ಮ ಶ್ರೀ ಮುರಳಿ ಕೃಷ್ಣ
ನಾಟಕ ಬೆಂಗಳೂರು -2024 ನಾಟಕೋತ್ಸವದ ಭಾಗವಾಗಿದ್ದ ರವೀಂದ್ರ ಕಲಾಕ್ಷೇತ್ರ 60 ವರ್ಷಗಳ ಉತ್ಸವದ ಅಂಗವಾಗಿ ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆ ಜರುಗಿತು. ರಮೇಶ್‌ಚಂದ್ ಎಚ್ ಸಿ ರಚನೆಯ ʼಶೇಷಗ್ರಸ್ತರುʼನಾಟಕಕ್ಕೆ (ಇದು ಅವರದ್ದೇ ಸಣ್ಣ ಕಥೆ ಆಧಾರಿತ) ಪುರಸ್ಕಾರ ದೊರೆಯಿತು. ಕಳೆದ ತಿಂಗಳು, ಅಂದರೆ ನವೆಂಬರ್ 2024ರಲ್ಲಿ ಇದರ ಎರಡು ಪ್ರಯೋಗಗಳು ಹೆಸರಾಂತ “ರಂಗಸಂಪದ” ತಂಡದಿಂದ ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಜರುಗಿದವು.
ಕೊರೊನಾ ವೈರಾಣು ಸರಿಸುಮಾರು ಎರಡು ವರ್ಷಗಳ ಕಾಲ ಮನುಜಕುಲವನ್ನೇ ನಾನಾ ತೆರನಾಗಿ ತಲ್ಲಣಗೊಳಿಸಿತು. ಈ ಪಿಡುಗಿನ ಪ್ರಾರಂಭಿಕ ಹಂತದ ಸಂದರ್ಭದಲ್ಲಿ ನಾಟಕದ ಮೊದಲ ದೃಶ್ಯ ಅನಾವರಣಗೊಳ್ಳುತ್ತದೆ. ಇದರಲ್ಲಿ ಕಲ್ಲಯ್ಯ, ಆತನ ಮಡದಿ ಗೌರಮ್ಮ, ಮಗ ಶ್ರೀಕಾಂತ ಮತ್ತು ಕಲ್ಲಯ್ಯನ ಗೆಳೆಯ ಪದ್ದಣ್ಣ ಪಾತ್ರಗಳಾಗಿ ಕಂಡು ಬರುತ್ತಾರೆ. ನಾಟಕದಲ್ಲಿ ಇರುವ ವೈಯಕ್ತಿಕ, ಕೌಟುಂಬಿಕ ಮತ್ತು ಸಮಷ್ಠಿಯ ಎಳೆಗಳ ತಲ್ಲಣಗಳ ನಾಂದಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಆಡಳಿತಾಂಗ ಏಕಾಏಕಿ ಇಪ್ಪತ್ತೊಂದು ದಿನಗಳ ಕಾಲ ಲಾಕ್ಡೌನ್ ಘೋಷಿಸಿದಾಗ ನಮ್ಮ ಸಮಾಜದ ಅಂಚಿನಲ್ಲಿರುವವರ ಬಾಳು ಮೂರಾಬಟ್ಟೆಯಾಯಿತು. ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯನ್ನು ಆಲಿಸಿದಾಗ ವೀಕ್ಷಕರ ಮನದಲ್ಲಿ ಆ ದಿನಗಳ ಕರಾಳ ವಾಸ್ತವಗಳ ಚಿತ್ರಣ ಮೂಡಬಹುದು! ಒಂದರ್ಥದಲ್ಲಿ ಕೊರೊನಾ ವೈರಾಣು ನಾಟಕದ ವಿವಿಧ ತಲ್ಲಣಗಳ ರೂಪಕವಾಗಿ ಮೂಡಿಬಂದಿದೆ ಎಂದು ಭಾಸವಾಯಿತು! ಲಾಕ್ಡೌನ್ ಘೋಷಣೆಯಲ್ಲಿ ಮಹಾನಾಯಕರು ಕೊರೊನಾ ವೈರಾಣುವನ್ನು “ಮಹಾಮಾರಿ” ಎಂದು ಬಣ್ಣಿಸಿದ್ದನ್ನು ಆಲಿಸಿದಾಗ ಮತ್ತು ಶ್ರೀಕಾಂತ ಅದು ಗಂಡು ಅಥವಾ ಹೆಣ್ಣು ಅಲ್ಲ ಎಂಬ ಮಾಹಿತಿಯನ್ನುತಿಳಿಸಿದಾಗ, ಆ ಕಾಲದಲ್ಲಿ ಪ್ರಜ್ಞಾವಂತ ದೊಡ್ಡ ಮಂದಿ (ಇಂತಹವರಲ್ಲಿ ಖ್ಯಾತ ಸಾಹಿತಿಗಳು, ಬರಹಗಾರರು, ಕಲಾವಿದರು ಮುಂತಾದವರು ಸೇರಿದ್ದರು.) ಅದನ್ನುಅಸೂಕ್ಷ್ಮತೆಯಿಂದ ಸ್ತ್ರೀಲಿಂಗಕ್ಕೆ ಸಮೀಕರಿಸಿದ ನೆನಪು ಮೂಡಿಬಂದಿತು.
ಎರಡನೇ ದೃಶ್ಯದಲ್ಲಿ ಶ್ರೀಕಾಂತನ ಸಹೋದ್ಯೋಗಿ- ಪ್ರಿಯತಮೆ ನಿತ್ಯಾಳ ಆಗಮನದಿಂದ ಕಲ್ಲಯ್ಯ ಕುಟುಂಬದಲ್ಲಿ ಒಂದು ತಿರುವು ತಲೆದೋರುತ್ತದೆ. ಕೊರೊನಾ ಕಾಲ ಸೃಷ್ಟಿಸಿದ ಅತಂತ್ರ ಪರಿಸ್ಥಿತಿಯ ಕಾರಣದಿಂದ ಆಕೆ ತಾನು ವಾಸವಾಗಿದ್ದ ಸರ್ವೀಸ್ ಅಪಾರ್ಟ್ಮೆಂಟ್‌ನಿಂದ ಶ್ರೀಕಾಂತನ ಮನೆಗೆ ಸ್ಥಳಾಂತರಗೊಳ್ಳುತ್ತಾಳೆ. ತಾವು ಶುರುಮಾಡಲುಉದ್ದೇಶಿಸಿರುವ ಸ್ಟಾರ್ಟ್ಅಪ್ ಕಂಪನಿಯ ರೂಪುರೇಕೆಗಳನ್ನು ಶ್ರೀಕಾಂತ ಮತ್ತು ನಿತ್ಯಾ ಕಲ್ಲಯ್ಯ ದಂಪತಿಯರ ಮುಂದೆ ಬಿಚ್ಚಿಡುತ್ತಾರೆ. ಆದರೆ ಲಾಕ್ಡೌನ್ ಮತ್ತಿತರ ಕಾರಣಗಳಿಂದ ಈ ಯೋಜನೆಗೆ ಒದಗಬಹುದಾದ ಕಂಟಕಗಳ ಆತಂಕದ ತೂಗುಕತ್ತಿ ಹೂಯ್ದಾಡುತ್ತಲೇ ಇರುತ್ತದೆ. ವರ್ಗಾತೀತವಾಗಿ ಕೊರೊನಾದ ಸಮಸ್ಯೆಗಳು ಕಾಡಿದರೂ, ಅವುಗಳಿಂದ ಹೆಚ್ಚು ಬಾಧೆಗೆ ಒಳಗಾದವರು ಸಮಾಜದ ಅಲಕ್ಷಿತ ಮಂದಿ ಎಂಬ ಎಳೆ ಪ್ರಜ್ಞಾವಂತ ವೀಕ್ಷಕರ ಮನದಲ್ಲಿ ಮೂಡಬಹುದು! ಇರಲಿ….ಮಾಹಿತಿ ತಂತ್ರಜ್ಞಾನದ ಮೆಟಾವರ್ಸ್ (ಮಹಾಮಯ ಭವ) ಉದ್ದಿಮೆಯ ವರ್ಚುವಲ್ ಜಗತ್ತಿನ ಒಂದು ಝಲಕನ್ನು ನಿತ್ಯಾ ಗೌರಮ್ಮಗೆ ನೀಡುತ್ತಾಳೆ. ನಿಜ ಜಗತ್ತಿನ ಎಸ್ಕೆಪಿಸ್ಟ್ ಹಾದಿಯಾಗಿಯೂ ಇದನ್ನು ಭಾವಿಸಬಹುದು!
ನಾಟಕ ಮುಂದುವರೆಯುತ್ತ ಕೆಲವು ಸಂಕೀರ್ಣ ವಿಷಯಗಳನ್ನು ಅನಾವರಣಗೊಳಿಸುತ್ತದೆ. ಶ್ರೀಕಾಂತ ತಾನು ನಿತ್ಯಾಳನ್ನು ಪ್ರೇಮಿಸುತ್ತಿರುವ ಸಂಗತಿಯನ್ನು ತಿಳಿಸಿ, ತಾವು ಲಿವಿಂಗ್ ಇನ್ ರಿಲೇಶನ್‌ಷಿಪ್ನಲ್ಲಿರುವುದಾಗಿ ಹೇಳಿದಾಗ ಕಲ್ಲಯ್ಯ ಮತ್ತು ಗೌರಮ್ಮಗೆ ಈ ವಿಷಯವನ್ನು ಅರಗಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯವಾಗಿ ಅನೇಕ ಕುಟುಂಬಗಳಲ್ಲಿ ಜರಗುವಂತೆ ಇಲ್ಲೂ ಸಹ ಮದುವೆ ಎಂಬ ಸಂಸ್ಥೆಯ ಅಧಿಕೃತತೆ ಹಾಗೂ ಬಲ, ಇವುಗಳ ಬಗೆಗೆ ಕುಟುಂಬದ ಹಿರಿಯರಿಂದಅಭಿಪ್ರಾಯಗಳುವ್ಯಕ್ತವಾಗುತ್ತವೆ. ಇದು ಪೀಳಿಗೆಯ ಅಂತರದ ಸೂಚನೆಯನ್ನು ನೀಡುತ್ತದೆ. ಪದ್ದಣ್ಣ ತನ್ನ ವೈಯಕ್ತಿಕ ಜೀವನದಲ್ಲಿ ಆದ ಲಿವಿಂಗ್ ಇನ್ ರಿಲೇಶನ್‌ಷಿಪ್‌ನ ಕಹಿ ವೃತ್ತಾಂತವನ್ನು ಪ್ರಸ್ತಾಪಿಸುತ್ತಾನೆ! ಈ ಕಾರಣದಿಂದ, ನಾಟಕ ಇಂತಹ ರಿಲೇಶನ್‌ಷಿಪ್ ಬಗೆಗೆ ಏನನ್ನು ದಾಟಿಸುತ್ತದೆ ಎಂದು ಖಚಿತವಾಗಿ ತಿಳಿದು ಬರುವುದಿಲ್ಲ!
ಕಲ್ಲಯ್ಯನ ಕುಟುಂಬದ ಹಿರಿಯರ ರಹಸ್ಯಗಳು ಬಹಿರಂಗಗೊಳ್ಳುವ ಹಂತದಲ್ಲಿ ನಾಟಕಕ್ಕೆ ಇನ್ನೊಂದು ತಿರುವು ದೊರಕುತ್ತದೆ. ಗಂಡು-ಹೆಣ್ಣಿನಸಂಕೀರ್ಣ ಸಂಬಂಧಗಳ ಹೆಣಿಗೆ ನಾಟಕಕ್ಕೆ ಇನ್ನೊಂದು ಆಯಾಮವನ್ನು ನೀಡುತ್ತದೆ. ಹಾಗೆಯೇ ಶ್ರೀಕಾಂತ ವಾರಸುದಾರಿಕೆಯ( ಪಿತ್ರಾಜಿತ ಮತ್ತು ಕಲ್ಲಯ್ಯನ ಸ್ವಯಾರ್ಜಿತ ಆಸ್ತಿಗಳಿಂದ ವಿಮುಖತೆ ಮತ್ತು ವಂಶವಾಹಿನಿಯಲ್ಲಿ ಕ್ಯಾನ್ಸರ್ ಮುಂದುವರೆಯುವ ಸೂಚನೆಯ ಮೇರೆಗೆ ತನಗೆ ಮಕ್ಕಳೇ ಬೇಡವೆಂಬ ನಿರ್ಧಾರ) ನಿರಾಕರಣೆ ಸಹ. ಹಿಂದೆ ಪ್ರಸ್ತಾಪಿಸಿದಂತೆ, ಇದು ಸಹ ಪೀಳಿಗೆಯ ಅಂತರದ ಒಂದು ಸ್ಪಂದನಾ ರೂಪವನ್ನು ಪರಿಚಯಿಸುತ್ತದೆ.
ಮೂಲ ನಾಟಕದಲ್ಲಿ ಕಲ್ಲಯ್ಯನ ತಂಗಿ ಗಂಗಾಂಬೆಯ ಪಾತ್ರದ ಬೆಳವಣಿಗೆಯಿದೆ. ಆದರೆ ಈ ಬರಹಗಾರ ವೀಕ್ಷಿಸಿದ ಪ್ರಯೋಗದಲ್ಲಿ ಈ ಪಾತ್ರಕ್ಕೆ ತುಂಬ ಕತ್ತರಿ ಪ್ರಯೋಗವನ್ನು ಮಾಡಲಾಗಿದೆ. ಬಹುಶಃ ನಾಟಕದ ಅವಧಿ ಲಂಬವಾಗುತ್ತದೆ ಎಂಬ ದೃಷ್ಟಿಯಿಂದ ನಿರ್ದೇಶಕರು ಈ ಕ್ರಮವನ್ನು ತೆಗೆದುಕೊಂಡಿರಬಹುದು.
ನಾಟಕದಲ್ಲಿ ನಿತ್ಯಾಳ ಪಾತ್ರಕ್ಕೆ ಗಟ್ಟಿತನದ ಲೇಪನವಿದೆ. ಇಲ್ಲಿ ಬರುವ ಪಾತ್ರಗಳನ್ನು ಕಪ್ಪು ಮತ್ತು ಬಿಳಿಯ ವರ್ಣದಲ್ಲಿ ಕಟ್ಟಲಾಗಿಲ್ಲ. ಸಾಂಪ್ರದಾಯಿಕತೆ ಮತ್ತು ಪುರೋಗಾಮಿತ್ವದ ತಾಕಲಾಟಕ್ಕೆ ತೀವ್ರತೆಯ ಸ್ಪರ್ಶವಿಲ್ಲ. ಕಲ್ಲಯ್ಯ, ಗಂಗಮ್ಮ, ಶ್ರೀಕಾಂತ, ನಿತ್ಯಾ, ಪದ್ದಣ್ಣರ ಪಾತ್ರಗಳನ್ನು ಕ್ರಮವಾಗಿ ಚಂದ್ರಕಾಂತ ಎಂ, ಸೌಭಾಗ್ಯ, ಪ್ರಜ್ವಲ್ ಮಸ್ಕಿ, ರಚನಾ ಹೆರೂರು, ತ್ಯಾಗರಾಜ್ ಅವರು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಸಂಗೀತ , ರಂಗ ಮತ್ತು ಬೆಳಕಿನ ವಿನ್ಯಾಸವನ್ನು ಕ್ರಮವಾಗಿ ಶಂಕರ್ ಬೆಲ್ಲೆಮನೆ, ಶಶಿಧರ್ ಅಡಪ/ಅಪ್ಪಯ್ಯ ಮತ್ತು ಅಕ್ಷರ ವಿ ಅವರು ಮಾಡಿದ್ದು, ನಾಟಕದ ಹೂರಣಕ್ಕೆ ಸರಿಹೊಂದುವಂತಿವೆ.
ʼ ಕೊಡೆಗಳುʼ, ʼಹೆಜ್ಜೆಗಳು, ʼತದ್ರೂಪಿʼ, ʼತುಕ್ಕೋಜಿ ʼ (ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ) ಮತ್ತು ನಾ ಡಿಸೋಜಾ ಅವರ ʼ ಕುಂಜಾಲು ಕಣಿವೆಯ ಕೆಂಪು ಹೂವುʼಕಾದಂಬರಿ ಆಧರಿಸಿದ ನಾಟಕಗಳನ್ನು ನಿರ್ದೇಶಿಸಿರುವ ರಮೇಶ್‌ಚಂದ್ ಅವರು ಸಿನಿಮಾಸಕ್ತರು ಹೌದು. ಅವರು ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ- ʼ ಅಬ್ಯೂಸ್ಡ್ʼ(ಆಂಗ್ಲ) ಮತ್ತು ʼ ಉಯಿಲುʼ. ಪ್ರಸ್ತುತ ತಮ್ಮ ಆರನೆಯ ನಾಟಕ ʼ ಶೇಷಗ್ರಸ್ತರುʼ ಮೂಲಕ ರಮೇಶ್‌ಚಂದ್ ಅವರು ತಾವು ಸಮರ್ಥ ನಿರ್ದೇಶಕರು ಎಂದು ನಿರೂಪಿಸಿದ್ದಾರೆ. ಅವರಿಂದ ಇನ್ನು ಅನೇಕ ನಾಟಕಗಳು ರಚನೆಗೊಳ್ಳಲಿ ಹಾಗೂ ಅವು ರಂಗಪ್ರಯೋಗಗಳನ್ನು ಕಾಣಲಿ ಎಂಬುದು ಈ ಬರಹಗಾರನ ಹಾರೈಕೆ.
- ಮ ಶ್ರೀ ಮುರಳಿ ಕೃಷ್ಣ