ಹಾಸನ: ಕಾರ್ಮಿಕ ಸಂಹಿತೆಗಳಿಂದಾಗಿ ವೈದ್ಯಕೀಯ ಪ್ರತಿನಿಧಿಗಳಾದ ಮಾರಾಟ ಪ್ರಚಾರ ನೌಕರರನ್ನು ಉರಿಯುವ ಬಾಂಡಲೆಯಿಂದ ಬೆಂಕಿಗೆ ದೂಡುವಂತಾಗಿದ್ದು, ಕೂಡಲೇ ಸಂಹಿತೆ ರದ್ದು ಮಾಡಿ ಸಂಬಳ ಹೆಚ್ಚಿಸಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಶ್ರೀನಿವಾಸ್ ಹೊಸಹಳ್ಳಿ ಮಾಧ್ಯಮದೊಂದಿಗೆ ಮಾತನಾಡಿ, ಇಂದು ದೇಶಾದ್ಯಂತ 2 ಲಕ್ಷಕ್ಕೂ ಅಧಿಕವಾಗಿ ಮಾರಾಟ ಪ್ರಚಾರ ನೌಕರರ ಫೆಡರೇಷನ್ ಆಫ್ ಮೆಡಿಕಲ್ ಅಂಡ್ ಸೇಲ್ಸ್ ರೆಪ್ರೆಸೆಂಟೇಟಿವ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ ಎಂ ಆರ್ ಎ ಐ) ಇದರ ನೇತೃತ್ವದ ಅಡಿಯಲ್ಲಿ, ಕಾರ್ಪೊರೇಟ್ ಗಳ ಅತಿಕ್ರಮಣ, ಕಾರ್ಮಿಕ ಹಿತಾಸಕ್ತಿಗಳ ಕ್ಷೀಣಿಸುವಿಕೆ ಮತ್ತು ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4 ಕಾರ್ಮಿಕ ಸಂಹಿತೆಗಳ ಆತಂಕಕಾರಿ ಪ್ರಭಾವಗಳಿಂದಾಗಿ ತಲೆದೋರಿರುವ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಧ್ವನಿ ಏರಿಸಿ ರಾಷ್ಟç ಮಟ್ಟದ ಸಾರ್ವತ್ರಿಕ ಮುಷ್ಕರದಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ರಾಜ್ಯದಲ್ಲಿಯೂ, ಎಫ್ ಎಂ ಆರ್ ಎ ಐ ಮತ್ತು ಸಿಐಟಿಯು ನೊಂದಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ನೇತೃತ್ವದಡಿಯಲ್ಲಿ, ಮೂವತ್ತು ಜಿಲ್ಲೆಗಳಲ್ಲಿಯೂ ಮೆರವಣಿಗೆಯನ್ನು ಹಮ್ಮಿಕೊಂಡು, ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಸಂಘದ ಸದಸ್ಯರು 4 ಕಾರ್ಮಿಕ ಸಂಹಿತೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇದು ಕಾರ್ಪೊರೇಟ್ ಪರವಾಗಿದ್ದು, ಕಾರ್ಮಿಕ ಸುಧಾರಣೆಯ ಹೆಸರಿನಲ್ಲಿ ದಾರಿತಪ್ಪಿಸುವಂತೆ ಮಾಡಿ ಜಾರಿಗೊಳಿಸಲಾಗಿದೆ ಎಂದಿದ್ದಾರೆ. ಕಾರ್ಮಿಕರನ್ನು ಕಾಪಾಡುವ ಬದಲಾಗಿ ಈ ಸಂಹಿತೆಗಳು ಕೆಲಸದ ಭದ್ರತೆ, ಘನತೆ ಮತ್ತು ಮೂಲಭೂತ ಹಕ್ಕುಗಳನ್ನು ನಿರ್ಲಕ್ಷಿಸಿ ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವಂತೆ ರೂಪಿಸಲಾಗಿದೆ. ಇವು ಸುಧಾರಣೆಗಳಲ್ಲ, ಕಾರ್ಮಿಕರ ಘನತೆಯ ಮೇಲಿನ ದಾಳಿಯಾಗಿದೆ. ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಉರಿಯುವ ಬಾಂಡಲೆಯಿಂದ ಬೆಂಕಿಗೆ ದೂಡುವಂತಿದೆ. ಇದನ್ನು ಕೂಡಲೇ ಹಿಂಪಡೆಯಬೇಕು ಎಂಬುದೇ ಬೇಡಿಕೆಯಾಗಿದೆ. ಈ ಸಂಹಿತೆಗಳು ನೇಮಕಾತಿ ಮತ್ತು ವಜಾಗೊಳಿಸುವುದನ್ನು ನ್ಯಾಯ ಬದ್ಧವಾಗಿಸುತ್ತದೆ, ಕಾರ್ಮಿಕ ಸಂಘಗಳನ್ನು ದುರ್ಬಲ ಗೊಳಿಸುತ್ತದೆ, ಯಾವುದೇ ರಕ್ಷಣೆ ಗಳಿಲ್ಲದೆ ಕೆಲಸದ ಅವಧಿಯನ್ನು ಹೆಚ್ಚಳವಾಗಿ ಸುತ್ತದೆ, ಜಾರಿಗೊಳಿಸುವ ವಿಧಾನವನ್ನು ದುರ್ಬಲ ಗೊಳಿಸುತ್ತದೆ ಮತ್ತು ಆಯಾ ವಲಯದ ನಿರ್ದಿಷ್ಟವಾದ ಕಾನೂನುಗಳನ್ನು ಉದಾಹರಣೆಯಾಗಿ ಮಾರಾಟ ಪ್ರಚಾರ ನೌಕರರ ಕಾಯಿದೆ (1976) ಗಳನ್ನು ತೊಡೆದು ಹಾಕುತ್ತದೆ ಎಂದರು.
ಮಾರಾಟ ಪ್ರಚಾರ ನೌಕರರ ಪ್ರಮುಖ ಕೇಂದ್ರ ಸರಕಾರದ ಮುಂದೆ ಬೇಡಿಕೆಗಳೆಂದರೇ: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಬೇಕು, ಎಸ್ ಪಿ ಈ ಕಾಯ್ದೆ (1976) ಅನ್ನು ರಕ್ಷಿಸಬೇಕು. ಮಾರಾಟ ಪ್ರಚಾರ ನೌಕರರಿಗೆ ಶಾಸನಬದ ಕೆಲಸದ ನಿಯಮಾವಳಿಗಳನ್ನು ರೂಪಿಸಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತು ಸಂಸ್ಥೆಗಳಲ್ಲಿ ವೈದ್ಯಕೀಯ ಪ್ರತಿನಿಧಿಗಳ ಪ್ರವೇಶದ ಮೇಲೆ ಹೇರಿರುವ ನಿರ್ಬಂಧನೆಗಳನ್ನು ಹಿಂಪಡೆಯುವುದು, ಕೆಲಸ ನಿರ್ವಹಿಸುವ ಹಕ್ಕನ್ನು ಸಮರ್ಥಿಸಬೇಕು. ಔಷಧಿಗಳನ್ನು ಒಳಗೊಂಡು ಅಗತ್ಯ ವಸ್ತುಗಳ ಮೇಲಿನ ಬೆಲೆಗಳನ್ನು ನಿಯಂತ್ರಿಸಬೇಕು ಮತ್ತು ಜೀವರಕ್ಷಕ ಔಷಧಿಗಳ ಮೇಲಿನ ಜಿ ಎಸ್ ಟಿಯನ್ನು ತೆಗೆದು ಹಾಕಬೇಕು ಎಂದು ಹೇಳಿದರು. ಔಷಧ ತಯಾರಿಕೆಯಲ್ಲಿ ದೇಶವು ಸ್ವಾವಲಂಬನೆಯನ್ನು ಸಾಧಿಸಲು ಖಾಸಗೀಕರಣವನ್ನು ನಿಲ್ಲಿಸುವುದು ಅಲ್ಲದೆ ಸಾರ್ವಜನಿಕ ಔಷಧ ತಯಾರಿಕಾ ಸಂಸ್ಥೆಗಳನ್ನು ಜೀರ್ಣೋದ್ಧಾರ ಗೊಳಿಸಬೇಕು. ಕಳಪೆ ಮತ್ತು ನಕಲಿ ಔಷಧಿ ತಯಾರಕರ ಮೇಲೆ ಸೆರೆವಾಸವನ್ನು ಒಳಗೊಂಡು ಬಿಗಿಯಾದ ಶಿಕ್ಷೆಗಳನ್ನು ಖಾತ್ರಿಗೊಳಿಸಬೇಕು. ಎಸ್ ಪಿ ಇ ಗಳನ್ನು ಒಳಗೊಂಡು ಎಲ್ಲಾ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ ತಿಂಗಳಿಗೆ ರೂ. 9000 ವನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಮುಂದಿರುವ ಬೇಡಿಕೆಗಳೆಂದರೇ: ಮಾರಾಟ ಪ್ರಚಾರ ನೌಕರರಿಗೆ ರೂ. 26910 ಕನಿಷ್ಠ ವೇತನವನ್ನು ಘೋಷಿಸಬೇಕು. ಮಾರಾಟ ಪ್ರಚಾರ ನೌಕರರಿಗೆ ಎಂಟು ಘಂಟೆಗಳ ಕೆಲಸದ ಅವಧಿಯನ್ನು ಅಧಿಸೂಚಿಸುವುದು ಮತ್ತು ಅದನ್ನು ಕರಾರುವಾಕ್ಕಾಗಿ ಜಾರಿಗೊಳಿಸಬೇಕು. ದಬ್ಬಾಳಿಕೆಯ ಮಾರಾಟದ ಗುರಿಯನ್ನು ನೀಡುವುದು, ನ್ಯಾಯವಲ್ಲದ ವರ್ಗಾವಣೆಯನ್ನು ಮತ್ತು ರಜೆಯನ್ನು ತಿರಸ್ಕರಿಸುವುದನ್ನು ಒಳಗೊಂಡು ಮಾರಾಟದ ವಿಚಾರವಾಗಿ ಶೋಷಿಸುವುದನ್ನು ನಿಲ್ಲಿಸಬೇಕು ಹಾಗೂ ನೌಕರರ ಗೌಪ್ಯತೆಯನ್ನು ಗೌರವಿಸುವುದು, ಜಿಪಿಎಸ್ ಮೂಲಕ ಪತ್ತೆ ಹಚ್ಚುವುದು, ಅಪ್ಲಿಕೇಶನ್ಗಳ ಮೂಲಕ ಕಣಾವಲು ಮತ್ತು ಕೆಲಸದ ಅವಧಿಯ ನಂತರವೂ ಡಿಜಿಟಲ್ ಮುಖಾಂತರ ಮೇಲ್ವಿಚಾರಣೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿಯೂ ಕಾರ್ಮಿಕರು ಅದರಲ್ಲಿಯೂ ಮಾರಾಟ ಪ್ರಚಾರ ನೌಕರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅರಿವು ಮೂಡಿಸಬೇಕು. ನಿಮ್ಮ ಸಹಕಾರದಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ಷ÷್ಮಗ್ರಾಹಿಯಾಗುವಂತಾಗಲಿ ಮತ್ತು ಎಲ್ಲಾ ಪಾಲುದಾರರು ತಮ್ಮ ಹಕ್ಕುಗಳನ್ನು ಮತ್ತು ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸಹಾಯ ಆಗುವಂತಾಗಲಿ ಎಂದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ರಾಜು, ಶ್ರೀಧರ್, ಶಿವು, ವೇಣುಗೋಪಾಲ್, ಪುನಿತ್ ಪಟೇಲ್, ಮಂಜು, ಕೃಷ್ಣ, ಪುರುಷೋತ್ತಮ್, ಪುಟ್ಟರಾಜು, ಸುನಿಲ್ ಗೌಡ ಇತರರು ಉಪಸ್ಥಿತರಿದ್ದರು.