ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಮುಂಗಾರು ಕ್ಷೀಣದ ಭೀತಿ, ಇನ್ನೊಂದೆಡೆ ಕೃಷಿ ಸಚಿವರೇ ಇಲ್ಲದ ಅನಾಥ ಪರಿಸ್ಥಿತಿ ಎದುರಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಮಿಷನ್ ಮಾಸ್ಟರ್ ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದಲ್ಲಿ ಬರಗಾಲ ಎದುರಿಸಲು ಸಜ್ಜಾಗಿ ಎಂದು ಮಾಧ್ಯಮಗಳಿಗೆ ಪೋಸ್ ಕೊಟ್ಟರೆ ಏನೂ ಪ್ರಯೋಜನವಿಲ್ಲ. ನೀವೇ ಒಪ್ಪಿಕೊಂಡಿರುವಂತೆ ರಾಜ್ಯದಲ್ಲಿ ಇನ್ನೂ ಶೇ.೩೦ ರಷ್ಟು ಮಳೆಯೂ ಆಗಿಲ್ಲ. ಪರಿಸ್ಥಿತಿ ಹೀಗಿರುವಾಗ ಬರೀ ಎಸಿ ಕೋಣೆಯಲ್ಲಿ ಕೂತು ಕಾಟಾಚಾರದ ಸಭೆ ನಡೆಸಿದರೆ, ಮಾಧ್ಯಮಗಳಿಗೆ ಒಂದು ಹಾರಿಕೆ ಹೇಳಿಕೆ ಕೊಟ್ಟುಬಿಟ್ಟರೆ ಬರ ನೀಗುತ್ತದೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಬರಗಾಲ ಎದುರಿಸೋಕೆ, ರೈತರ ಕಷ್ಟ ಕೇಳೋಕೆ ರಾಜ್ಯದಲ್ಲಿ ಕೃಷಿ ಸಚಿವರು ಎಲ್ಲಿದ್ದಾರೆ ಸ್ವಾಮಿ ಎಂದು ಕೇಳಿರುವ ಅವರು, ಬರಪೀಡಿತ ತಾಲೂಕುಗಳಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೆ ತತ್ತರಿಸುತ್ತಿವೆ.
ಈ ತಾಪತ್ರಯ ವಿಚಾರಿಸಬೇಕಾದ ನಿಮ್ಮ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಎಲ್ಲಿದ್ದಾರೆ ಸ್ವಾಮಿ ಎಂದು ಪ್ರಶ್ನಿಸಿದ್ದಾರೆ. ನಿಮ್ಮದೇ ಶಾಸಕರ ಮುನಿಸು, ಆಂತರಿಕ ಅಸಮಾಧಾನವನ್ನು ಎದುರಿಸಲಾಗದೆ ಮುಕ್ಕಾಲು ಸಂಪುಟವನ್ನು ಖಾಲಿ ಇಟ್ಟುಕೊಂಡಿರುವ ತಾವು, ರಾಜ್ಯದ ಬರಗಾಲ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತೀರಿ ಎಂದು ಕನ್ನಡಿಗರು ಹೇಗೆ ತಾನೇ ನಂಬಿಯಾರು ಎಂದು ಕಾಲೆಳೆದಿದ್ದಾರೆ.
