Tuesday, November 18, 2025

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು-59 : ಶಿವಾಜಿಗೆ ಮುಳುವಾದ ಪೇಶ್ವೆ ಮುಳ್ಳು ಇಂದು ಆರೆಸ್ಸೆಸ್ ರೂಪದಲ್ಲಿ!

“..ನಾವು ಸೂಕ್ಷ್ಮವಾಗಿ ನೋಡಿದರೆ, ಚಿತ್ಪಾವನ ಪೇಶ್ವೆಗಳ ಆಡಳಿತಕ್ಕೂ, ಅವರ ಮನುವಾದಿ ಸಿದ್ಧಾಂತಗಳಿಗೂ, ಕುಟಿಲ ಕಾರ್ಯತಂತ್ರಗಳಿಗೂ, ಬ್ರಾಹ್ಮಣ ನಿಯಂತ್ರಣದ ಆರೆಸ್ಸೆಸ್ಸಿನ ಉದ್ದೇಶ ವ್ಯವಹಾರಗಳಿಗೂ ಯಾವುದೇ ವ್ಯತ್ಯಾಸವಿಲ್ಲ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಶಿವಾಜಿಯನ್ನು- ಆರೆಸ್ಸೆಸ್ ಸೇರಿದಂತೆ ನಕಲಿ ಹಿಂದೂತ್ವದ ಶಕ್ತಿಗಳು ಹೇಗೆ ದುರುಪಯೋಗಪಡಿಸುತ್ತಿವೆ, ಬಹುತ್ವವಾದಿಯೂ, ದಕ್ಷ, ಶೂದ್ರ ಕೇಂದ್ರಿತ ಆಡತಗಾರನಾಗಿದ್ದ ಮತ್ತು “ಸ್ವರಾಜ್” ಪರಿಕಲ್ಪನೆ ಹೊಂದಿದ್ದ ಆತನನ್ನು- ಹೇಗೆ ಒಬ್ಬ “ಹಿಂದವೀ ಸ್ವರಾಜ್” ಪ್ರತಿಪಾದಕ, “ಹಿಂದೂ” ಸಾಮ್ರಾಜ್ಯ ಸ್ಥಾಪನೆಗಾಗಿ “ಕ್ರೂರ ಮುಸ್ಲಿಂ” ದೊರೆಗಳ ವಿರುದ್ಧ ಹೋರಾಡಿದ, ತಮ್ಮಂತೆ ಮತಾಂಧನಾದ- ಮುಸ್ಲಿಂ ವಿರೋಧಿ ಸೂಪರ್ ಮ್ಯಾನ್ ಎಂಬಂತೆ ತಮ್ಮ ಕಥಾನಕಗಳಲ್ಲಿ ಬಿಂಬಿಸುತ್ತಿವೆ, ಹೇಗೆ ಆತನ ಕುರಿತು ಅಪ್ಪಟ ಸುಳ್ಳಿನ ಕಾಲ್ಪನಿಕ ಕತೆಗಳನ್ನು ವಾಟ್ಸಾಪ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಹಂಚಲಾಗುತ್ತಿದೆ ಎಂಬುದರ ಹಿನ್ನೆಲೆಯಲ್ಲಿ, ಶಿವಾಜಿಯು ಹೇಗೆ ತನ್ನ ಆಡಳಿತ ಮತ್ತು ಸೇನೆಯ ಉನ್ನತ ಸ್ಥಾನದಲ್ಲಿ ಮುಸ್ಲಿಂ ಸರದಾರರನ್ನು ನಂಬಿಕೆಯಿಂದ ಇರಿಸಿಕೊಂಡಿದ್ದ ಎಂಬುದನ್ನು ಕಳೆದ ಕಂತಿನಲ್ಲಿ “ಹಿಂದೂ” ಶಿವಾಜಿಯ ಮುಸ್ಲಿಂ ಬಂಧುಗಳು” ಎಂಬ ಶೀರ್ಷಿಕೆಯಲ್ಲಿ ಚುಟುಕಾಗಿ ನೋಡಿದ್ದೆವು.

ಈಗ- ಶೂದ್ರರಾದ ಮರಾಠರ ಸ್ವಾಭಿಮಾನಕ್ಕಾಗಿ ಹೋರಾಡಿ, ಬೇರೆ ಸುಲ್ತಾನರ ಅಡಿಯಲ್ಲಿ ಸೈನಿಕರಂತೆ ಕಾದಾಡುತ್ತಿದ್ದ ಮರಾಠ ಸರದಾರರನ್ನು ಒಗ್ಗೂಡಿಸಿ, ಚಾಣಾಕ್ಷ ಗೆರಿಲ್ಲಾ ಯುದ್ಧ ತಂತ್ರ ಮತ್ತು ದಕ್ಷ ಆಡಳಿತದಿಂದ ಪ್ರಬಲ ಸಾಮ್ರಾಜ್ಯವನ್ನು ಕಟ್ಟಲು ಯಶಸ್ವಿಯಾದ ಆತನ ವಿರುದ್ಧ ಆತನೇ ನೇಮಿಸಿದ್ದ ಬ್ರಾಹ್ಮಣ ಪೇಶ್ವೆಗಳು ಹೇಗೆ ಸಂಚು ನಡೆಸಿದರು, ಆತನ ವಂಶಜರ ವಿರುದ್ಧವೇ ಪಿತೂರಿ ನಡೆಸಿ, ಅಧಿಕಾರವನ್ನು ವಶಕ್ಕೆ ಪಡೆದುಕೊಂಡು, ಪ್ರಬಲ ಮರಾಠ ವಂಶಜ ಸರದಾರರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದರು, ಹಿಂದೂತ್ವದ ಹೆಸರಿನಲ್ಲಿ ಮರಾಠರ ಶೌರ್ಯ ಮತ್ತು ಧಾರ್ಮಿಕ ಪೆದ್ದುತನವನ್ನು ಬಳಸಿಕೊಂಡು, ಬಹುಸಂಖ್ಯಾತ ಶೂದ್ರಾಧಿಪತ್ಯಕ್ಕೆ ಬದಲಾಗಿ ಬೆರಳೆಣಿಕೆಯ ಜನರ ಬ್ರಾಹ್ಮಣಾಧಿಪತ್ಯದ ಸ್ಥಾಪನೆ ಮಾಡಿದರು ಎಂಬುದನ್ನು ನೋಡೋಣ.

ಶಿವಾಜಿ ಮತ್ತು ವಂಶಜರಿಗೆ ದ್ರೋಹ ಬಗೆದ ಅದೇ ಚಿತ್ಪಾವನ ಬ್ರಾಹ್ಮಣ ಸಂತಾನವು ಇಂದು ಆರೆಸ್ಸೆಸ್ ಹೆಸರಿನಲ್ಲಿ ಶೂದ್ರರನ್ನು ಬಳಸಿಕೊಂಡು ಹಿಂದೂತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಆಧಿಪತ್ಯವನ್ನು ಸ್ಥಾಪಿಸುವುದರಲ್ಲಿ ಬಹುತೇಕ ಯಶಸ್ವಿಯಾಗಿದೆ. ನಾವು ಆ ಇತಿಹಾಸ ಮತ್ತು ಈ ವರ್ತಮಾನವನ್ನು ಹೋಲಿಸಿನೋಡಿದರೆ, ಆರೆಸ್ಸೆಸ್ ಸ್ಥಾಪನೆಯಾಗಿರುವುದೇ ಪೇಶ್ವೆಗಳ ಮಾದರಿಯ ಮೇಲೆ ಮತ್ತು ಅದೇ ಚಿತ್ಪಾವನ ಬ್ರಾಹ್ಮಣರಿಂದ ಎಂಬುದನ್ನು ಸುಲಭದಲ್ಲಿ ನೋಡಬಹುದು. ಅದರ ಎಲ್ಲಾ ಮುಖ್ಯಸ್ಥರು, ಅದು ಆರಾಧಿಸುವ ವಿನಾಯಕ ದಾಮೋದರ ಸಾವರ್ಕರ್, ಗಾಂಧಿಯವರನ್ನು ಕೊಂದ ನಾಥೂರಾಂ ಗೋಡ್ಸೆ ಇತ್ಯಾದಿಗಳೆಲ್ಲಾ ಅದೇ ಚಿತ್ಪಾವನ ತಳಿಯವರು ಎಂಬುದು ಕಾಕತಾಳೀಯವಲ್ಲ. ಸಾವಿರಾರು ಉಪಜಾತಿಗಳಿರುವ ಭಾರತದಲ್ಲಿ ಒಂದೇ ಒಂದು ಬ್ರಾಹ್ಮಣ ಉಪಜಾತಿ ಹಿಂದೂ ಧರ್ಮದ ಗುತ್ತಿಗೆದಾರನಂತೆ ವರ್ತಿಸುತ್ತಿರುವುದು ವಿಪರ್ಯಾಸ.

ಶಿವಾಜಿಯ ಆಡಳಿತವು ಆ ಕಾಲದಲ್ಲಿ ಕ್ರಾಂತಿಕಾರಿ ಎನ್ನಬಹುದಾದ ರಾಜಕೀಯ ಮತ್ತು ಸಾಮಾಜಿಕ ದೃಷ್ಟಿಕೋನವನ್ನು ಹೊಂದಿತ್ತು. ಆತ ಕೇವಲ ಒಂದು ರಾಜ್ಯವನ್ನು ಸ್ಥಾಪಿಸಲಿಲ್ಲ; ಆತ “ಸ್ವರಾಜ್ಯ” ಎಂದು ಕರೆಯಲಾದ ಬಹು ಜಾತಿಗಳ- ಅರ್ಹತೆ ಮತ್ತು  ನಿಷ್ಟೆಯ ಆಧಾರದ ರಾಜ್ಯವನ್ನು ರೂಪಿಸಿದ. ಆತ ಮರಾಠಿ ಭಾಷೆಯಲ್ಲಿ ಆಡಳಿತ ನಡೆಸಲು ರಾಜಾಡಳಿತ ಶಬ್ದ ಪರಿಕೋಶವನ್ನೂ ತಂದ. ಅದರೆ, ಆತನ ಮರಣದ ಒಂದು ಶತಮಾನಕ್ಕಿಂತ ಕಡಿಮೆ ಅವಧಿಯಲ್ಲಿ, ಈ ಒಳಗೊಳ್ಳುವ ದೃಷ್ಟಿಕೋನವನ್ನು ಮೂಲಭೂತವಾಗಿ ಭ್ರಷ್ಟಗೊಳಿಸಲಾಯಿತು ಮತ್ತು ಕೊನೆಗೆ, ಅತನೇ ನೇಮಿಸಿದ್ದ ಮಂತ್ರಿ ವರ್ಗವಾದ ಬ್ರಾಹ್ಮಣ ಪೇಶ್ವೆಗಳು ಅದನ್ನು ಕೆಡವಿದರು. ಶಿವಾಜಿಯು ತಂದಿದ್ದ ಬದಲಾವಣೆಗಳು ಆ ಕಾಲದ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದ್ದ ಶೂದ್ರ ನೇತೃತ್ವದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದವು. ಅದು ಬ್ರಾಹ್ಮಣ ಪ್ರಾಬಲ್ಯದ ಪಾರಂಪರಿಕ ಆಡಳಿತಕ್ಕೆ ಹಿನ್ನಡೆ ಉಂಟುಮಾಡಿತ್ತು.

ಶೂದ್ರ ನೇತೃತ್ವದ ಆಡಳಿತ
​ಶಿವಾಜಿಯ ಪ್ರತಿಭೆ: ಶಿವಾಜಿಯ ಬಲವು- ಸಾಮಾನ್ಯ ಜನರನ್ನು, ಮುಖ್ಯವಾಗಿ ಕುಣುಬಿ ಮರಾಠರನ್ನು (ಸಾಮಾಜಿಕ ಶ್ರೇಣಿಯಲ್ಲಿ ಇವರನ್ನು ಶೂದ್ರ ಎಂದು ವರ್ಗೀಕರಿಸಲಾಗಿದೆ) ಒಗ್ಗೂಡಿಸಿ, ಹೋರಾಟ ಮತ್ತು ಆಡಳಿತದ ಪ್ರಬಲ ಶಕ್ತಿಯಾಗಿ ಸಜ್ಜುಗೊಳಿಸಿದ, ಮತ್ತು ಶಿಸ್ತಿನ ಗೆರಿಲ್ಲಾ ಯುದ್ಧ ತಂತ್ರ ರೂಪಿಸಿದ ಆತನ ಸಾಮರ್ಥ್ಯದಲ್ಲಿ ಅಡಗಿತ್ತು. ಶಿವಾಜಿ “ಅಷ್ಟ ಪ್ರಧಾನ ಮಂಡಲ” ಎಂಬ  ಬಹುಜಾತಿಗಳ ಎಂಟು ಮಂತ್ರಿಗಳ ಪರಿಷತ್ತನ್ನು ರಚಿಸಿದ್ದ. ಅದರ ಮುಖ್ಯಸ್ಥನೇ ಪೇಶ್ವೆ ಅಥವಾ ಪ್ರಧಾನ ಸಚಿವ. ಈ ವ್ಯವಸ್ಥೆಯನ್ನು ಅರ್ಹತೆ ಆಧಾರಿತವಾಗಿ ಮತ್ತು ಆನುವಂಶಿಕವಲ್ಲದ ರೀತಿಯಲ್ಲಿ ರೂಪಿಸಲಾಗಿತ್ತು. ಪ್ರಮುಖ ಹುದ್ದೆಗಳನ್ನು ಹೆಚ್ಚಾಗಿ ವಿವಿಧ ಜಾತಿಗಳ ಪುರುಷರು ಹೊಂದಿದ್ದರು. ಮುಖ್ಯವಾಗಿ, ರಾಜ (ಛತ್ರಪತಿ)ನು ಸರ್ವೋಚ್ಚ ಕೇಂದ್ರೀಕೃತ ಅಧಿಕಾರವಾಗಿದ್ದ.  ಯಾವುದೇ ಒಂದು ಜಾತಿ ಅಥವಾ ಕುಟುಂಬವು ಆಡಳಿತದಲ್ಲಿ ಅತಿಯಾದ ಅಧಿಕಾರವನ್ನು ಪಡೆಯುವುದನ್ನು ಇದು ತಡೆಯುತ್ತಿತ್ತು.  (ಆಧಾರ: ಜಿ.ಎಸ್. ಸರ್ದೇಸಾಯಿ ಮತ್ತಿತರ ಇತಿಹಾಸಕಾರರು)

ಒಳಗೊಳ್ಳುವಿಕೆ ಮತ್ತು ನಂಬಿಕೆ: ಶಿವಾಜಿಯ ಮಿಲಿಟರಿ ಮತ್ತು ಆಡಳಿತ ಯಂತ್ರವು ಜಾತಿ- ಧರ್ಮಗಳ ವಿಷಯದಲ್ಲಿ ವೈವಿಧ್ಯಮಯವಾಗಿತ್ತು. ಗಮನಿಸಿದಂತೆ, ಅವನ ಸೈನ್ಯದಲ್ಲಿ ಸಾವಿರಾರು ಮುಸ್ಲಿಂ ಸೈನಿಕರು ಮತ್ತು ದೌಲತ್ ಖಾನ್ (ನೌಕಾಪಡೆಯ ಅಡ್ಮಿರಲ್) ಮತ್ತು ಇಬ್ರಾಹಿಂ ಖಾನ್ (ಫಿರಂಗಿದಳದ ಮುಖ್ಯಸ್ಥ)ನಂತಹ ಉನ್ನತ ಶ್ರೇಣಿಯ ಮುಸ್ಲಿಂ ಅಧಿಕಾರಿಗಳು ಇದ್ದರು. ಆತನ ಆಡಳಿತ ಮಾನದಂಡವು ಕೇವಲ ನಿಷ್ಟೆ ಮತ್ತು ಅರ್ಹತೆಯಾಗಿತ್ತೇ ಹೊರತು, ಧರ್ಮ ಅಥವಾ ಜಾತಿಯಲ್ಲ. ಇದು ಇತಿಹಾಸಕಾರರು ನಿರ್ವಿವಾದವಾಗಿ ಸ್ಥಾಪಿಸಿರುವ ವಿಚಾರ.

ಶಿವಾಜಿಗೆ ಬ್ರಾಹ್ಮಣರ ಅವಮಾನ
ದೇಶಾದ್ಯಂತ ಯಾವುದೇ ರಾಜ ಅಧಿಕಾರಕ್ಕೆ ಬಂದರೂ, ಅವರ ಪಾರಂಪರಿಕ ಧಾರ್ಮಿಕ ಅಡಿಯಾಳು ಮನೋಭಾವವು ಬ್ರಾಹ್ಮಣರಿಗೇ ಎಲ್ಲಾ ಅಧಿಕಾರದ ಹುದ್ದೆಗಳನ್ನು ನೀಡುವಂತೆ ಮಾಡುತ್ತಿತ್ತು. ಇದು ಕಂದಾಯ ಅಧಿಕಾರಿಯಿಂದ ಹಿಡಿದು ಕಚೇರಿ ಕಾರಕೂನನ ವರೆಗೂ ಸಾಗಿತ್ತು. ಬ್ರಾಹ್ಮಣೇತರರು ಇವರ ಕೃಪಾ ಕಟಾಕ್ಷದಲ್ಲೇ ಇರಬೇಕಾಗಿತ್ತು. ಅದಕ್ಕೆ ಶಿವಾಜಿಯ ಆಡಳಿತವು ಎರವಾದುದರಿಂದ ಬ್ರಾಹ್ಮಣರು ಏನೂ ಮಾಡಲಾಗದೇ ಒಳಗೊಳಗೇ ಬುಸುಗುಡುತ್ತಾ ಅಸಮಾಧಾನದಿಂದ ಇದ್ದರು. ಶಿವಾಜಿಯ ಜೀವನದಲ್ಲಿ ಸಂಘರ್ಷ ಮತ್ತು ಬ್ರಾಹ್ಮಣ ಅಸಮಾಧಾನದ ಬೀಜಗಳು ಹಿಂದಿನಿಂದಲೇ ಸ್ಪಷ್ಟವಾಗಿದ್ದವು. ಈ ಬ್ರಾಹ್ಮಣರು ಮುಂದೆ ತಮ್ಮ ಪಾರಂಪರಿಕ ಸ್ವಭಾವಕ್ಕೆ ತಕ್ಕಂತೆ ಹಲವಾರು ಸಂಚು, ಕುತಂತ್ರಗಳನ್ನು ರೂಪಿಸಿದರು.

ಪಟ್ಟಾಭಿಷೇಕದ ವಿವಾದ (1674): ಶಿವಾಜಿ ತನ್ನ ಸಾರ್ವಭೌಮತ್ವವನ್ನು ಔಪಚಾರಿಕಗೊಳಿಸಲು ಪ್ರಯತ್ನಿಸಿದಾಗ, ಸಾಂಪ್ರದಾಯಿಕ ಮಹಾರಾಷ್ಟ್ರ ಬ್ರಾಹ್ಮಣರು ಅಗತ್ಯವಾದ ವೈದಿಕ ಪಟ್ಟಾಭಿಷೇಕ ವಿಧಿಗಳನ್ನು ನಿರ್ವಹಿಸಲು ನಿರಾಕರಿಸಿದರು. ಆತ ಬ್ರಾಹ್ಮಣನಲ್ಲದ ಕಾರಣ, ಕಲಿಯುಗದಲ್ಲಿ ಶೂದ್ರನಾಗಿದ್ದು, ಕ್ಷತ್ರಿಯನಾಗಿಲ್ಲದ ಕಾರಣ, ನಿಜವಾದ ಸಾರ್ವಭೌಮನಿಗೆ ಅಗತ್ಯವಿರುವ ಕ್ಷತ್ರಿಯ ಆಚರಣೆಗಳಿಗೆ ಅನರ್ಹ ಎಂದು ಅವರು ವಾದಿಸಿದರು (ಆಧಾರ: ಐತಿಹಾಸಿಕ ಮರಾಠಿ ಬಖರ್‌ಗಳು ಮತ್ತು ದಾಖಲೆಗಳು). ಇದು ಮೂಲಭೂತವಾಗಿ ಜಾತಿ ಆಧಾರಿತ ಅವಮಾನ ಮತ್ತು ಸಾಮಾನ್ಯರ ಆಳ್ವಿಕೆಯ ನ್ಯಾಯಸಮ್ಮತತೆಗೆ ರಾಜಕೀಯ ಸವಾಲಾಗಿತ್ತು.

ಗಾಗಾ ಭಟ್ಟ ಎಂಬ ಕಾಶಿ ಬ್ರಾಹ್ಮಣನ ಪಾತ್ರ: ಶಿವಾಜಿಯನ್ನು ವಾರಣಾಸಿಯ ಒಬ್ಬ ಬ್ರಾಹ್ಮಣ ವಿದ್ವಾಂಸ ಗಾಗಾ ಭಟ್ಟನನ್ನು ಇದಕ್ಕಾಗಿ ನೇಮಿಸಿಕೊಳ್ಳಲು ಒತ್ತಾಯಿಸಲಾಯಿತು. ರಾಜನಾಗಿದ್ದರೂ, ಜನಸಾಮಾನ್ಯರ ಒಪ್ಪಿಗೆಗಾಗಿ ಶಿವಾಜಿ ಕೂಡಾ ಪಾರಂಪರಿಕ ಬ್ರಾಹ್ಮಣ ನೇತೃತ್ವದ ಜಾತಿ ಆಧರಿಸಿದ ಧಾರ್ಮಿಕ ಆಚರಣೆ, ವಿಧಿವಿಧಾನಗಳಿಗೆ ತಲೆಬಾಗಬೇಕಾಯಿತು ಎಂಬುದು ಆ ಕಾಲದ ವಾಸ್ತವ. ಈಗಲೂ ರಾಜಕೀಯ ನಾಯಕರೂ ಸೇರಿದಂತೆ ಬಹುಸಂಖ್ಯಾತ ಹಿಂದೂಗಳು ಇದನ್ನೇ ಅನುಸರಿಸುತ್ತಿರುವುದರ ಬೇರುಗಳನ್ನು ಇಲ್ಲಿ ಕಾಣಬಹುದು. ಅದೇ ಧಾರ್ಮಿಕ ಮಾನಸಿಕ ದಾಸ್ಯ ಈಗಲೂ ಸಾಮಾನ್ಯ ಹಿಂದೂಗಳಲ್ಲಿ ಹಾಸುಹೊಕ್ಕಾಗಿದೆ. ಇಷ್ಟಿದ್ದರೂ, ಗಾಗಾ ಭಟ್ಟ ತನ್ನ ಕೆಲಸಕ್ಕಾಗಿ ಭಾರೀ ಮೊತ್ತ ಪಡೆದು ಒಪ್ಪಿಕೊಂಡರೂ, ಅತ ಶಿವಾಜಿಯು ಕ್ಷತ್ರಿಯ ಎಂದು ತೋರಿಸಲು ರಾಜಸ್ಥಾನದ ಪ್ರಾಚೀನ ರಜಪೂತ ಕ್ಷತ್ರಿಯ ವಂಶಕ್ಕೆ ಸೇರಿದವನೆಂದು ಒಂದು ಮಾರ್ಪಡಿಸಿದ  ವಂಶಾವಳಿ ತಯಾರಿಸಬೇಕಾಯಿತು. ಈ ಸಂದರ್ಭದಲ್ಲಿ ಗಾಗಾ ಭಟ್ಟ ಶಿವಾಜಿಯ ತಲೆಯ ಮೇಲೆ ತನ್ನ ಪಾದವನ್ನಿಟ್ಟ ಎಂಬ ಒಂದು ಕಥಾನಕವು ಚಾಲ್ತಿಯಲ್ಲಿದೆಯಾದರೂ, ಮುಖ್ಯವಾಹಿನಿಯ ಇತಿಹಾಸಕಾರರ ಪ್ರಕಾರ ಇದಕ್ಕೆ ಆಧಾರಗಳಿಲ್ಲ. ಬಹುಶಃ ಶಿವಾಜಿ ತಮಗೆ ಮಣಿದ, ಆತ ತಮಗಿಂತ ಕೆಳಗೆ ಎಂದು ಶೂದ್ರರನ್ನು ನಂಬಿಸಲು, ಶಿವಾಜಿಯನ್ನು ಅವಮಾನಿಸಲು, ಬ್ರಾಹ್ಮಣರೇ ಕಟ್ಟಿ ಹಬ್ಬಿಸಿದ ಸಾವಿರಾರು ಪುರಾಣ ಬುರುಡೆಗಳಲ್ಲಿ ಇದೂ ಒಂದಾಗಿರಬೇಕು.

ಈ ಘಟನೆಗಳು ರಾಜನ ಅಧಿಕಾರ ಕೂಡಾ ಬ್ರಾಹ್ಮಣರ ಧಾರ್ಮಿಕ ಮತ್ತು ಸಾಮಾಜಿಕ ಅನುಮೋದನೆಗೆ ಅಧೀನವಾಗಿತ್ತು ಎಂದು ಒತ್ತಿಹೇಳುತ್ತವೆ.

ಒಳಗಿನ ಶತ್ರುಗಳು ಮತ್ತು ದ್ರೋಹ
1680ರಲ್ಲಿ “ಹಿಂದೂ” ಶಿವಾಜಿಯ ಮರಣದ ನಂತರ, ಪ್ರಾಥಮಿಕವಾಗಿ ಬ್ರಾಹ್ಮಣರಿಂದ ಕೂಡಿದ ಮಂತ್ರಿ ವರ್ಗವು ಶಿವಾಜಿಯ ಭೋಂಸ್ಲೆ ರಾಜವಂಶದ ಕೇಂದ್ರ ಅಧಿಕಾರವನ್ನು ದುರ್ಬಲಗೊಳಿಸಲು ಮತ್ತು ಅಂತಿಮವಾಗಿ ಪೂರ್ಣವಾಗಿ ತಟಸ್ಥಗೊಳಿಸಲು ತಕ್ಷಣವೇ ಮುಂದಾಯಿತು.

ಸಂಭಾಜಿ ವಿರುದ್ಧ ಪಿತೂರಿ: ಶಿವಾಜಿಯ ಮರಣದ ನಂತರ, ಆಗಿನ ಪೇಶ್ವೆ ಮೊರೊ ತ್ರಿಂಬಕ್ ಪಿಂಗಳೆ, ಸಚಿವ ಅಣ್ಣಾಜಿ ದತ್ತೋ ಸೇರಿದಂತೆ ಹಲವಾರು ಮಂತ್ರಿಗಳು, ಆಗಿನ ಪದ್ಧತಿ ಪ್ರಕಾರ ಸರಿಯಾದ ಮತ್ತು ಸಮರ್ಥ ಉತ್ತರಾಧಿಕಾರಿ ಸಂಭಾಜಿಯ ಬದಲು ಶಿವಾಜಿಯ ಕಿರಿಯ ಮಗ ರಾಜಾರಾಮನಿಗೆ ಪಟ್ಟಾಭಿಷೇಕ ಮಾಡಲು ಸಂಚು ರೂಪಿಸಿದರು. ರಾಜಾರಾಮನ ಮೂಲಕ ಸಂಭಾಜಿಗೆ ವಿಷವುಣಿಸಿದರು. ಆತ ಬದುಕುಳಿದು ಸಂಚುಕೋರರಿಗೆ ಪಾಠ ಕಲಿಸಿದ. ಇದು ಹೆಚ್ಚು ತಮಗೆ ವಿಧೇಯನಾದ ಆಡಳಿತಗಾರನನ್ನು ಸ್ಥಾಪಿಸಲು ರೂಪಿಸಿದ ಒಂದು ರಾಜಕೀಯ ಅಧಿಕಾರದಾಟದ ಸಂಚಾಗಿತ್ತು. ಸಮರ್ಥನಾಗಿದ್ದ ಸಂಭಾಜಿ ದೈಹಿಕವಾಗಿ ತನ್ನ ಸಿಂಹಾಸನವನ್ನು ವಶಪಡಿಸಿಕೊಳ್ಳಬೇಕಾಯಿತು. ಆತ ಮುಂದೆ ತನ್ನ ಸರಕಾರವನ್ನು ದುರ್ಬಲಗೊಳಿಸುವ ನಿರಂತರ ಪ್ರಯತ್ನಗಳನ್ನು ಎದುರಿಸಿದ. ಆತ ಆಗಾಗ್ಗೆ “ಹೊರಗಿನ” ಕನ್ಯಾಕುಬ್ಜ ಬ್ರಾಹ್ಮಣ ಸಲಹೆಗಾರ, ಕವಿ ಕಲಶ ಎಂಬಾತನ ಸಲಹೆಗಳನ್ನು ಹೇಳುತ್ತಿದ್ದುದನ್ನು ಇಷ್ಟಪಡದ ಸ್ಥಳೀಯ ಬ್ರಾಹ್ಮಣರ ಅಸಮಾಧಾನದಿಂದ ಈ ಪಿತೂರಿ ಉತ್ತುಂಗಕ್ಕೇರಿತು. (ಆಧಾರ: ಜೇಧೇ ಶಾಖಾವಳಿ ಮತ್ತು ಇತರ ಬಖರ್‌ಗಳು)

ಛತ್ರಪತಿಯ ಅಧಿಕಾರದ ದುರುಪಯೋಗ: ಶಿವಾಜಿಯ ಮೊಮ್ಮಗ ಛತ್ರಪತಿ ಒಂದನೇ ಶಾಹುನ ಅಡಿಯಲ್ಲಿ ಅಂತಿಮ ದ್ರೋಹ ನಡೆಯಿತು. ಮೊದಲ ಆನುವಂಶಿಕ ಪೇಶ್ವೆ ಬಾಲಾಜಿ ವಿಶ್ವನಾಥ (ಚಿತ್ಪಾವನ ಬ್ರಾಹ್ಮಣ) ಮತ್ತು ಅವನ ವೀರಾಗ್ರಣಿ ಮಗ ಬಾಜಿ ರಾವ್ ಸಂಪೂರ್ಣ ಆಡಳಿತಾತ್ಮಕ ಅಧಿಕಾರವನ್ನು ಪಡೆದರು. ದುರ್ಬಲ ಎರಡನೇ ರಾಜಾರಾಮ ಛತ್ರಪತಿಯಾಗಿದ್ದ ಕಾಲದಲ್ಲಿ ಸಂಗೋಲಾ ಒಪ್ಪಂದದ (1750) ಮೂಲಕ, ಪೇಶ್ವೆಗಳು ದುರ್ಬಲ ಭೋಂಸ್ಲೆ ರಾಜನಿಂದ ಎಲ್ಲಾ ಕಾರ್ಯಕಾರಿ ಅಧಿಕಾರವನ್ನು ಕಸಿದುಕೊಂಡರು. “ಛತ್ರಪತಿ”ಯನ್ನು ಸತಾರ ಕೋಟೆಗೆ ಸೀಮಿತವಾದ, ಕೇವಲ ನಾಮಮಾತ್ರದ ನಾಯಕನನ್ನಾಗಿ ಮಾಡಿದರು. ಶಿವಾಜಿಯ ಸ್ವರಾಜ್ಯದ ಅಡಿಪಾಯವಾದ ಛತ್ರಪತಿಯ ಅಧಿಕಾರವನ್ನು ನಾಶಪಡಿಸಿ, ಕೋಟೆಯೊಳಗೆ ಛತ್ರದ ಅಡಿಯಲ್ಲಿ ಕುಳಿತ ಉತ್ಸವಮೂರ್ತಿ ಮಾಡಲಾಯಿತು.

ಬ್ರಾಹ್ಮಣ ನಿಯಂತ್ರಣ, ಉಳಿದವರ ಹೊರಗಿಡುವಿಕೆ
​ರಾಜಧಾನಿ ಅಧಿಕೃತವಾಗಿ ಪುಣೆಯಲ್ಲಿರುವ ಪೇಶ್ವೆಯ ವಾಸಸ್ಥಾನಕ್ಕೆ ಸ್ಥಳಾಂತರಗೊಂಡ ನಂತರ, ತಮ್ಮ ಪ್ರಾಬಲ್ಯವನ್ನು ಸ್ಥಾಪಿಸುವ ಬ್ರಾಹ್ಮಣ ಪಿತೂರಿ ಪೂರ್ಣಗೊಂಡಿತು. ಪೇಶ್ವೆ ಹುದ್ದೆಯು ಆ ಹೊತ್ತಿಗೆ ವಂಶಪಾರಂಪರ್ಯವಾಗಿ ಬಿಟ್ಟಿತ್ತು.

ಅರ್ಹತೆ ಆಧಾರಿತ ನೇಮಕಾತಿ ವ್ಯವಸ್ಥೆಯ ನಾಶ: ಪೇಶ್ವೆಗಳು ಶಿವಾಜಿಯ ಮೆರಿಟೋಕ್ರಟಿಕ್ ವ್ಯವಸ್ಥೆಯನ್ನು ಕೆಡವಿದರು. ನೇಮಕಾತಿಗಳು ಚಿತ್ಪಾವನ ಬ್ರಾಹ್ಮಣ ಸಮುದಾಯದ ಸದಸ್ಯರಿಂದ ತುಂಬಿದವು, ವಿಶೇಷವಾಗಿ ಹಣಕಾಸು ಮತ್ತು ಆಡಳಿತದಲ್ಲಿ ಚಿತ್ಪಾವನ ಕುಟುಂಬಗಳು ಹೆಚ್ಚಿನ ಪ್ರಾಬಲ್ಯ ಸಾಧಿಸಿದವು.  ಇದು ಸಾಮ್ರಾಜ್ಯದ ಸ್ವರೂಪವನ್ನು- ಎಲ್ಲರನ್ನೂ ಒಳಗೊಂಡ ಶೂದ್ರ ಮರಾಠಾ ರಾಜ್ಯದಿಂದ ಬ್ರಾಹ್ಮಣ ಪ್ರಾಬಲ್ಯದ ಅಧಿಕಾರಶಾಹಿಗೆ ಬದಲಾಯಿಸಿತು. ಹೆಸರು ಮಾತ್ರವೇ ಹಿಂದೂ ಸಾಮ್ರಾಜ್ಯ.

​ಕೆಳಜಾತಿಗಳ ದುಸ್ಥಿತಿ: ನಂತರದ ಪೇಶ್ವೆಗಳ ಅಡಿಯಲ್ಲಿ, ಜಾತಿ ಅಸಮಾನತೆಯು ನಾಟಕೀಯ ರೀತಿಯಲ್ಲಿ ತೀವ್ರಗೊಂಡಿತು. ಕೆಳಜಾತಿಗಳು, ವಿಶೇಷವಾಗಿ ಅಸ್ಪೃಶ್ಯರು (ಮಹಾರ್‌ಗಳಂತೆ), ತೀವ್ರ ತಾರತಮ್ಯದ ಪದ್ಧತಿಗಳನ್ನು ಅನುಭವಿಸಿದರು. ಆಗಾಗ್ಗೆ ಕೆಲವು ಗಂಟೆಗಳ ಅವಧಿಗಳಲ್ಲಿ ಅವರು ಸಾರ್ವಜನಿಕ ರಸ್ತೆಗಳನ್ನು ಬಳಸುವುದನ್ನೂ ನಿಷೇಧಿಸಲಾಗುತ್ತಿತ್ತು ಅಥವಾ ಅವರ “ಮಾಲಿನ್ಯಕಾರಕ” ಹೆಜ್ಜೆಗುರುತುಗಳನ್ನು ಅಳಿಸಿಹಾಕಲು ಅವರ ಸೊಂಟಕ್ಕೆ ಹಿಂದಿನಿಂದ ಪೊರಕೆ ಕಟ್ಟುವಂತೆ ಒತ್ತಾಯಿಸಲಾಗುತ್ತಿತ್ತು. ಇದು ಶಿವಾಜಿಯ “ಹಿಂದೂ” ಆಡಳಿತ ಆಗಿರದೆ, ಎಲ್ಲಾ ಪ್ರಜೆಗಳ ಕಲ್ಯಾಣದ ಗುರಿ ಇರಿಸಿದ್ದ ಶಿವಾಜಿಯ ಉದ್ದೇಶಕ್ಕೆ ತದ್ವಿರುದ್ಧವಾಗಿತ್ತು ಪೇಶ್ವೆಗಳ “ಹಿಂದೂ ರಾಷ್ಟ್ರ”.

ಮರಾಠಾ ವಂಶಗಳ ಮೇಲೆ ನಿಯಂತ್ರಣ: ವಿಶಾಲ ಸಾಮ್ರಾಜ್ಯವನ್ನು ನಿರ್ವಹಿಸಲು, ಪೇಶ್ವೆಗಳು ವಿಕೇಂದ್ರೀಕರಣದ ತಂತ್ರವನ್ನು ಅಳವಡಿಸಿಕೊಂಡರು. ಅದು ವಾಸ್ತವದಲ್ಲಿ ಒಡೆದಾಳುವ ನೀತಿಯಾಗಿತ್ತು. ಅವರು ಪ್ರಬಲ ಮರಾಠಾ ಮಿಲಿಟರಿ ವಂಶಗಳಿಗೆ (ಸಿಂಧಿಯಾಗಳು, ಹೋಳ್ಕರ್‌ಗಳು, ಗಾಯಕ್ವಾಡ್‌ಗಳು) ಆಳಲು ದೊಡ್ಡ, ಸ್ವಾಯತ್ತ ಪ್ರದೇಶಗಳನ್ನು ನೀಡುವ ಮೂಲಕ ಅವುಗಳನ್ನು ನಿಯಂತ್ರಿಸಿದರು (ಗ್ವಾಲಿಯರ್, ಇಂದೋರ್, ಬರೋಡಾ). ಈ ಮುಖ್ಯಸ್ಥರು ಹೆಚ್ಚಾಗಿ ಬ್ರಾಹ್ಮಣೇತರ ಮರಾಠರಾಗಿದ್ದರೂ, ಪುಣೆಯ ಬ್ರಾಹ್ಮಣ ಕೇಂದ್ರವು ಸಾಮ್ರಾಜ್ಯದ ಮಿಲಿಟರಿ ಶಸ್ತ್ರಾಸ್ತ್ರಗಳ ಮೇಲೆ ಆರ್ಥಿಕ ಮತ್ತು ರಾಜಕೀಯ ನಿಯಂತ್ರಣವನ್ನು ಹೊಂದಿರುವುದು ಸಾಧ್ಯವಾಗುವಂತೆ ಎಲ್ಲಾ ಪ್ರಮುಖ ನಿರ್ಧಾರಗಳಿಗೆ ಪೇಶ್ವೆಯ ಅನುಮೋದನೆ ಪಡೆಯುವುದಕ್ಕೆ ಬದ್ಧರಾಗಿದ್ದರು. ತಪ್ಪಿದಲ್ಲಿ ಒಬ್ಬನ ವಿರುದ್ಧ ಅವರಲ್ಲೇ ಹಲವರನ್ನು ಎತ್ತಿಕಟ್ಟಲಾಗುತ್ತಿತ್ತು. ಒಳಗಿನ ಕಚ್ಚಾಟಗಳನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಅವರದ್ದೇ ಸೇನಾಬಲವನ್ನು ಉಪಯೋಗಿಸಿ, ಅವರನ್ನೇ ನಿಯಂತ್ರಿಸಲಾಗುತ್ತಿತ್ತು. ಶೂದ್ರ ಬಲವನ್ನೇ ಬಳಸಿ ಬ್ರಾಹ್ಮಣ ಆಡಳಿತ. ಇಂದೂ ಕೂಡಾ ಇದುವೇ ಮುಂದುವರಿಯುತ್ತಿರುವುದನ್ನು ನಾವು ಕಾಣಬಹುದು. “ಮರಾಠ” ಕಾಲದಲ್ಲಿ ಮುಖ್ಯವಾಗಿ ಪೇಶ್ವೆ ಒಂದನೇ ಬಾಜಿರಾವ್ ಕಾಲದಲ್ಲಿ ಸಾಮ್ರಾಜ್ಯ ಭಾರೀ ಪ್ರಮಾಣದಲ್ಲಿ ವಿಸ್ತರಣೆ ಆಯಿತಾದರೂ, ನಿಜವಾಗಿಯೂ ಆದದ್ದು ಶೂದ್ರ ಶಕ್ತಿಯನ್ನು ಬಳಸಿಕೊಂಡು ಬ್ರಾಹ್ಮಣ್ಯದ ವಿಸ್ತರಣೆ!

ಪೇಶ್ವೆಗಳ ನೆರಳು ಆರೆಸ್ಸೆಸ್
ಈ ಬ್ರಾಹ್ಮಣರ ಇತರರನ್ನು ಹೊರಗಿಡುವ, ಅವರದ್ದೇ ಬಲದಿಂದ ಅವರನ್ನೇ ಆಳುವ ನಿಯಂತ್ರಣದ ಪರಂಪರೆಯು ಆಧುನಿಕ ಭಾರತದಲ್ಲಿ, ನಿರ್ದಿಷ್ಟವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು  ಸಹಸಂಸ್ಥೆಗಳ ಮೂಲಕ ಮುಂದುವರಿಯುತ್ತಿದೆ ಎಂಬ ಸಿದ್ಧಾಂತವು- ವಿಮರ್ಶಾತ್ಮಕ ಸಮಕಾಲೀನ ಸಾಮಾಜಿಕ-ರಾಜಕೀಯ ವಿಶ್ಲೇಷಣೆಯ ಪ್ರಮುಖ ಆಧಾರಸ್ತಂಭವಾಗಿದೆ.

ಸಿದ್ಧಾಂತವನ್ನು ಸಮರ್ಥಿಸುವುದು: ಪ್ರಬಲ ಜಾತಿ/ಸಮುದಾಯ ನಾಯಕತ್ವದ ಸಿದ್ಧಾಂತದ ಪ್ರಮುಖ ಅಂಶವು 1925ರಲ್ಲಿ ಸ್ಥಾಪನೆಯಾದಾಗಿನಿಂದ ಆರೆಸ್ಸೆಸ್ಸಿನ ಕೇಂದ್ರ ನಾಯಕತ್ವ ರಚನೆಗಳಲ್ಲಿ ಚಿತ್ಪಾವನ, ದೇಶಸ್ತ, ಕರಾಡಿ ಮತ್ತು ಚಂದ್ರಾಪುರ ಸೇರಿದಂತೆ ಬ್ರಾಹ್ಮಣ ಸಮುದಾಯದ ಐತಿಹಾಸಿಕ ಪ್ರಾಬಲ್ಯವನ್ನು ಸೂಚಿಸುತ್ತದೆ. ಆರೆಸ್ಸೆಸ್ಸಿನ ಮೂಲ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್, ನಂತರ ಬಂದ ಸನಾತನಿ ಮನುವಾಧಿ ಸಿದ್ಧಾಂತಿ ಮಾಧವ ಸದಾಶಿವರಾವ್ ಗೋಲ್ವಾಳ್ಕರ್, ಬಾಳಾ ದೇವರಸ್… ಹೀಗೆ ಬಹುತೇಕ ಎಲ್ಲಾ ಸರಸಂಘಚಾಲಕರು (ಸರ್ವೋಚ್ಚ ನಾಯಕರು) ಐತಿಹಾಸಿಕವಾಗಿ ಈ ಸಮುದಾಯಕ್ಕೆ ಸೇರಿದವರು. ಈಗಿನ ಮೋಹನ್ ಭಾಗವತ್ ಚಂದ್ರಪುರ ಮೂಲದ  ಕರಾಡೆ ಬ್ರಾಹ್ಮಣ.

ಸೈದ್ಧಾಂತಿಕ ಜೋಡಣೆ: ಆರೆಸ್ಸಿನ ಹಿಂದುತ್ವದ ಮೂಲ ಸಿದ್ಧಾಂತವು- ಹಿಂದೂ ಏಕತೆಯನ್ನು ಪ್ರತಿಪಾದಿಸುವಾಗ – ಪೇಶ್ವೆಗಳ ಯುಗದಲ್ಲಿ ಉತ್ತುಂಗಕ್ಕೇರಿದ್ದ ಹಿಂದೂ ಧರ್ಮದ ಸಾಂಪ್ರದಾಯಿಕ ಬ್ರಾಹ್ಮಣ ವ್ಯಾಖ್ಯಾನಗಳನ್ನು ಪ್ರತಿಬಿಂಬಿಸುವ ಶ್ರೇಣೀಕೃತ, ಮನುವಾದಿ ಜಾತಿ-ಆಧಾರಿತ ಸಾಮಾಜಿಕ ಕ್ರಮವನ್ನು ಐತಿಹಾಸಿಕವಾಗಿ ಪ್ರತಿಪಾದಿಸಿದೆ. ಇದು ಹಿಂದೂ ರಾಷ್ಟ್ರದ ಬ್ರಾಹ್ಮಣ ವ್ಯಾಖ್ಯಾನವನ್ನು ಸ್ಥಾಪಿಸುವ ಗುರಿ ಹೊಂದಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಾಬಲ್ಯದ ಆಕಾಂಕ್ಷೆಯ ಮುಂದುವರಿಕೆಯಾಗಿದೆ. ಅಲ್ಲಿ ಹೆಸರಿಗೆ ಶೂದ್ರ ಛತ್ರಪತಿ- ನಿಜವಾಗಿ ಪೇಶ್ವೆಗಳ ಆಡಳಿತ ಮತ್ತು ಶೂದ್ರರ ಸೈನ್ಯದ ಬಳಕೆ. ಇಲ್ಲಿ ಹೆಸರಿಗೆ ಬ್ರಾಹ್ಮಣೇತರ ಪ್ರಧಾನಿ- ಮೂಗುದಾರ ಆಧುನಿಕ ಚಿತ್ಪಾವನ ಪೇಶ್ವೆಗಳ ಆರೆಸ್ಸೆಸ್ ಕೈಯಲ್ಲಿ, ಶೂದ್ರ, ದಲಿತ ಕಾರ್ಯಕರ್ತರ ಬಳಕೆ!

ಸಾಮಾಜಿಕ ನಿಯಂತ್ರಣ ಮತ್ತು ಹೊರಗಿಡುವಿಕೆ: ಪೇಶ್ವೆಗಳು ಅಧಿಕಾರಶಾಹಿಯ ಮೇಲೆ ಬ್ರಾಹ್ಮಣ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವಾಗ ಮರಾಠಾ ಕುಲಗಳ ಮಿಲಿಟರಿ ಶಕ್ತಿಯನ್ನು ಬಳಸಿಕೊಂಡಂತೆಯೇ, ಆರ್‌ಎಸ್‌ಎಸ್ ಕಾರ್ಯತಂತ್ರವು- ಕೆಳಜಾತಿಗಳು ಮತ್ತು ಆದಿವಾಸಿಗಳನ್ನು ನಾಮಮಾತ್ರದ ರಾಜಕೀಯ ಅಧಿಕಾರ, ಹೊಡೆದಾಟ, ಬಡಿದಾಟಗಳಿಗೆ ಸಜ್ಜುಗೊಳಿಸುವುದನ್ನು ಒಳಗೊಂಡಿದೆ. ಅದು ಪ್ರಬಲವಾದ ಉನ್ನತ-ಜಾತಿಯ ನಾಯಕತ್ವದ ಕೈಯಲ್ಲಿ ಸೈದ್ಧಾಂತಿಕ ಮತ್ತು ಸಾಂಸ್ಥಿಕ ನಿಯಂತ್ರಣವನ್ನು ಉಳಿಸಿಕೊಳ್ಳುತ್ತದೆ. ಇದು ಸಾಮಾಜಿಕ ಮತ್ತು ರಾಜಕೀಯ ಅಸಮಾನತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ, ನಿಜವಾದ ಸಮಾನತೆಯನ್ನು ಬುಡಮೇಲು ಮಾಡುವ ಐತಿಹಾಸಿಕ ಕಾರ್ಯತಂತ್ರದ ಆಧುನಿಕ ರೂಪ.

ನಾವು ಸೂಕ್ಷ್ಮವಾಗಿ ನೋಡಿದರೆ, ಚಿತ್ಪಾವನ ಪೇಶ್ವೆಗಳ ಆಡಳಿತಕ್ಕೂ, ಅವರ ಮನುವಾದಿ ಸಿದ್ಧಾಂತಗಳಿಗೂ, ಕುಟಿಲ ಕಾರ್ಯತಂತ್ರಗಳಿಗೂ, ಬ್ರಾಹ್ಮಣ ನಿಯಂತ್ರಣದ ಆರೆಸ್ಸೆಸ್ಸಿನ ಉದ್ದೇಶ ವ್ಯವಹಾರಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಹೊರಗಿನ ಶತ್ರುಗಳನ್ನು ತೋರಿಸಿ, ದೇಶಪ್ರೇಮದ ಹೆಸರಿನಲ್ಲಿ ಬ್ರಾಹ್ಮಣೇತರರನ್ನು ಬಳಸಿ, ಕಾದಾಡಿಸಿ ತಮ್ಮ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳುವುದು, ತಾರತಮ್ಯದ ವರ್ಣಾಶ್ರಮ ಧರ್ಮವನ್ನು ಸ್ಥಾಪಿಸುವುದು, ಎದುರಿನಲ್ಲಿ “ಹಿಂದೂ ಒಂದು” ಎಂದು ಹೇಳುವುದು, ಗುಪ್ತವಾಗಿ ಕಾರ್ಯಸಾಧನೆ ಮಾಡುವುದು. ಇದುವೇ ಆರೆಸ್ಸೆಸ್ಸಿನ ಕುಟಿಲ ಕಾರ್ಯತಂತ್ರ! ಶೂದ್ರಾಡಳಿತ ಸ್ಥಾಪಿಸಿದ ಶಿವಾಜಿಯ ವ್ಯವಸ್ಥೆಯನ್ನೇ ಹಾಳುಗೆಡವಿ, ಬ್ರಾಹ್ಮಣಾಡಳಿತದ ಹಿಂದೂ ಧರ್ಮ ಸ್ಥಾಪಿಸಿದವರೇ ಆತನನ್ನು ಮುಸ್ಲಿಂ ವಿರೋಧಿ, ಹಿಂದೂ ಹೃದಯ ಸಾಮ್ರಾಟ ಎಂದು ಬಿಂಬಿಸುತ್ತಾ, ಬಹುಸಂಖ್ಯಾತ ಹಿಂದೂಗಳನ್ನು ಕಟ್ಟುಕತೆಗಳ ಮೂಲಕ ವಂಚಿಸುತ್ತಿರುವುದು, ಅವರು ಹಿಂದೂತ್ವದ ಅಮಲಿನಲ್ಲಿ ಒಂದು ಚೂರೂ ಯೋಚನೆ ಮಾಡದೆ ವಂಚನೆಗೆ ಒಳಗಾಗುತ್ತಿರುವುದು ವಿಪರ್ಯಾಸ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page