Home ಇನ್ನಷ್ಟು ಕೋರ್ಟು - ಕಾನೂನು ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ತಡೆ ಇಲ್ಲ: ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಮುಂದೂಡಿಕೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ತಡೆ ಇಲ್ಲ: ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಮುಂದೂಡಿಕೆ

0

ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೊರಡಿಸಲಾಗಿರುವ ಗಡೀಪಾರು ಆದೇಶಕ್ಕೆ ತಾತ್ಕಾಲಿಕ ತಡೆ ನೀಡಲು ಕರ್ನಾಟಕ ಹೈಕೋರ್ಟ್ ರಜಾಕಾಲದ ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಮೂರನೇ ಬಾರಿ ಗಡೀಪಾರು ಮಾಡಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಅಲ್ಲದೆ, ಸರ್ಕಾರದ ಮುಂದೆ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ತಿಮರೋಡಿ ವಿಭಾಗೀಯ ನ್ಯಾಯಪೀಠದ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ಅರ್ಜಿ ವಿಚಾರಣೆಗೆ ಬಂದಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್, ಗಡೀಪಾರು ಆದೇಶಕ್ಕೆ ತಡೆ ನೀಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಏಕಸದಸ್ಯ ನ್ಯಾಯಪೀಠದ ಸೂಚನೆಯಂತೆ ಮೊದಲು ಸರ್ಕಾರದ ಮುಂದೆ ಮೇಲ್ಮನವಿ ಸಲ್ಲಿಸಬೇಕಿತ್ತು. ಅದನ್ನು ಬಿಟ್ಟು ನೇರವಾಗಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವುದು ಸೂಕ್ತ ಕ್ರಮವಲ್ಲ ಎಂದು ವಾದಿಸಿದರು.

ಸರ್ಕಾರದ ವಾದವನ್ನು ಪರಿಗಣಿಸಿದ ನ್ಯಾಯಪೀಠ, ಈ ಹಂತದಲ್ಲಿ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು. ಜೊತೆಗೆ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಪುತ್ತೂರು ಉಪವಿಭಾಗಾಧಿಕಾರಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿತು.

ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆ ಹಾಗೂ ನ್ಯಾಯಕ್ಕಾಗಿ ಕಳೆದ ಹಲವು ವರ್ಷಗಳಿಂದ ಮಹೇಶ್ ಶೆಟ್ಟಿ ತಿಮರೋಡಿ ಹೋರಾಟ ನಡೆಸುತ್ತಿದ್ದು, ಅವರ ವಿರುದ್ಧದ ಗಡೀಪಾರು ಆದೇಶ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ.

You cannot copy content of this page

Exit mobile version