ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ಸೋಮವಾರ 23 ವರ್ಷದ ಯುವಕನೊಬ್ಬ ತನ್ನ ಕುಟುಂಬದ ನಾಲ್ವರು ಸದಸ್ಯರು ಮತ್ತು ಸ್ನೇಹಿತೆಯನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡು ಪೊಲೀಸರ ಮುಂದೆ ಶರಣಾಗಿದ್ದಾನೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಫಾನ್ ವೆಂಜರಮೂಡು ಪೊಲೀಸ್ ಠಾಣೆಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಕೊಲೆಗಳ ಹಿಂದಿನ ಉದ್ದೇಶ ಸದ್ಯ ಸ್ಪಷ್ಟವಾಗಿಲ್ಲ.
ಮೃತರನ್ನು ಅಫಾನ್ ನ 13 ವರ್ಷದ ಸಹೋದರ ಅಫ್ಸಾನ್, ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿದಾ, ಅಜ್ಜಿ ಸಲ್ಮಾ ಬೀವಿ ಮತ್ತು ಸ್ನೇಹಿತೆ ಫರ್ಸಾನಾ ಎಂದು ಗುರುತಿಸಲಾಗಿದೆ. ತಿರುವನಂತಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾಯಿ ಶೆಮಿ ಮೇಲೆಯೂ ಅಫಾನ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ರಾಜ್ಯ ರಾಜಧಾನಿಯ ಬಳಿಯ ವೆಂಜರಮೂಡು, ಎಸ್‌ಎನ್ ಪುರಂ ಮತ್ತು ಪಾಂಗೋಡ್ ಪ್ರದೇಶಗಳಲ್ಲಿ ಈ ಕೊಲೆಗಳು ನಡೆದಿವೆ.
ಶರಣಾಗುವಾಗ, ಅಫಾನ್ ತನ್ನ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ತೆರೆದಿಟ್ಟು ವಿಷ ಸೇವಿಸಿರುವುದಾಗಿ ಪೊಲೀಸರಿಗೆ ತಿಳಿಸಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೂರು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಫಾನ್ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದೆ ಎಂದು ವಾಮನಪುರಂ ಶಾಸಕ ಡಿ.ಕೆ. ಮುರಳಿ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ . ಅಫಾನ್ ಅವರ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.