ಯಾವುದೇ ರಾಷ್ಟ್ರವು ತನ್ನ ಜನರು ಆರೋಗ್ಯವಂತರು, ಕೌಶಲ್ಯವಂತರೂ ಮತ್ತು ಸಬಲರು ಆಗಿದ್ದಾರೋ ಎಂದು ಮೊದಲು ಖಚಿತಪಡಿಸಿಕೊಳ್ಳದೆ ನಿರಂತರ ಸಮೃದ್ಧಿಯನ್ನು ಸಾಧಿಸಿಲ್ಲ.
ದೀಪಾಂಶು ಮೋಹನ್ ಮತ್ತು ಅಂಕುರ್ ಸಿಂಗ್ ಅವರ ಈ ಲೇಖನ ಮಿಲಿಟರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ಖರ್ಚು ಮಾಡಿ, ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಕಡೆಗಣಿಸಿರುವ ಬಗ್ಗೆ ಆತಂಕಕಾರಿ ಒಳನೋಟಗಳನ್ನು ನೀಡುತ್ತದೆ.
ಮುಖ್ಯವಾಹಿನಿಯ ಸುದ್ದಿ ಮುಖ್ಯಾಂಶಗಳ ಆಚೆಗೆ, ಬಜೆಟ್ ಅಂಕಿಅಂಶಗಳನ್ನು ಕೂಲಂಕೂಶವಾಗಿ ನೋಡುವುದು ನಿರ್ಣಾಯಕ ಒಳನೋಟಗಳನ್ನು ನೀಡುತ್ತದೆ. ಭಾರತದ ರಕ್ಷಣಾ ಬಜೆಟ್ ಕಳೆದ ದಶಕದಲ್ಲಿಯೇ ದ್ವಿಗುಣಗೊಂಡಿದೆ, ಇತ್ತೀಚೆಗೆ ಘೋಷಿಸಲಾದ ಬಜೆಟ್‌ನಲ್ಲಿ 6.8 ಲಕ್ಷ ಕೋಟಿ ರುಪಾಯಿಯಾಗಿದೆ.
ಆದರೂ, ಈ ದಿಗ್ಭ್ರಮೆಗೊಳಿಸುವ ಅಂಕಿ ಅಂಶದ ಹೊರತಾಗಿಯೂ, ಸಶಸ್ತ್ರ ಪಡೆಗಳಿಗೆ ತೃಪ್ತಿಯಾಗಿಲ್ಲ. ಖರೀದಿಸಿದ ಸೇನಾ ಆಯುಧಗಳು ತಡವಾಗಿ ಬರುತ್ತವೆ, ನಿರ್ಣಾಯಕ ಆಧುನೀಕರಣ ಯೋಜನೆಗಳು ವರ್ಷಗಳಿಂದ ಜಾರಿಯಾಗಿಲ್ಲ, ಬಜೆಟ್‌ನ ಸುಮಾರು ಕಾಲು ಭಾಗವನ್ನು ಪಿಂಚಣಿಗಳೇ ನುಂಗುತ್ತವೆ. ದಾಖಲೆಯ ಹೆಚ್ಚಿನ ಖರ್ಚು ಮಾಡಿದರೂ ಸಹ, ಮಿಲಿಟರಿ ಇನ್ನೂ ಫೈರ್‌ಪವರ್ ಅನ್ನು ಹೊಂದಿಲ್ಲ.
ಇದೆಲ್ಲವೂ ಶಿಕ್ಷಣ ಮತ್ತು ಆರೋಗ್ಯದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮಾಡಬೇಕಾದ ವೆಚ್ಚದ ಮೇಲೆ ಪರಿಣಾಮ ಬೀರುತ್ತಿವೆ, ಆ ಕ್ಷೇತ್ರಗಳು ಹಿಂದುಳಿಯುತ್ತಲೇ ಇವೆ.
ದೇಶಾದ್ಯಂತ ಶಾಲೆಗಳಿಗೆ ಕಡಿಮೆ ಅನುದಾನ ಸಿಗುತ್ತಿವೆ, ಅನೇಕ ಮೂಲಭೂತ ಮೂಲಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಿವೆ. ಬಿಕ್ಕಟ್ಟು ಎಷ್ಟು ತೀವ್ರವಾಗಿದೆ ಎಂದರೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವು ಈಗ ರೈತರನ್ನು ಮೀರಿಸಿದೆ, ಇದು ಶಿಕ್ಷಣ ವಲಯದಲ್ಲಿರುವ ಒತ್ತಡ ಮತ್ತು ನಿರ್ಲಕ್ಷ್ಯವನ್ನು ಇದು ಕಠೋರವಾಗಿ ಪ್ರತಿಬಿಂಬಿಸುತ್ತದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಷ್ಟೇ ಭೀಕರ ಸ್ಥಿತಿಯಲ್ಲಿದೆ. ಭಾರತದ 24 ಲಕ್ಷ ಆಸ್ಪತೆಗಳಲ್ಲಿ ಹಾಸಿಗೆಗಳ ಕೊರತೆ ಇದೆ, ಲಕ್ಷಾಂತರ ಜನರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ.
ಭಾರತವು ತನ್ನ ಗಡಿಗಳನ್ನು ಬಲಪಡಿಸಲು ಸರ್ಕಸ್ ಮಾಡುತ್ತಿದ್ದರೆ, ಇನ್ನೊಂದು ಕಡೆ ತನ್ನ ಅತ್ಯಮೂಲ್ಯ ಆಸ್ತಿಯಾದ ಜನರನ್ನು ಕಡೆಗಣಿಸುತ್ತಿದೆ.
ಭಾರತದ ಶಿಕ್ಷಣ ಬಿಕ್ಕಟ್ಟು: ತುರ್ತು ಸುಧಾರಣೆಯ ಅಗತ್ಯ
ಶಿಕ್ಷಣವು ಭಾರತದ ಭವಿಷ್ಯದ ಅಡಿಪಾಯ ಎಂದು ಹಿಂದಿನಿಂದಲೂ ಹೇಳಲಾಗುತ್ತಿದೆ, ಆದರೆ ಬಜೆಟ್ ಹಂಚಿಕೆಗಳು ಮತ್ತು ಅಸಮರ್ಥತೆಗಳು ಬೇರೆಯೇ ಕಥೆಯನ್ನು ಹೇಳುತ್ತವೆ. ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವು ಜಿಡಿಪಿಯ (2024) 2.9% ರಷ್ಟು ಮಾತ್ರ ಇದೆ, ಇದು ಕೊಟ್ಟಾರಿ ಆಯೋಗವು ಶಿಫಾರಸು ಮಾಡಿದ 6% ಗುರಿಗಿಂತ ಕಡಿಮೆಯಾಗಿದೆ. 2015-16 ರಿಂದ ಫಂಡ್ ಹೆಚ್ಚಿದ್ದರೂ, ಕ್ಷೇತ್ರವು ತೀವ್ರ ಮೂಲಸೌಕರ್ಯ ಮತ್ತು ಮಾನವಶಕ್ತಿ ಕೊರತೆಯೊಂದಿಗೆ ಬಳಲುತ್ತಿದೆ.
ಅರ್ಹ ಶಿಕ್ಷಕರ ತೀವ್ರ ಕೊರತೆಯು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. 12 ಲಕ್ಷ ಶಿಕ್ಷಕರ ಹುದ್ದೆಗಳು ರಾಷ್ಟ್ರವ್ಯಾಪಿ ಖಾಲಿ ಬಿದ್ದಿವೆ, ಇದು ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವು 50:1 ಕ್ಕಿಂತ ಹೆಚ್ಚಾಗಿ, ತರಗತಿಗಳು ಮಕ್ಕಳೇ ಹೆಚ್ಚಾಗಿ ಶಿಕ್ಷಕರಿಲ್ಲದೆ ಕಂಗೆಟ್ಟಿವೆ. ಇದಕ್ಕಿಂತ ಕೆಟ್ಟ ಪರಿಸ್ಥಿತಿ ಎಂದರೆ, ಸುಮಾರು 40% ಸರ್ಕಾರದಿಂದ ನೇಮಕಗೊಂಡ ಶಿಕ್ಷಕರಿಗೆ ಸರಿಯಾದ ಅರ್ಹತೆಗಳಿಲ್ಲ, ಇದು ಕಲಿಕೆಯ ಫಲಿತಾಂಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆಗಳು ಮಾತ್ರವಲ್ಲದೆ, ಕಳಪೆ ಮೂಲಸೌಕರ್ಯ, ಔಟ್‌ಡೇಟೆಡ್ ಪಠ್ಯಕ್ರಮ ಮತ್ತು ಡಿಜಿಟಲ್ ವಿಭಜನೆಯಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಇದು ಲಕ್ಷಾಂತರ ಜನರಿಗೆ ಗುಣಮಟ್ಟದ ಶಿಕ್ಷಣ ಸಿಗದಂತೆ ಮಾಡುತ್ತಿದೆ.
ವ್ಯವಸ್ಥೆಯಲ್ಲಿನ ಬಿರುಕುಗಳು ದುರಂತದ ರೀತಿಯಲ್ಲಿ ಕಾಣಿಸುತ್ತವೆ. 2020 ರಲ್ಲಿ ಪ್ರತಿ 42 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನತೆಯ ಆತ್ಮಹತ್ಯೆ ಪ್ರಮಾಣವನ್ನು ತೋರಿಸಿದೆ. ಅಂಕಿಅಂಶಗಳು ಕಠೋರ ಚಿತ್ರಣವನ್ನು ನಮ್ಮ ಮುಂದೆ ಇಡುತ್ತವೆ. ಅದೇ ವರ್ಷ 11,396 ವಿದ್ಯಾರ್ಥಿಗಳ ಆತ್ಮಹತ್ಯೆಗಳು ದಾಖಲಾಗಿವೆ. ಹೆಚ್ಚಿನವು ಶೈಕ್ಷಣಿಕ ಒತ್ತಡ, ಪೋಷಕರ ನಿರೀಕ್ಷೆಗಳು ಮತ್ತು ಆತಂಕ ಇದಕ್ಕೆ ಕಾರಣವಾಗಿದೆ. ಆದರೂ, ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಬಗ್ಗೆ ಯಾವುದೇ ಅರಿವು ಇಲ್ಲ.
ಇತ್ತೀಚಿನ ಬಜೆಟ್‌ನೊಂದಿಗೆ ಸರ್ಕಾರವು ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಮತ್ತು ಡಿಜಿಟಲ್ ಸಂಪರ್ಕ ಕಾರ್ಯಕ್ರಮಗಳಂತಹ ಉಪಕ್ರಮಗಳನ್ನು ಹೆಚ್ಚಿಸಲು ಪ್ರಯತ್ನಿಸಿದೆ. ಹೂಡಿಕೆಯ ಕೊರತೆ, ಅಸಮರ್ಪಕ ಶಿಕ್ಷಕರ ತರಬೇತಿ ಮತ್ತು ಮಾನಸಿಕ ಆರೋಗ್ಯದ ನಿರ್ಲಕ್ಷ್ಯದ ಮೂಲಭೂತ ಸಮಸ್ಯೆಗಳು ಇನ್ನೂ ಹಾಗೆಯೇ ಇರುವಾಗ ಶಿಕ್ಷಣವನ್ನು ಆಧುನೀಕರಿಸುವ ಈ ಪ್ರಯತ್ನಗಳು ಸಫಲವಾಗಲು ಸಾಧ್ಯವಿಲ್ಲ.
ಬಜೆಟ್ ಹಂಚಿಕೆಯಲ್ಲಿನ ಅಸಮಾನತೆಯು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತದೆ, ಈ ಸರ್ಕಾರಕ್ಕೆ ಶಿಕ್ಷಣವು ದೊಡ್ಡ ಸಂಗತಿಯೇ ಅಲ್ಲ. ವರ್ಷದಿಂದ ವರ್ಷಕ್ಕೆ, ರಕ್ಷಣಾ ವ್ಯವಸ್ಥೆಯ ಮೇಲಿನ ವೆಚ್ಚವು ಸ್ಥಿರವಾದ ಹೆಚ್ಚಳವನ್ನು ಕಂಡರೆ, ಶಿಕ್ಷಣ ವ್ಯವಸ್ಥೆ ಹಿಂದುಳಿಯುತ್ತಲೇ ಇದೆ. ಕೆಳಗಿನ ಗ್ರಾಫ್ ಈ ಕಟುವಾದ ವಾಸ್ತವತೆಯನ್ನು ತೋರಿಸುತ್ತದೆ:
ನಾವು ಭಾರತದ ರಕ್ಷಣಾ ಬಜೆಟ್ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕಳೆದ ದಶಕದಲ್ಲಿ ಅದು ಹೇಗೆ 152% ಏರಿಕೆಯಾಗಿದೆ ಎಂಬುದನ್ನು ನಾವು ಕಾಣಬಹುದು. 2015-16 ರಲ್ಲಿ ಇದ್ದ 2.46 ಲಕ್ಷ ಕೋಟಿ ರುಪಾಯಿಗಳ ರಕ್ಷಣಾ ಬಜೆಟ್ 2025-26 ರಲ್ಲಿ 6.8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ತೀಕ್ಷ್ಣವಾದ ಏರಿಕೆಯು ಭಾರತದ ವಿಕಸನಗೊಳ್ಳುತ್ತಿರುವ ಭದ್ರತಾ ಕಾಳಜಿಗಳು, ಆಧುನೀಕರಣದ ಪ್ರಯತ್ನಗಳು ಮತ್ತು ಸೇನೆಯ ಆರ್ಥಿಕ ಒತ್ತಡವನ್ನು ತೋರಿಸುತ್ತದೆ.
ಹಾಗಿದ್ದೂ, ಅಂಕಿ ಅಂಶಗಳು ರಚನಾತ್ಮಕ ಸವಾಲುಗಳನ್ನು ಎತ್ತಿ ತೋರಿಸುತ್ತದೆ. 2020-21 ರಲ್ಲಿ, ರಕ್ಷಣೆಗಾಗಿ ಮೀಸಲಿಟ್ಟ 3.37 ಲಕ್ಷ ಕೋಟಿ ರುಪಾಯಿಗಳಲ್ಲಿ ಸುಮಾರು 1.34 ಲಕ್ಷ ಕೋಟಿ (29%) ಬರೀ ನಿವೃತ್ತರ ಪಿಂಚಣಿಗಾಗಿ ಮೀಸಲಿಡಲಾಗಿದೆ. ಇದರರ್ಥ ಬಜೆಟ್‌ನ ಗಮನಾರ್ಹ ಭಾಗವು ಆಧುನೀಕರಣ ಅಥವಾ ಮೂಲಸೌಕರ್ಯಕ್ಕೆ ಹೆಚ್ಚು ಬಳಕೆಯಾಗುತ್ತಿಲ್ಲ.
ಈ ಎಲ್ಲಾ ಪರಿಸ್ಥಿತಿಗಳನ್ನು ನೋಡುವಾಗ ಹೆಲ್ತ್‌ಕೇರ್ ಹೆಚ್ಚು ಬಾಧಿತವಾದಂತೆ ಕಾಣುತ್ತಿಲ್ಲ. ಮೊದಲ ನೋಟಕ್ಕೆ ಭಾರತದ ಆರೋಗ್ಯ ವ್ಯವಸ್ಥೆಯ ಮೇಲಿನ ಬಜೆಟ್ ಸುಧಾರಿಸುತ್ತಿರುವಂತೆ ತೋರುತ್ತಿದೆ ಮತ್ತು ಇದು ಭಾಗಶಃ ನಿಜವಾಗಿದ್ದರೂ, ಹಂಚಿಕೆಯು 2015-16 ರಲ್ಲಿ 33,152 ಕೋಟಿಗಳಿಂದ 2025-26 ರಲ್ಲಿ ರೂ 95,957 ಕೋಟಿಗಳಿಗೆ ಏರಿಕೆಯಾಗಿದೆ, ಇದು 100% ಕ್ಕಿಂತ ಹೆಚ್ಚಿನ ಏರಿಕೆಯಾಗಿದೆ.
ಈ ಹೆಚ್ಚಳದ ಹೊರತಾಗಿಯೂ, ಭಾರತದ ಆಸ್ಪತ್ರೆಯ ಹಾಸಿಗೆಯ ಲಭ್ಯತೆಯು ಕಡಿಮೆಯಾಗಿದೆ. ಭಾರತದ ಆಸ್ಪತ್ರೆಗಳಲ್ಲಿ ಪ್ರತಿ 1,000 ಜನರಿಗೆ ಕೇವಲ 1.4 ಹಾಸಿಗೆಗಳು ಲಭ್ಯ ಇವೆ. ಇದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ 1,000 ಗೆ 3.5 ರಷ್ಟು ಹಾಸಿಗೆ ಇರಬೇಕು ಎಂಬುದಕ್ಕಿಂತ ಕಡಿಮೆಯಾಗಿದೆ. ಇದಕ್ಕಿಂತ ಕೆಟ್ಟದಾಗಿ, ಸರ್ಕಾರಿ ಆಸ್ಪತ್ರೆಗಳು ಇನ್ನೂ ಹೆಚ್ಚು ಆತಂಕಕಾರಿ ಅನುಪಾತವನ್ನು ಹೊಂದಿವೆ – 1,000 ಜನರಿಗೆ ಕೇವಲ 0.79 ಹಾಸಿಗೆಗಳು, ಅಂದರೆ ದೇಶದಲ್ಲಿ 24 ಲಕ್ಷ ಹಾಸಿಗೆಗಳ ಕೊರತೆ ಇದೆ. ವೈದ್ಯರ ಮತ್ತು ರೋಗಿಗಳ ಅನುಪಾತವು 1:1511 ರಷ್ಟಿದೆ, WHO-ಶಿಫಾರಸು ಮಾಡಿದ 1:1,000 ಅನುಪಾತವನ್ನು ಸಾಧಿಸಲು ಭಾರತ ವಿಫಲವಾಗಿದೆ.
ಗ್ರಾಮೀಣ-ನಗರದ ಮಧ್ಯೆ ಇರುವ ವಿಭಜನೆಯು ವ್ಯವಸ್ಥೆಯಲ್ಲಿನ ಬಿರುಕುಗಳನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ; 70% ಭಾರತೀಯರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆದರೆ ಕೇವಲ 40% ಆಸ್ಪತ್ರೆಯ ಹಾಸಿಗೆಗಳು ಮಾತ್ರ ಅವರಿಗೆ ಲಭ್ಯವಿವೆ. ನರ್ಸ್-ಟು-ರೋಗಿಯ ಅನುಪಾತಗಳು 1:670 ನಲ್ಲಿ ನಿಂತಿವೆ. ಇದು ಶಿಫಾರಸು ಮಾಡಿದ 1:300 ಕ್ಕಿಂತ ಕಳಪೆ. ಸಾರ್ವಜನಿಕ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ವ್ವವಸ್ಥೆ ಸರಿ ಮಾಡಲು ಸರಿಯಾದ ಹಣ ಇಲ್ಲ. ಅವುಗಳ ಮಿತಿಯನ್ನು ಮೀರಿ ವಿಸ್ತರಿಸಲಾಗಿದೆ, ಆದರೆ ಖಾಸಗಿ ಆಸ್ಪತ್ರೆಗಳು ಉತ್ತಮ ಸುಸಜ್ಜಿತವಾಗಿದ್ದರೂ, ಹೆಚ್ಚಿನ ವೆಚ್ಚದ ಕಾರಣದಿಂದಾಗಿ ಲಕ್ಷಾಂತರ ಜನರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ.
ಕೆಳಗಿನ ಗ್ರಾಫ್ ಒಂದು ಸಮಸ್ಯೆಗಳ ಕಥೆಯನ್ನು ಹೇಳುತ್ತದೆ, ಆರೋಗ್ಯ ಕ್ಷೇತ್ರವು ಕಡಿಮೆ ಅನುದಾನವನ್ನು ಹೊಂದಿದೆ, ಅಲ್ಲದೆ ಸರ್ಕಾರವು ತಾನು ನಿಗದಿಪಡಿಸಿದ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಿಲ್ಲ. ಗ್ರಾಫ್‌ನಲ್ಲಿ ತೋರಿಸಿದಂತೆ, ವಾಸ್ತವಿಕ ವೆಚ್ಚವು ಸಾಮಾನ್ಯವಾಗಿ ಬಜೆಟ್ ಅಂದಾಜುಗಳಿಗಿಂತ ಕಡಿಮೆಯಿರುತ್ತದೆ, ಇದು ವ್ಯವಸ್ಥೆಯೊಳಗೆ ಆಳವಾದ ರಚನಾತ್ಮಕ ಅಂತರವನ್ನು ಎತ್ತಿ ತೋರಿಸುತ್ತದೆ. ಅಧಿಕಾರಶಾಹಿಯ ಅಸಮರ್ಥತೆಗಳು, ಯೋಜನೆಯ ಅನುಷ್ಠಾನದಲ್ಲಿನ ವಿಳಂಬಗಳು ಅಥವಾ ದೀರ್ಘಾವಧಿಯ ಯೋಜನೆಯ ಕೊರತೆಯಿಂದಾಗಿ, ಖರ್ಚು ಮಾಡದ ನಿಧಿಗಳು ನೀತಿ ಮತ್ತು ಅನುಷ್ಠಾನದ ನಡುವೆ ವ್ಯಾಪಕವಾದ ಸಂಪರ್ಕ ಕಡಿತವನ್ನು ಉಂಟುಮಾಡಿದೆ. ಇದರ ಅರ್ಥ, ಕಾಗದದ ಮೇಲೆ ಹಣವನ್ನು ಹಂಚಿಕೆ ಮಾಡುವುದು- ನಿಜವಾದ ಸುಧಾರಣೆಗಳಲ್ಲಿ ವಿಫಲವಾಗುವುದು. ಈ ಸ್ಥಿರವಾದ ಕೊರತೆಯು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಬಹುಶಃ ಅತ್ಯಂತ ವಿನಾಶಕಾರಿ ಅಂಕಿಅಂಶ ಇದು: ಭಾರತದ ಒಟ್ಟು ಆರೋಗ್ಯ ವೆಚ್ಚದ 62.6% ಅನ್ನು ಜನರು ತಮ್ಮ ಜೇಬಿನಿಂದ ಪಾವತಿಸುತ್ತಾರೆ, ಇದು ವಿಶ್ವದಲ್ಲೇ ಅತಿ ಹೆಚ್ಚು. ವೈದ್ಯಕೀಯ ಬಿಲ್‌ಗಳು ಭಾರತದಲ್ಲಿ ಬಡತನಕ್ಕೆ ಪ್ರಮುಖ ಕಾರಣವಾಗಿವೆ, ಆದರೂ ಸರ್ಕಾರವು ಈ ಹೊರೆಯನ್ನು ಕಡಿಮೆ ಮಾಡಲು ಏನೇನೂ ಮಾಡಿಲ್ಲ.
2025-26ರಲ್ಲಿ ಕೇವಲ 1.80 ಲಕ್ಷ ಕೋಟಿ ರುಪಾಯಿಗಳನ್ನು ಬಂಡವಾಳ ವಿನಿಯೋಗಕ್ಕಾಗಿ ಮೀಸಲಿಡುವುದರೊಂದಿಗೆ ರಕ್ಷಣಾ ಬಜೆಟ್ ಸ್ಥಿರವಾದ ಏರಿಕೆಯನ್ನು ಕಂಡಿದೆ, ಆರೋಗ್ಯ ವ್ಯವಸ್ಥೆಯು ದೀರ್ಘಕಾಲಿಕವಾಗಿ ಕಡಿಮೆ ಅನುದಾನವನ್ನು ಹೊಂದಿದೆ. ಮಿಲಿಟರಿಯಲ್ಲಿ ಆಧುನೀಕರಣವು ಅಗತ್ಯ, ಆದರೆ ಆಸ್ಪತ್ರೆಗಳ ಆಧುನೀಕರಣ ಬಗ್ಗೆ ಯಾವಾಗ ಮಾಡುವುದು? ಹೊಸ ವೈದ್ಯಕೀಯ ಮೂಲಸೌಕರ್ಯಗಳನ್ನು ನಿರ್ಮಿಸುವುದು ಯಾವಾಗ?
ಬಲಿಷ್ಠ ಮತ್ತು ಸಮೃದ್ಧ ಭಾರತದ ಕೀಲಿಕೈ
ಮಧ್ಯಮ-ಆದಾಯದ ಬಲೆಯಿಂದ ಅಕಾಲಿಕ ಕೈಗಾರಿಕೀಕರಣದ ಅಪಾಯದವರೆಗೆ ಅಥವಾ ನಿರುದ್ಯೋಗ ಬೆಳವಣಿಗೆಯಿಂದ ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಮಣಿಯನ್ ಹೇಳುವ “ಸ್ಥಗಿತ ಆರ್ಥಿಕತ” ಆಗುವ ಅಪಾಯದವರೆಗೆ ನಮ್ಮ ಭವಿಷ್ಯ ಸಿಕ್ಕಿಹಾಕಿಕೊಳ್ಳುವ ಬಲೆಗಳಿಂದ ತಪ್ಪಿಸಿಕೊಳ್ಳಬೇಕೆಂದರೆ ನಾವು ಸಮಸ್ಯೆಗಳನ್ನು ಗುರುತಿಸಬೇಕು. ಒಂದು ದೇಶದ ಶಕ್ತಿಯನ್ನು ಕೇವಲ ರಕ್ಷಣಾ ಬಜೆಟ್ ಮತ್ತು ಜಿಡಿಪಿ ಅಂಕಿಅಂಶಗಳಲ್ಲಿ ಅಳೆಯಲಾಗುವುದಿಲ್ಲ. ಅದನ್ನು ಅದರ ಜನರ ಸಾಮರ್ಥ್ಯಗಳಲ್ಲಿ ಅಳೆಯಲಾಗುತ್ತದೆ.
ಯುವ ಜನಸಂಖ್ಯೆಯೊಂದಿಗೆ, ದೊಡ್ಡ ಜನಸಂಖ್ಯೆ ಲಾಭಾಂಶದ ಪ್ರಯೋಜನಗಳನ್ನು ಪಡೆದುಕೊಳ್ಳಲು ಕಡಿಮೆ ಅವಕಾಶಗಳನ್ನು ಹೊಂದಿದ್ದಾರೆ. ಆದರೆ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ದೃಢವಾದ ಹೂಡಿಕೆಗಳಿಲ್ಲದೆ, ಆ ಪ್ರಯೋಜನವು ಸುಲಭವಾಗಿ ಸಿಗದೆ ಡೆಮೋಗ್ರಾಫಿಕ್ ಡಿಸಾಸ್ಟರ್ ಆಗಿ ಬದಲಾಗಬಹುದು. ಭಾರತವು “ಶ್ರೀಮಂತವಾಗುವಾಗ ಮುದುಕನಾಗುವ ಅಪಾಯ”ದಲ್ಲಿದೆ ಎಂದು ಮೆಕಿನ್ಸೆ ವರದಿಯು ಎಚ್ಚರಿಸಿದೆ, ಏಕೆಂದರೆ ಅಸಮರ್ಪಕ ಮಾನವ ಬಂಡವಾಳ ಹೂಡಿಕೆಗಳು ದೇಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವ ಮೊದಲು ಆರ್ಥಿಕ ಪ್ರಗತಿಯನ್ನು ಸ್ಥಗಿತಗೊಳಿಸಬಹುದು.
ಯಾವುದೇ ರಾಷ್ಟ್ರವು ತನ್ನ ಜನರು ಆರೋಗ್ಯವಂತರು, ಕೌಶಲ್ಯವಂತರೂ ಮತ್ತು ಸಬಲರು ಆಗಿದ್ದಾರೋ ಎಂದು ಮೊದಲು ಖಚಿತಪಡಿಸಿಕೊಳ್ಳದೆ ನಿರಂತರ ಸಮೃದ್ಧಿಯನ್ನು ಸಾಧಿಸಿಲ್ಲ. ರಾಷ್ಟ್ರೀಯ ಬಲವನ್ನು ಉಳಿಸಿಕೊಳ್ಳುವ ಅಡಿಪಾಯವನ್ನು ನಿರ್ಲಕ್ಷಿಸುವಾಗ ನಾವು ಸಂಪನ್ಮೂಲಗಳನ್ನು ಮಿಲಿಟರಿ ವಿಸ್ತರಣೆಗೆ ಸುರಿಯುತ್ತಾರೆ. ಅಭಿವೃದ್ಧಿ ಹೊಂದಿದ ಭಾರತ ಎಂದರೆ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ಸಿಗುವ ನಿಜವಾದ ಸುರಕ್ಷಿತ ಭಾರತ, ಅಲ್ಲಿ ಯಾವುದೇ ಕುಟುಂಬವು ವೈದ್ಯಕೀಯ ಸಮಸ್ಯೆ ಎದುರಾದಾಗ ದಿವಾಳಿಯಾಗುತ್ತೇವೆ ಎಂದು ಹೆದರುವುದಿಲ್ಲ. ಈ ಭಾರತದಲ್ಲಿ ಮಿಲಿಟರಿ ಶಕ್ತಿ ಮಾತ್ರವಲ್ಲ, ಮಾನವ ಸಾಮರ್ಥ್ಯವೂ ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತದೆ.
ಈ ಲೇಖನವು ದಿ ವೇರ್‌ನಲ್ಲಿ ಪ್ರಕಟವಾಗಿರುವ Data Story: The Unseen Costs of Underfunding Education and Healthcare ಯ ಕನ್ನಡ ಭಾವಾನುವಾದವಾಗಿದೆ.
ಈ ಸಂಶೋಧನೆಗೆ ಅನನಿಯಾ ಸಿಂಘಾಲ್ ಕೂಡ ಕೊಡುಗೆ ನೀಡಿದ್ದಾರೆ.
ದೀಪಾಂಶು ಮೋಹನ್ ಅವರು IDEASನ ಅರ್ಥಶಾಸ್ತ್ರದ ಪ್ರೊಫೆಸರ್, ಡೀನ್ ಮತ್ತು ಸೆಂಟರ್ ಫಾರ್ ನ್ಯೂ ಎಕನಾಮಿಕ್ ಸ್ಟಡೀಸ್‌ನ ನಿರ್ದೇಶಕರು. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ AMES ಗೆ ಶೈಕ್ಷಣಿಕ ಸಂದರ್ಶಕ ಫೆಲೋ ಆಗಿದ್ದಾರೆ.
ಅಂಕುರ್ ಸಿಂಗ್ ಅವರು ಸೆಂಟರ್ ಫಾರ್ ನ್ಯೂ ಎಕನಾಮಿಕ್ಸ್ ಸ್ಟಡೀಸ್ (CNES) ನ ಸಂಶೋಧನಾ ಸಹಾಯಕರಾಗಿದ್ದು, ಅದರ ಇನ್ಫೋಸ್ಪಿಯರ್ ಉಪಕ್ರಮದ ತಂಡದ ಸದಸ್ಯರಾಗಿದ್ದಾರೆ.