ತಿರುಪತಿಯ ವೈಕುಂಠ ದ್ವಾರ ದರ್ಶನದ ಟಿಕೆಟ್ ತೆಗೆದುಕೊಳ್ಳುವ ವೇಳೆ ಉಂಟಾದ ತೀವ್ರ ನೂಕುನುಗ್ಗಲಿನಲ್ಲಿ ಕನಿಷ್ಟ 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಹಲವವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ತಿರುಮಲ ಶ್ರೀವಾರಿ ವೈಕುಂಠ ದ್ವಾರ ಟಿಕೆಟ್ ಕೌಂಟರ್ ಬಳಿಯ ವಿಷ್ಣು ನಿವಾಸದ ಬಳಿ ಉಚಿತ ದರ್ಶನದ ಟೋಕನ್ ವಿತರಣೆ ನಡೆಯುತ್ತಿತ್ತು. ವೇಳೆ ಈ ಘಟನೆ ನಡೆದಿದೆ. ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಅವರ ಕಚೇರಿಯ ಹೇಳಿಕೆಯ ಪ್ರಕಾರ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಗುರುವಾರ ಕಾಲ್ತುಳಿತದಲ್ಲಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ.
ಟಿಕೆಟ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಏಕಕಾಲಕ್ಕೆ ಸಾವಿರಾರು ಮಂದಿ ನುಗ್ಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೊದಲು ಒಬ್ಬ ಮಹಿಳೆ ಸಾವು ಕಂಡಿದ್ದಾಗಿ ವರದಿಯಾಗಿತ್ತಾದರೂ, ಅಪ್‌ಡೇಟ್ ಆಗಿರುವ ಮಾಹಿತಿಯ ಪ್ರಕಾರ ಈವರೆಗೂ ಆರು ಮಂದಿ ಸಾವು ಕಂಡಿದ್ದಾರೆ. ಉಳಿದ ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವು ಕಂಡಿದ್ದಾರೆ.
ಜನವರಿ 10 ರಂದು ವೈಕುಂಠ ಏಕಾದಶಿಯ ಹಿನ್ನಲೆಯಲ್ಲಿ ತಿರುಪತಿಯ ಕೌಂಟರ್‌ಗಳಲ್ಲಿ ಇಂದು ಟಿಕೆಟ್ ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ ಸಾವಿರಾರು ಮಂದಿ ಏಕಕಾಲಕ್ಕೆ ಕೌಂಟರ್ ಬಳಿ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಸುಮಾರು 30 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಎಲ್ಲರನ್ನೂ ಸ್ಥಳೀಯ ರುಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಏತನ್ಮಧ್ಯೆ, ಟಿಟಿಡಿ ಮಂಡಳಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ ಘಟನೆಗೆ ಕ್ಷಮೆಯಾಚಿಸಿದ್ದು, ಈ ಬಗ್ಗೆ ಟ್ರಸ್ಟ್ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಗುರುವಾರ ಬೆಳಗ್ಗೆ ಸಿಎಂ ನಾಯ್ಡು ಹಾಗೂ ರಾಜ್ಯ ಆರೋಗ್ಯ ಸಚಿವರು ತಿರುಪತಿಗೆ ಭೇಟಿ ನೀಡಲಿದ್ದಾರೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ.