Home Uncategorized ನಿಜವಾದ ಆನಂದ ಹೀಗಿದ್ದರು: ಲಕ್ಕೂರರ ಕೊನೆಯ ದಿನಗಳಲ್ಲಿ ಜೊತೆಗಿದ್ದ ಮಿತ್ರನಿಂದ ಅರ್ಥಪೂರ್ಣ ನುಡಿನಮನ

ನಿಜವಾದ ಆನಂದ ಹೀಗಿದ್ದರು: ಲಕ್ಕೂರರ ಕೊನೆಯ ದಿನಗಳಲ್ಲಿ ಜೊತೆಗಿದ್ದ ಮಿತ್ರನಿಂದ ಅರ್ಥಪೂರ್ಣ ನುಡಿನಮನ

0

(ಇತ್ತೀಚೆಗೆ ನಿಧನರಾದ ಯುವ ಬರಹಗಾರರ ಆನಂದ ಲಕ್ಕೂರರ ಬಗ್ಗೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾದವು. ವ್ಯಕ್ತಿಯೊಬ್ಬರು ಅಗಲಿದಾಗ ಅವರ ಬಗ್ಗೆ ಏನೆಲ್ಲ ಮಾತನಾಡಬಾರದಾಗಿತ್ತೋ ಅಂತ ಕ್ಷುಲ್ಲಕ ವಿಚಾರಗಳೇ ಹೆಚ್ಚು ಚರ್ಚೆಯಾದದ್ದು ನಮ್ಮ ಸಾಂಸ್ಕೃತಿಕ ಲೋಕದ ಸಣ್ಣತನವೆಂದೇ ಹೇಳಬಹುದು. ಆನಂದ ಬದುಕಿದ್ದಾಗ ಅವರ ಫೋನ್‌ ಕಾಲ್‌ ಸಹ ರೀಸಿವ್‌ ಮಾಡಲು ರೇಜಿಗೆಪಟ್ಟವರೆಲ್ಲ ಇಷ್ಟುದ್ಧ ಬರೆದು ತಮ್ಮ ಹಿಪೋಕ್ರಸಿಯನ್ನು ಹರಾಜಿಗಿಟ್ಟುಕೊಂಡರು. ಆನಂದರ ಕುಡಿತ, ಸಣ್ಣಪುಟ್ಟ ಸಾಲಗಳ ಬಗ್ಗೆ ಬರೆಯುತ್ತಾ ವ್ಯಕ್ತಿ ಹೇಗೆಲ್ಲ ಬದುಕುಬಾರದು ಎಂಬುದಕ್ಕೆ ಆನಂದ ದೊಡ್ಡ ಉದಾಹರಣೆ ಎಂದು ಷರಾ ಬರೆದುಬಿಟ್ಟವರೇ ಹೆಚ್ಚು. ಆದರೆ, ಆನಂದ್‌ ಅದೆಲ್ಲದಕ್ಕೂ ಮಿಗಿಲಾಗಿದ್ದರು. ಆನಂದರ ಓದಿನ ವಿಸ್ತಾರ, ಜಗತ್ತಿನ ಲೇಖಕರನ್ನು ತನ್ನೊಳಗೆ ಇಳಿಸಿಕೊಳ್ಳುವ ಪರಿ ಅವರ ವಾರಿಗೆಯ ಯುವಬರಹಗಾರರಲ್ಲಿ ಬೆರೆಳೆಣಿಕೆಯವರಲ್ಲೂ ಇರಲಿಲ್ಲವೆಂಬುದು ಅವರ ಹತ್ತಿರದ ಒಡನಾಡಿಗಳ ಅಭಿಪ್ರಾಯ. ಆನಂದ ಎಲ್ಲರನ್ನು ಆತುಕೊಳ್ಳುವ ಅಪ್ಪಟ ತಾಯ್ತನದ ಜೀವ. ಆನಂದರ ಕೊನೆಯ ದಿನಗಳಲ್ಲಿ ಜೊತೆಗಿದ್ದ ದೇವನೂರು ನಂದೀಶ್‌ ಆನಂದ “ತಥಾಗತನ ಮಂದಸ್ಮಿತದಂತೆ ಬದುಕಿದ್ದರು ಎನ್ನುತ್ತಾರೆ. ಅವರ ಪೂರ್ತಿ ಬರಹ ಇಲ್ಲಿ ನಿಮಗಾಗಿ..)

ಕವಿ ಲಕ್ಕೂರು ಆನಂದರು ನನಗೆ ಪರಿಚಯವಾದದ್ದು ನಾನು ಯಾವ ವಿಶ್ವವಿದ್ಯಾಲಯವೊಂದರಲ್ಲಿ ಸಂಶೋಧನೆ ಕೈಗೊಂಡು ಕೆಲಸ ಪ್ರಾರಂಭಿಸಿದ್ದೆನೋ ಆ ಒಂದು ಆವರಣದಲ್ಲಿ. ೨೦೨೨ರ ಫೆಬ್ರುವರಿ ಮಾಯೆಯಲ್ಲಿ ಪಿಹೆಚ್.ಡಿ. ಅಧ್ಯಯನಕ್ಕೆಂದು ಇಲ್ಲಿ ನಾನು ಪ್ರವೇಶ ಪಡೆದ ಬಳಿಕ ಕೆಲ ತಿಂಗಳ ಆನಂತರದ ಅವಧಿಯಲ್ಲಿ ಅವರೂ ಪ್ರವೇಶ ಪಡೆದಿದ್ದಾರೆಂದು ತಿಳಿಯಿತು. ಆದಾದ ಕೆಲದಿನಗಳಲ್ಲಿ ಮೂರ್ನಾಲ್ಕು ಸಂಗಡಿಗರೊಂದಿಗೆ ನಾನಿದ್ದ ಹಾಸ್ಟೆಲ್ ಕೋಣೆಗೆ ಬಂದು ಅವರು ನನಗೆ ಪರಿಚಯವಾದರು. ಬಂದಿದ್ದ ಈ ಮೂರ್ನಾಲ್ಕು ಮಂದಿಯಲ್ಲಿ ಹೊಸ ಪರಿಚಯದ ಮುಖವಾಗಿ ಇವರು ನನಗೆ ಆ ದಿನ ಪರಿಚಯವಾದ ಬಗೆ ನನಗೆ ಅಷ್ಟೇ ಅಚ್ಚರಿಯನ್ನು ಮೂಡಿಸಿತ್ತು. ಆ ಮೊದಲ ದಿನ ನನ್ನ ರೂಮಿನಲ್ಲಿದ್ದ ನೂರಾರು ಪುಸ್ತಕಗಳನ್ನು ಕಂಡು ಇಷ್ಟು ಅಸಂಖ್ಯಾತ ಪುಸ್ತಕಗಳನ್ನು ನೋಡಿ ನನಗೆ ತುಂಬ ಖುಷಿಯಾಯಿತೆಂದು ರೂಮಿನಿಂದ ಹೊರನಡೆಯುತ್ತ ಹೇಳಿದ ಮಾತು ಇನ್ನೂ ನೆನಪಿನಲ್ಲಿದೆ.

ಆನಂತರ ನನ್ನಿಂದ ಬೀಳ್ಕೊಂಡು ಮತ್ತೆ ಕೆಲವು ದಿನಗಳಾದ ಬಳಿಕ ವಿಶ್ವವಿದ್ಯಾಲಯಕ್ಕೆ ಬಂದ ಹೊಸತರಲ್ಲಿ ಕೆಲ ಕಾಲ ನನ್ನ ರೂಮಿನ ಒಂದು ಬದಿಯಲ್ಲಿ ನಾನು ಮತ್ತು ಅವರು ಸಾಕಷ್ಟು ಮಾತುಕತೆಗಳನ್ನಾಡುತ್ತ ಹರಟುತ್ತ ಒಂದು ಕಪ್ ಚಹಾದೊಡನೆ ಹಿತವಾದ ಸಂಭಾಷಣೆಗಳನ್ನು ಮಾಡುತ್ತ ಗಂಟೆಗಟ್ಟಲೆ ಸಾಹಿತ್ಯಕ ಚರ್ಚೆಗಳನ್ನು ನಡೆಸುತ್ತಿದ್ದೆವು. ರಾತ್ರಿ ಊಟವಾದ ಬಳಿಕ ಮತ್ತೆ ಅದು ಇದು ಅಂತೆಲ್ಲ ನಮ್ಮ ಮಾತುಕತೆಗಳನ್ನು ಹೊರಳಿಸಿ ವಾದ-ವಾಗ್ವಾದಗಳ ಬಿಸಿ ಚರ್ಚೆಗಳಲ್ಲಿ ಅಷ್ಟೇ ಸಾವದಾನ ಕಾತರಗಳಿಂದ ಮಂಡಿಸುವುದು ಮತ್ತು ಅದಕ್ಕೆ ಪ್ರತಿಯಾಗಿ ವಿಮರ್ಶೆ ಮಾಡುವುದು ಇದೇ ಆಗುತ್ತಿತ್ತು. ಎಲ್ಲವನ್ನು ಒಪ್ಪುವುದಾಗಲೀ ಖಂಡಿಸುವುದಾಗಲೀ ಪರಿಶೀಲಿಸುವುದಾಗಲೀ ಅಥವ ಒಪ್ಪಿ ಮುನ್ನಡೆಯುವುದಾಗಲೀ ಇಲ್ಲವೆ ತ್ಯಜಿಸಿ ಬೇರೆ ದಿಕ್ಕಿನ ಪ್ರಯಾಣವೊಂದಕ್ಕೆ ಸಜ್ಜಾಗುತ್ತಿದ್ದ ಬಗೆ ನಮ್ಮಗಳ ಮಾತಿನ ಶೈಲಿಯಾಗಿತ್ತು. ಯಾವ ಚರ್ಚೆಗೂ ವ್ಯವಸ್ಥಿತ ಆವರಣವಾಗಲೀ ಚೌಕಟ್ಟಾಗಲೀ ಇರುತ್ತಿರಲಿಲ್ಲ. ಎಲ್ಲವೂ ಬಯಲೆ ಆದರೂ ಕೊಂಚ ಮಟ್ಟಿಗಿನ ಆಲಯದ ಮುಸುಕು ಅಲ್ಲಲ್ಲಿ ಇರುತ್ತಿತ್ತು.

ಸಮಕಾಲೀನ ಕನ್ನಡ ಸಾಹಿತ್ಯದ ಬರೆವಣಿಗೆಯ ಬಗೆಗೆ ಚರ್ಚೆಗಳು ಮೇಲಿಂದ ಮೇಲೆ ಬರುತ್ತಿದ್ದವು. ಕನ್ನಡದಲ್ಲಿ ಕಾವ್ಯಕ್ಷೇತ್ರ ಮತ್ತು ವಿಮರ್ಶಾಕ್ಷೇತ್ರಗಳು ತೀರಾ ಸೊರಗಿ ಹೋಗಿವೆಯೆಂಬ ಅಭಿಪ್ರಾಯಗಳು ಅಂತಿಮವಾಗಿ ಇಬ್ಬರಲ್ಲೂ ಒಡಮೂಡುತ್ತಿದ್ದವು. ಅವು ಅಂತಿಮವೆಂಬಂತೆ ಸತ್ತೆ ಹೋಗಿವೆಯೆಂದು ಹೇಳುವ ಮಟ್ಟಿಗೂ ತಲುಪಿದ್ದೂ ಇದೆ. ಕನ್ನಡ ಚಿಂತನೆಯ ವಿಷಯಕವಾಗಿಯೂ ಈ ಬಗೆಯದೆ ತಾತ್ಸಾರ. ಈ ಮಧ್ಯೆ ಎಲ್ಲ ಅನುವಾದದ ಆಲಯವೇ ಆಗಿದೆಯೆಂಬ ನನ್ನ ಮಾತು ಇದರೊಂದಿಗೆ ಸೇರ್ಪಡೆಯಾಗುತ್ತಿತ್ತು. ಸಮಕಾಲೀನ ಅನುವಾದಕರ ಬಗೆಗೂ ಅವರಲ್ಲಿ ಅಷ್ಟೇ ಒಪ್ಪಿತ ಮತ್ತು ತಿರಸ್ಕಾರದ ದನಿಗಳಿದ್ದವು. ಕೆಲ ಅನುವಾದಕರನ್ನು ಅವರು ಒಪ್ಪುತ್ತಿರಲಿಲ್ಲ. ಮಕ್ಕಳು ಓದುವ ಪಿಲಾಸಫಿ ಪುಸ್ತಕಗಳನ್ನು ಅನುವಾದ ಮಾಡುತ್ತಾರೆಂದು ನನ್ನೊಂದಿಗೆ ಹೇಳುತ್ತಿದ್ದುದುಂಟು.

ನನ್ನದೆ ಆದ ಯಾವ ತೀರ್ಮಾನ-ಅಭಿಪ್ರಾಯಗಳಿಗೂ ಅವರು ಸಮ್ಮತಿ ತೋರುತ್ತಿದ್ದುದು ಒಂದಾದರೆ ಆ ತೀರ್ಮಾನ, ಅಭಿಪ್ರಾಯಗಳಿಗೆ ನಿರ್ಧಾರಕವಾದ ನಿರ್ಣಯವೊಂದು ತಿಳಿಗೊಳದಂತೆ ಮತ್ತಷ್ಟು ತಿಳಿಯಾಗುವಲ್ಲಿ ಇನ್ನಷ್ಟು ನೆರವನ್ನು ಅವರ ಪ್ರತಿಮಾತುಗಳು ನೀಡುತ್ತಿದ್ದವು. ಪ್ರಶಾಂತತೆಯಲ್ಲಿ ಅದು ಕೊನೆಮುಟ್ಟುವುದಾದರೂ ಹಿಮಾಲಯದ ಎತ್ತರದ ಸಾದೃಶ ಆಕೃತಿಯೊಂದು ನನ್ನ ಸ್ಮೃತಿಪಟಲದಲ್ಲಿ ಮೂಡುತ್ತಿತ್ತು. ನಿರ್ಣಯವೊಂದು ಇಬ್ಬರ ಚರ್ಚೆಯಲ್ಲಿ ಯಾವ ತಿಕ್ಕಾಟ-ಜಗಳ, ವಾದ-ವಾಗ್ವಾದಗಳಿಗೆ ನಿಲ್ಲದೆ ಅದು ತನ್ನ ಆಕೃತಿಯ ಮೂಲಕವೆ ಅದರ ಆಶಯಗಳನ್ನೂ ಅದರ ಅಭಿವ್ಯಕ್ತಿಯ ಮಾರ್ಗವನ್ನೂ ಆ ಮೂಲಕವೇ ಮೂಡಿಸುತ್ತಿತ್ತು.

ಬುದ್ಧ ಮತ್ತು ಆತನ ನಂತರದ ಬಗೆಗೆ ಮಾತಿನ ನಡುವೆ ಉಪದೇಶವಾಗುತ್ತಿತ್ತು. ಬುದ್ಧನ ಪೂರ್ವದಲ್ಲಿದ್ದವರ ಬಗೆಗೂ ಕೆಲ ಸಂಗತಿಗಳು ಅವರ ಮೂಲಕವೇ ನನಗೆ ತಿಳಿದುಬರುತ್ತಿತ್ತು. ಬುದ್ದಿಸಮ್‌ನ ಹಿನ್ನಡೆಗೆ ನಾಗಾರ್ಜುನನ ಜಟಿಲವಾದ ಮಾಧ್ಯಮಿಕ ತತ್ತ್ವವೇ ಕಾರಣವಾಗಿತ್ತು ಎಂಬ ಅವರ ಅಭಿಪ್ರಾಯವೂ ಇಲ್ಲಿಗೆ ಸ್ತುತ್ಯರ್ಹ. ಆ ಮಾಧ್ಯಮಿಕಕಾರಿಕೆ ಅರ್ಥವಾಗುವುದಿಲ್ಲವಲ್ಲ! ಎಂದು ಒಮ್ಮೆ ಕೇಳಿದ್ದಕ್ಕೆ ‘ಈ ಜಗತ್ತಿನಲ್ಲಿ ಅರ್ಥವಾಗದ ಯಾವೊಂದು ಸಂಗತಿಯೂ ನಿನ್ನಿಂದ ಉಳಿದಿಲ್ಲವಯ್ಯ!’ ಎಂದು ನನ್ನನ್ನು ಗಲಿಬಿಲಿಗೊಳಿಸಿದ್ದೂ ಇದೆ. ಆ ಪುಸ್ತಕಾನ ಹಿಂಬದಿ ಪುಟಗಳಿಂದ ಆರಂಭಿಸಿ ತಲೆಕೆಳಗು ಮಾಡಿ ಓದಬೇಕಯ್ಯ! ಆಗ ಅದು ಅರ್ಥವಾಗುತ್ತದೆ. ಬೇಕಾದರೆ ನೀನು ಇನ್ನೊಮ್ಮೆ ಪ್ರಯತ್ನಿಸು. ಹಾಗೆ ಪ್ರಯತ್ನಿಸಿ ಅಂತ ಆದಿಮಕ್ಕೆ ಬಂದಿದ್ದ ಒಬ್ಬ ವಿದ್ವಾಂಸ ನನಗೆ ತಿಳಿಸಿಕೊಟ್ಟಿದ್ದನಯ್ಯ ಎಂದು ಹೇಳಿ ನನ್ನನ್ನು ಅದರ ಓದಿಗೆ ಹಚ್ಚಿದ್ದೂ ಇದೆ. ಬುದ್ಧನ ಅನೇಕ ಶಿಷ್ಯರಲ್ಲಿ ನಾಗಾರ್ಜುನನೂ ಪ್ರಮುಖವಾದವನು. ಬುದ್ಧನ ಜಾತಕ ಕತೆಗಳು ಆಗಾಗ ರಸ್ತೆಯಲ್ಲಿ ಹೋಗುತ್ತಿದ್ದಾಗ ಭಿತ್ತರಗೊಳ್ಳುತ್ತಿದ್ದವು.

ಮೊದಲ ದಿನ ಪರಿಚಯವಾದ ಬಳಿಕ ಅವರೊಂದಿಗೆ ನಾಲ್ಕಾರು ಹೆಜ್ಜೆ ಹಾಕುತ್ತ ಹೋಗುತ್ತಿರುವಾಗ ರಾಧಾಕೃಷ್ಣನ್ ಅವರ ಇಂಡಿಯನ್ ಫಿಲಾಸಫಿಯ ಮೂರು ಸಂಪುಟಗಳ ಅನುವಾದ ಕಾರ್ಯದಲ್ಲಿ ನಾನು ತೊಡಗಿದ್ದೇನೆ. ಅವು ಇನ್ನೇನು ಕೆಲವೇ ದಿನಗಳಲ್ಲಿ ಭಾಷಾ ಭಾರತಿ ಪ್ರಾಧಿಕಾರದಿಂದ ಬರಲಿದೆ ಎಂದು ಹೇಳಿದ್ದರು. ಇನ್ನಿಲ್ಲದ ಕಾತರದಿಂದ ಕೂಡಿದ ಸಂತಸವನ್ನು ಅವರ ಆ ಮಾತುಗಳು ವ್ಯಕ್ತಪಡಿಸಿದ್ದವು. ಆದರೆ ನಮ್ಮಿಬ್ಬರ ಆತ್ಮೀಯತೆ ಬೆಳೆದು ಎಷ್ಟೋ ದಿನಗಳಾದ ಬಳಿಕ ರಾಹುಲ ಸಾಂಕೃತ್ಸಾಯನರನ್ನು ಅವರು ಓದಲು ಶುರುಮಾಡಿದ್ದರು ಮತ್ತು ಅವರ ಫಿಲಾಸಫಿ ಗ್ರಂಥಗಳನ್ನು ಕೈಗೆತ್ತಿಕೊಂಡಿದ್ದರು. ಅಲ್ಲಿ ರಾಧಾಕೃಷ್ಣನ್ ಅವರ ಪ್ರಮೇಯಗಳನ್ನು ಸಾಂಕೃತ್ಸಾಯನರು ಒಪ್ಪದೆ ತಿರಸ್ಕರಿಸಿರುವ ಬಹಳಷ್ಟು ಸಂಗತಿಗಳನ್ನು ನನಗೆ ಆಗಾಗ ಹೇಳುತ್ತಿದ್ದುದು ಮಾತ್ರವಲ್ಲ ಆ ಬಗೆಗೆ ಅವರ ಅಭಿಪ್ರಾಯಗಳು ಅಷ್ಟೊಂದು ತೀಕ್ಷ್ಣವಾಗಿವೆಯೆಂದೂ ಸಹ ಹೇಳಿದ್ದರು. ರಾಹುಲ ಸಾಂಕೃತ್ಸಾಯನರ ಜೀವನದ ಪ್ರಮುಖ ಘಟ್ಟಗಳನ್ನೂ ಮತ್ತು ಅವರ ಕೊನೆಯ ದಿನಗಳ ಬಗ್ಗೆಯೂ ಆಗಾಗ ಹೇಳುತ್ತಿದ್ದುದುಂಟು. ಹಾಗೆಯೇ ಅವರ ಪ್ರಕಟಿತ ಮತ್ತು ಅಪ್ರಕಟಿತ ಕೃತಿಗಳ ಬಗ್ಗೆಯೂ ಕೆಲ ಮಾಹಿತಿಗಳನ್ನು ಕೊಡುತ್ತಿದ್ದರು. ಜೊತೆಗೆ ಕನ್ನಡಕ್ಕೆ ಅನುವಾದವಾಗಬೇಕಾದ ಅವರ ಕೃತಿಗಳ ಪಟ್ಟಿಯನ್ನೆ ನನ್ನ ಮುಂದಿಡುತ್ತಿದ್ದರು. ರಾಹುಲ ಸಾಂಕೃತ್ಸಾಯನರ ಬಗ್ಗೆ ಒಂದಷ್ಟು ಹರಟುತ್ತಲೆ ಸದಾ ನನ್ನನ್ನು ನಗಿಸುವ ಸಲುವಾಗಿ ತಾನು ಸಂಗ್ರಹಿಸಿದ ಗ್ರಂಥರಾಶಿಯನ್ನೆಲ್ಲ ನೇಪಾಳದಿಂದ ಕತ್ತೆಗಳಿಗೆ ಹೇರಿಕೊಂಡು ಬರುತ್ತಾನಯ್ಯ! ಎಂದು ಆಗಾಗ ಹಾಸ್ಯದ ಚಟಾಕಿಯನ್ನು ಹಾರಿಸುತ್ತಿದ್ದುದುಂಟು.

ಆನಂತರದಲ್ಲಿ ದೇವಿಪ್ರಸಾದ್ ಚಟ್ಟೋಪಾಧ್ಯಾಯರ ತತ್ತ್ವಶಾಸ್ತ್ರ ಚರಿತ್ರೆಯ ಪುಸ್ತಕವೊಂದನ್ನು ಕೈಗೆತ್ತಿಕೊಂಡು ಅನುವಾದಿಸಿ ಅದು ಮುಕ್ತಾಯದ ಹಂತದಲ್ಲಿದೆ ಎಂದಿದ್ದನ್ನು ಕೇಳಿದ್ದೆ. ಆದರೆ ನನಗೆ ಇನ್ನೂ ಹೆಚ್ಚಿನ ಆಸಕ್ತಿ ಇದ್ದದ್ದು ದೇವಿಪ್ರಸಾದರಿಗೆ ಮಾರ್ಗದರ್ಶಕರಾಗಿದ್ದ ಸುರೇಂದ್ರನಾಥ್ ದಾಸಗುಪ್ತರ ಬಗ್ಗೆ. ಈ ಇಬ್ಬರಲ್ಲಿ ಯಾರು ಜೀನಿಯಸ್ ಎಂದು ನಾವಿಬ್ಬರು ಮಾತನಾಡಿಕೊಳ್ಳುತ್ತಿದ್ದಾಗ ನನ್ನ ಗಮನವು ದಾಸ್‌ಗುಪ್ತರ ಕಡೆಗೆ ವಾಲುತ್ತಿತ್ತು. ಹಾಗಾಗಿಯೇ ಸುರೇಂದ್ರನಾಥ ದಾಸಗುಪ್ತರ ಇಂಡಿಯನ್ ಫಿಲಾಸಫಿಯ ಮೂರು ಸಂಪುಟಗಳನ್ನು ಅನುವಾದ ಮಾಡುವಂತೆ ಅವರನ್ನು ತಾಕೀತು ಮಾಡುತ್ತಿದ್ದೆ. ಆದರೆ ಅವರ ನಿರ್ಧಾರವು ಅಂತಿಮವಾಗಿ ದೇವಿಪ್ರಸಾದರ ಕಡೆಗೆ ಹರಿಯುತ್ತಿತ್ತು. ಒಮ್ಮೆ ಆತ್ಮೀಯರೊಂದಿಗೆ ಗುಲ್ಬರ್ಗಾ ಸಿಟಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅದಕ್ಕೆ ಪ್ರತಿಯಾಗಿ ಪ್ಲೇಟೋ ಅರಿಸ್ಟಾಟಲರ ಪ್ರಮೇಯವೊಂದನ್ನು ಹೇಳಿದ್ದೂ ಇದೆ.

ಆನಂದ ಕುಮಾರಸ್ವಾಮಿಯವರ ಪ್ರಸ್ತಾಪವೂ ಆಗಾಗ ನಮ್ಮಿಬ್ಬರ ನಡುವೆ ಆಗುತ್ತಿತ್ತು. ಹತ್ತು ವರ್ಷಕ್ಕೂ ಮುನ್ನ ಅಂದರೆ ಸರಿಸುಮಾರು ೨೦೧೧ರ ಹೊತ್ತಿಗೆ ತಾವು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಎರಡು ಕಂತುಗಳಲ್ಲಿ ಅನುವಾದಿಸಿ ಪ್ರಕಟಿಸಿದ ‘ಆನಂದ ಕುಮಾರಸ್ವಾಮಿ ಇಲ್ಲದ ಚಿದಂಬರಂ’ ಎಂಬ ಲೇಖನದ ಬಗ್ಗೆಯೂ ನನ್ನೊಡನೆ ಹೇಳಿದ್ದರು. ನಾನದನ್ನು ಓದಬೇಕೆಂದು ಕೇಳಿದ್ದೆ. ಆದರೆ ಅದರ ಅಸ್ತಿತ್ವ ಅವರ ಬಳಿ ಉಳಿದಿರಲಿಲ್ಲ.

ಒಮ್ಮೆ ಅಚನಕ್ಕಾಗಿ ಮದ್ರಾಸ್ ಮೂಲದ ವಿದ್ವಾಂಸ ಪಿ.ಲಕ್ಷ್ಮೀನರಸು ಅವರ ಪ್ರಸ್ತಾಪವು ನನಗೆ ಅವರಿಂದಲೇ ಆದದ್ದು, ಲೇಖಕ ಲಕ್ಷ್ಮೀನರಸು ಅವರ ಪ್ರಸಿದ್ಧ ಕೃತಿ ‘ಎಸೆನ್ಸ್ ಆಫ್ ಬುದ್ಧಿಸಮ್'(ಬುದ್ಧಧರ್ಮಸಾರ)ನ ಪ್ರಸ್ತಾಪವಾಗಿ ಅವರ ಬಗೆಗೆ ಇನ್ನಷ್ಟು ಕಾತರ, ಕುತೂಹಲಗಳನ್ನು ಮೂಡಿಸಿದ್ದವು. ಅಂಬೇಡ್ಕರ್ ಅವರಿಗೆ ಬುದ್ಧಿಸಮ್ ಬಗೆಗೆ ಯಾವುದೇ ಸಮಸ್ಯೆ, ಪ್ರಶ್ನೆಗಳು ಹುಡುಕಾಟಗಳು ಬಂದಾಗ ಅವರು ನೇರವಾಗಿ ಬಂದುಳಿಯುತ್ತಿದ್ದುದು ಮದ್ರಾಸಿನ ಲಕ್ಷ್ಮೀನರಸು ಅವರ ಮನೆಯಲ್ಲಿ ಎಂಬುದು ನನಗೆ ಅವರಿಂದಲೆ ತಿಳಿದುಬಂದಿತ್ತು. ಅಂಬೇಡ್ಕರ್ ಅವರನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದ ಭಾರತದ ಏಕೈಕ ವಿದ್ವಾಂಸನೆಂದರೆ ಅದು ಲಕ್ಷ್ಮೀನರಸು ಮಾತ್ರ! ಎಂಬುದನ್ನು ನನಗೆ ಮನದಟ್ಟು ಮಾಡಿದ್ದು ಅವರೆ. ಅದನ್ನು ಕೇಳಿ ಪಿ.ಲಕ್ಷ್ಮೀನರಸು ಅವರ ಮೇಲೆ ನನ್ನಲ್ಲಿ ಇನ್ನಿಲ್ಲದ ಆಸಕ್ತಿಯೊಂದು ಮೂಡಿತ್ತು. ಲಕ್ಷ್ಮೀನರಸು ಅವರ ಬಳಿ ಬುದ್ಧಧರ್ಮದ ಬಗೆಗಿನ ಯಾವುದೇ ಪ್ರಶ್ನೆಗಳು ಬಂದರೂ ಅದಕ್ಕೆ ಪ್ರತಿಯಾಗಿ ‘ಲುಕ್ ಆಟ್ ಅಂಬೇಡ್ಕರ್’ ಎಂದು ಅಷ್ಟೇ ಗಾಂಭೀರ್ಯವಾಗಿ ಅವರು ನುಡಿಯುತ್ತಿದ್ದ ಬಗೆ ಕವಿ ಲಕ್ಕೂರರ ಸಾಭಿನಯವಾದ ಮಾತುಗಳಿಂದ ನನಗೆ ಅರ್ಥವಾಗುತ್ತಿತ್ತು.

ಪಿ.ಲಕ್ಷ್ಮೀನರಸು ಅವರ ಆ ಪುಸ್ತಕ ಪ್ರಕಟವಾದದ್ದು ಕಳೆದ ಶತಮಾನದ ಮೊದಲ ದಶಕದಲ್ಲಿಯೇ ಎಂದು ಹೇಳಬೇಕು. ಆ ಪುಸ್ತಕವು ಮತ್ತೆ ೧೯೪೮ರಲ್ಲಿ ಮತ್ತೆ ಮೂರನೇ ಪುನರ್ಮುದ್ರಣವಾಗುವಾಗ ಅದಕ್ಕೆ ಅಂಬೇಡ್ಕರರ ಮುನ್ನುಡಿ ಸೇರಿದೆ. ಆ ಪುಸ್ತಕವನ್ನು ಪರಿಶೀಲಿಸಿದ ತರುವಾಯ ಅದು ನನಗೆ ತಿಳಿದುಬಂತು. ಈ ಸಂಗತಿಗಳನ್ನು ನನಗೆ ಅವರು ಪ್ರಸ್ತುತಪಡಿಸಿದ ಬಳಿಕ ನಾನು ಆಗಾಗ ಅವರನ್ನು ಮೇಲಿಂದ ಮೇಲೆ ಅವರ ಬಗ್ಗೆ ಮತ್ತು ಅವರು ಬರೆದ ಆ ಪುಸ್ತಕದ ಬಗೆಗೆ ಕೇಳುತ್ತಲೆ ಬಂದಿದ್ದೆ. ಎಷ್ಟೋ ಸಲ ಆ ವಿದ್ವಾಂಸರ ಹೆಸರೂ ಮರೆತುಹೋಗುತ್ತಿತ್ತು. ಜ್ಞಾಪಕಕ್ಕೆ ತಂದುಕೊಳ್ಳಲು ಒಮ್ಮೆ ತೀವ್ರವಾಗಿ ಹೆಣಗಾಡಿ ಅದು ಸಾಧ್ಯವಾಗದೇ ನೇರವಾಗಿ ಅವರಿಗೆ ಪುಟ್ಟದೊಂದು ಕರೆಮಾಡಿ ತಿಳಿದುಕೊಂಡಿದ್ದೆ. ಒಮ್ಮೆ ಗುಲ್ಬರ್ಗಾಕ್ಕೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ಕುರಿತು ವಿಚಾರಿಸಿದಾಗ ಮುಂದಿನ ಪುಸ್ತಕದ ಅನುವಾದದ ಸಲುವಾಗಿ ಕೊಂಚ ಮಾತನಾಡಿ ನಿನ್ನ ಆಸಕ್ತಿಯನ್ನು ಪರಿಗಣಿಸಿ ಆ ಪುಸ್ತಕವನ್ನೇ ನಾನು ಮುಂದಿನ ಅನುವಾದಕ್ಕೆ ಆಯ್ದುಕೊಂಡಿರುವೆ ಎಂದು ಅಂದೆ ನಿರ್ಧರಿಸಿ ಹೇಳಿದ್ದು ನನ್ನ ಸಂತಸವನ್ನು ಮತ್ತಷ್ಟು ಹಿಮ್ಮಡಿಗೊಳಿಸಿತ್ತು. ಅದರಂತೆ ಆ ಪುಸ್ತಕವನ್ನು ಅನುವಾದಿಸಿದ ಬಳಿಕ ಪ್ರಕಟಣೆಗೆ ಹೋಗುವ ಸಂದರ್ಭದಲ್ಲಿ ಇದಕ್ಕೊಂದು ಮುನ್ನುಡಿಯ ಅಗತ್ಯವಿದೆಯೆಂದು ಹೇಳಿ ಪ್ರಸ್ತುತ ಕನ್ನಡ ನಾಡಿನಲ್ಲಿ ಯಾರು ಇದಕ್ಕೆ ಅಂತಹ ಸೂಕ್ತ ವಿದ್ವಾಂಸರು? ಎಂಬುದರ ಬಗೆಗಿನ ನಮ್ಮಿಬ್ಬರ ಹುಡುಕಾಟ ಆ ಒಂದು ರಾತ್ರಿ ಊಟವಾದ ಬಳಿಕ ನಡೆದಿತ್ತು. ಅದು ಹೇಗೋ ಒಂದು ನಿರ್ಣಾಯಕ ಹಂತವನ್ನು ಮರುದಿನ ತಲುಪಿತೆಂದು ಯಾರೊಂದಿಗೋ ಅವರು ನಡೆಸುತ್ತಿದ್ದ ಫೋನ್ ಕರೆಯ ಸಂಭಾಷಣೆಯಿಂದ ನನಗೆ ಅದು ತಿಳಿದುಬಂದಿತ್ತು.

ನಂತರದಲ್ಲಿ ಎಷ್ಟೋ ದಿನಗಳು ಕಳೆದ ಬಳಿಕ ‘ಅಂಬೇಡ್ಕರ್ ಕಂಡ ಭಾರತ’ ಎಂಬ ಪುಸ್ತಕವನ್ನು ಪರಿಶೀಲಿಸುವಂತೆ ಅದರ ಹಸ್ತಪ್ರತಿಯನ್ನು ನನ್ನ ರೂಮಿನಲ್ಲಿ ತಂದಿಟ್ಟು ಹೋಗಿದ್ದ ಸಂದರ್ಭವೂ ಉಂಟು. ಆದರೆ ನಾನು ಈ ಪುಸ್ತಕದ ಆರಂಭದ ಒಂದೆರಡು ಹಾಳೆಗಳನ್ನು ತಿರುವಿ ಹಾಕಿ ಇದರಲ್ಲಿ ಪೂಜ್ಯ ಭಾವವೇ ತುಂಬಿ ಹೋಗಿರುವಂತೆ ಕಾಣುತ್ತದೆ ಸ್ವಲ್ಪವೂ ವೈಚಾರಿಕತೆ ಇಲ್ಲವೆಂದು ಅಲ್ಲೆಗಳೆದು ಅಷ್ಟೇನೂ ಆಸಕ್ತಿ ತೋರಿರಲಿಲ್ಲ. ಹಾಗಾಗಿ ಇದರ ಜೆರಾಕ್ಸ್ ಪ್ರತಿಯೊಂದು ಸುಮಾರು ಆರು ತಿಂಗಳ ಕಾಲ ನನ್ನ ರೂಮಿನಲ್ಲಿದ್ದ ಅನೇಕ ಪುಸ್ತಕಗಳ ಜೊತೆ ಹಾಗೆಯೇ ಉಳಿದಿತ್ತು. ಅನ್ಯ ಕೆಲಸಗಳ ಒತ್ತಡದಲ್ಲಿ ಆ ಪುಸ್ತಕವನ್ನು ನೋಡಲಾಗಿರಲಿಲ್ಲ. ಆದರೆ ಆ ಪುಸ್ತಕದ ಹಸ್ತಪ್ರತಿಯನ್ನು ಅವರಿಗೆ ಆ ಬಳಿಕ ಮರಳಿಸಿದ ಕೆಲದಿನಗಳ ಬಳಿಕ ಆ ಪುಸ್ತಕದ ಬಗೆಗೆ ನನ್ನ ಗಮನಹರಿದಿತ್ತಷ್ಟೆ. ಆದರೆ ಆ ಪುಸ್ತಕವನ್ನು ಕೊಡಿ ನೋಡುವೆ ಎನ್ನುವಲ್ಲಿ ಇಬ್ಬರ ಮುಖಾಮುಖಿಯ ಸಂದರ್ಭವೊಂದು ಮುಂದೆ ಎದುರಾದದ್ದು ಇಲ್ಲ. ಇತ್ತೀಚೆಗೆ ಅದು ಪ್ರಕಟವಾಗಿರುವುದರ ಸುಳಿವು ದೊರೆತು ಸಂತಸವಾಯಿತು.

ನಮ್ಮ ಇತರ ಯಾವುದೇ ಸಾಹಿತ್ಯಕ ಚರ್ಚೆಗಳು ನಮ್ಮಿಬ್ಬರ ನಡುವೆ ಬಂದಾಗ ಅಲ್ಲಿ ಕಿ.ರಂ., ಡಿ.ಆರ್., ರಾಮಯ್ಯ. ಸಿದ್ದಲಿಂಗಯ್ಯ, ಮಹಾದೇವ, ನರಹಳ್ಳಿ, ಕಂಬಾರ, ಅಗ್ರಹಾರ, ಹುಳಿಯಾರ್, ಡೊಮಿನಿಕ್, ಬಂಜಗೆರೆ, ನಾಗಾಭರಣ, ಲಂಕೇಶ್, ಕಲಬುರ್ಗಿ, ಚೆನ್ನಣ್ಣ ವಾಲೀಕಾರ್, ಶೆಟ್ಟರ್, ತಿರುಮಲೇಶ್, ಚೊಕ್ಕಾಡಿ, ಪಟ್ಟಣಶೆಟ್ಟಿ, ಸಿವಾರೆಡ್ಡಿ, ವರವರರಾವ್, ಗೋರಂಟಿ ವೆಂಕಣ್ಣ, ಕತ್ತಿ ಪದ್ಮಾರಾವ್, ಮುಂತಾದವರು ರಸ್ತೆಯ ಎದುರಿನಲ್ಲಿ ಸಿಕ್ಕಿ ಹಿಂದಾಗುತ್ತಿದ್ದರು. ಯುವ ತಲೆಮಾರಿನವರೂ ಏನೂ ಕಡಮೆ ಇದ್ದದ್ದಿಲ್ಲ. ಕಮಲಾದಾಸ್, ಅರುಂಧತಿ ರಾಯ್, ಶಾನ್ಬಾಗ್, ಕಾಯ್ಕಿಣಿ, ಜೋಗಿ, ವಸು, ನೀಹಾ ಮುಂತಾದವರೂ ಅದರ ಬೆನ್ನಲ್ಲೆ ಇಂಬಾಗುತ್ತಿದ್ದರು.

ನಮ್ಮಿಬ್ಬರ ಸಂಭಾಷಣೆಯಲ್ಲಿ ಡಿ.ಆ‌ರ್. ಮತ್ತು ಸೆಂಟ್ರಲ್ ಕಾಲೇಜಿನ ದಿನಗಳ ಆತ್ಮೀಯತೆಯನ್ನು ಆಗಾಗ ಅನುರಣಿಸಿದ್ದುಂಟು. ಡಿ.ಆರ್. ಶಿಮ್ಲಾದ ಶೀತಕ್ಕೆ ಮಂಜುಗಟ್ಟಿ ರಕ್ತಸಂಚಾರಕ್ಕೆ ಕೊರತೆಯುಂಟಾಗಿ ಅನಾರೋಗ್ಯಕ್ಕೆ ತುತ್ತಾದದ್ದು ಮತ್ತು ಅದು ಅವರ ಸಾವಿಗೂ ಕಾರಣವಾದುದರ ಬಗೆಗೆ ಒಂದು ಬಾರಿ ಹಪಾಹಪಿಸಿದ್ದೂ ಇದೆ. ಇಲ್ಲದಿದ್ದಲ್ಲಿ ಅವರು ಕನ್ನಡ ಚಿಂತನೆ ಮತ್ತು ವಿಮರ್ಶಾವಲಯವನ್ನು ಮತ್ತಷ್ಟು ವಿಸ್ತರಿಸುತ್ತಿದ್ದರೆಂದು ನನಗೆ ಆಗಾಗ ಹೇಳುತ್ತಿದ್ದುದುಂಟು. ಅಂತಹ ಕೆಲಸವನ್ನು ಮುಂದೆ ಸುಬ್ಬಣ್ಣ ಮಾಡಿದವರಾದರೂ ಅದು ಡಿ.ಆರ್. ಕ್ರಮದಲ್ಲಿ ಹೆಚ್ಚು ವ್ಯಾಪಿಸಲಿಲ್ಲ ಮತ್ತು ಅದನ್ನು ಅಕ್ಷರ ಮುಂದುವರಿಸುವ ಪ್ರಯತ್ನ ಮಾಡಿದರೂ ಅದು ಅವರಿಂದಲೂ ಅಷ್ಟರಮಟ್ಟಿಗೆ ಸಾಧ್ಯವಾಗಲಿಲ್ಲವೆಂಬ ಬೇಸರದ ದನಿಯೊಂದನ್ನು ನನಗೆ ವ್ಯಕ್ತಪಡಿಸಿದ್ದುಂಟು. ಒಮ್ಮೆ ಅಗ್ರಹಾರ ತನ್ನನ್ನು ನೋಡಿ ಅತ್ತಿದ್ದು ಮತ್ತು ಸಲಹಿದ್ದು ಜೊತೆಗೆ ತನ್ನ ತಂದೆಯ ಕೊನೆಯ ಕ್ಷಣಗಳಲ್ಲಿ ನೆರವಿಗೆ ಬಂದದ್ದನ್ನು ನಮ್ಮ ಕೆಲ ಗೆಳೆಯರ ಗುಂಪಿನಲ್ಲಿ ಹೇಳಿಕೊಂಡದ್ದುಂಟು.

ಒಮ್ಮೆ ಹಾ.ಮಾ.ನಾಯಕರ ಪ್ರಸ್ತಾಪ ಬಂದಾಗಲೂ ಕೂಡ ಹಾ.ಮಾ.ನಾಯಕರು ಇನ್ನೂ ಇರಬೇಕಿತ್ತು ಎಂಬ ವಿಷಾದದ ಪ್ರತಿಕ್ರಿಯೆಯೊಂದು ಬಂದಿತ್ತು. ಬಹಳ ಸಣ್ಣ ವಯಸ್ಸಿನಲ್ಲಿ ಅವರು ತೀರಿಹೋದದ್ದು ಎಂಬ ನನ್ನ ಮಾತೂ ಅದರೊಟ್ಟಿಗೆ ಜೋಡಣೆಯಾಗಿತ್ತು. ಭೈರಪ್ಪನವರ ಸಾಹಿತ್ಯದ ಬಗೆಗೆ ಹರಟುತ್ತ ಕುಳಿತಾಗ ಅವರಿಂದ ಬಂದ ಅಭಿಪ್ರಾಯ ಇದು. ಭೈರಪ್ಪ ದೊಡ್ಡ ಬರೆಹಗಾರ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಪರ್ವದಂತ ಕಾದಂಬರಿ ಅಷ್ಟು ಪುಟಗಳದ್ದಾದರೂ ಅದು ಓದುಗನನ್ನು ಹಿಡಿದು ನಿಲ್ಲಿಸುವ ಬಗೆ ಮತ್ತು ಅದು ಎಲ್ಲಿಯೂ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಅದರ ಜಾಣ್ಮೆಯ ಕುರಿತಾಗಿ ಆ ಬಗೆಗೆ ನಾಲ್ಕು ಮಾತುಗಳನ್ನಾಡಿದ್ದೂ ಇದೆ. ಅಂತಹ ಬರೆವಣಿಗೆಯ ಕಥನ ತಂತ್ರ ಯಾವೊಬ್ಬ ಆಧುನಿಕ ಬರಹಗಾರನಲ್ಲೂ ಕಾಣುವುದು ಬಹಳ ದುಸ್ಥರ ಎಂದು ಹೇಳಿದ್ದು ಅವರ ತಿಳಿವಳಿಕೆಯ ಬಗೆಯೊಂದನ್ನು ನನಗೆ ದರ್ಶನ ಮಾಡಿಸಿತ್ತು.

ಗಾಂಧಿ-ಅಂಬೇಡ್ಕರರ ಬಗೆಗೆ ಸುತ್ತಲ ಪರಿಸರದಲ್ಲಿ ಏನೇ ಕಲಹಗಳು ಎದುರಾದರೂ ಅದಕ್ಕೆ ಅವರ ತಣ್ಣನೆಯ ಪ್ರತಿಕ್ರಿಯೆ ಇದ್ದೇ ಇರುತ್ತಿತ್ತು. ಕಾರ್ಯಕ್ರಮದ ಚರ್ಚೆಯ ಸಂದರ್ಭವೊಂದರಲ್ಲಿ ಆ ಬಗೆಗೆ ಕೆಲ ವಿಷಾದಗಳು ವ್ಯಕ್ತವಾಗಿದ್ದೂ ಉಂಟು. ಅದಕ್ಕೆ ಪ್ರತಿಯಾಗಿ ಆನಂದರ ಪ್ರತಿಮೆಯು ಎದ್ದುಬಂದು ಪೋಡಿಯಂ ಬಳಿ ನಿಂತಿತ್ತು. ಹಾಗೆ ನಿಂತು ಹೊರಡಿಸಿದ ಅಭಿಪ್ರಾಯದಲ್ಲಿ ಅಷ್ಟೇ ಶಕ್ತಿಯುತವಾಗಿ ಆ ಎರಡೂ ಶಕ್ತಿಗಳನ್ನು ಒಟ್ಟಿಗೆ ಬೆಸೆಯುವ ಪ್ರಯತ್ನವನ್ನು ಮಾಡಬಲ್ಲವಾಗಿದ್ದವೇ ಹೊರತಾಗಿ ಅವೆರಡೂ ವಿರುದ್ಧ ದಿಕ್ಕಿನ ಚಂಡಮಾರುತಗಳೆಂದು ಅವರೆಂದೂ ಭಾವಿಸಿದ ಬಗೆ ನನಗೆ ತಿಳಿದಿಲ್ಲ. ಹಾಗಾಗಿಯೇ ಅವರು ಅಂದು ಚಿಂತಕರೊಬ್ಬರ ಉಪನ್ಯಾಸದ ಬಳಿಕ ಚರ್ಚೆಯ ಸಂದರ್ಭಕ್ಕೆ ಪ್ರತಿಯಾಗಿ ಈ ಮಾತುಗಳನ್ನಾಡಿದ್ದರು. “ಗಾಂಧಿ-ಅಂಬೇಡ್ಕರ್ ಅವರ ದಾರಿಗಳು ಬೇರೆ ಬೇರೆಯಾದರೂ ಗುರಿ ಮಾತ್ರ ಒಂದೇ” ಆಗಿದ್ದವೆಂಬ ತಿಳಿವಳಿಕೆಯೊಂದನ್ನು ಪೋಡಿಯಂನ ಬಳಿ ನಿಂತು ಸಾರಿದ ಬಗೆ ನನಗೆ ತಥಾಗತನ ಪ್ರಮೇಯವನ್ನೇ ಹೇಳಿದಂತಿತ್ತು.

ಆನಂದರನ್ನು ನೋಡಿದಾಗಲೆಲ್ಲ ನನಗೆ ಮೂರು ಆಕೃತಿಗಳ ನೇರ ದರ್ಶನಗಳಾಗುತ್ತಿದ್ದವು. ಒಂದು ಗಾಂಧಿಯ ಶಾಂತತೆಯ ಮುಖಭಾವದ್ದಾದರೆ ಸಣ್ಣವರೊಡನೆ ಹರಟುತ್ತ ಕುಳಿತಾಗ ಅವರನ್ನೆಲ್ಲ ಸಂತೈಸಿ ಮಾತಾಡುವಾಗ ಥೇಟ್ ಕಾರಂತರದೇ ಹೋಲಿಕೆ ನನಗೆ ಎದ್ದು ಕಾಣುತಿತ್ತು. ಇನ್ನೊಂದು ಕಡೆಯಿಂದ ನಡೆದುಬರುವಾಗಿನ ದೃಶ್ಯವನ್ನು ನೋಡುವಾಗ ಯಾವುದೋ ಪುರಾತನ ಕಾಲದ ಮಹಾಮುನಿಯೇ ನಡೆದುಬರುವಂತೆ ಕಾಣುತ್ತಿತ್ತು. ಈ ಎಲ್ಲ ವ್ಯಕ್ತಿಯ ವ್ಯಕ್ತಿತ್ವದ ಚಹರೆಯಿಂದ ರೂಪುಗೊಂಡ ವ್ಯಕ್ತಿ ಮತ್ತು ವ್ಯಕ್ತಿತ್ವ ಪ್ರಿಯ ಕವಿ ಲಕ್ಕೂರು ಆನಂದರದು. ಇನ್ನೊಂದು ನೋಟದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಅವ್ಯಾವುವೂ ಇಲ್ಲದಂತೆ ಶುದ್ಧ ಹದಿಯರೆಯದ ಹುಡುಗನ ಹಾಗೆಯೂ ಹಳ್ಳಿಯ ಗಮಾರನಂತೆಯೂ ಸಾದಾ ಸೀದವೆಂಬಂತೆ ಸಾಮಾನ್ಯ ನೋಟವೊಂದರಲ್ಲಿ ದಕ್ಕುತ್ತಿತ್ತು. ಇವ್ಯಾವುವೂ ಕಾಣದ ಹೊತ್ತಿನಲ್ಲಿ ನನ್ನೊಂದಿಗೆ ತರಳೆ ಮಾಡುತ್ತ ಪೋಲಿ ಯುವಕನಂತೆಯೂ ನನಗೆ ಕಂಡಿದ್ದೂ ಇದೆ. ಈ ಎಲ್ಲ ಹಿನ್ನೆಲೆಯಿಂದ ಪ್ರಿಯ ಆನಂದರು ಮತ್ತು ನನ್ನ ಸ್ನೇಹವು ಏಕವಚನದ ಸಲಿಗೆಯಿಂದಲೂ ಒಮ್ಮೊಮ್ಮೆ ಗೌರವದ ಅಂತರ್ಯ್ಯದಿಂದಲೂ ಕೂಡಿದ ಒಡನಾಟವೊಂದರಲ್ಲಿ ಬೆರೆತುಹೋಗಿತ್ತು.

ಎರಡು ವಾರಗಳಿಗೊಮ್ಮೆಯಾದರೂ ನಾನು ಗುಲ್ಬರ್ಗಾಕ್ಕೆ ಹೋಗುವಾಗ ಒಂದೆರಡು ಬಾರಿ ನನ್ನೊಡನೆ ಅವರು ಬಂದದ್ದುಂಟು ಮತ್ತು ಒಮ್ಮೆ ಅಶಿಸ್ತಿನಿಂದ ನಡೆದುಕೊಂಡು ಬೇಸರ ತರಿಸಿದ್ದೂ ಇದೆ. ಆದರೂ ಕೊನೆಗೊಮ್ಮೆ ಅವರ ಅವಸ್ಥೆಯನ್ನು ನೋಡಿ ಸುಮ್ಮನೆ ನಕ್ಕು ಮರಳಿದ್ದೂ ಇದೆ. ಕಳೆದ ವರ್ಷದ ಹಿಂದೆ ಜೇಮ್ಸ್ ಕ್ಯಾಮರೆನ್ ತಯಾರಿಸಿ ಬಿಡುಗಡೆಗೊಳಿಸಿದ ಸಿನೆಮಾವನ್ನು ನೋಡಲೇಬೇಕಾದ ಸಿನೆಮಾ ಅದು ಎಂದು ಹೇಳಿ ನಾನೇ ಅವರನ್ನು ಒಂದು ಭಾನುವಾರ ಗುಲ್ಬರ್ಗಾಕ್ಕೆ ಕರೆದುಕೊಂಡು ಹೋಗಿದ್ದೆ. ಇಬ್ಬರೂ ಆ ಸಿನೆಮಾವನ್ನು ನೋಡಿ ಅಚ್ಚರಿಯೊಂದಿಗೆ ಮರಳಿದ್ದೆವು. ಹೊರಗಡೆ ಟೀ ಕುಡಿಯಲೋ ಊಟ ಮಾಡಲೋ ಅಥವ ಇನ್ಯಾವುದೋ ಕೆಲಸದ ನಿಮಿತ್ತ ಇಬ್ಬರೂ ಒಟ್ಟಿಗೆ ಹೋದಾಗ ಅಲ್ಲಿ ಯಾರಾದರೂ ಪರಿಚಯಸ್ಥರು ಬಂದು ಅವರನ್ನು ಸಮೀಪಿಸಿದಾಗ ‘ನೋಡಿ ಇವರು ನಮ್ಮ ಗುರುಗಳು’ ಎಂದು ನನ್ನನ್ನು ಕೆಲವೊಮ್ಮೆ ಪರಿಚಯಿಸಿದ ಉದಾಹರಣೆಗಳೂ ಉಂಟು. ಅದು ಏನೇ ಇರಲಿ. ಆದರೆ ಅವರು ನನ್ನೊಂದಿಗೆ ಕಲೆತು ಕಲಿಸಿದ್ದು ಅದನ್ನೂ ಮೀರಿದ್ದು. ಕಳೆದ ವರ್ಷ ಶಿವಮೊಗ್ಗ, ತುಮಕೂರುಗಳಲ್ಲಿ ನಡೆದ ಕಮ್ಮಟ, ವಿಚಾರ ಸಂಕಿರಣಗಳನ್ನು ನಾನು ಮುಗಿಸಿಕೊಂಡು ಗುಲ್ಬರ್ಗಾಕ್ಕೆ ವಾಪಾಸಾಗಿ ವಿ.ವಿ. ತಲುಪಿದ ಮರುದಿನವೆ ನನ್ನ ರೂಮಿಗೆ ಬಂದು ನನ್ನೊಂದಿಗೆ ಮಾತನಾಡುತ್ತ ನಿನ್ನನ್ನೊಮ್ಮೆ ಕೋಲಾರದ ಆದಿಮಕ್ಕೆ ಕರೆದುಕೊಂಡು ಹೋಗಿ ಕವಿರಾಜಮಾರ್ಗದ ಮೇಲೆ ಉಪನ್ಯಾಸ ಕೊಡಿಸಬೇಕಯ್ಯ ಎಂದು ಹೇಳಿದ್ದು ಇದನ್ನು ಬರೆಯುತ್ತಿರುವಾಗ ನೆನಪಿಗೆ ಬಂತು.

ಇಷ್ಟಲ್ಲದೆಯೂ ನಮ್ಮಿಬ್ಬರ ನಡುವೆ ಆಗಾಗ ಕೋಪ, ಹುಸಿಮುನಿಸುಗಳು ಇಲ್ಲದಿಲ್ಲ. ಇವುಗಳ ಪರಿಣಾಮವಾಗಿ ಇಬ್ಬರೂ ಒಮ್ಮೊಮ್ಮೆ ಒಂದೆರಡು ತಿಂಗಳವರೆಗೂ ಅದೇ ಭಾವದಲ್ಲಿ ಒಬ್ಬರನ್ನೊಬ್ಬರು ಮಾತನಾಡುತ್ತಿರಲಿಲ್ಲ. ಆದರೆ ಅದು ಹೇಗೋ ಏನೋ ಎನ್ನುವಂತೆ ಅವರೆ ನನ್ನ ಬಳಿ ಬಂದು ತಾವೇ ಮಾತನಾಡಿಸಲು ಮುಂದಾಗುತ್ತಿದ್ದರು. ಆಗ ಅವರ ಮೇಲಿದ್ದ ಎಲ್ಲ ಕೋಪ, ಅಸಹನೆಗಳು ಅಷ್ಟೇ ತಣ್ಣಗೆ ಕಣ್ಮರೆಯಾಗುತ್ತಿದ್ದವು ಮತ್ತು ನಮ್ಮಿಬ್ಬರ ಸ್ನೇಹವೂ ಅಷ್ಟೇ ಗಟ್ಟಿಯಾಗಿಯೂ ಇರುತ್ತಿತ್ತು.

ಹೀಗೆ ಯಾವಾಗಲೂ ಫೋನಿನಲ್ಲಿ ಯಾರೊಂದಿಗಾದರೂ ಸದಾ ಹರಟುತ್ತಲೆ ಇದ್ದು ಸಣ್ಣ ಹುಸಿಮುನಿಸಿನಿಂದ ದೂರಾದ ಕವಿ ಕಳೆದ ಹದಿನೈದು ದಿನಗಳಿಂದ ನನ್ನೊಟ್ಟಿಗೆ ಮುಖಾಮುಖಿಯಾದದ್ದು ತೀರಾ ಕಡಮೆ. ಆದರೆ ಆ ಮುನ್ನ ಅಥವ ಈ ಹದಿನೈದು ದಿನಗಳ ಆರಂಭದ ಒಂದೆರಡು ದಿನ ಗ್ರಂಥಾಲಯದಲ್ಲಿ ನನ್ನ ಅಕ್ಕ ಪಕ್ಕದ ಮೇಜಿನ ಬಳಿ ನಾನು ಕುಳಿತಿರುವಷ್ಟು ಸಮಯದವರೆಗೂ ಕುಳಿತು ತಮ್ಮ ಬರೆವಣಿಗೆ ಕಾಯಕದಲ್ಲಿ ಮಗ್ನವಾಗುತ್ತಿದ್ದರು. ಒಮ್ಮೆ ಕೆಲ ಹುಡುಗರೊಟ್ಟಿಗೆ ಟೀ ಕುಡಿಯಲು ಹೋಗುವಾಗ ಇವರ ಮುಖೇನ ಆ ಹುಡುಗರು ನನ್ನನ್ನು ಕರೆದದ್ದು ಇದೆ. ಆದರೆ ನನ್ನ ರಿಸರ್ಚ್‌ನ ಭಾಗವಾಗಿದ್ದ ಯಾವುದೋ ಬರೆವಣಿಗೆ ಕೆಲಸದ ಮೇಲೆ ತೀವ್ರ ನಿಗಾ ಇಟ್ಟಿದ್ದರಿಂದಾಗಿ ನಾನು ಅವರೊಟ್ಟಿಗೆ ಬರಲು ನಿರಾಕರಿಸಿದೆ. ಬಹುಶಃ ನಾನು ಅವರನ್ನು ಎದುರುಗೊಂಡ ಕೊನೆಕ್ಷಣ ಅಂದರೆ ಅದೇ ಇರಬೇಕು.

ಒಂದು ಸಂಜೆ ನಾನು ಗ್ರಂಥಾಲಯದಿಂದ ರೂಮಿಗೆ ಸ್ವಲ್ಪ ಬೇಗ ಮರಳಿದ್ದೆ. ಆಗ ಅವರು ಗ್ರಂಥಾಲಯದಿಂದ ಕೋಣೆಗೆ ಇನ್ನೂ ಮರಳಿರಲಿಲ್ಲ. ನಾವಿದ್ದ ಮೂರನೆಯ ಅಂತಸ್ತಿನ ಆವರಣದಲ್ಲಿ ಅವರು ತಮ್ಮ ಬಟ್ಟೆಗಳನ್ನು ಹೊಗೆದು ಹಾಸ್ಟೆಲಿನ ಒಳ ಆವರಣದಲ್ಲಿ ಒಣಹಾಕಿದ್ದರು. ಒಣ ಹಾಕಿದ್ದ ಬಟ್ಟೆಗಳು ಮೆಟ್ಟಿಲಿನ ಕೆಳಭಾಗಕ್ಕೆ ಸರಿದು ಬಿದ್ದಿದ್ದವು. ಆ ಬಟ್ಟೆಗಳನ್ನು ನಾನೇ ಎತ್ತಿ ಅವರ ಕೋಣೆಯ ಬಳಿ ಇಟ್ಟು ನನ್ನ ಕೋಣೆ ತಲುಪಿದ್ದೆ. ಮರುದಿನ ಬೆಳಗ್ಗೆಯಿಂದ ಆಮೇಲೆ ಒಂದು ವಾರಗಳ ಅವಧಿಯ ತನಕವೂ ಗ್ರಂಥಾಲಯದಲ್ಲಾಗಲೀ ವಿಭಾಗದಲ್ಲಿಯಾಗಲೀ ಅಥವ ಹಾಸ್ಟೆಲಿನಲ್ಲಾಗಲೀ ಹೊರಗಡೆ ಟೀ ಕುಡಿಯಲೋ ಊಟಕ್ಕೆ ಹೊರಡುವಾಗಿನ ಸಮಯದಲ್ಲಿ ನನಗೆ ಅವರು ಎಲ್ಲೂ ಕಾಣಿಸಿಕೊಂಡದ್ದಿಲ್ಲ. ಹಾಗಾಗಿಯೋ ಏನೋ ಒಂದು ವಾರದವರೆಗೂ ಅವರ ರೂಮಿನ ಕೋಣೆ ತೆರೆಯದೆ ಹಾಗೆಯೇ ಬೀಗ ಹಾಕಿ ಮುಚ್ಚಿತ್ತು(ಆ ಒಂದು ವಾರದವರೆಗೆ ಆಂಧ್ರಪ್ರದೇಶದಲ್ಲಿ ನಡೆದ ಅನುವಾದದ ಕಮ್ಮಟಕ್ಕೆ ಹೋಗಿಬಂದಿದ್ದರೆಂಬ ಮಾಹಿತಿಯು ಯಾರೊಬ್ಬರಿಂದಲೂ ತಿಳಿದಿರಲಿಲ್ಲ. ಪತ್ರಿಕೆಗಳನ್ನು ಗಮನಿಸಿ ತುಂಬಾ ದಿನಗಳೇ ಆದರೂ ಕುತೂಹಲಕ್ಕೆ ಮೊನ್ನೆ(೨೧.೦೫.೨೦೨೪) ಡೆಕನ್ ಹೆರಾಲ್ಡ್ ಪತ್ರಿಕೆಯ ಅಬಿಚ್ಯುರಿ ಕಾಲಮ್ ಅನ್ನು ಗಮನಿಸಿದಾಗ ತಿಳಿಯಿತು. ಅದೇ ದಿನ ಪ್ರಕಟವಾದ ಯಾವೊಂದು ಕನ್ನಡ ಪತ್ರಿಕೆಯಲ್ಲೂ ಈ ಮಾಹಿತಿ ನನಗೆ ದೊರಕಿರಲಿಲ್ಲ).

ಅವರು ಎಲ್ಲಿಗಾದರೂ ದೂರದ ಊರುಗಳಿಗೆ ಹೋಗುವಾಗ ಕೆಲವೊಮ್ಮೆ ನನ್ನೊಂದಿಗೆ ಮುಂಚಿತವಾಗಿ ಹೇಳುತ್ತಿದ್ದರು ಮತ್ತು ಕೆಲವೊಮ್ಮೆ ಹಾಗೆಯೇ ತರಾತುರಿಯಲ್ಲಿ ಹೋಗಿರುತ್ತಿದ್ದರು. ಹೋಗಿ ಬಂದ ಬಳಿಕ ಬೆಂಗಳೂರಿಗೋ ಹೈದರಾಬಾದಿಗೋ ಹೋಗಿದ್ದೆ ಎಂದು ಹೇಳಿ ನನ್ನೊಂದಿಗೆ ಮಾತುಗೂಡಿಸುತ್ತಿದ್ದರು. ಆ ಕುರಿತು ಹೆಚ್ಚು ಪರಿಶೀಲಿಸುವ ಗೋಜಿಗೆ ನಾನು ಹೋಗುತ್ತಿರಲಿಲ್ಲ ಮತ್ತು ನನಗೆ ಆ ಬಗೆಗೆ ಯಾವ ಕುತೂಹಲಗಳೂ ಇರುತ್ತಿರಲಿಲ್ಲ. ಆದರೂ ಹೋಗಿಬಂದರಾ ಓ ಸರಿ ಎಂದು ನಮ್ಮ ಮುಂದಿನ ಮಾತುಕತೆಗಳಿಗೆ ಸಮ್ಮತಿಯನ್ನು ಮಾತ್ರ ಸಾವಧಾನವಾಗಿ ತೋರುತ್ತಿದ್ದೆ. ಜೊತೆಗೆ ಆ ಬಗೆಗೆ ಮುಂಚಿತವಾಗಿ ನಾನು ಕೇಳುತ್ತಲೂ ಇರಲಿಲ್ಲ. ಕಳೆದ ಒಂದು ತಿಂಗಳ ಅವಧಿಯಲ್ಲಿ ಕರೆಮಾಡಿ ನಾನು ವಿಶಾಖಪಟ್ಟಣದಲ್ಲಿದ್ದೇನೆ ಇನ್ನೊಂದು ವಾರ ಮರಳುತ್ತೇನೆಂದು ಹೇಳಿದ್ದರು. ಆಗ ನಾನು ತಾವು ದಿನನಿತ್ಯ ಓಡಾಡಲು ಅನುಕೂಲವಾಗುವಂತೆ ಹಡಗೊಂದನ್ನು ತಯಾರಿಸುವಂತೆ ಆರ್ಡರ್ ಕೊಟ್ಟು ಬರಲು ವಿಶಾಖಪಟ್ಟಣಕ್ಕೆ ನೀವು ಹೋಗಿರುವಿರೋ? ಎಂದು ಅವರನ್ನು ಗೇಲಿ ಮಾಡಿದ್ದೂ ಇದೆ.

ಕಳೆದ ನಾಲೈದು ದಿನಗಳ ಹಿಂದಿನ ಒಂದು ರಾತ್ರಿ ಬೇಸಗೆಯ ಬಿರುಸೆಕೆಗೆ ಬಳಲಿ ಛಾವಣಿಯ ಮೇಲೆ ಮಲಗಿದ್ದು ಸರಿಸುಮಾರು ಮಧ್ಯರಾತ್ರಿಯ ಹೊತ್ತಿನಲ್ಲಿ ಶುರುವಾದ ಗಾಳಿ ಮಿಂಚು ಸಿಡಿಲಿನ ಮಳೆಯ ಅಬ್ಬರಕ್ಕೆ ಸೋತು ಸ್ನೇಹಿತರೊಟ್ಟಿಗೆ ಛಾವಣಿಯನ್ನು ಇಳಿದು ನಮ್ಮ ನಮ್ಮ ಕೋಣೆಗಳಿಗೆ ಮರಳುವಾಗ ನನ್ನ ಪಕ್ಕದ ಆನಂದರ ಕೋಣೆಯು ಆಗಷ್ಟೆ ತೆರೆದು ಒಳಗಿನ ಆಗಳಿಯನ್ನು ಹಾಕಲಾಗಿತ್ತು. ಆದರೆ ಒಳಗಿನ ದೀಪ ಇನ್ನೂ ಆರಿರಲಿಲ್ಲ. ಈ ಮೊದಲ ಒಂದೆರಡು ಗಂಟೆಯ ಹಿಂದೆ ಆ ಮೊದಲು ನಾನು ನನ್ನ ಕೋಣೆಯಿಂದ ಛಾವಣಿಗೆ ಏರುವಾಗ ಆನಂದರ ಕೋಣೆ ಇನ್ನೂ ಹಾಗೆಯೇ ಹೊರ ಅಗಳಿಯನ್ನು ಹಾಕಿ ಬೀಗದಿಂದ ಮುಚ್ಚಿತ್ತು. ಆದರೆ ಛಾವಣಿಯಿಂದ ರೂಮಿಗೆ ಮರಳುವಾಗ ಆಗ ತಾನೇ ಬಂದಿದ್ದ ಅವರನ್ನು ರೂಮಿನ ಬಾಗಿಲನ್ನು ತೆರೆಸಿ ಮಾತನಾಡಿಸುವ ಹೆಬ್ಬಯಕೆಯೂ ಇದ್ದಿತಾದರೂ ಎಲ್ಲೋ ಹೋಗಿದ್ದವರು ಹೀಗಷ್ಟೇ ಪ್ರಯಾಣದಿಂದ ಬಳಲಿ ಕೋಣೆಗೆ ಮರಳಿದ್ದಾರೆಂದು ಮತ್ತು ಏನನ್ನೋ ಬರೆಯುತ್ತ ಏಕಾಂತದಲ್ಲಿ ಮೇಜಿನ ಬಳಿ ಕುಳಿತಿರಬಹುದೆಂದು ಊಹಿಸಿ ಈ ಸಮಯದಲ್ಲಿ ತೊಂದರೆ ಕೊಡುವುದು ಬೇಡವೆಂದು ಸದ್ಯ ಅವರು ವಿಶ್ರಾಂತಿ ಪಡೆಯಲಿ ಎನ್ನುತ್ತಲೆ ಸಾಧ್ಯವಾದಲ್ಲಿ ಬೆಳಗ್ಗೆ ಮಾತನಾಡಿಸುವ! ಎಂದು ನನ್ನ ಕೋಣೆಗೆ ಹೋಗಿ ಮಲಗಿದೆ. ಆದರೆ ಮರುದಿನ ಬೆಳಗ್ಗೆಯೂ ನನಗೆ ಅವರು ಬೇಟಿಯಾದದ್ದಿಲ್ಲ. ಈ ನಡುವೆ ಕೊಂಚ ಬೇಸರವಾದದ್ದೂ ಇದೆ. ಇಂತಹ ಸನ್ನಿವೇಶಗಳಲ್ಲಿ ಅವರನ್ನು ಸರಿಯಾಗಿ ಸಂತೈಯಿಸಲಾಗದ ನನ್ನಲ್ಲಿನ ಕಾಠಿಣ್ಯ ಮನಸ್ಥಿತಿಯೂ ಕೂಡ ಸದಾ ಅಪರಾಧಿ ಮನೋಭಾವವನ್ನೇ ನನ್ನಲ್ಲಿ ಬೆರಳಿಟ್ಟು ತೋರಿದೆ.

ಮೇ ೨೦ರಂದು ಹಾಸ್ಟೆಲ್ ಕಟ್ಟಡದ ಛಾವಣಿಯ ಮೇಲೆ ಮಲಗಿದ್ದವ ಬೆಳಗಿನ ಜಾವ ಐದು ಗಂಟೆಗೆ ಎದ್ದು ಸರಿಸುಮಾರು ಆರರ ತರುವಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರ್ನಾಲ್ಕು ಕಿ.ಮೀ. ದೂರ ವಾಯುವಿಹಾರವನ್ನು ನಡೆಸಿ ಎಂಟರ ವೇಳೆಗೆಲ್ಲ ರೂಮಿಗೆ ಮರಳಿದಾಗ ಸಣ್ಣ ಫೋನ್ ಕಾಲ್‌ನಿಂದ ಸಾವಿನ ಸುದ್ದಿ ತಿಳಿದು ಗಪ್ಪಾಗಿ ಕುಳಿತಿದ್ದೆ. ತದನಂತರದಲ್ಲಿ ಒಂದಿಬ್ಬರು ಸ್ನೇಹಿತರೊಡನೆ ಬೈಕ್ ಹತ್ತಿ ಸ್ಥಳವನ್ನು ತಲುಪಿದೆ. ವಿಶ್ವವಿದ್ಯಾಲಯದ ಆವರಣದಿಂದ ಮೂರು ಕಿ.ಮೀ. ದೂರದ ಕಡಗಂಚಿಯ ಊರ ಹೊರವಲಯದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಎಂದು ಮಾಹಿತಿ ಇತ್ತು. ಅದರಂತೆ ಅಲ್ಲಿಗೆ ಹೋಗಿ ಸುತ್ತಲು ನೋಡಿದಾಗ ಅಂತಹ ಯಾವ ದೃಶ್ಯಾವಳಿಯೂ ನಮಗೆ ಅಲ್ಲಿ ಕಾಣದ್ದರಿಂದಾಗಿ ಕೊಂಚ ಅನುಮಾನವೂ ಬೆನ್ನತ್ತಿತ್ತು. ಆದರೆ ಅರೆಕ್ಷಣ ಪಕ್ಕದಲ್ಲಿಯೇ ನಿಂತಿದ್ದ ಸ್ನೇಹಿತರೊಬ್ಬರು ಹಿಂದೆ ತಿರುಗಿ ನೋಡಿ ಎಂದಾಗಲೆ ಎದುರಿನಲೊಂದು ಮರದ ಕಟ್ಟೆಯ ಬಳಿಯಲ್ಲಿ ಆಕೃತಿ ಕಾಣಹತ್ತಿತು. ಆಕೃತಿಯನ್ನು ಮತ್ತಷ್ಟು ಹತ್ತಿರ ಸಮೀಪಿಸುವಷ್ಟರಲ್ಲಿ ಆ ಆಕೃತಿಯು ಇನ್ನಷ್ಟು ಸ್ಪಷ್ಟವಾಯಿತು. ಮರದ ಕಟ್ಟೆಯಿಂದ ಕಾಲುಗಳನ್ನು

ಕೆಳಚಾಚಿ ಕಟ್ಟೆಯ ಮೇಲ್ಬಾಗಕ್ಕೆ ಮುಖವನ್ನು ಆನಿಸಿ ಅಂಗಾತ ಬಿದ್ದಿದ್ದ ದೃಶ್ಯವನ್ನು ನೋಡಿ ದುಃಖ ಇನ್ನಿಲ್ಲದಂತೆ ಉಮ್ಮಳಿಸಿ ಬಂದಿತ್ತು. ಹಾಗೆ ಮಲಗಿರುವ ದೃಶ್ಯ ತಥಾಗತನ ಮಂದಸ್ಮಿತವನ್ನು ನೆನಪಿಗೆ ತರುವಂತಿತ್ತು. ಅಷ್ಟೊತ್ತಿಗಾಗಲೆ ಮುಖದ ಮೇಲೆ ಸಣ್ಣ ಇರುವೆಗಳು, ನೊಣಗಳು ಓಡಾಡ ಹತ್ತಿದ್ದವು. ಮಲಗಿದ ಆ ದೃಶ್ಯವು ಚಿರಾಯು ಎಂಬಂತೆ ದೀರ್ಘನಿದ್ರೆಗೆ ಜಾರಿದ ಹಾಗೆಯೂ ನನಗೆ ಭಾಸವಾದಂತೆ ತೋರುತ್ತಿತ್ತು.

ಇಬ್ಬರು ಪೀಸಿಗಳು ಕುಳಿತಿದ್ದ ಎದುರಿನ ಮುಂಭಾಗದ ಕಟ್ಟೆಯ ಸಮೀಪ ಸರಿಸುಮಾರು ಒಂಬತ್ತರ ತನಕ ಶರೀರವನ್ನು ಕಾಯುತ್ತ ಕುಳಿತಿದ್ದೆವು. ಆನಂತರದಲ್ಲಿ ದೂರದೂರಿನಿಂದ ಒಬ್ಬೊಬ್ಬರಾಗಿ ಬರತೊಡಗಿದರು. ಆ ನಡುವೆ ಕೆಲ ಫೋನ್ ಕರೆಗಳು ಬಂದವು. ಮಾಹಿತಿ ನೀಡಿದ ಬಳಿಕ ಅವರೂ ಸಮೀಪಿಸಿದರು. ಸರಿಸುಮಾರು ಬೆಳಗಿನ ೧೧:೪೫ರ ತನಕ ಶರೀರವನ್ನು ಸ್ಥಳದಲ್ಲಿಯೇ ಇರಿಸಲಾಗಿತ್ತು. ಈ ನಡುವೆ ಪೋಲಿಸ್ ಸಿಬ್ಬಂದಿಗಳು ಬಂದು ಸ್ಥಳ ತಪಾಸಣೆಯೊಂದಿಗೆ ಮತ್ತಿತರ ಮಾಹಿತಿಗಳನ್ನು ಕಲೆಯಾಕಿದರು. ಆನಂತರದಲ್ಲಿ ಆ್ಯಂಬುಲೆನ್ಸ್ ತರಿಸುವ ಪ್ರಯತ್ನವೂ ಆಯಿತು. ಹೇಗೋ ಆ್ಯಂಬುಲೆನ್ಸ್ ಏರ್ಪಾಟಾದ ತರುವಾಯ ಆದೇ ಆ್ಯಂಬುಲೆನ್ಸಿನಲ್ಲಿ ಶರೀರ ತಪಾಸಣೆ ಮಾಡುವ ಸಲುವಾಗಿ ಗುಲ್ಬರ್ಗಾಕ್ಕೆ ಹೊಯ್ಯಲಾಯಿತು. ಈ ಮಧ್ಯೆ ಆ್ಯಂಬುಲೆನ್ಸ್ ಶರೀರವನ್ನು ಏರಿಸುವ ಮುನ್ನವೆ ಒಮ್ಮೆಯಾದರೂ ಪಾದಗಳನ್ನು ಮುಟ್ಟಿ ನಮಸ್ಕರಿಸುವ ತವಕವೊಂದು ಇದ್ದಿತಾದರೂ ಹಾಗೆ ಶರೀರವನ್ನು ನಾವಾರೂ ಮುಟ್ಟುವ ಪರಿಮಿತಿಯನ್ನು ಹೊಂದಿರಲಿಲ್ಲ. ಹಾಗೆ ಮುಟ್ಟಬಾರದ ಹಾಗೆ ಕವಿಯೇ ಬರೆದುಕೊಂಡಿರುವ ಸಾಲನ್ನು ಆನಂತರದಲ್ಲಿ ಪುಸ್ತಕದಲ್ಲಿ ನೋಡಿ ಅವಕ್ಕಾದೆ.

ಮುಂದೆ ಸ್ಥಳ ತಪಾಸಣೆಯಾದ ಬಳಿಕ ಅವರು ಹುಟ್ಟಿ ಬೆಳೆದ ಊರಾದ ಕೋಲಾರದ ಮಣ್ಣಿಗೆ ಹೊಯ್ಯುವ ಸುದ್ದಿಯೂ ಆ ಮೂಲಕವೆ ತಿಳಿದು ಬಂತು. ಬಳಿಕ ಶರೀರವನ್ನು ಕಳುಹಿಸಿಕೊಟ್ಟ ನಾವೊಂದಿಷ್ಟು ಮಂದಿ ವಿ.ವಿ.ಯ ಕನ್ನಡ ವಿಭಾಗದಲ್ಲಿ ಸರಿಸುಮಾರು ೧೨:೦೦ಗಂಟೆಗೆ ನುಡಿನಮನವನ್ನು ಸಲ್ಲಿಸಿದೆವು. ಅದರಲ್ಲಿ ನಾನೂ ಕೂಡ ಒಂದು ಹದಿನೈದು ನಿಮಿಷಗಳ ಕಾಲ ನನ್ನ ಅವರ ಒಡನಾಟದ ಬಗೆಗೆ ಕೆಲವು ಸಂಗತಿಗಳನ್ನು ಹಂಚಿಕೊಂಡೆ. ಅದರ ವಿಸ್ತ್ರತ ರೂಪವೇ ಈ ಬರಹ.

ಕೆಲದಿನದಿಂದಷ್ಟೆ ಎರಿಕ್ ಫ್ರಾಂನ ‘ಆರ್ಟ್ ಆಫ್ ಲವಿಂಗ್’ ಪುಸ್ತಕದ ಕನ್ನಡ ಅವತರಣಿಕೆಯನ್ನು ಓದುತ್ತಾ ಕುಳಿತಿದ್ದಾಗ ನನ್ನನ್ನು ನೋಡಿದ ಕವಿಯು ‘ಹುಚ್ಚ ಕಣಯ್ಯ’ ಅವನು! ಅವನನ್ನ ಯಾಕಯ್ಯ ಓದ್ತಾ ಇದಿಯಾ? ‘ಹುಚ್ಚ ಬರೆದಿರೋ ಪುಸ್ತಕ ಕಣಯ್ಯ ಅದು’ ಎಂದು ನನ್ನನ್ನು ಗಾಬರಿಗೊಳಿಸಿದ್ದೂ ಇದೆ. ಆಮೇಲೆ ಆ ಪುಸ್ತಕವನ್ನ ಓದುತ್ತ ಓದುತ್ತ ಈ ನಮ್ಮ ಕವಿ ಹೇಳಿದ್ದು ನಿಜವಿರಬಹುದು ಎಂದು ಅನುಮಾನಿಸುತ್ತಲೆ ಓದಿ ಮುಗಿಸಿದ್ದೂ ಮತ್ತು ಕೊಂಚ ನಕ್ಕಿದ್ದೂ ಇದೆ. ಈ ಹಿಂದೆ ಅಲ್ಲಮನ ಬಗೆಗೆ ಮಾತನಾಡುವಾಗಲೂ ಅದೇ ಅಧಿಕೃತವಾದ ಧಾಟಿ. ಆ ಬಗೆಗೆ ಕನ್ನಡದಲ್ಲಿ ಅಲ್ಲಮನನ್ನು ಹೆಚ್ಚು ಓದಿದ್ದವರು ಯಾರು? ಎಂದು ನನ್ನನ್ನು ಕೇಳಿದ್ದುಂಟು. ಅದಕ್ಕೆ ನನ್ನಲ್ಲಿ ಉತ್ತರವಾಗಿ ಎಲ್.ಬಿ. ಭೂಸನೂರಮಠ, ಸಿದ್ದಯ್ಯ ಪುರಾಣಿಕ, ಡಿ.ಆರ್. ಮುಂತಾದವರ ಪಟ್ಟಿ ಇತ್ತಾದರೂ ಕೆ.ಬಿ.ಸಿದ್ದಯ್ಯ ಬಗೆಗೆ ನನಗೆ ಅಷ್ಟಾಗಿ ತಿಳಿದಿರಲಿಲ್ಲ. ಅದು ತಿಳಿದದ್ದು ಕವಿಯ ಮೂಲಕವೆ.

ದಾಸ್ತೋವಸ್ಕಿ ಸಿಗರೇಟು ಸೇದುತ್ತಿದ್ದನೆಂದ ಮಾತ್ರಕ್ಕೆ ಆತನನ್ನು ದೊಡ್ಡ ಬರಹಗಾರನಲ್ಲವೆಂದು ಹೇಳಲಾಗದು. ಅಂತೆಯೇ ಕುದುರೆ ಜೂಜನ್ನು ಕಟ್ಟುತ್ತಿದ್ದನೆಂದ ಮಾತ್ರಕ್ಕೆ ಟಾಲ್ ಸ್ಟಾಯ್ ನನ್ನು ತುಚ್ಛ ಬರಹಗಾರನೆಂದು ಹೇಳಲಾಗುವುದಿಲ್ಲ. ಅದರಂತೆ ಅವರನ್ನು ಯಾರೂ ಓದದೆ ಚರಿತ್ರೆಯಲ್ಲಿ ಕೈಬಿಟ್ಟಿದ್ದಿಲ್ಲ. ಓದದೆ ಇದ್ದರೆ ಖಂಡಿತವಾಗಿ ಅದು ಟಾಲ್ಸ್ ಟಾಯ್ ಗೆ ಮಾತ್ರ ನಷ್ಟವನ್ನು ಭರಿಸುವುದಿಲ್ಲ. ಪ್ರಾನ್ಸ್ ಕುಡುಕರ ದೇಶ ಎಂದ ಮಾತ್ರಕ್ಕೆ ಸಾರ್ತೃನಂತ ಮಹಾನುಭಾವನನ್ನು ಅಂಚಿಗೆ ಸರಿಸಲಾಗದು. ಆತನನ್ನು ನಾನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಬಗೆಯೂ ಆ ಬಗೆಯದ್ದೆ. ಅಂದಮಾತ್ರಕ್ಕೆ ಕುಡುಕರನ್ನೂ ಸಿಗರೇಟು ಸೇದುವವರನ್ನೂ ಕುದುರೆ ಜೂಜು ಕಟ್ಟುವವರನ್ನೂ ಹಾದರ ಮಾಡುವವರನ್ನೂ ಸಮರ್ಥಿಸುವ ಸಲುವಾಗಿಯೂ ಈ ಸಾಲುಗಳನ್ನು ಬರೆಯುತ್ತಿಲ್ಲ. ಹಾಗಿದ್ದ ಮೇಲೆ ಅಂತಹ ವಾಕ್ಯಗಳನ್ನು ಯಾಕಾದರೂ ಬರೆಯಬೇಕು ಎಂದು ಕೇಳಬಹುದು. ಇರಲಿ. ಅದು ಬೇರೆ ದಿಕ್ಕಿನ ನಡಿಗೆ. ಕವಿ ನನ್ನೊಡನೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಸಾರ್ತೃ ಏನನ್ನು ಹೇಳಲು ಹೊರಟಿದ್ದನೋ ಅದು ಜನರಿಗೆ ಅಷ್ಟು ಬೇಗ ಅರ್ಥವಾಗುವಂತಿರಲಿಲ್ಲ ಮತ್ತು ಅದು ಅವನ ಬರೆವಣಿಗೆಯ ದೌರ್ಬಲ್ಯವೋ ಅಥವ ಜನರ ಗ್ರಹಿಕೆಯಲ್ಲಿನ ಹಿನ್ನಡೆಯೋ ಹೇಳುವುದು ಬಲುಕಷ್ಟ ಎಂದು ಆತನನ್ನು ಪ್ರಸ್ತಾಪಿಸಿ ಆಗಾಗ್ಗೆ ನನ್ನೊಡನೆ ಅವರು ಹೇಳುತ್ತಿದ್ದುದುಂಟು.

ಅದು ಏನೇ ಇರಲಿ. ನಮ್ಮ ಯಾವ ವ್ಯಸನಗಳೂ ಮತ್ತೊಬ್ಬರಿಗೆ ಅರ್ಥಾತ್ ಪ್ರೀತಿ ಪಾತ್ರರಿಗೆ ದುಃಖವನ್ನು ತಂದುಕೊಡದಂತೆ ಇರಲಿ ಎಂದಷ್ಟೆ ಹೇಳುವುದು ಒಂದಾದರೆ ಹಾಗೆ ಮತ್ತೊಬ್ಬರಿಗೆ ಆ ದುಃಖವನ್ನು ತಾರದೆಯೂ ತನಗೆ ಮಾತ್ರ ತಂದುಕೊಳ್ಳುವ ದುಃಖವೂ ಕೂಡ ಅಷ್ಟೇ ಘೋರವಾದದ್ದು ಎಂದಷ್ಟೆ ಹೇಳಬಯಸುತ್ತೇನೆ. ಆದರೂ ಸಮುದಾಯದಲ್ಲಿ ಬೆರೆತ ವ್ಯಕ್ತಿಯಲ್ಲಾಗಲೀ ಆ ಸಮುದಾಯದಲ್ಲಿಯಾಗಲೀ ತಾನು ಎನ್ನುವುದಾಗಲಿ ಮತ್ತು ಬೇರೆ ಎನ್ನುವುದಾಗಲೀ ಅಲ್ಲಿ ಉಳಿದಿರುವುದಿಲ್ಲ. ಕವಿ ಲಕ್ಕೂರರ ಸಾವು ಆ ರೀತಿಯದ್ದು. ಅದರಂತೆ ಸಾರ್ವತ್ರಿಕ ಶೋಕವೆಂಬುದು ಕೂಡ ಆ ಬಗೆಯದ್ದೆ ಎಂದು ನಾನು ತಿಳಿದಿದ್ದೇನೆ.

ಹಾಗಾಗಿಯೇ ಬುದ್ಧನು ಆನಂದರಂತಹ ನೂರಾರು ಶಿಷ್ಯರಿಗೆ ಬೋಧಿಸಿದ ದುಃಖ ನಿವಾರಣೆಯ ತತ್ತ್ವವಾದರೂ ಯಾವುದು? ಮತ್ತು ಎಂತಹದು? ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆಯೆಂದು ಇದನ್ನು ಬರೆಯುತ್ತಿರುವಾಗ ಅನ್ನಿಸಿದ್ದೂ ಇದೆ.

ಎಲ್ಲ ಬರಹಗಾರರೂ ಸುಳ್ಳನ್ನೇ ಹೇಳುತ್ತಾರಯ್ಯ! ಎಂದು ಒಮ್ಮೆ ನನ್ನನ್ನು ದಿಗ್ಭ್ರಾಂತನನ್ನಾಗಿಸಿದ್ದೂ ಇದೆ. ಆದರೆ ಇದಕ್ಕೆ ಪ್ರತಿಯಾಗಿ ಹಾಗೆ ಎಲ್ಲ ಬರಹಗಾರರೂ ಸುಳ್ಳನ್ನೇ ಹೇಳುವುದಾದರೆ ಆ ಎಲ್ಲ ಬರಹಗಾರರನ್ನು ಯಾಕೆ ಓದಬೇಕು? ಮತ್ತು ಓದಲಾಗುತ್ತದೆ? ಹಾಗೆ ಓದಿದ ಎಲ್ಲ ಬರಹಗಳೂ ಸುಳ್ಳೆ ಅದಲ್ಲಿ ಯಾಕಾಗಿ ಅಂತಹ ಬರಹವನ್ನು ಓದಬೇಕು? ಎಂದೆಲ್ಲ ಪ್ರಶ್ನೆಗಳು ನನ್ನಲ್ಲಿ ಮರುಕಳಿಹಿಸಿದ್ದೂ ಇದೆ.

ನನ್ನ ಬರೆವಣಿಗೆಯ ಕುರಿತಂತೆ ಕೊಂಚ ಮಾತನಾಡುವಾಗಲೂ ಕವಿ ನನಗೆ ಜರಾತೂಸ್ತ್ರನೇ ಸರಿ. ನೀನು ಬರೆದ ಬರಹ ನಿನಗೆ ಬೇಕಾಗಿಲ್ಲದಿರಬಹುದು. ಆ ಕಾರಣವಾಗಿ ನೀನು ಬರೆದ ಬರೆಹವನ್ನು ಪ್ರಕಟಿಸದೆ ಇರಬಹುದು. ಆದರೆ ನಿನ್ನ ಬರೆಹ ಜನರಿಗೆ ಬೇಕಿದೆ ಮತ್ತು ಬೇಕು. ಆ ಕಾರಣದಿಂದಾದರೂ ನೀನು ಬರೆಯಬೇಕೆಂದು ನನ್ನನ್ನು ಒತ್ತಾಯಿಸಿದ್ದೂ ಇದೇ. ಹಾಗಾಗಿ ನೀಷೆ ತನ್ನ ಕೃತಿಯೊಂದಕ್ಕೆ ಬೈಬಲ್‌ನಿಂದ ಎಳೆದು ತಂದ ಜರಾತೂಸ್ತ್ರನ ಹಾಗೆ ಕವಿ ನನ್ನನ್ನು ಈ ಬರೆಹಕ್ಕೆ ಎಳೆದು ತಂದಿದ್ದಾನೆ.

ಕತೆ ಹೇಳುವಲ್ಲಿಯೂ ನಿಸ್ಸೀಮ ಕತೆಗಾರರಂತೆ ನನಗೆ ಕಾಣುತ್ತಿದ್ದುದು ಅವರು ಬುದ್ಧನ ಜಾತಕ ಕತೆಗಳ ಬಗೆಗೆ ಹೇಳುತ್ತಿದ್ದ ಬಗೆಯೊಂದರಲ್ಲಿ. ಅದರಂತೆ ಭಾರತದ ಈಶಾನ್ಯ ರಾಜ್ಯಗಳ ಪೈಕಿ ಯಾವುದೋ ಬುಡಕಟ್ಟು ಸಮುದಾಯದಿಂದ ಜನಪದ ಕತೆಯೊಂದನ್ನು ಆರಿಸಿ ಎ.ಕೆ.ರಾಮಾನುಜನ್ ಅವರಿಗೆ ಎದುರುಗೊಳ್ಳುತ್ತ ಮುದುಕಿಯೊಬ್ಬಳು ಹೇಳಿದ ಕತೆಯನ್ನು ಡಿ.ಆರ್. ಧಾಟಿಯಲ್ಲಿ ಕಥಾಕಮ್ಮಟವೊಂದರಲ್ಲಿ ಅವರು ಪ್ರಸ್ತುತಪಡಿಸಿದ್ದು ಇಲ್ಲಿ ನೆನಪಿಗೆ ಬರುತ್ತಿದೆ. ಜೊತೆಗೆ ಅನೇಕ ಕರ್ನಾಟಕಾಂದ್ರ ವೈಚಾರಿಕ ಲೇಖಕರ ಪಡೆಯೇ ನನಗೆ ಅವರಿಂದಲೆ ಪರಿಚಯವಾಗುತ್ತಿತ್ತು. ನನ್ನಯ್ಯನಿಂದ ಹಿಡಿದು ಪ್ರಸ್ತುತ ತೆಲುಗು ಸಾಹಿತ್ಯವನ್ನು ಕುರಿತಂತೆ ತೆಲುಗು ಸಾಹಿತ್ಯ ಚರಿತ್ರೆಯ ಚಾರಿತ್ರಕ ವಿಮರ್ಶೆಯ ಗ್ರಂಥವೊಂದನ್ನು ಕನ್ನಡದಲ್ಲಿ ಬರೆಯಲಿದ್ದೇನೆಂದು ಹೇಳಿ ಪ್ರಾರಂಭದ ನಾಲ್ಕಾರು ಪುಟಗಳನ್ನು ನನಗೆ ತೋರಿಸಿದ್ದೂ ಉಂಟು.

ಪ್ರತಿಯೊಬ್ಬರಿಗೂ ಓದಲು ಬರೆಯಲು ಸಹಾಯವಾಗುವಂತೆ ಪ್ರತ್ಯೇಕವಾದೊಂದು ಕೋಣೆ ಇರಬೇಕಯ್ಯ! ಇಲ್ಲದಿದ್ದರೆ ನಮ್ಮ

ಓದು ಬರಹಗಳು ಅಸಾಧ್ಯ ಎಂದು ವರ್ಜಿನಿಯಾ ವೂಲ್ಫ್ ಳನ್ನು ಕೋಟ್ ಮಾಡಿದ್ದುಂಟು. ಅವಳು ಬರೆದ ‘ಎ ರೂಮ್ ಆಫ್ ವನ್ಸ್ ವೋನ್'(ಸ್ವಂತಕ್ಕೊಂದು ಕೋಣೆ) ಅನ್ನು ಹೆಸರಿಸಿ ಆ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಒಂದು ಕವಿತೆಯನ್ನೇ ಬರೆದಿದ್ದೆ ಎಂದು ಹೇಳಿದ್ದರು. ಆ ಪುಸ್ತಕವನ್ನು ಕನ್ನಡಕ್ಕೆ ಯಾರೂ ಕನ್ನಡಕ್ಕೆ ತಂದದ್ದಿಲ್ಲ ಎಂದು ನಾನು ಹೇಳಿದ್ದ ನೆನಪು.

ಒಂದು ಸಂಜೆ ಚಹಾ ಹೀರುತ್ತ ಪತ್ರಿಕೆಗಳನ್ನು ತಿರುವಿಯಾಕುತ್ತ ಕುಳಿತಿದ್ದಾಗ ಮಾತಿನ ನಡುವೆ ಜಗತ್ತಿನ ಬರಹಗಾರರಲ್ಲಿ ಇಂದಿಗೆ ಯಾರು ಹೆಚ್ಚು ಪ್ರಸ್ತುತ ಎಂಬ ಪ್ರಶ್ನೆ ನಮ್ಮಿಬ್ಬರ ಚರ್ಚೆಯಲ್ಲಿ ಬಂದಿತ್ತು. ನನ್ನ ಮಾತಿನಲ್ಲಿ ಆರ್ವೆಲ್ ಮತ್ತು ಹೆಮಿಂಗ್ ವೇ ಇಬ್ಬರೂ ಕೂಡ ಎಂದೇ ವ್ಯಕ್ತವಾಗಿದ್ದನ್ನು ಕವಿ ಸಮ್ಮತಿಸಿದ್ದೂ ಇದೆ. ಆ ಇಬ್ಬರೂ ಎರಡು ಜಾಗತಿಕ ಯುದ್ಧಗಳು ಸಂಭವಿಸಿದ ಹೊತ್ತಿನಲ್ಲಿ ಬದುಕಿದ್ದ ಮಹತ್ತ್ವದ ಬರಹಗಾರರು. ಅಂತಹ ಜಾಗತಿಕ ಯುದ್ಧಗಳು ನಡೆದ ಹೊತ್ತಿನಲ್ಲಿಯೇ ವಿಶ್ವಶಾಂತಿಗಾಗಿ ಹವಣಿಸಿದ ಇನ್ನಿಬ್ಬರು ಮೇರು ತತ್ತ್ವಜ್ಞಾನಿಗಳಾದ ಬರ್ಟಂಡ್ ರಸೆಲ್ ಮತ್ತು ವಿಲ್ ಡ್ಯುರಾಂಡರನ್ನೂ ಸಹ ಆಗ ತಾನೇ ಓದಲು ಶುರುಮಾಡಿದ್ದೆ. ಸಮಕಾಲೀನ ಸಂದರ್ಭದಲ್ಲಿ ಬರೆಹಗಾರನ ಬೌದ್ಧಿಕ ಜವಾಬ್ದಾರಿಯು ಎಷ್ಟಿದೆಯೆಂಬುದನ್ನೂ ಆ ಮೂಲಕವೇ ನನಗೆ ಅರಿವಾದದ್ದು ಇದೆ.

ಹಾಗೆ ನಮ್ಮ ಮತ್ತೊಂದು ಚಹಾಕೂಟದ ನಡುವೆ ಅಫ್ರಿಕಾ ಬರೆಹಗಾರರ ಒಕ್ಕೂಟವೆ ನಮ್ಮ ರೂಮಿನ ಕೋಣೆಯ ಬಳಿ ನೆರೆದಿತ್ತು. ಅಲ್ಲಿಗೆ ಬಹುದೊಡ್ಡ ತಲೆಯ ಗೂಗಿ ವಾಥಿಯಾಂಗೊ ಬಂದಿದ್ದನು. ಅಲ್ಲಿ ಆತ ಯಾರನ್ನೂ ಅಷ್ಟಾಗಿ ಪರಿಗಣಿಸದವನು ಕವಿ ಆನಂದರನ್ನು ನೋಡಿದ ಆ ಕ್ಷಣವೇ “ಡಿಯರ್ ಆನಂದ್ ಪ್ಲೀಸ್ ಕಮಿಂಗ್ ನಿಯರ್ಲಿ… ಪ್ಲೀಸ್ ಕಮ್ ಅಪ್ ಆನ್ ದಿ ಸ್ಟೇಜ್” ಎಂದು ಸ್ಟೇಜಿನ ಮೇಲೆ ಎಳೆಕರೆತಂದದ್ದು ಇದೆ. ಚಿನುವಾ ಆಚಿಬೆಯ ಜೊತೆಗಿನ ಮಾತುಕತೆಯೂ ಆ ಬಗೆಯದ್ದೆ. ಚಿನುಅ ಅಚಿಬೆ ಬಗ್ಗೆಯೂ ನನಗೆ ಅವರು ಬಹಳಷ್ಟು ಸಲ ಅಂತಹ ಪ್ರಸಂಗಗಳನ್ನೂ ಪ್ರಸ್ತಾಪಿಸಿದ್ದುಂಟು. ಹೀಗೆ ತಾನು ಕಂಡ ಕನಸುಗಳನ್ನೆಲ್ಲ ಮಾಂತ್ರಿಕ ಗ್ಯಾಬೋನಂತೆ ವಾಸ್ತವವಾಗಿಸಿ ನಮ್ಮನ್ನೆಲ್ಲ ಬೆರಗು ಹುಟ್ಟುವಂತೆ ಮಾಡುತ್ತಿದ್ದ ಮತ್ತು ಹೀಗಲೂ ಹಾಗೆಯೇ ಅಂತಹ ನೆನಪುಗಳಲ್ಲಿ ನಮ್ಮನ್ನು ಸದಾ ಮೋಡಿ ಮಾಡುವ ಹೃದಯ ಶ್ರೀಮಂತಿಕೆ ಕವಿ ಲಕ್ಕೂರರಲ್ಲಿದೆ. ಮತ್ತು ನಮ್ಮ ನಡುವೆ ಅದು ಆಳಿಸಲಾಗದ ಲಿಪಿಯಂತೆ ಅಷ್ಟೇ ಅಪಾರವೂ ಕೂಡ.

  • ದೇವನೂರು ನಂದೀಶ್‌

You cannot copy content of this page

Exit mobile version