Home ಅಂಕಣ ಬೊಗಸೆಗೆ ದಕ್ಕಿದ್ದು -42 : ವೇಶ್ಯೆಯ ಗರ್ಭದಲ್ಲಿ ಮಾರ್ವಾಡಿ ಮುದುಕನ ಆತ್ಮ!

ಬೊಗಸೆಗೆ ದಕ್ಕಿದ್ದು -42 : ವೇಶ್ಯೆಯ ಗರ್ಭದಲ್ಲಿ ಮಾರ್ವಾಡಿ ಮುದುಕನ ಆತ್ಮ!

0

“..ಜನಿವಾರ ಜ್ಯೋತಿಷಿಗಳ ಜೊತೆಜೊತೆಗೇ ಶೂದ್ರ, ದಲಿತ, ಮುಸ್ಲಿಂ, ಕ್ರೈಸ್ತ ಜ್ಯೋತಿಷಿಗಳೂ ಹಾದಿ ಬೀದಿಯಲ್ಲಿ, ಹೊಟೇಲು, ಲಾಡ್ಜ್‌ಗಳಲ್ಲಿ ಹುಟ್ಟಿಕೊಂಡಿದ್ದಾರೆ. ಪತ್ರಿಕೆಗಳನ್ನು ಓದುವ, ಟಿವಿ ನೋಡುವ ನಿಮ್ಮ ಬುದ್ಧಿವಂತ ಮನದ ಮನೆಯ ಒಳಗೇ ಕೂತು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕತೆಯೊಂದನ್ನು ಹೇಳುವೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ತಮ್ಮ ಭವಿಷ್ಯವೇ ಗೊತ್ತಿಲ್ಲದ ಬ್ರಹ್ಮಾಂಡ ದಂಡ ಪಿಂಡಗಳು ಪ್ರತೀ ನಿತ್ಯ ಟಿವಿ ಚಾನೆಲ್‌ ಮೂಲಕ ನಿಮ್ಮ ಮನೆಗೇ ನೇರವಾಗಿ ವಕ್ಕರಿಸುತ್ತಿದ್ದಾರೆ. ಜ್ಯೋತಿರ್ಶಾಸ್ತ್ರದಲ್ಲಿ ಭಾರತಕ್ಕೆ ಬಹುದೊಡ್ಡ ಸ್ಥಾನವಿದೆ. ಆರ್ಯಭಟ, ವರಾಹ ಮಿಹಿರ, ಭಾಸ್ಕರ ಮುಂತಾದ ಹಲವಾರು ಮಹಾನುಭಾವರು ಆಗಿ ಹೋಗಿದ್ದಾರೆ. ಅವರು ನಮ್ಮ ಹೆಮ್ಮೆಯ ಜನರು, ವಿಶ್ವಗುರಗಳು. ಈಗಿನ ಗಟರ್ ಗ್ಯಾಸ್ ವಿಜ್ಞಾನಿಯ ನೇತೃತ್ವದಲ್ಲಿ ಸನಾತನಿಗಳು ಅಧಿಕಾರಕ್ಕೆ ಬರುವ ಮೊದಲೇ ನಮ್ಮ ಉಪಗ್ರಹಗಳಿಗೆ ಆರ್ಯಭಟ, ಭಾಸ್ಕರ ಇತ್ಯಾದಿ ಹೆಸರುಗಳನ್ನು ಇಡಲಾಗಿತ್ತು. ಆ ವಿಜ್ಞಾನಕ್ಕೂ ಈ ಜೀವನಕ್ಕೂ ಯಾವುದೇ ಸಂಬಂಧ ಇಲ್ಲದ ನಕಲಿ “ಶಾಸ್ತ್ರ”ವೊಂದು ಹುಟ್ಟಿಕೊಂಡಿದೆ. ಅದು- ತಮ್ಮ ಭವಿಷ್ಯವು ಕರಾಳವಾಗಿದೆ ಎಂದು ಗೊತ್ತಿದ್ದೂ, ಅಚ್ಚೇ ದಿನ್, ವಿಕಾಸ್, ಸುವರ್ಣ ಕಾಲ್ ಇತ್ಯಾದಿಗಳಿಗಾಗಿ ಕಾಯುತ್ತಿರುವ ನಮ್ಮ ದೇಶದ ಜನರ ಮದ್ಯೆ “ಕಾರ್ಮೋದಿ”ಯಂತೆ ಕವಿದಿದೆ. ಚಂದ್ರಯಾನ, ಸೂರ್ಯಯಾನ, ಮಂಗಳಯಾನ, ಕುಜಯಾನ, ಬುಧಯಾನ, ಶುಕ್ರಯಾನ, ಶನಿಯಾನ ಇತ್ಯಾದಿಗಳನ್ನು ಇತಿಹಾಸ ಕಂಡ ಮಹಾನ್ ಅವಿಜ್ಞಾನಿಯ ನೇತೃತ್ವದಲ್ಲಿ ಅವಿರತವಾಗಿ ಕವಿದಿದೆ. ಈ ಜ್ಯೋತಿಷ್ಯ ಶಾಸ್ತ್ರ ಎಂಬುದು ಆನ್ಲೈನ್ ವಂಚನೆಗಿಂತ ಮಿಗಿಲಾಗಿದ್ದು, ಪುರಾತನ, ಸನಾತನವಾಗಿದೆ. ಆದರೆ, ಸರಕಾರವೇ ಇಂತಾ ವಂಚನೆಗೆ ಮಾನ್ಯತೆ ನೀಡಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿಸಿದೆ. ಈ ಹಿನ್ನೆಲೆಯಲ್ಲಿ ಜನಿವಾರ ಜ್ಯೋತಿಷಿಗಳ ಜೊತೆಜೊತೆಗೇ ಶೂದ್ರ, ದಲಿತ, ಮುಸ್ಲಿಂ, ಕ್ರೈಸ್ತ ಜ್ಯೋತಿಷಿಗಳೂ ಹಾದಿ ಬೀದಿಯಲ್ಲಿ, ಹೊಟೇಲು, ಲಾಡ್ಜ್‌ಗಳಲ್ಲಿ ಹುಟ್ಟಿಕೊಂಡಿದ್ದಾರೆ. ಪತ್ರಿಕೆಗಳನ್ನು ಓದುವ, ಟಿವಿ ನೋಡುವ ನಿಮ್ಮ ಬುದ್ಧಿವಂತ ಮನದ ಮನೆಯ ಒಳಗೇ ಕೂತು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕತೆಯೊಂದನ್ನು ಹೇಳುವೆ.

ಬುರುಡೆ ಜೋಯಿಸರು ಜನರನ್ನು ಹೆದರಿಸಲು ಎಂತೆಂತಹ ದೋಷಗಳು, ಗಂಡಗಳು, ಪೀಡೆಗಳು, ಕಾಟಗಳು ಇತ್ಯಾದಿ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ, ಅವುಗಳ ಸಂಖ್ಯೆಯನ್ನು ಹೇಳಿದರೆ ನಿಮಗೆ ಅಜೀರ್ಣವಾದೀತು! ಅವುಗಳ ಪರಿಣಾಮಗಳನ್ನು ಹೇಳಿದರೆ ಹೆದರಿ ಸ್ಮೃತಿ ತಪ್ಪಿಬೀಳುವಿರಿ! ಪರಿಹಾರಗಳನ್ನು ವಿವರವಾಗಿ ಬಣ್ಣಿಸಿ ವಿಶ್ಲೇಷಿಸಿರೆ, ನೀವು ನಕ್ಕುನಕ್ಕು ಸುಸ್ತಾಗಿ ‘ಜಠರದೋಷ’ದಿಂದ ಹೊಟ್ಟೆಯಲ್ಲಿ ಹುಣ್ಣಾಗುವ ಸಂಭವವಿದೆ!

ಮನುಷ್ಯನ ಭಯ, ಆತಂಕ, ಲಾಲಸೆ, ಮೌಢ್ಯ ಎಲ್ಲವುಗಳ ಆಳವಾದ ಸಂಶೋಧನೆಗಳನ್ನು ಮಾಡಿರುವ ಜೋಯಿಸರು ಜಾತಕ ದೋಷ, ಮೃತ್ಯುದೋಷ, ಅಪಮೃತ್ಯು ದೋಷ, ಪಿತೃದೋಷ, ಗ್ರಹ ದೋಷ, ನಕ್ಷತ್ರದೋಷ ಇತ್ಯಾದಿಯಾಗಿ ಹುಟ್ಟಿದರೂ, ಸತ್ತರೂ ಲೆಕ್ಕವಿಲ್ಲದಷ್ಟು ದೋಷಗಳನ್ನು ಕಂಡುಹಿಡಿದ್ದಾರೆ ಮತ್ತು ನಿಮ್ಮಲ್ಲಿ ಎಷ್ಟು ರಸವಿದೆ ಎಂದು ನೋಡಿಕೊಂಡು ನಿಮಗೆ ನೋವಾಗದಂತೆ ಹಿಂಡುವ ಸಲುವಾಗಿ ಬೇರೆಬೇರೆ ಗಾತ್ರದ, ಮಾಡೆಲ್‌ಗಳ ಜ್ಯೂಸ್ ತೆಗೆಯುವ ಯಂತ್ರತಂತ್ರಗಳ ಆವಿಷ್ಕಾರಗಳನ್ನೂ ಮಾಡಿದ್ದಾರೆ. ನೀವು ಸ್ಮಶಾನಯಾತ್ರೆ ಮಾಡಿದರೂ- ಅಲ್ಲಿ ಪಿಂಡಶಾಸ್ತ್ರ ವರ್ಚುವಲ್ ಪೇಮೆಂಟ್ ಮುಂತಾದ ಆವಿಷ್ಕಾರಗಳನ್ನು ನೋಡಿರುವುದರಿಂದ ಇಲ್ಲಿ ಮೃತ್ಯುವಿನ ಸುತ್ತಲೇ ಕ್ಷುದ್ರಗ್ರಹಗಳಂತೆ ಒಂದು ಸುತ್ತು ಹಾಕೋಣ.

ಮನುಷ್ಯನ ಜೀವನದಲ್ಲಿ ಹುಟ್ಟು ಮತ್ತು ಸಾವು ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಂತೆ ಅನಿವಾರ್ಯ! ಅದುದರಿಂದ, ಜೋಯಿಸರಿಗೆ ಅದು ಅದಾಯದ ನಿರಂತರ ಮೂಲ. ಸತ್ತಮೇಲೆ ಮನುಷ್ಯ ಒಂದೋ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿ ಸ್ವರ್ಗ ಸೇರುತ್ತಾನೆ. ಇಲ್ಲವೇ ಕಡಿಮೆ ಮಾರ್ಕು ತೆಗೆದು ಫೇಲಾಗಿ ನರಕ ಸೇರುತ್ತಾನೆ. ಅವುಗಳಿಗೆ ಬೇರೆಬೇರೆ ಕ್ರಿಯಾಕರ್ಮಗಳುಂಟು. ಅವುಗಳಿಗೆ ಮತ್ತು ಅವುಗಳಿಂದ ‘ಅರ್ಥ’ ಕಲ್ಪಿಸುವ ಅರ್ಥಶಾಸ್ತ್ರಜ್ಞರೇ ಜೋಯಿಸರು. ಹೀಗೆ ಸತ್ತವರ ಕೆಲಸಗಳು ನಿಮ್ಮಲ್ಲಿ ಎಷ್ಟು ದಮ್ಮಡಿ ಇದೆ ಎಂಬುದರ ಮೇಲೆ ಮೇಲೆ ಅವಲಂಬಿಸಿವೆ. ಅದು ಒಮ್ಮೆಗೇ ಮುಗಿಯಬಹುದು. ಅಥವಾ ವರ್ಷಕ್ಕೊಮ್ಮೆ ಶ್ರಾದ್ಧ, ಶಾಂತಿ ಹೋಮದಂತಹ ಡೆತ್‌ಡೇ ಪಾರ್ಟಿಗಳನ್ನು ಕೊಡಬೇಕಾಗಿ ಬರಬಹುದು! ಅವುಗಳ ಕಂತ್ರಾಟು ಪಡೆಯಲು ಜೋಯಿಸರು ಬೇರೆ ಬೇರೆ ಮೆನುಗಳೊಂದಿಗೆ ಸದಾ ಸಿದ್ಧರಿರುತ್ತಾರೆ.

ಸಮಸ್ಯೆ ಇರುವುದು ನಡುವೆಯೇ ಶಾಲೆ ಬಿಟ್ಟವರು ಮತ್ತು ಒಂದೆರಡು ಸಬ್ಜೆಕ್ಟ್‌ಗಳಲ್ಲಿ ಫೇಲಾಗಿ ತ್ರಿಶಂಕುಗಳಂತೆ ಸ್ವರ್ಗವನ್ನೂ ಸೇರದೆ, ನರಕವನ್ನೂ ಸೇರದೆ ಅಂತರ್ಭೂತಗಳಾಗಿ ತಿರುಗುವ ಆತ್ಮಗಳದ್ದು. ಇವರು ಸಪ್ಲಿಮೆಂಟರಿ ಪರೀಕ್ಷೆ ಕಟ್ಟುವ ಗಿರಾಕಿಗಳು. ಇವರನ್ನು ಕುಲೆ, ಪಿಶಾಚಿ, ದೆವ್ವ, ಅಂತರ ಬೆಂತರ ಇತ್ಯಾದಿ ಮನಮೋಹಕ ಹೆಸರುಗಳಿಂದ ಕರೆಯಲಾಗುತ್ತದೆ. ಇವರು ಸಪ್ಲಿಮೆಂಟರಿಯಲ್ಲಿ ಪಾಸಾಗಿ ಸ್ವರ್ಗ ಅಥವಾ ನರಕ ಸೇರಿಸಲು ಕೋಚಿಂಗ್ ಕೊಡಬೇಕಾಗುತ್ತದೆ. ಇಂತಹ ವಿದ್ಯಾದಾನದ ಪುಣ್ಯಕಾರ್ಯಕ್ಕೆ ಜೋಯಿಸರು ಸದಾ ಟೊಂಕಕಟ್ಟಿ ನಿಂತಿರುತ್ತಾರೆ. ಇದಕ್ಕೆ ದೊಡ್ಡ ಫೀಸೂ ಉಂಟು!

ಕೆಲವು ಸಲ ಈ ಸಪ್ಲಿಮೆಂಟರಿ ಗಿರಾಕಿಗಳು ಸಹವಾಸದೋಷಕ್ಕೆ ಒಳಗಾಗಿ, ಭೂತಗಳ ಗ್ಯಾಂಗುಗಳ ಕೈಗೆ ಸಿಗುವುದುಂಟು. ಇಂತವರ ಜುಟ್ಟು ಅವುಗಳ ಕೈಯಲ್ಲಿವುದರಿಂದ ಈ ಹೋಪ್‌ಲೆಸ್ ಗಿರಾಕಿಗಳನ್ನು ಪಾಸು ಮಾಡಲು ಬೂತಳಿಗೂ ಪರೀಕ್ಷಾ ಮಂಡಳಿಯ ಸಿಬ್ಬಂದಿಗಳಿಗೆ ಕೊಡುವಂತೆ “ಸಮ್‌ಥಿಂಗ್” ಕೊಟ್ಟು ತೃಪ್ತಿಪಡಿಸಿ ಮಾರ್ಕು ತಿದ್ದಬೇಕಾಗುತ್ತದೆ. ಬೂತಗಳ ಕೈಯಿಂದ ಬಿಡಿಸಬೇಕಾಗುತ್ತದೆ. ಇವೆಲ್ಲವನ್ನೂ ಜೋಯಿಸರು ತಮ್ಮ ಮಂತ್ರಶಕ್ತಿಯಿಂದ ಮಾಡುತ್ತಾರೆ. ಒಂದು ವೇಳೆ ಎಂದೂ ಪಾಸಾಗದ ಮಂದಬುದ್ಧಿಯ ಪಿಶಾಚಿಗಳು ಇದ್ದರೆ, ಅವುಗಳನ್ನು ಉಪಾಯವಾಗಿ ಅವವುಗಳ ಸೈಜಿಗೆ ತಕ್ಕಂತೆ ಕ್ವಾರ್ಟರ್, ಹಾಫ್, ಫುಲ್ ಇಲ್ಲವೇ, ಬಿಯರ್ ಬಾಟಲಿಗೆ ಹಾಕಿ ಬಿರಡೆ ಮುಚ್ಚಿ ಬಂದೋಬಸ್ತ್ ಮಾಡಿ ನದಿ, ಸಮುದ್ರಗಳಲ್ಲಿ ತೇಲಿಬಿಡುವ ಜೋಯಿಸರೂ ಇದ್ದು, ನಿಮ್ಮ ಗಿರಾಕಿಯ ಪ್ರಯಾಣ ಭತ್ಯೆಯನ್ನು ನೀವು ಅವರಿಗೆ ಕೊಟ್ಟರಾಯಿತು. ನಿಮ್ಮ ದೆವ್ವಗಳು ನಿರಾಯಾಸವಾಗಿ ಸಮುದ್ರಯಾನ ಮಾಡಿ ಆಫ್ರಿಕಾ, ಅಮೇರಿಕಾ ತೀರ ತಲುಪುತ್ತವೆ. ಅಲ್ಲಿ ಪಾಸ್ಪೋರ್ಟ್, ವೀಸಾ ಇಲ್ಲದೇ ಅವು ಮರಳಿಬಂದು ನಿಮ್ಮನ್ನು ಪೀಡಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ನೀವು ಮಾಡಬೇಕಾದುದು ಇಷ್ಟೇ- ಜೋಯಿಸರು ಹೇಳಿದ್ದಕ್ಕೆ ಭಯಭಕ್ತಿಯಿಂದ ತಲೆ ಅಲ್ಲಾಡಿಸಬೇಕು ಮತ್ತು ಗಂಟುಬಿಚ್ಚಬೇಕು!ಇಲ್ಲದಿದ್ದಲ್ಲಿ ಇವರು ವಿಕ್ರಮಾದಿತ್ಯನನ್ನು ಕಾಡಿದ ಬೇತಾಳದಂತೆ ನಿಮ್ಮನ್ನು ಕಾಡುತ್ತಿರುತ್ತಾರೆ. ಬ್ರಹ್ಮಕಪಾಳದಂತೆ ನಿಮ್ಮ ಕುತ್ತಿಗೆಗೆ ಕಚ್ಚಿಕೊಂಡಿರುತ್ತಾರೆ. ನೀವು ಹೆದರದೇ ಇದ್ದರೆ, ಕೆಲವು ಸ್ಯಾಂಪಲುಗಳನ್ನು ಇಲ್ಲಿ ಕೊಡುತ್ತೇನೆ.

ಮೇಲೆ ಹೇಳಿದ್ದು ಅಲ್ಲದೆ, ಜೋಯಿಸರು ಹೇಳುವಂತೆ “ಮನೆತನದಲ್ಲಿ ಯಾರಾದರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಯಾರಾದರೂ ನೇಣು ಹಾಕಿಕೊಂಡು ಅಥವಾ ಅಪಘಾತದಿಂದ ಸಾವನ್ನಪ್ಪಿದ್ದರೆ, ಇಂತಹವರ ಮನೆಯಲ್ಲಿ ಒಂದು ಪೀಳಿಗೆ ಬಿಟ್ಟು ಮುಂದಿನ ಪೀಳಿಗೆಯವರು ಭಯಂಕರ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.” ಎಷ್ಟರ ಮಟ್ಟಿಗೆ ಈ ಉಪದ್ರಗಳಿರುತ್ತವೆ ಎಂದರೆ, ಬೆಳಿಗ್ಗೆ ನೀವು ಶೌಚಕ್ಕೆ ಹೋದಾಗ ಹಿಂದಿನ ದಿನ ತಿಂದ ಚಿಕನ್, ಮಟನ್ ಇತ್ಯಾದಿ ಹೊರಗೆ ಬರದಂತೆ ದಿಗ್ಭಂಧನ ವಿಧಿಸುವ ತಾಕತ್ತೂ ಈ ದೆವ್ವ ಪಿಶಾಚಿಗಳಿಗಿವೆ! ಇಲ್ಲಿರುವ ಒಂದು ರಿಲೇಟಿವಿಟಿ ಥಿಯರಿಯೂ ಒಂದು ದೊಡ್ಡ ಆವಿಷ್ಕಾರವೇ. ನಿಮ್ಮ ಕುಟುಂಬದಲ್ಲಿ ನಿಮ್ಮ ಕಾಲದಲ್ಲಿ ಯಾರೂ ಅಪಮರಣಕ್ಕೆ ತುತ್ತಾಗಿರದಿದ್ದರೂ ನಿಮಗೆ‌ ಮುಕ್ತಿಯಿಲ್ಲ! ನೀವೂ ಕಂಡೂ, ಕೇಳಿಯೂ ಇಲ್ಲದ ಅಜ್ಜನ ಮುತ್ತಜ್ಜ ಮುತ್ತಜ್ಜಿಯರನ್ನು ಜ್ಯೋತಿಷ್ಯ ಪ್ರಶ್ನೆಯ ಮೂಲಕ ನಿದ್ದೆಯಿಂದ ಒದ್ದೆಬ್ಬಿಸಿ ಈ ಜ್ಯೋತಿಷಿಗಳು ಕರೆತರುತ್ತಾರೆ.

ನಿಮಗೆ ನಂಬಿಕೆ ಇಲ್ಲದಿದ್ದರೆ, ಒಂದು ಸತ್ಯ ಘಟನೆ ಹೇಳುತ್ತೇನೆ. ನಾಲ್ಕು ದಶಕಗಳ ಹಿಂದೆ ನಾನು ಮುಂಬಯಿಯಲ್ಲಿದ್ದೆ. ನಾವಿದ್ದ ಚಾಳ್ (ಒಂದರ ಪಕ್ಕ ಒಂದಿರುವ ಎರಡು ಅರೆಕೋಣೆಗಳ ಮನೆಗಳು)ನ ಪಕ್ಕದ ರೂಮಿನಲ್ಲಿ ನಮ್ಮದೇ ಕರಾವಳಿಯ ಒಬ್ಬರು ‘ಪ್ರಖಾಂಡ’ ಜೋಯಿಸರಿದ್ದರು. ಬ್ರಾಹ್ಮಣರಲ್ಲದ (ಬಿಲ್ಲವರು) ಅವರು ತಮ್ಮ ಡ್ಯೂಟಿಯ ಅವಧಿಯಲ್ಲಿ ಜನಿವಾರ, ಕಚ್ಚೆ, ನಾಮಗಳಿಂದ ಭೂಷಿತರಾಗಿ, ಮಾರುಕಟ್ಟೆ ಇರುವ ಹತ್ತಾರು ದೇವರುಗಳ ಫೊಟೋ, ವಿಗ್ರಹಗಳನ್ನು ಬೆಳ್ಳಿ ಮಚ್ಚಿದ ಮಹಾಮಂಟಪಗಳಲ್ಲಿ ಹೂ, ಕುಂಕುಮ, ಅರಶಿನಗಳ ಅಲಂಕಾರಗಳೊಂದಿಗೆ ಇಟ್ಟುಕೊಂಡು, ಥಳಥಳ ಹೊಳೆಯುವ ತಾಮ್ರ, ಹಿತ್ತಾಳೆ, ಕಂಚಿನ ತಟ್ಟೆ, ಹರಿವಾಣ, ಗಿಂಡೆಗಳಿಂದ ಪರಿವೃತ್ತರಾಗಿ, ಬಂದವರ ದೋಷ ಪರಿಹಾರಾರ್ಥವಾಗಿ ಸನ್ನದ್ಧರಾಗಿ, ತಮ್ಮ ಏಜೆನ್ಸಿಯಲ್ಲಿ ಬೆಳಿಗ್ಗಿನಿಂದ ತಡರಾತ್ರಿ ವರೆಗೆ ಕುಳಿತು, ಕೆಲವು ಸಲ ಹೋಮಗಳ ಹೊಗೆ ಹಾಕುತ್ತಾ ಸೊಳ್ಳೆಗಳನ್ನು ಓಡಿಸುವುದಲ್ಲದೆ, ಅಕ್ಕಪಕ್ಕದವರ ಉಸಿರನ್ನೂ ಕಟ್ಟಿಸುತ್ತಿದ್ದರು. ಅವರ ವೇದೋಪನಿಷತ್ ಅಧ್ಯಯನ ಫುಟ್‌ಪಾತ್‌ಗಳಲ್ಲಿ ಸಿಗುವ ಮಂತ್ರದ ಪುಸ್ತಕಗಳಿಗೆ ಸೀಮಿತವಾಗಿದ್ದರೂ ಅವರು ಅವುಗಳ ನಡುವೆ ಉದಾರವಾಗಿ ಹ್ರಾಂ, ಹ್ರೀಂ, ಫಟ್, ಘಟ್, ಷಟ್! ಶಿಟ್! ಇತ್ಯಾದಿಗಳನ್ನು ‘ಕರಿಮಣಿ ಸರದೊಳ್ ಹವಳವಂ ಕೋದಂತೆ’ ಸೇರಿಸುತ್ತಿದ್ದರಿಂದ ಗಿರಾಕಿಗಳು ಪ್ರಭಾವಿತರಾಗಿ ಮನೋರಮೆಯಂತೆ ತಲೆದೂಗುತ್ತಿದ್ದರು. ಈಗ ಮುಖ್ಯ ವಿಷಯಕ್ಕೆ ಬರೋಣ.

ಇವರಿಗೆ ಬರುವ ಗಿರಾಕಿಗಳಲ್ಲಿ ಕಾಮಾಟಿಪುರ ಮುಂತಾದ ರೆಡ್‌ಲೈಟ್ ಏರಿಯಾದ ಮಹಿಳೆಯರು ಮತ್ತು ಅವರ ಮೇಡಂಗಳೂ ಇದ್ದರು. ವ್ಯಾಪಾರ ಅಭಿವೃದ್ಧಿ, ಗರ್ಭಪಾತ ದೋಷ, ರೋಗಬಾಧೆ ಇತ್ಯಾದಿಗಳ ಪರಿಹಾರಾರ್ಥ ಬಂದು ತಮ್ಮ ಮನಸ್ಸನ್ನೂ, ಪರ್ಸನ್ನೂ ಹಗುರ ಮಾಡಿಕೊಂಡು ಹೋಗುತ್ತಿದ್ದರು.

ಯಾವತ್ತೂ ಬರುವ ಒಬ್ಬಳು ಮೇಡಂ, ಒಂದು ದಿನ ಸಖಿ ಪರಿವಾರ ಸಮೇತಳಾಗಿ ಬಂದಳು. ಅವಳಿಗೆ ಮಹಾ ಅತಂಕವಾಗಿತ್ತು. ಅವಳ ಅಡ್ಡೆಗೆ ಒಬ್ಬ ಶ್ರೀಮಂತ ಮಾರ್ವಾಡಿ ವರ್ಷಗಳಿಂದ ಬರುತ್ತಿದ್ದನಂತೆ. ಅವಳ ಮೇಲೆ ಭಾರೀ ಪ್ರೀತಿಯಂತೆ. ಅವಳಿಗೆ ವಯಸ್ಸಾದರೂ, ಆಗಾಗ ಅವಳ ಸಂಗವನ್ನೂ ಬಯಸುತ್ತಿದ್ದನಂತೆ. ಒಂದು ದಿನ ಬಂದ ಈ ಹಣ್ಣುಹಣ್ಣು ಮುದುಕ ‘ನೀನೇ ಬೇಕು’ ಎಂದು ಯುವತಿಯರನ್ನೆಲ್ಲಾ ತಿರಸ್ಕರಿಸಿ, ಅವಳ ಜೊತೆ ಮಲಗಿ, ಖಕ್ ಪಕ್ ಎಂದು ಕೆಮ್ಮುತ್ತಾ ಆಟವಾಡುತ್ತಿದ್ದವನು ಅವಳೊಳಗೇ ಪ್ರಾಣಬಿಟ್ಟನಂತೆ!

ಅವಳಿದನ್ನು ಹೇಳುತ್ತಿದ್ದಂತೆ, ನಮ್ಮ ಜೋಯಿಸರು ಆಕಾಶವೇ ತಲೆಯಮೇಲೆ ಬಿದ್ದಂತೆ ಉದ್ಘಾರ ತೆಗೆದು, ”ಆತನ ಆತ್ಮ ಇನ್ನೂ ನಿನ್ನ ಗರ್ಭದಲ್ಲಿದೆ, ನಿನ್ನ ಮೇಲೆ ಅಷ್ಟು ಮೋಹ ಇರುವವನು ನೀನು ಸತ್ತರೂ ನಿನ್ನನ್ನು ಬಿಡಲಾರ!” ಎಂದು ಖಡಾಖಂಡಿತವಾಗಿ ಘೋಷಿಸಿದಾಗ ಆತನ ಈ ಅಮರಪ್ರೇಮಕ್ಕೆ ಅನಂದ ಭಾಷ್ಪಸುರಿಸಬೇಕಾಗಿದ್ದವಳು ಸಂತೋಷಾತಿರೇಕದಿಂದ ರೈತರು ಯೂರಿಯಾ ಎಂದು ಕರೆಯುವ ಅಮೋನಿಯಂ ಮಿಶ್ರಿತ ದ್ರಾವಣವನ್ನು ಕುಳಿತಲ್ಲೇ ಇಷ್ಟಗಲಕ್ಕೆ ಸ್ರವಿಸಿದಳಂತೆ!

ನಂತರ ಆಕೆಯ ದೇಹದಿಂದ ಆ ಅಮರಪ್ರೇಮಿ ಮುದುಕ ಮಾರ್ವಾಡಿಯನ್ನು ಓಡಿಸಲು ಆ ಕಾಲಕ್ಕೇ ಒಂದೂವರೆ ಲಕ್ಷ ರೂ.ಗಳ ಮಹಾಪೂಜೆ ಮಾಡಿಸಲಾಯಿತು. ಇದು ನನಗೆ ಗೊತ್ತಾದುದು ನಮ್ಮ ರೂಮಿನಲ್ಲೇ ಇದ್ದ, ಮುಂಬಯಿ ಗಲಭೆಯಲ್ಲಿ ಸತ್ತಿರುವ ನನ್ನ ಕಸಿನ್‌ನಿಂದ. ಆತ ಅಗತ್ಯ ಬಿದ್ದಾಗ ದಿಢೀರ್ ಜನಿವಾರ ಹಾಕಿ ಪರಿಚಾರಕ ಮಾಣಿಯಾಗಿ ಹೋಗುತ್ತಿದ್ದ! ಬಾಲ್ಯದಲ್ಲೇ ಮುಂಬಯಿಗೆ ಓಡಿ ಫುಟ್‌ಪಾತಲ್ಲಿ ಮಲಗಿ, ರಾತ್ರಿ ಶಾಲೆಯಲ್ಲಿ ಕಲಿತ ಈ ದೋಯಿಸರು ಒಂದು ವಿಷಯದಲ್ಲಿ ಪ್ರಾಮಾಣಿಕರು. ನಮಗೆ ನಂಬಿಕೆ ಇಲ್ಲ ಎಂದು ಗೊತ್ತಾದದ್ದೇ, ಅವರು ರಾತ್ರಿ ಎಲ್ಲರೂ ಹೋದ ಮೇಲೆ ನೈಂಟಿಯಷ್ಟು ವಾಸನೆ ಬರದ ಜಿನ್ ಹಾಕಿ, ರಿಲಾಕ್ಸಾಗಿ ಇಂತಹ ಕತೆಗಳನ್ನು ಹೇಳುತ್ತಿದ್ದರು. ಇದರ ವಿವರ ತಿಳಿಸಿದ್ದೂ ಅವರೇ. “ಮಾರ್ವಾಡಿಯಿಂದ ಅವಳು ಸಾಕಷ್ಟು ಪೀಕಿಸಿದ್ದಾಳೆ. ಅವಳಿಂದ ಸ್ಚಲ್ಪ ನಾನು ಪೀಕಿಸಿದ್ದೇನೆ ಅಷ್ಟೇ!” ಇದು ಅವರ ಫಿಲಾಸಫಿ. ಇಷ್ಟವಾದರೆ ಹೇಳಿ, ಇನ್ನಷ್ಟು ಇದೆ!

You cannot copy content of this page

Exit mobile version