Sunday, April 28, 2024

ಸತ್ಯ | ನ್ಯಾಯ |ಧರ್ಮ

ಕುಸ್ತಿಪಟುಗಳ ಮೇಲೆ ನಡೆದ ಅತ್ಯಾಚಾರ ದೇಶದ ಮೇಲಿನ ಅತ್ಯಾಚಾರವಲ್ಲವೇ?

ಇದು ಪ್ರಜಾಪ್ರಭುತ್ವ ರಾಷ್ಟ್ರ,  ಇಲ್ಲಿ ಪ್ರತಿಭಟನೆಗೂ ಹಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯನ್ನು ಗೌರವಿಸಬೇಕಿದೆ. ಇದನ್ನಾದರೂ ಅರ್ಥ ಮಾಡಿಕೊಂಡು ಕೇಂದ್ರ ಸರ್ಕಾರ ಕುಸ್ತಿ ಪಟುಗಳ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಕರಣದ ವಾಸ್ತವಗಳನ್ನು ದೇಶದ ಜನತೆಯ ಮುಂದಿಡುವುದಕ್ಕಾದರೂ ಪ್ರಕರಣದ ಸೂಕ್ತ ತನಿಖೆ ನಡೆಸಬೇಕಿದೆ‌ – ಆಕಾಶ್ ಆರ್ ಎಸ್, ಯುವ ಬರಹಗಾರ

  ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ‌ ಕೀರ್ತಿ ಪತಾಕೆ ಹಾರಿಸಿದವರ ಬದುಕು ಈಗ ಬೀದಿಗೆ ಬಂದಾಗಿದೆ. ಮಹಾನ್ ದೇಶಾಭಿಮಾನಿ ಮತ್ತು ತಾನೇ ದೇಶ  ಎಂದುಕೊಳ್ಳುವ ಸರ್ಕಾರದ ನಿಜವಾದ ಮುಖವಾಡವೂ ಕೂಡ ಕಳಚಿ ಬಿದ್ದಿದೆ. ಕ್ರೀಡಾಲೋಕದಲ್ಲಿ ತಮ್ಮದೇ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ, ಗೌರವ ಹೆಚ್ಚಿಸಿದವರಿಗಾದ ಅನ್ಯಾಯದ ವಿರುದ್ಧದ ಕೂಗಿಗೆ ಸರ್ಕಾರ ಕಿವುಡಾಗಿದೆ.  ಪ್ರತಿಭಟನೆಯನ್ನು ಆಳುವವರು ಪೊಲೀಸ್ ದೌರ್ಜನ್ಯದ ಮೂಲಕ ದಮನ ಮಾಡಲು ಯತ್ನಿಸುತ್ತಿದ್ದಾರೆ ಎಂದರೆ, ಕ್ರೀಡಾ ಪಟುಗಳು ಕಷ್ಟಪಟ್ಟು, ಹಗಲು- ರಾತ್ರಿ ನಿದ್ದೆ ಇಲ್ಲದೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾಕೆ ಗೆಲ್ಲಬೇಕು ? ಕುಸ್ತಿ ಪಟುಗಳ ಪ್ರತಿಭಟನೆಯ ಬಗ್ಗೆ ಕೇಂದ್ರ ಸರ್ಕಾರ ತೋರುತ್ತಿರುವ ಜಾಣ ಮೌನವು  ಕ್ರೀಡೆಯ ಬಗ್ಗೆ, ಕ್ರೀಡಾ ಪಟುಗಳ ಬಗ್ಗೆ ಅದಕ್ಕಿರುವ  ತಾತ್ಸಾರದ ಮನೋಭಾವವನ್ನು ಬಟಾಬಯಲು ಮಾಡಿದೆಯೇ ಹೊರತು ಮತ್ತೇನೂ ಅಲ್ಲ.

ಇದೇ ಮೊದಲಾ?

ಇಲ್ಲ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೊಡ್ಡ ದೊಡ್ಡ ಪ್ರತಿಭಟನೆಗಳು ದೊಡ್ಡ ಮಟ್ಟದಲ್ಲಿಯೇ ಸದ್ದು‌ ಮಾಡುತ್ತಿವೆ. ರೈತರ ಹೋರಾಟ ವರ್ಷಗಟ್ಟಲೆ ನಡೆಯಿತು. ನಿರಂತರವಾಗಿ ಕೇಂದ್ರ ಸರ್ಕಾರ ಆ ಪ್ರತಿಭಟನೆಯನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂತು. ಹತ್ತಿಕ್ಕುವ ವಿಫಲ‌ ಯತ್ನವನ್ನೂ‌ ನಡೆಸಿತು.  ‌ಆದರೆ ಕೊನೆಗೊಂದು ದಿನ ಪ್ರತಿಭಟನೆಗೆ ಮಣಿಯಲೇ ಬೇಕಾಯಿತು‌. ಇಂತಹದ್ದೊಂದು ಸನ್ನಿವೇಶ ಈಗಲೂ ನಿರ್ಮಾಣವಾಗಿದೆ. ದೆಹಲಿಯ ಜಂತರ್ ಮಂಥರ್ ನಲ್ಲಿ ನಡೆಯುತ್ತಿರುವ ಕುಸ್ತಿ ಪಟುಗಳ ಪ್ರತಿಭಟನೆಯನ್ನು ಸರ್ಕಾರ ಪೊಲೀಸ್ ಮೂಲಕ ದಮನ‌ ಮಾಡುವ ಯತ್ನ ನಡೆಸಿದೆ. ಆದರೆ ಕುಸ್ತಿ ಪಟುಗಳ ಆಮರಣಾಂತ ಸತ್ಯಾಗ್ರಹದ ಕಿಚ್ಚು ಮಾತ್ರ ಈಗ ದೇಶಾದ್ಯಂತ ವ್ಯಾಪಿಸಿದೆ.  ಇನ್ನೂ ವ್ಯಾಪಕವಾಗಿ ಹರಡುವ ಲಕ್ಷಣಗಳು ಕಾಣುತ್ತಿವೆ.

 ಒಂದು ಹಂತದಲ್ಲಿ ಕುಸ್ತಿ ಪಟುಗಳ ಆಕ್ರೋಶ ಸ್ಫೋಟಗೊಳ್ಳುವಂತೆ ಕುದಿಯತೊಡಗಿದ್ದು  ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಡೆದ ಪದಕಗಳನ್ನು ಗಂಗಾ ನದಿಗೆ ಎಸೆಯುವ ಅವರ ಆವೇಶ ಈಗ ರೈತ ನಾಯಕ ಟಿಕಾಯಿತ್ ಮಧ್ಯೆ ಪ್ರವೇಶದ ಕಾರಣಕ್ಕೆ ನಿಂತಿದೆ. ಆದರೆ ಅದು ಇನ್ನಷ್ಟು ತೀವ್ರವಾಗುವ ಲಕ್ಷಣಗಳು ಇವೆ. ಇಷ್ಟಕ್ಕೂ ಕುಸ್ತಿ ಪಟುಗಳ ಈ ಪ್ರತಿಭಟನೆ, ಆಮರಣಾಂತ ಸತ್ಯಾಗ್ರಹ ಯಾಕೆಂದರೆ ಅದಕ್ಕೆ ಕಾರಣ ಸಂಸದ ಬ್ರಿಜ್‌ ಭೂಷಣ್ ಶರಣ್‌ ಸಿಂಗ್.

ಬ್ರಿಜ್‌ ಭೂಷಣ್ ಶರಣ್‌ ಸಿಂಗ್  ಹರಿಯಾಣದ ಬಿಜೆಪಿ ಸಂಸದ ಹಾಗೂ ಭಾರತ ಕುಸ್ತಿ ಫೇಡರೇಷನ್‌ ಅಧ್ಯಕ್ಷ. ಈತನ‌ ಮೇಲೆ ಈಗ ಲೈಂಗಿಕ ದೌರ್ಜನ್ಯದ ಆರೋಪ ಬಂದಿದೆ‌.‌ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾರೆನ್ನಲಾದ 7 ಜನ ಮಹಿಳಾ ಕುಸ್ತಿಪಟುಗಳು ಸತತ ಒಂದು ತಿಂಗಳಿನಿಂದ ದೆಹಲಿಯ ಜಂತರ್‌ ಮಂಥರ್‌ನಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಲೆ ಇದ್ದಾರೆ. ಅವರಿಗೆ ಭಾರೀ ಬೆಂಬಲವೂ ವ್ಯಕ್ತವಾಗಿದೆ. ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಅವರನ್ನು ಬೆಂಬಲಿಸಿ ಮಾತನಾಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೂಡ ಬೆಂಬಲಿಸಿದ್ದಾರೆ. ದೇಶದ ಸಾಕಷ್ಟು ನಟರು, ಹೋರಾಟಗಾರರು, ಗಣ್ಯ ವ್ಯಕ್ತಿಗಳು ಕೂಡ ಬೆಂಬಲಿಸಿದ್ದಾರೆ. ಆದರೂ ಕೂಡ ಕೇಂದ್ರ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಸೊಲ್ಲೆತ್ತದೆ ಮತ್ತದೆ  ಜಾಣ ಮೌನ ವಹಿಸಿರುವುದು  ಹೊಸತೇನಲ್ಲ.

ಬ್ರಿಜ್‌ ಭೂಷಣ್‌ ಸಿಂಗ್‌ನನ್ನು ಬಂಧಿಸಬೇಕೆನ್ನುವ ಕೂಗಿಗೆ ಸರ್ಕಾರ ಕಿವಿಗೊಡುತ್ತಿಲ್ಲ.  ಆತನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಕೂಡ ಮಧ್ಯ ಪ್ರವೇಶಿಸಿದೆ. ಆದರೂ ಆತನನ್ನು ಬಂಧಿಸಬೇಕೆಂಬ ಕುಸ್ತಿಪಟುಗಳ ಬೇಡಿಕೆಗೆ ಕೇಂದ್ರ ಕ್ಯಾರೆ ಅಂದಿಲ್ಲ. ಈ ಮಧ್ಯೆ ಇದಕ್ಕೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ ಕೂಡ ಆಗ್ರಹಿಸಿದೆ.  ದೇಶಾದ್ಯಂತ ಸದ್ದು ಮಾಡುತ್ತಿರುವ ಈ ಹೋರಾಟವೀಗ  ಒಂದು ರೀತಿಯಲ್ಲಿ ಖ್ಯಾತ ಕುಸ್ತಿಪಟು “ಮುಹಮ್ಮದ್‌ ಅಲಿ” ಬದುಕಿನ ಚರಿತ್ರೆಯನ್ನು ನೆನಪಿಸುವಂತಾಗಿದೆ.

ಅಲ್ಲಿ ಓಹಿಯೋ, ಇಲ್ಲಿ ಗಂಗಾ ನದಿ.. 

ಜಗತ್ತಿನ ಬಾಕ್ಸಿಂಗ್‌ ಜಗತ್ತಿನಲ್ಲಿ ಅತ್ಯಂತ ಹೆಸರುವಾಸಿಯಾದ ಹೆಸರು ಮುಹಮ್ಮದ್‌ ಅಲಿ. ಜನವರಿ 17, 1942 ರಂದು ಕೆಂಟುಕಿಯ ಲೂಯಿಸ್ವಿಲ್ಲೆಯಲ್ಲಿ ಜನಿಸಿದ ಮುಹಮ್ಮದ್ ಅಲಿ ಬಾಕ್ಸಿಂಗ್ ಜಗತ್ತಿಗೆ ಕಾಲಿಟ್ಟಿದ್ದು 12ನೇ ವಯಸ್ಸಿನಲ್ಲಿ. ಅಲಿ ಅವರ ಬೈಸಿಕಲ್ ಕಳವಾದ ಬಳಿಕ ಅವರು ಬಾಕ್ಸಿಂಗ್ ಕಡೆಗೆ ಆಕರ್ಷಿತರಾಗುತ್ತಾರೆ. ಆ ನಂತರ ಅಲಿ ಬಾಕ್ಸಿಂಗ್ ಜಗತ್ತಿನಲ್ಲಿ ಸಾಧನೆಗೈದರು. ‘ದಿ ಗ್ರೇಟೆಸ್ಟ್’ ಎಂಬ ಖ್ಯಾತಿಯನ್ನೂ ಪಡೆದರು. ಕೇವಲ ಆರು ವರ್ಷಗಳಲ್ಲಿ, ಅಂದರೆ 1960ರಲ್ಲಿ ಒಲಂಪಿಕ್ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಆದರೆ 48 ಗಂಟೆಗಳ ಕಾಲ ಪದಕವನ್ನು ಸ್ವೀಕರಿಸಿರಲಿಲ್ಲ. ಯಾಕೆಂದರೆ ಈ ಪ್ರಚಂಡ ಯಶಸ್ಸಿನ ನಂತರವೂ ಅಲಿ ವರ್ಣಭೇದ ನೀತಿಯನ್ನು ಎದುರಿಸುತ್ತಲೇ ಇದ್ದರು. ಇದನ್ನು ಅವರು ತಮ್ಮ ಆತ್ಮಚರಿತ್ರೆಯಾದ “ದಿ ಗ್ರೇಟೆಸ್ಟ್” ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಆ ಅವಮಾನದ ಬಳಿಕ ಅಲಿ ಅವರು ತಮ್ಮ ಪದಕವನ್ನು ಓಹಿಯೋ ನದಿಗೆ ಎಸೆದರು ಎಂಬುದು ಕೂಡ ಅಲ್ಲಿ ದಾಖಲಾಗಿದೆ”. ಅಲ್ಲಿ ಮುಹಮ್ಮದ್‌ ಅವರಿಗೆ ಕಾಡಿದ್ದು ವರ್ಣಭೇದ ನೀತಿ. ಇಲ್ಲಿ ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆನ್ನಲಾದ ಕುಸ್ತಿ ಪಟುಗಳನ್ನು ಘೋರವಾಗಿ  ಅವಮಾನಿಸುತ್ತಿದೆ. ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲ. ಇದರಿಂದ ನೊಂದ ಕುಸ್ತಿಪಟುಗಳು ಈಗ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ತಾವು ಭಾರತವನ್ನು ಪ್ರತಿನಿಧಿಸಿ ಪಡೆದ ಪದಕಗಳನ್ನೆಲ್ಲ ಗಂಗಾ ನದಿಗೆ ಎಸೆಯುತ್ತೇವೆ ಎಂದು ಎಚ್ಚರಿಸಿದ್ದಾರೆ. ಅಲ್ಲಿ ಓಹಿಯೋ, ಇಲ್ಲಿ ಗಂಗಾ ನದಿ  ಕ್ರೀಡಾ ಪಟುಗಳ ನೋವಿನ ಕೂಗಿಗೆ ಸಾಕ್ಷಿಯಾಗುತ್ತಿವೆ.

ಭಾರತೀಯ ಕ್ರೀಡಾ ಜಗತ್ತು ವಿಚಿತ್ರವಾಗಿದೆ. ಇಲ್ಲಿನ ಕ್ರೀಡಾ ಲೋಕದಲ್ಲಿ ಎಲ್ಲವೂ ಸರಿಯಿಲ್ಲ,  ಪ್ರತಿಭೆಗಿಂತ ಸ್ವಜನ ಪಕ್ಷಪಾತ, ರಾಜಕಾರಣ, ಜಾತಿ ಲಾಬಿಗಳು, ಹೆಣ್ಣು ಬಾಕರ ಕಾಟದಿಂದ ಕ್ರೀಡಾ ಲೋಕ ಸೊರಗಿ ಹೋಗಿದೆ ಎನ್ನುವ ಆರೋಪಗಳಿಗೆ ಇನ್ನಷ್ಟು ಪುಷ್ಟಿ ನೀಡುವ ಹಾಗೆಯೇ ಇವತ್ತು ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಪ್ರಕರಣವೂ ಸಾಕ್ಷಿ ಆಗಿದೆ.  ಆತನ ಮೇಲೆ ವಿನೇಶಾ ಪೋಗಟ್, ಸಾಕ್ಷಿ ಮಲ್ಲಿಕ್, ಬಜರಂಗ್ ಪೂನಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪ ಸತ್ಯವೋ, ಸುಳ್ಳೋ, ಕೊನೆ ಪಕ್ಷ ಆ ಬಗ್ಗೆ ನಿಷ್ಪಕ್ಷಪಾತ ತನಿಖೆಗೂ ಸರ್ಕಾರ ಸಿದ್ಧವಿಲ್ಲವೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಿದೆ.

ಕುಸ್ತಿ ಪಟುಗಳ ಆರೋಪ ಎಷ್ಟು ಸತ್ಯ ಎನ್ನುವುದರ ತನಿಖೆ ನಡೆಸುವುದರ ಕಥೆ ಇರಲಿ, ಕೊನೆ ಪಕ್ಷ ಅವರ ಪ್ರತಿಭಟನೆಯತ್ತ ಕಣ್ತೆರೆದು ನೋಡದ ಪ್ರಧಾನಿಯ ನಡೆ ತಮ್ಮ ಪಕ್ಷದ ಆರೋಪಿ ಸಂಸದನ ರಕ್ಷಣೆಗಿಳಿದಿದ್ದಾರೆ ಎಂಬುದರ ಸೂಚಕವಾಗಿದೆ.

ಪ್ರಧಾನಿಯ ನಡೆ-ಶೋಷಣೆಗೊಳಗಾದ ಕುಸ್ತಿಪಟುಗಳು 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾಗ ಇದೇ ಕುಸ್ತಿಪಟುಗಳ ಜತೆಗೆ ಭರ್ಜರಿಯಾಗಿ ನಿಂತು ಯಾಕೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರಿ ಎಂಬ ಪ್ರಶ್ನೆಗಳಿಗೆ ಉತ್ತರಿಸುವುದಾದರು‌ ಯಾರು? ಇಲ್ಲಿನ ಆಳುವ ವರ್ಗಗಳ ಧೋರಣೆಯೇ ವಿಚಿತ್ರ. ಪ್ರತಿಭಟನೆ ನಡೆಸುವವರ ಬೇಡಿಕೆ ಏನೆಂದು ವಿಚಾರಿಸುವ ಸೌಜನ್ಯವೇ ಇಲ್ಲ, ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತರ ಬೃಹತ್‌ ಪ್ರತಿಭಟನೆಯ ಸಂದರ್ಭದಲ್ಲೂ ಇದೇ ರೀತಿ ಕೇಂದ್ರ ಸರ್ಕಾರ ಜಾಣ ಮೌನ ವಹಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ದುಡಿಯವ ಜನರ ಬೇಡಿಕೆ ಏನೆಂದೇ ಆಗ ಕೇಳಲಿಲ್ಲ. ಬೇಡಿಕೆ ಏನೆಂದು ಕೇಳುವ ಬದಲಿಗೆ ಅದೊಂದು ರಾಜಕೀಯ ಪ್ರೇರಿತ ಪ್ರತಿಭಟನೆ ಎಂದೇ ಆ ಪ್ರತಿಭಟನೆಯನ್ನು ಕಡೆಗಣಿಸಲಾಗಿತ್ತು. ಮುಂದೆ ಅದರ ಪರಿಣಾಮ ಮಾತ್ರ ಘೋರವಾಗಿಯೇ ಇತ್ತು. ಇಡೀ ದೇಶದ ರೈತರು ದೆಹಲಿಗೆ ಮುತ್ತಿಗೆ ಹಾಕಿ, ಅಲ್ಲಿನ ಎಲ್ಲಾ ಚಟುವಟಿಕೆಗಳಿಗೆ ದಿಗ್ಬಂಧನ ವಿಧಿಸಿದಾಗಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿತ್ತು. ಇಷ್ಟಾಗಿಯೂ ಇಲ್ಲಿ ಕೇಂದ್ರ ಸರ್ಕಾರವು ಕುಸ್ತಿಪಟುಗಳ ಪ್ರತಿಭಟನೆಯನ್ನು ನಿರ್ಲಕ್ಷ್ಯ ಮಾಡಿದ್ದರ ಹಿಂದೆ ಯಾರೋ ನಾಲ್ಕೈದು ಕುಸ್ತಿಪಟಗಳ ಪ್ರತಿಭಟನೆ ಅದು ಎನ್ನುವುದರ ಜತೆಗೆ ಇದು ಕೂಡ ಕಾಂಗ್ರೆಸ್‌ ಪ್ರೇರಿತ ಪ್ರತಿಭಟನೆ ಎನ್ನುವುದರ ತಾತ್ಸಾರವೂ ಇತ್ತು. ಅದೇ ಕಾರಣಕ್ಕೆ ಕುಸ್ತಿ ಪಟುಗಳ ಪ್ರತಿಭಟನೆಯ ಸುತ್ತ ಹತ್ತಾರು ಸುಳ್ಳು ಕಥೆಗಳನ್ನು ಸೃಷ್ಟಿಸಿ, ಅಪಪ್ರಚಾರ ನಡೆಸಲಾಗಿದೆ. ವಿಶೇಷವಾಗಿ ಹರಿಯಾಣದ ರಾಜಕಾರಣ ಇಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಅಪಪ್ರಚಾರ ನಡೆದಿದೆ. ಆದರೆ ವಾಸ್ತವದಲ್ಲೀಗ ಕೇಂದ್ರ ಸರ್ಕಾರದ ಜಾಣ ಮೌನದ ನಡೆಯನ್ನು ಖಂಡಿಸಿ ಹರಿಯಾಣ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಾಗಾದರೆ ಕುಸ್ತಿಪಟುಗಳ ಪ್ರತಿಭಟನೆಯನ್ನು ಹರಿಯಾಣದ ಬಿಜೆಪಿಗರು ಯಾಕೆ ಬೆಂಬಲಿಸಿದರು?

ಕುಸ್ತಿ ಪಟುಗಳಿಗೆ ಬೆಂಬಲ

ಕುಸ್ತಿ ಪಟುಗಳ ಪ್ರತಿಭಟನೆಯ ಬಗ್ಗೆ ಖುದ್ದು ಹರಿಯಾಣದ  ಹಿಸಾರ್ ನ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಮತ್ತು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಸೇರಿದಂತೆ ರಾಜ್ಯದ ಕೆಲವು ನಾಯಕರಿಂದ ಅನಿರೀಕ್ಷಿತ ಬೆಂಬಲ ವ್ಯಕ್ತವಾಗಿದೆ, ʼನಮ್ಮ ಕುಸ್ತಿಪಟುಗಳು ಒಲಂಪಿಕ್ಸ್, ಸಿಡಬ್ಲ್ಯೂಜಿ, ಏಷ್ಯನ್ ಕ್ರೀಡಾಕೂಟಗಳಲ್ಲಿ ತಮ್ಮ ಜೀವಮಾನದ ಕಠಿಣ ಪರಿಶ್ರಮದಿಂದ ಗಳಿಸಿದ ಪದಕಗಳನ್ನು ಪವಿತ್ರ ಗಂಗೆಯಲ್ಲಿ ಎಸೆಯಲು ಮುಂದಾಗಿದ್ದು, ಅವರ ನೋವು ಮತ್ತು ಅಸಹಾಯಕತೆಯನ್ನು ತೋರಿಸುತ್ತದೆ. ಇದು ಸಂಪೂರ್ಣವಾಗಿ ಹೃದಯವಿದ್ರಾವಕ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ. ಕುಸ್ತಿಪಟುಗಳಿಗೆ ಹೆಚ್ಚುತ್ತಿರುವ ಬೆಂಬಲದ ಹೊರತಾಗಿಯೂ, ಹರಿಯಾಣ ಬಿಜೆಪಿ ನಾಯಕತ್ವವು ಈ ವಿಷಯದ ಬಗ್ಗೆ ಅಧಿಕೃತವಾಗಿ ನಿಲುವು ತಾಳಬೇಕಿದೆ. ಆದರೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಧ್ಯಪ್ರವೇಶ ಮಾಡದೇ ದೂರವಿದ್ದು ಉಳಿದಿದ್ದಾರೆ. ಅವರು, ”ಈ ಸಮಸ್ಯೆ ಹರಿಯಾಣಕ್ಕೆ ಸಂಬಂಧಿಸಿಲ್ಲ, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದೆ” ಎಂದು ಹೇಳಿದ್ದಾರೆ. ಹರಿಯಾಣ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧನಕರ್ ಅವರು, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದರು. ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕು ಎಂದು ಒತ್ತಿ ಹೇಳಿದರು. ಠಾಕೂರ್ ಅವರು ಕುಸ್ತಿಪಟುಗಳಿಗೆ ದೆಹಲಿ ಪೊಲೀಸ್ ತನಿಖೆಯಲ್ಲಿ ವಿಶ್ವಾಸವಿಡಿ, ತನಿಖೆಯ ವರದಿ ಹೊರುವವರೆಗೂ ”ತಾಳ್ಮೆಯಿಂದಿರಿ” ಎಂದು ಒತ್ತಾಯಿಸಿದ್ದಾರೆಂದು ಸುದ್ದಿಯಾಗಿದೆ. ಹಾಗಾದರೆ ಇದು ಹೇಗೆ ರಾಜಕೀಯ ಪ್ರೇರಿತ ಪ್ರತಿಭಟನೆ ಆಗುತ್ತೆ?

 ಪ್ರತಿಭಟನೆಯನ್ನು ದಿಕ್ಕು ತಪ್ಪಿಸುವ ಕೆಲಸ

ಪ್ರತಿಭಟನೆಯನ್ನು ದಿಕ್ಕು ತಪ್ಪಿಸಲು ಬಿಜೆಪಿಯ ಟೂಲ್ ಕಿಟ್ ಗಳು ಸಕ್ರಿಯವಾಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು.‌ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಪರವಾಗಿ ಬಿಜೆಪಿ ನಾಯಕರು ನಿಂತಿದ್ದಾರೆ. ಆರೋಪಿಯನ್ನು ಬಂಧಿಸಬೇಕು ಎಂಬ ಆಗ್ರಹ ತೀವ್ರವಾಗುತ್ತಿದ್ದರೂ ಸಂತ್ರಸ್ತರ ಪರವಾಗಿ ನಿಲ್ಲದ ಬಿಜೆಪಿ ನಾಯಕರು ಬ್ರಿಜ್‌ಭೂಷಣ್ ಪರ ಅಖಾಡಕ್ಕೆ ಇಳಿದಿದ್ದಾರೆ. ಆತ ವ್ಯಾಪಕವಾದ ರಾಜಕೀಯ ಪ್ರಭಾವವನ್ನು ಹೊಂದಿರುವ ದೇವಿಪಟನ್ ಪ್ರದೇಶದ ಹಲವಾರು ಬಿಜೆಪಿ ಶಾಸಕರು ಆರೋಪಿಯ ಬೆಂಬಲಕ್ಕೆ ಬಂದಿದ್ದಾರೆ. ಜೂನ್ 5 ರಂದು ಅಯೋಧ್ಯೆಯಲ್ಲಿ ‘ಜನ್ ಚೇತನ ಮಹಾ ರ್‍ಯಾಲಿ’ಯನ್ನು ಆಯೋಜಿಸುವುದಾಗಿ ಬ್ರಿಜ್ ಭೂಷಣ್ ಹೇಳಿದ್ದಾನೆ. ನವದೆಹಲಿಯಲ್ಲಿ ಆರೋಪಿಯ ವಿರುದ್ಧ ನಡೆಯುತ್ತಿರುವ ಮಹಿಳಾ ಕುಸ್ತಿಪಟುಗಳ ಹೋರಾಟವು ಹಿಂದೂ ಧಾರ್ಮಿಕ ಮುಖಂಡರ ಬೆಂಬಲವನ್ನು ಪಡೆಯುವ ಪ್ರಯತ್ನವೆಂದೇ ಈ ರ್‍ಯಾಲಿಯನ್ನು ಪರಿಗಣಿಸಲಾಗಿದೆ. ಇವೆಲ್ಲವೂ ಆರೋಪಿ ಬ್ರಿಜ್‌ ಭೂಷಣ್‌ ನನ್ನು ರಕ್ಷಿಸುವ ಪ್ರಯತ್ನಗಳಾಗಿವೆ. ಆದರೆ ಅದಕ್ಕೀಗ ಅನುಮತಿ ಸಿಕ್ಕಿಲ್ಲ.

ಪ್ರಧಾನಿಗಳ ಪಕ್ಕದಲ್ಲೇ ಆರೋಪಿ..

ತಾನು ಆರೋಪಿಯಲ್ಲ, ಆ ಬಗ್ಗೆ ಯಾವುದೇ ಸಾಕ್ಷ್ಯಗಳು ಇಲ್ಲ. ಸಾಕ್ಷ್ಯ ಇದ್ದರೆ ಸಾಬೀತು ಮಾಡಲಿ ಎಂದು ಬ್ರಿಜ್‌ ಭೂಷಣ್‌ ಹೇಳಿದ್ದಾನೆ. “ನಿಮ್ಮಲ್ಲಿ (ಕುಸ್ತಿಪಟುಗಳು) ಯಾವುದೇ ಸಾಕ್ಷ್ಯಾಧಾರಗಳಿದ್ದರೆ, ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ… ನಾಲ್ಕು ತಿಂಗಳಾದರೂ ಸರ್ಕಾರ ನನ್ನನ್ನು ಗಲ್ಲಿಗೇರಿಸುತ್ತಿಲ್ಲ, ಅವರು ಈಗ ತಮ್ಮ ಪದಕಗಳನ್ನು ಮುಳುಗಿಸಲು ಗಂಗಾನದಿಯ ಮೊರೆ ಹೋಗುತ್ತಿದ್ದಾರೆ. ಪದಕಗಳನ್ನು ಮುಳುಗಿಸುವುದರಿಂದ ನನ್ನನ್ನು ಗಲ್ಲಿಗೇರಿಸಲಾಗುವುದಿಲ್ಲ, ಇದು ಕೇವಲ ಭಾವನಾತ್ಮಕ ನಾಟಕವಾಗಿದೆ ಎಂದು ಸಿಂಗ್ ಹೇಳಿದ್ದಾನೆ. ಪ್ರಧಾನಿಯವರು ಆತನನ್ನು ಪಕ್ಕದಲ್ಲಿರಿಸಿಕೊಂಡೇ ಸಂಸತ್‌ ಉದ್ಘಾಟನೆ ಮಾಡುತ್ತಾರೆ. ಬ್ರಿಜ್‌ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ʼಸಾಕು ಮಾಧ್ಯಮʼ ಗಳು ಕೂಡ ಆತನ ಬೆಂಬಲಕ್ಕೆ ನಿಲ್ಲುತ್ತವೆ. ಬ್ರಿಜ್‌ ಭೂಷಣ್‌ ಮೇಲಿನ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳುತ್ತವೆ. ಆದರೆ  ದೆಹಲಿ ಪೊಲೀಸರು ಈ ವರದಿಗಳನ್ನು ತಳ್ಳಿಹಾಕಿದ್ದಾರೆ. ʼಡಬ್ಲ್ಯುಎಫ್‌ಐನ ಮಾಜಿ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ದೆಹಲಿ ಪೊಲೀಸರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ ಎಂದು ಹಲವಾರು ಮಾಧ್ಯಮ ಚಾನೆಲ್‌ಗಳು ಸುದ್ದಿ ಪ್ರಕಟಿಸಿವೆ. ಆದರೆ ಈ ಸುದ್ದಿ “ಸುಳ್ಳು” ಮತ್ತು ಈ ಸೂಕ್ಷ್ಮ ಪ್ರಕರಣದ ತನಿಖೆಯು ಎಲ್ಲಾ ಸೂಕ್ಷ್ಮತೆಯೊಂದಿಗೆ ಪ್ರಗತಿಯಲ್ಲಿದೆ. ಈ ವಿಷಯದ ಕುರಿತು ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ ಎಂದು ಪೊಲೀಸರು  ತಿಳಿಸಿದ್ದಾರೆ. ಹಾಗಾದರೆ ಯಾವುದು ವಾಸ್ತವ? ಸರ್ಕಾರ ಮಾಡಬೇಕಾಗಿದ್ದಾರೂ ಏನು? ಎಲ್ಲವನ್ನೂ ಪ್ರಧಾನಿ ಕಚೇರಿ(pmo) ನಿರ್ವಹಿಸುತ್ತಿದೆಯಾ?

ʼಬೇಟಿ ಪಡಾವೋ, ಬೇಟಿ ಬಚಾವೋʼ?!

ಈ ಘೋಷಣೆ ಮಾಡುವ, ಅದನ್ನಿಟ್ಟುಕೊಂಡೇ ದೇಶದ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಧಾನಿಯವರಿಗೆ ದೆಹಲಿಯಲ್ಲಿಯೇ ಭಾರತದ ಲೇಡಿ ಕುಸ್ತಿ ಪಟುಗಳ ಮೇಲೆ ತಮ್ಮದೇ ಪಕ್ಷದ ಒಬ್ಬ ಸಂಸದ ಲೈಂಗಿಕ ಕಿರುಕುಳ ನಡೆಸಿದ್ದಾನೆನ್ನುವುದು ಯಾಕೆ ಮುಖ್ಯವಾಗುತ್ತಿಲ್ಲ?  ಕುಸ್ತಿ ಪಟುಗಳು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಆವರ ಪ್ರತಿಭಟನೆಯ ಬಗ್ಗೆ ದಿವ್ಯ ಮೌನ ಯಾಕೆ? ಅವರೇನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೆ? ಹಾಗಿದ್ದು ಅವರು ಪದಕ ಗೆದ್ದು ದೇಶದ ಘನತೆ ಎತ್ತಿ ಹಿಡಿದಾಗ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದು ಯಾಕೆ?  ಎಲ್ಲದ್ದಕ್ಕೂ ಮೌನವೇ ಬುದ್ಧಿವಂತಿಕೆ ಅಲ್ಲ, ಇದು ಪ್ರಜಾಪ್ರಭುತ್ವ ರಾಷ್ಟ್ರ,  ಇಲ್ಲಿ ಪ್ರತಿಭಟನೆಗೂ ಹಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯನ್ನು ಗೌರವಿಸಬೇಕಿದೆ. ಇದನ್ನಾದರೂ ಅರ್ಥ ಮಾಡಿಕೊಂಡು ಕೇಂದ್ರ ಸರ್ಕಾರ ಕುಸ್ತಿ ಪಟುಗಳ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಕರಣದ ವಾಸ್ತವಗಳನ್ನು ದೇಶದ ಜನತೆಯ ಮುಂದಿಡುವುದಕ್ಕಾದರೂ ಪ್ರಕರಣದ ಸೂಕ್ತ ತನಿಖೆ ನಡೆಸಬೇಕಿದೆ.

ಕೊನೆಯ ಮಾತೆಂದರೆ; ಕುಸ್ತಿಪಟುಗಳು ಪದಕ ಗೆದ್ದಾಗ ಅದು ದೇಶದ ಗೆಲುವು ಎನ್ನುವುದಾದರೆ ಇದೇ ಕುಸ್ತಿಪಟುಗಳ ಮೇಲೆ ನಡೆದ ಅತ್ಯಾಚಾರ  ದೇಶದ ಮೇಲೆ ನಡೆದ ಅತ್ಯಾಚಾರ ಎಂದೆನಿಸುವುದಿಲ್ಲವಾ? 

ಆಕಾಶ್.ಆರ್.ಎಸ್.‌

ಯುವ ಬರಹಗಾರ

ಇದನ್ನೂ ಓದಿಮಂಗಳೂರಿನಲ್ಲಿ ಲೈಂಗಿಕ ಕಿರುಕುಳ ಪ್ರಕರಣ| ಆರೋಪಿಗಳಿಗೆ ರಾಜಕಾರಣಿ, ಪೊಲೀಸ್‌ ಆಧಿಕಾರಿಗಳ ಬೆಂಬಲ- ಸಂತ್ರಸ್ತೆಯ ಅಳಲು

Related Articles

ಇತ್ತೀಚಿನ ಸುದ್ದಿಗಳು