ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಬಯಕೆ ಸ್ವಾಗತಾರ್ಹವಾದರೂ, ಸರ್ಕಾರವು ಗೌಪ್ಯ ಮತ್ತು ಪಾರದರ್ಶಕವಲ್ಲದ ಮಾರ್ಗವನ್ನು ಆರಿಸಿಕೊಂಡಿರುವುದರಿಂದ ಇದು ಸ್ವಲ್ಪ ಮಟ್ಟಿಗೆ ಒಗಟಾಗಿ ಪರಿಣಮಿಸಿದೆ.
ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಸೂಚಿಸಲು ಗೃಹ ಸಚಿವಾಲಯವು ಮೇ 2020ರಲ್ಲಿ ಐದು ಸದಸ್ಯರ ಸಮಿತಿಯನ್ನು ರಚಿಸಿತ್ತು ಎಂದು ಈಗ ತಿಳಿದುಬಂದಿದೆ. ಆ ಸಮಿತಿಯು ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಸ್ಥಳೀಯಗೊಳಿಸುವ ಉದ್ದೇಶದಿಂದ ವಿವಿಧ ಅಂಶಗಳ ಬಗ್ಗೆ ವಿವರವಾದ ವಿಶ್ಲೇಷಣೆಯನ್ನು ಮಾಡಿತು.
ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಪಕ್ಷ ಮತ್ತು ಸಾರ್ವಜನಿಕರಿಗೆ ಇಂತಹದ್ದೊಂದು ಮಹತ್ವದ ಹೆಜ್ಜೆಯ ಕುರಿತು ಮಾಹಿತಿಯೇ ಇರಲಿಲ್ಲವೆನ್ನುವುದು ಆಶ್ಚರ್ಯಕರವಾಗಿದೆ. ಈ ಪ್ರಕ್ರಿಯೆಯಲ್ಲಿ ಬಹುಶಃ ಅತ್ಯಂತ ಪ್ರಮುಖ ಪಾಲುದಾರರಾದ ಕಾನೂನು ಇಲಾಖೆಯನ್ನೂ ಕೇಳಲಾಗಲಿಲ್ಲ. ಈ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಲಭ್ಯವಿಲ್ಲ, ಏಕೆಂದರೆ ಅದು ಇನ್ನೂ ಸಾರ್ವಜನಿಕವಾಗಿಲ್ಲ.
ಮಸೂದೆಗಳನ್ನು ಪರಿಚಯಿಸುವ ಈ ರಹಸ್ಯ ವಿಧಾನವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಶಾಪದಂತಿದೆ ಮತ್ತು 1.4 ಬಿಲಿಯನ್ ಜನರನ್ನು ಪ್ರತಿನಿಧಿಸುವ ಸರ್ಕಾರಕ್ಕೆ ಇದು ಸರಿಹೊಂದುವುದಿಲ್ಲ. ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಾಯಿಸುವ ಉದ್ದೇಶವಿದ್ದಿದ್ದರೆ ಅಧಿಕಾರಿಗಳು ಆರಂಭದಲ್ಲೇ ರಾಜಕೀಯ ವ್ಯವಸ್ಥೆಯೊಡನೆ ಸೇರಿ ಕೆಲಸ ಮಾಡಬೇಕಿತ್ತು. ಆದರೆ ಇದೇನೂ ಮಾಡದೆ ಎಲ್ಲವನ್ನೂ ಗುಪ್ತ್ ಗುಪ್ತ್ ಆಗಿ ಮಾಡಿರುವುದು ಈಗ ಅನುಮಾನಗಳಿಗೆ ಎಡೆಯಾಗಿದೆ.
ಬಂಧನದ ಅಧಿಕಾರವು ಬಹಳ ದೊಡ್ಡದು. ಅದನ್ನು ಬಹಳ ವಿವೇಚನೆ ಬಳಸಿ ಬಳಸಬೇಕಾಗುತ್ತದೆ. ಮತ್ತು ಬಂಧನನದ ಅಧಿಕಾರವನ್ನು ಠಾಣೆಯ ಮುಖ್ಯ ಅಧಿಕಾರಿಯಷ್ಟೇ ಹೊಂದಿರಬೇಕು, ಹಾಗೂ ಹಾಗೆ ಬಂಧಿಸಲು ಅಪರಾಧವು ಮೇಲ್ನೋಟಕ್ಕೆ ಎದ್ದು ಕಾಣುವಂತಿರಬೇಕು. ಒಬ್ಬ ವ್ಯಕ್ತಿಯನ್ನು ಬಂಧಿಸುವುದೆಂದರೆ ಅವನ ಸ್ವಾತಂತ್ರ್ಯಕ್ಕೆ ತಡೆಯೊಡ್ಡುವುದು. ವಿಶ್ವದ ಇತರ ಪ್ರಜಾಪ್ರಭುತ್ವ ನ್ಯಾಯವ್ಯಾಪ್ತಿಗಳಲ್ಲಿ, ಪೊಲೀಸ್ ಅಧಿಕಾರಿಯು ಮೇಲ್ನೋಟಕ್ಕೆ ಪುರಾವೆಗಳನ್ನು ಹೊಂದಿದ್ದರೆ ಮಾತ್ರ ವ್ಯಕ್ತಿಯ ಸ್ವಾತಂತ್ರ್ಯವನ್ನು ನಿರಾಕರಿಸಲಾಗುತ್ತದೆ.
ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ, ಅಗತ್ಯ ಸಾರಿಗೆ ಸಮಯವನ್ನು ಹೊರತುಪಡಿಸಿ, ಪೊಲೀಸ್ ಅಧಿಕಾರಿ ಬಂಧನಕ್ಕೊಳಗಾದ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ಈ ಪ್ರಕ್ರಿಯೆಯಲ್ಲಿ, ಪೊಲೀಸ್ ಕಸ್ಟಡಿಯ ಅಗತ್ಯದ ಬಗ್ಗೆ ಮ್ಯಾಜಿಸ್ಟ್ರೇಟ್ಗೆ ತಿಳಿಸಲಾಗುತ್ತದೆ. ನಂತರ ಮ್ಯಾಜಿಸ್ಟ್ರೇಟ್ ಪೊಲೀಸ್ ಅಧಿಕಾರಿಗೆ ನಿಗದಿತ ಸಂಖ್ಯೆಯ ದಿನಗಳ ಕಸ್ಟಡಿಗೆ ಅನುಮತಿಸುತ್ತಾರೆ.
ಸರ್ಕಾರವು ಕಾನೂನನ್ನು ಕೂಲಂಕಷವಾಗಿ ಪರಿಶೀಲಿಸಲು ಬಯಸಿದ್ದರೆ, ಪ್ರಾರಂಭದ ಹಂತದಲ್ಲಿ ತಿದ್ದುಪಡಿ ಮಾಡಿದ ಕಾನೂನಿನಲ್ಲಿ ಒಂದು ಉಪಬಂಧವನ್ನು ಅಳವಡಿಸಬೇಕಾಗಿತ್ತು, ಅದು ಕೇವಲ ಅನುಮಾನದ ಮೇಲಷ್ಟೇ ಬಂಧಿಸಲು ಅವಕಾಶ ನೀಡದೆ, ಅಪರಾಧದ ಪ್ರಾಥಮಿಕ ಸಾಕ್ಷ್ಯದ ಆಧಾರದ ಮೇಲೆ ಬಂಧಿಸಲು ಪೊಲೀಸ್ ಅಧಿಕಾರಿಗೆ ಅಧಿಕಾರ ನೀಡಬೇಕಿತ್ತು.
ನಾವು ಪ್ರಸ್ತುತ ನೋಡುತ್ತಿರುವುದು ಏನೆಂದರೆ, ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೆ ಕೆಳಹಂತದ ಅಧಿಕಾರಿಗಳು ಸಹ ಪುರಾವೆಗಳಿಲ್ಲದೆ ಮತ್ತು ಅನುಮಾನವಿಲ್ಲದೆಯೂ ಬಂಧಿಸುವ ಅಧಿಕಾರವನ್ನು ಚಲಾಯಿಸುತ್ತಿರುವುದನ್ನು.
ಭಾರತೀಯ ನ್ಯಾಯ ಸಂಹಿತೆ, 2023 (ಬಿಎನ್ಎಸ್), ವಸಾಹತುಶಾಹಿಯ ಪರಿಣಾಮಗಳಾಗಿರುವ ದೊಡ್ಡ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತದೆ. ಬಿಎನ್ಎಸ್‌ನ ಅತ್ಯಂತ ಪ್ರತಿಗಾಮಿ ನಿಬಂಧನೆಗಳು ಸಾರ್ವಜನಿಕ ಸೇವಕರು ಮಾಡಿದ ಅಪರಾಧಗಳಿಗೆ ಸಂಬಂಧಿಸಿವೆ.
ಬಿಎನ್ಎಸ್ ಸೆಕ್ಷನ್ 254ರ ಅಡಿಯಲ್ಲಿ, ಸಾರ್ವಜನಿಕ ಸೇವಕನು ಸುಳ್ಳು ಎಂದು ತಿಳಿದೂ ಅಂತಹ ದಾಖಲೆಯನ್ನು ಸಿದ್ಧಪಡಿಸಿದರೆ ಮತ್ತು ಆದರಿಂದ ಸಾರ್ವಜನಿಕರಿಗೆ ನಷ್ಟ ಅಥವಾ ಯಾವುದೇ ಹಾನಿಯಾದರೆ, ಅಥವಾ ಅಂತಹ ದಾಖಲೆಯ ಮೂಲಕ ಯಾವುದೇ ಆಸ್ತಿಯನ್ನು ಮುಟ್ಟುಗೋಲು ಅಥವಾ ಇತರ ಆರೋಪಗಳಿಂದ ರಕ್ಷಿಸಲು ಪ್ರಯತ್ನಿಸಿದರೆ, ಈ ಕಾನೂನಿನ ಪ್ರಕಾರ, ಸಾರ್ವಜನಿಕ ಸೇವಕನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.
ಇದಕ್ಕಿಂತಲೂ ಗಂಭೀರವಾದ ವಿಷಯವೆಂದರೆ ಸೆಕ್ಷನ್ 255, ಇದು ನ್ಯಾಯಾಧೀಶರನ್ನು ಸಾರ್ವಜನಿಕ ಸೇವಕರನ್ನಾಗಿ ಗುರುತಿಸುತ್ತದೆ. ಮತ್ತು, ನ್ಯಾಯಾಧೀಶರು ನ್ಯಾಯಾಂಗ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಕಾನೂನಿಗೆ ವಿರುದ್ಧವಾಗಿದೆ ಎಂದು ತಿಳಿದಿರುವ ಯಾವುದೇ ವರದಿ, ಆದೇಶ ಅಥವಾ ತೀರ್ಪನ್ನು ಘೋಷಿಸಿದರೆ, ಅವರಿಗೆ ಈ ಸೆಕ್ಷನ್ ಅಡಿಯಲ್ಲಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಸಾಮಾನ್ಯವಾಗಿ ನ್ಯಾಯಾಧೀಶರು ನೀಡುವ ಪ್ರತಿಯೊಂದು ನಿರ್ಧಾರವು ಕಾನೂನಿಗೆ ಅನುಗುಣವಾಗಿದೆ ಎಂಬ ಊಹೆಯನ್ನು ಆಧರಿಸಿರುತ್ತದೆ. ಅಂತಹ ಆದೇಶ ಅಥವಾ ನಿರ್ಧಾರವು ಕಾನೂನಿಗೆ ವಿರುದ್ಧವಾಗಿದೆಯೇ ಎನ್ನುವುದನ್ನು ಈ ಕಾನೂನಿನಡಿ ಕಾರ್ಯಾಂಗವು ನಿರ್ಧರಿಸುತ್ತದೆ ಮತ್ತು ಭ್ರಷ್ಟ ಅಥವಾ ದುರುದ್ದೇಶಪೂರಿತ ಉದ್ದೇಶಕ್ಕಾಗಿ ನ್ಯಾಯಾಧೀಶರನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿ ಸೃಷ್ಟಿಯಾದರೆ ವಿಶೇಷವಾಗಿ ಕೆಳ ನ್ಯಾಯಾಲಯಗಳಲ್ಲಿ ಯಾವ ನ್ಯಾಯಾಧೀಶರು ಸರ್ಕಾರದ ವಿರುದ್ಧ ತೀರ್ಪು ನೀಡುತ್ತಾರೆ?
ಇದು ನ್ಯಾಯಾಂಗಕ್ಕೆ ನೀಡುತ್ತಿರುವ ಸಂದೇಶವೆಂದರೆ ನೀವೀಗ ಕಾರ್ಯಾಂಗದೊಡನೆ ಹೊಂದಿಕೊಳ್ಳುವ ಸಮಯ ಬಂದಿದೆ ಎನ್ನುವುದು. ಜೈಲು ಶಿಕ್ಷೆಯು ಕಾನೂನಿಗೆ ವಿರುದ್ಧವಾಗಿರುವ ಸಂದರ್ಭದಲ್ಲಿ ಜನರನ್ನು ಜೈಲಿಗೆ ಹಾಕುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬಹುದು. ಇದು ಪೊಲೀಸ್ ಅಧಿಕಾರಿಗಳು ಅಧಿಕಾರದಲ್ಲಿರುವವರ ಆಜ್ಞೆಯ ಮೇರೆಗೆ ಕೆಲಸ ಮಾಡುವುದನ್ನು ಅನಿವಾರ್ಯವಾಗಿಸುತ್ತದೆ.
ಈ ನಿಬಂಧನೆಗಳನ್ನು ಜಾರಿಗೆ ತಂದರೆ, ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ರಾಜಕೀಯ ವರ್ಗಕ್ಕೆ ಅಧೀನವಾಗುತ್ತದೆ. ದೇಶದ್ರೋಹವನ್ನು ಅಪರಾಧವಾಗಿ ಕಾಣುವ ಕಾನೂನನ್ನು (1860) ದಂಡ ಸಂಹಿತೆಯಿಂದ ತೆಗೆದುಹಾಕಲಾಗಿದೆ ಎಂದು ಗೃಹ ಸಚಿವರು ಹೇಳಿದ್ದರೂ, ಹೊಸ ಅವತಾರದಲ್ಲಿ ಇದು ಹೆಚ್ಚು ಅಪಾಯಕಾರಿಯಾಗಿ ಹೊರಹೊಮ್ಮಿದೆ. ಹೊಸ ನಿಬಂಧನೆಗಳು ಭಾರತ ಸರ್ಕಾರದ ವಿರುದ್ಧದ ಯುದ್ಧದ ವ್ಯಾಖ್ಯಾನವನ್ನು ವಿಸ್ತರಿಸುತ್ತವೆ.
ಸೆಕ್ಷನ್ 150ರ ಪ್ರಕಾರ, ಯಾವುದೇ ವಿಧ್ವಂಸಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಅಥವಾ ಮಾತು ಅಥವಾ ಲಿಖಿತ ಪದಗಳ ಮೂಲಕ ಅಥವಾ ಸದರಿ ವಿಭಾಗದಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ರೀತಿಯಲ್ಲಿ ಅಥವಾ ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ತಡೆಯುವ ಮತ್ತು ಪ್ರತಿಭಟನಾಕಾರರಿಗೆ ಆಶ್ರಯ ನೀಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಬಂಧನೆಗಳೂ ಇವೆ.
ಸುಧಾರಣೆಯ ಹೆಸರಿನಲ್ಲಿ ಬರುತ್ತಿರುವ ಇಂತಹ ಕಾನೂನುಗಳು ಮೆಕಾಲೆಯ ದಂಡ ಸಂಹಿತೆಗಿಂತ ಹೆಚ್ಚು ಪ್ರತಿಗಾಮಿಯಾಗಿವೆ. ವಾಸ್ತವವಾಗಿ, ಈ ಕಾನೂನುಗಳು ಹೊಸದಾಗಿ ಆಡಳಿತಕ್ಕೆ ಬಂದವರು ಸುಧಾರಣೆಗಾಗಿ ಉದ್ಭವಿಸಿದವರು ಮತ್ತು ಅವರು ಅಧಿಕಾರದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆನ್ನುವುದನ್ನು ಪ್ರತಿಪಾದಿಸುತ್ತಿವೆ. ಆದರೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯಲಿದೆ ಮತ್ತು ಉಳಿಯಬೇಕು. ಪ್ರಜಾಪ್ರಭುತ್ವವನ್ನು ಬಲಿಕೊಟ್ಟು ಉಳಿಸಿಕೊಳ್ಳಬೇಕಾದಷ್ಟು ಮಹತ್ವದ ಕಾನೂನು ಯಾವುದೂ ಇಲ್ಲ. ಅದರಲ್ಲೂ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ ಆಶಯ ಹೊಂದಿರುವ ಕಾನೂನನ್ನು ಉಳಿಸಿಕೊಳ್ಳಬೇಕಾದ ಅಗತ್ಯ ಖಂಡಿತ ಇಲ್ಲ.