ್ತೇನೆ.

ಕೆಲವರು ಸೆರ್ಗಿ ಐಸೆನ್‌ಸ್ಟೀನ್ ಅವರ ಬ್ಯಾಟಲ್ ಶಿಪ್ ಪೊಟೆಮ್ಕಿನ್ ಚಿತ್ರವನ್ನು ಪ್ರೊಪಗಾಂಡ ಚಲನಚಿತ್ರವೆಂದು ಭಾವಿಸುತ್ತಾರೆ, ಆದರೆ ಅದೊಂದು ಮಾಸ್ಟರ್ ಪೀಸ್. ಲೆನಿ ರೀಫೆನ್ಸ್ಟಾಲ್ ಮಾನವ ಇತಿಹಾಸದಲ್ಲಿ ಅತ್ಯಂತ ಭಯಾನಕ ಮತ್ತು ಹೀನಾಯ ಕೃತ್ಯಗಳನ್ನು ಪ್ರಸ್ತುತಪಡಿಸಿದರು, ಆದರೆ ಆಕೆಯ ಚಿತ್ರಗಳಲ್ಲಿ ಉತ್ತಮ ಪ್ಯಾಟ್ರನ್‌ಗಳಿರುವ ಸಂಗತಿಯನ್ನು ತಳ್ಳಿಹಾಕಲಾಗದು. ಅವರ ಚಿತ್ರಗಳು ಆಕರ್ಷಕ ಮತ್ತು ವರ್ಚಸ್ವೀ ಗುಣವನ್ನು ಹೊಂದಿದ್ದವು.

ಹಾಗೆ ನೋಡಿದರೆ ನಾನು ಪ್ರೊಪಗಾಂಡ ಸಿನೆಮಾಗಳ ವಿರೋಧಿಯಲ್ಲ. ಇದು ಪ್ರೊಪಗಾಂಡ ಸಿನೆಮಾ ಎಂದು ಘೋಷಿಸಿಕೊಂಡ ಚಿತ್ರಗಳನ್ನು ನಾನು ವಿರೋಧಿಸಲಾರೆ. ಓರ್ವ ಕಲಾವಿದ ಒಂದು ಸಿದ್ಧಾಂತದಲ್ಲಿ ನಿಜವಾದ ನಂಬಿಕೆ ಹೊಂದಿದ್ದರೆ ಅವನು ಸೃಷ್ಟಿಸುವ ಕಲಾಕೃತಿ ಸೈದ್ಧಾಂತಿಕವಾಗಿ ಸ್ಪಷ್ಟವಾಗಿರುತ್ತದೆ ಮತ್ತು ಒಂದು ಸೌಂದರ್ಯ ಸ್ಮಾರಕದಂತಿರುತ್ತದೆ. ಅದೇ ನಿಜವಾದ ಕಲೆಯ ಮಾಂತ್ರಿಕತೆ. ಅಲ್ಲಿ ಕಲಾವಿದರಿರುತ್ತಾರೆ ಅವರು ತಮ್ಮ ಕೆಮೆರಾ ಬಳಸಿದಾಗ ಅಲ್ಲೊಂದು ಮ್ಯಾಜಿಕ್‌ ಸೃಷ್ಟಿಯಾಗುತ್ತದೆ. ನಾನಿಲ್ಲಿ ಸಿನೆಮಾ ಪ್ರೊಪಗಾಂಡದ ನೈತಿಕ ಅಂಶದ ಕುರಿತು ಮಾತನಾಡುತ್ತಿಲ್ಲ. ನಾನಿಲ್ಲಿ ಚಿತ್ರವೊಂದರ ಕಲಾತ್ಮಕ ಸೌಂದರ್ಯದ ಕುರಿತು ಮಾತನಾಡುತ್ತಿದ್ದೇನೆ.

“ದಿ ಕಾಶ್ಮೀರ್‌ ಫೈಲ್ಸ್‌” ಸಿನಿಮಾದ ವೇಷ ಧರಿಸಿಕೊಂಡಿದೆ ಅಷ್ಟೇ. ಆದರೆ ನಿಜವಾದ ಚಲನಚಿತ್ರವಲ್ಲ. ಅದು ಅಸಭ್ಯತೆ ಮತ್ತು ಒಂದು ನಿರ್ದಿಷ್ಟ ಸಿದ್ಧಾಂತದ ಸಮಸ್ಯಾತ್ಮಕ ಸಂಗಮ ಬಿಂದುವಾಗಿದೆ.

ತಮ್ಮ ಮನೆಗಳಿಂದ ಅಥವಾ ಸಂಬಂಧಿಕರಿಂದ ಬೇರ್ಪಟ್ಟಿರುವ ಮತ್ತು ಈ ದೌರ್ಜನ್ಯಗಳನ್ನು ಅನುಭವಿಸಿದ ಜನರು ಇಂತಹ ಚಲನಚಿತ್ರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದು ನನಗೆ ತಿಳಿದಿಲ್ಲ. ಎಲ್ಲಾ ರೀತಿಯ ಪ್ರತಿಕ್ರಿಯೆಗಳೂ ಇರಬಹುದು. ಆದರೆ ನಾನೊಬ್ಬ ಇಂತಹ ದೌರ್ಜನ್ಯ ಎದುರಿಸಿದ ಕುಟುಂಬದಿಂದ ಬಂದವನಾಗಿದ್ದರೆ ಕಾಶ್ಮೀರ್‌ ಫೈಲ್ಸ್‌ನಂತಹ ಸಿನೆಮಾ ನನ್ನ ದನಿಯನ್ನು ಪ್ರತಿನಿಧಿಸುವುದನ್ನು ಕಟ್ಟಕಡೆಯ ಆಯ್ಕೆಯಾಗಿ ಒಪ್ಪಿಕೊಳ್ಳುತ್ತಿದ್ದೆ. ಅದರ ಬದಲು ನನ್ನ ದನಿಯನ್ನು ಪ್ರತಿನಿಧಿಸಬಲ್ಲ ಗಂಭೀರವಾದ ಯಾವುದನ್ನಾದರೂ ಹುಡುಕುತ್ತಿದ್ದೆ.
ಜನರನ್ನು ನೋಯಿಸುವುದು ಖಂಡಿತವಾಗಿಯೂ ನನ್ನ ಹವ್ಯಾಸವಲ್ಲ, ಆದರೆ ಕೆಲವೊಮ್ಮೆ, ಆಕ್ರೋಶ ಮತ್ತು ಅಪರಾಧಗಳು ವಿಮರ್ಶಾತ್ಮಕ ಆಲೋಚನೆ ಮತ್ತು ಕಲಾತ್ಮಕ ಸಂಕಥನಗಳ ಸದ್ದಡಗಿಸುವ ಸುಲಭ ಸಾಧನಗಳೆನ್ನುವುದು ನನ್ನ ನಂಬಿಕೆ. ನಾವು ಮಕ್ಕಳೇನಲ್ಲ. ಕಲೆಯ ಕೆಲಸವೆಂದರೆ ಜನರಿಗೆ ಒಳ್ಳೆಯ ಮನರಂಜನೆ ನೀಡುತ್ತಾ ಅವರಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ಒಳ್ಳೆಯ ಭಾವನೆಗಳನ್ನು ಹುಟ್ಟಿಸುವುದು ಮಾತ್ರವಲ್ಲ. ಕಲೆ ಕೆಲವೊಮ್ಮೆ ಆಕ್ರಮಣಕಾರಿಯಾಗಿ ಜನರನ್ನು ಕಚ್ಚುವಂತಿರಬೇಕು. ಅದು ಕಠಿಣವಾಗಿರಬೇಕು. ಆದರೆ ಹಾಗೆ ಕಲೆಯನ್ನು ಆಕ್ರಮಣಕಾರಿಯಾಗಿಸುವಾಗ ಅದನ್ನು ಮೂರ್ಖ ಅಸಭ್ಯ ರೀತಿಯಲ್ಲಿ ಸಾಧಿಸಬಾರದು. ಬುದ್ಧಿವಂತಿಕೆಯಿಂದ ಅದನ್ನು ಸಾಧಿಸಬೇಕು.

ನನ್ನ ಸಿನೆಮಾಗಳನ್ನು ಒಮ್ಮೊಮ್ಮೆ ರಾಜಕೀಯವೆಂದು ಪರಿಗಣಿಸಲಾಗುತ್ತದೆ. ಆದರೆ ಅವು ಶಾಸ್ತ್ರೀಯ ರೀತಿಯಲ್ಲಿ ರಾಜಕೀಯವಲ್ಲವೆನ್ನುವುದು ನನ್ನ ಅಭಿಪ್ರಾಯ. ನನ್ನ ಚಿತ್ರಗಳಲ್ಲಿ ಜನರು ದೃಢವಾದ ಆಲೋಚನೆಗಳನ್ನು ಹೊಂದಿರುತ್ತಾರೆ. ಆದರೆ ನನ್ನ ಚಿತ್ರಗಳು ಒಂದು ಕಲ್ಪನೆಯಿಂದ ನಡೆಸಲ್ಪಡುವುದಿಲ್ಲವೆನ್ನುವುದು ನನ್ನ ಭಾವನೆ. ನನ್ನ ಚಿತ್ರಗಳಲ್ಲಿ ಅಲ್ಲಿನ ಪಾತ್ರಗಳು ಅವು ಕುಣಿಯುವ, ಹಾಡುವ, ಚುಂಬಿಸುವ ರೀತಿಯಲ್ಲೇ ಆಲೋಚನೆಗಳ ಕುರಿತಾಗಿ ಮಾತನಾಡುತ್ತಾರೆ. ನನಗೆ ನನ್ನದೇ ಆದ ರಾಜಕೀಯ ಸಿದ್ಧಾಂತವಿದ್ದರೂ ಬೇರೆ ಮಾದರಿಯ ಆಲೋಚನೆಗಳಿರುವ ಸಿನೆಮಾಗಳು ನನ್ನನ್ನು ಆಕರ್ಷಿಸುತ್ತವೆ. ಅದು ಯಾವ ಪಂಥದ್ದಾದರೂ ಸರಿಯೇ. ಆದರೆ ಕಲಾವಿದರನ್ನು ಆಡಳಿತ ಮುದ್ದಾಡುವುದು ಆರೋಗ್ಯಕರ ಬೆಳವಣಿಗೆಯಲ್ಲವೆನ್ನುವುದು ನನ್ನ ಅಭಿಪ್ರಾಯ. ಹೀಗಾಗಿ ಒಂದು ರೀತಿಯಲ್ಲಿ ಕಲಾವಿದರು ಆಡಳಿತದೊಡನೆ ಸಂಘರ್ಷದಲ್ಲಿರುವುದು, ತಮ್ಮನ್ನು ತಾವು ಆಡಳಿತದಿಂದ ದೂರವಿರಿಸಿಕೊಳ್ಳುವುದು ಸರಿಯೆನ್ನುವುದು ನನ್ನ ಅಭಿಪ್ರಾಯ.

ನದಾವ್ ಲಾಪಿಡ್
ಇಸ್ರೇಲಿ ಚಲನಚಿತ್ರ ನಿರ್ಮಾಪಕ ಮತ್ತು ಐಎಫ್ಎಫ್ಐ ಜ್ಯೂರಿ ಮುಖ್ಯಸ್ಥರು.

You cannot copy content of this page

Exit mobile version