ದೇಶದ ಏಳನೇ ಹಂತದ ಚುನಾವಣೆಯ ಹಿಂದಿನ ದಿನ ಶುಕ್ರವಾರ ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದ ಟಿಎಂಸಿ ನಾಯಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಲವು ದಿನಗಳಿಂದ ಬಿಜೆಪಿ ಮಂದಿ ಹತ್ಯೆಯಾದ ಮೊಯಿಬುಲ್ ಶೇಕ್ ಅವರ ಮೇಲೆ ಕಣ್ಣಿಟ್ಟಿದ್ದು, ಕೊನೆಗೆ ಬಿಜೆಪಿ ಮಂದಿ ಹತ್ಯೆಯ ಮೂಲಕ ತನ್ನ ಕ್ರೌರ್ಯ ಮೆರೆದಿದೆ ಎಂದು ಟಿಎಂಸಿ ಪಕ್ಷ ಆರೋಪಿಸಿದೆ.
ತಮ್ಹುಕ್ ಸೇರಿದಂತೆ ಇತರೆ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಇಂದು (ಶನಿವಾರ) ಮತದಾನ ನಡೆಯುತ್ತಿದೆ. ಇದರ ನಡುವೆ ತಮ್ಹುಕ್ ಕ್ಷೇತ್ರದ ಮೊಯಿಬುಲ್ ಶೇಕ್ (42) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಟಿಎಂಸಿ – ಬಿಜೆಪಿ ಪಕ್ಷದ ಮಧ್ಯೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಮೊಯಿಬುಲ್ ಶೇಖ್ ಶುಕ್ರವಾರ ಸಂಜೆ ಮನೆಗೆ ವಾಪಸಾಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಬಿಜೆಪಿಯ ಗೂಂಡಾಗಳ ಗುಂಪೊಂದು ಶೇಖ್ ಮತ್ತು ಇತರ ಇಬ್ಬರು ಕಾರ್ಯಕರ್ತರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದೆ ಎಂದು ಟಿಎಂಸಿ ಶಾಸಕ ತಿಲಕ್ ಚಕ್ರವರ್ತಿ ಆರೋಪಿಸಿದ್ದಾರೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಶೇಖ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲೇ ಮೃತಪಟ್ಟಿದ್ದಾರೆ. ಇತರ ಇಬ್ಬರು ಕಾರ್ಯಕರ್ತರು ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಾಸಕ ತಿಲಕ್ ಚಕ್ರವರ್ತಿ ವಿವರಿಸಿದ್ದಾರೆ.