Home ಅಂಕಣ ಚುನಾವಣಾ ಫಲಿತಾಂಶದ ನಂತರ ಕರ್ನಾಟಕದಲ್ಲಿ ಉದ್ಭವವಾಗಬಹುದಾದ ಮೂರು ಸನ್ನಿವೇಶಗಳು.

ಚುನಾವಣಾ ಫಲಿತಾಂಶದ ನಂತರ ಕರ್ನಾಟಕದಲ್ಲಿ ಉದ್ಭವವಾಗಬಹುದಾದ ಮೂರು ಸನ್ನಿವೇಶಗಳು.

0

ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುವ ದಿನದಂದು ಪ್ರೊ. ಚಂದನ್ ಗೌಡರವರ ಲೇಖನವೊಂದು “ದ ವೈರ್” ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಅನುವಾದ ಇಲ್ಲಿದೆ

ಕರ್ನಾಟಕದ ವಿಧಾನಸಭಾ ಚುನಾವಣಾ ಸಮೀಕ್ಷೆಯನ್ನು ಒಂದು ಸೂಚಕವಾಗಿ ಪರಿಗಣಿಸಿದರೆ, ಕಾಂಗ್ರೆಸ್ ಪಕ್ಷಕ್ಕೆ ನಾಳೆ ಅಂದರೆ, ಮತ ಎಣಿಕೆಯ ದಿನದಂದು ಸರಳ ಬಹುಮತ ಅಥವಾ ಸ್ಪಷ್ಟ ಬಹುಮತ ಸಿಗಬಹುದು. ಸಮ್ಮಿಶ್ರ ಸರ್ಕಾರದ ರಚಿಸುವ ಸನ್ನಿವೇಶ ಉದ್ಭವವಾದಲ್ಲಿ ಕಾಂಗ್ರೆಸ್, ಜಾತ್ಯತೀತ ಜನತಾ ದಳದ ಜೊತೆಗೆ ಸಖ್ಯ ಬೆಳೆಸಬಹುದು. 224 ಸ್ಥಾನಗಳ ಕರ್ನಾಟಕ ವಿಧಾನಸಭೆಯಲ್ಲಿ ಜನತಾ ದಳ 25 ಸ್ಥಾನಗಳನ್ನು ಗೆಲ್ಲಬಹುದೆಂದು ಸಮೀಕ್ಷೆಗಳು ಅಂದಾಜಿಸಿವೆ.

ಪಾರ್ಟಿಗಳು ಹೇಗೆ ಇಷ್ಟು ಸೀಟು ಗೆಲ್ಲಬಹುದು ಮತ್ತು ಯಾವ ಕಾರಣಕ್ಕೆ ಗೆಲ್ಲಬಹುದು ಎಂಬ ನಮ್ಮ ಸಹಜ ಕುತೂಹಲವನ್ನು ಬದಿಗೊತ್ತಿ ಫಲಿತಾಂಶ ಹೊರಬಂದ ನಂತರ ನಾವು ಎದುರಿಸಬಹುದಾದ ಮೂರು ಸನ್ನಿವೇಶಗಳ ಬಗ್ಗೆ ಗಮನ ಹರಿಸೋಣ.

ಸನ್ನಿವೇಶ ಒಂದು:

ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಲಭಿಸಿದೆ. ಮುಂದುವರೆದು ಪಕ್ಷ ಸರ್ಕಾರ ರಚಿಸಿದೆ. ಆದರೆ 2024 ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರದ ಏನ್ ಡಿ ಎ ವಿರುದ್ಧ ಪ್ರಬಲ ಎದುರಾಳಿ ಸೃಷ್ಟಿಸುವೆಡೆಗೆ ಪಣತೊಟ್ಟು, ಜೆಡಿಎಸ್ ಪಕ್ಷವನ್ನೂ ಸರ್ಕಾರ ರಚಿಸಲು ಆಹ್ವಾನಿಸುತ್ತದೆ.

2019ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದರೂ ತನ್ನ ಏನ್ ಡಿ ಎ ಒಕ್ಕೂಟದ ಮಿತ್ರ ಪಕ್ಷಗಳನ್ನು ಸರ್ಕಾರ ರಚಿಸಲು ಆಹ್ವಾನಿಸಿ ದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಪ್ರಭುದ್ಧ ಪ್ರಜಾತಂತ್ರವೊಂದರಲ್ಲಿ ಆಗಬೇಕಿದ್ದ ಅಧಿಕಾರ ಹಾಗು ಜವಾಬ್ದಾರಿಗಳ ಸೌಹಾರ್ದಯುತ ಹಂಚಿಕೆ ಸಾಧ್ಯವಾಗದೆ, ಮೈತ್ರಿ ಸರ್ಕಾರ ನೆಡೆಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಈ ಹಿಂದಿನ ಪ್ರಯತ್ನ ಸಂಪೂರ್ಣ ವಿಫಲವಾಗಿದ್ದು ಕೂಡ ಮರೆಯಬಾರದು.

ಆದರೆ ಮುಂದಿನ ವರುಷದ ಲೋಕಸಭಾ ಚುನಾವಣೆಯಲ್ಲಿ ಏನ್ ಡಿ ಎಗೆ ಪ್ರಬಲ ಎದುರಾಳಿ ಸೃಷ್ಟಿಸುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರ ಮತ್ತೊಮ್ಮೆ ರಚಿಸಬಹುದು. ಈ ಹಿಂದೆ ಮಾಡಿದ ಪ್ರಮಾದಗಳನ್ನು ಮತ್ತೆ ಮರುಕಳಿಸದ ಹಾಗೆ ಎಚ್ಚರ ವಹಿಸಬಹುದು. ಈ ತರಹದ ನಿಲುವು, ಮುಂದಿನ ವರ್ಷದ ಚುನಾವಣೆಯಲ್ಲಿ, ಕಾಂಗ್ರೆಸ್ ಪಾರ್ಟಿ ತನ್ನ ಎದುರಾಳಿ ಏನ್ ಡಿ ಎಯನ್ನು ಹಿಮ್ಮೆಟ್ಟಿಸುವ ಕುರಿತು ಎಷ್ಟು ಗಂಭೀರವಾಗಿ ಆಲೋಚಿಸಿದೆ ಎಂಬುದರ ನಿಖರ ಸಂಕೇತವಾಗುತ್ತದೆ. (ಕಾಂಗ್ರೆಸ್ ತಮ್ಮ ಸರ್ಕಾರದಲ್ಲಿ ವಿದ್ಯುಕ್ತವಾಗಿ ಜೆಡಿಎಸ್ ಅನ್ನು ಸೇರಿಸಿಕೊಳ್ಳದಿದ್ದರು, ಆ ಪಕ್ಷದ ಶಾಸಕರ ಜೊತೆ ಸಹೃದಯತೆಯಿಂದ ಕೆಲಸ ಮಾಡುವ ಕನಿಷ್ಠ ಒಲವನ್ನಾದರು ತೋರಬೇಕು.)

ಸನ್ನಿವೇಶ ಎರಡು:

ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ, ಜೆಡಿಎಸ್ ಸಹಾಯದಿಂದ ಸಮ್ಮಿಶ್ರ ಸರ್ಕಾರ ರಚಿಸುವುದು.

ಇಂತಹ ಸನ್ನಿವೇಶದಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತದೆ ಹೊರತು ಬಿಜೆಪಿ ಜೊತೆಗಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಬಣದ ವಿರುದ್ಧ ನಿಲ್ಲುವ ಯಾವುದೇ ಎಡ ಪಕ್ಷಗಳು ನಾಯಕತ್ವದ ಬಣಗಳಿಗೆ ಹೆಗಲು ಕೊಟ್ಟು ನಿಲ್ಲುವೆವು ಎಂದು ಘೋಷಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಾತುಗಳು ಇದಕ್ಕೆ ಪೂರಕ. ಸಿಪಿಐ(ಎಂ) ಪಕ್ಷದ ಮೂವರು ಅಭ್ಯರ್ಥಿಗಳಿಗೆ ಹಾಗು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಪ್ರಕಾಶ್ ಅಂಬೇಡ್ಕರ್ ಬಣ) ಬೆಂಬಲ ಸೂಚಿಸಿದ್ದು, (ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಏರ್ಪಟಲ್ಲಿ, ಜೆಡಿಎಸ್ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕುಮಾರಸ್ವಾಮಿಯವರು ಕರೆ ನೀಡಿದ್ದು, ಶರತ್ ಬಚ್ಚೇಗೌಡರ ವಿರುದ್ಧ ಅಭ್ಯರ್ಥಿ ನಿಲ್ಲಿಸದಿದ್ದುದು) ಕಾಂಗ್ರೆಸ್ ಪಕ್ಷದೊಡನೆ ಜೊತೆಗೂಡಿ ಜೆಡಿಎಸ್ ಪಕ್ಷಕ್ಕೆ ಸಮ್ಮಿಶ್ರ ಸರ್ಕಾರ ರಚಿಸುವ ಹಂಬಲವಿದೆ ಎಂದು ಸಾಬೀತು ಪಡಿಸುತ್ತದೆ.

ಈ ಬಾರಿ ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳು ಒಟ್ಟಿಗೆ ಸೇರಿ ಸರ್ಕಾರ ರಚಿಸಿದರೆ, ಭಾರತದ ಪ್ರಜಾತಂತ್ರದ ಆರೋಗ್ಯಕರ ಸ್ವಾಸ್ಥ್ಯಕ್ಕಾಗಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕರಾದ ಎಚ್. ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ತಮ್ಮ ಮನಸ್ತಾಪಗಳನ್ನು ಬದಿಗೊತ್ತಿ ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನೇರ ಹಣಾಹಣಿ ಇರುವ ಕೆಲ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರ ಅಸಮಾಧಾನ ಭುಗಿಲೇಳದಂತೆ ನೋಡಿಕೊಂಡು, ರಾಜಕೀಯ ಹಗೆತನವನ್ನು ಶಮನಗೊಳಿಸಿ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗುವತ್ತ ಗಮನಹರಿಸಬೇಕಾಗುತ್ತದೆ.

ಸನ್ನಿವೇಶ ಮೂರು:

ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದೆ. ಯಾರ ನೆರವಿಲ್ಲದೆ ಕಾಂಗ್ರೆಸ್ ಪಕ್ಷವೇ ಸರ್ಕಾರ ರಚಿಸುತ್ತದೆ. ಈ ನಡೆ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಎನ್ ಡಿ ಎ ವೇದಿಕೆ ಏರಲು ಅನುಕೂಲ ಮಾಡಿಕೊಡುತ್ತದೆ. ಭವಿಷ್ಯದಲ್ಲಿ ತನ್ನ ಬಲದ ಮೇಲೆಯೇ ಸರ್ಕಾರ ರಚಿಸಲಾಗದ ಜೆಡಿಎಸ್ ಪಕ್ಷಕ್ಕೆ ಬೇರೆ ಪಕ್ಷದ ಬೆಂಬಲ ಅವಶ್ಯಕವಿರುವುದರಿಂದ, ಈ ಮೈತ್ರಿಯಿಂದ ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಗಾಧವಾದ ಲಾಭವಾಗುತ್ತದೆ.

ಸಂವಿಧಾನ ಉಲ್ಲಂಘಿಸಿ ಭಜರಂಗದಳ ದಾಂಧಲೆ ನೆಡೆಸಿದ್ದೆ ಆದರೆ ಆ ಸಂಘಟನೆಯ ಮೇಲೆ ನಿಷೇಧ ಹೇರುತ್ತೇವೆ ಎಂಬ ಕಾಂಗ್ರೆಸ್ ಪ್ರಣಾಳಿಕೆಯ ಆಶ್ವಾಸನೆಗೆ ಒಲಿದು ಕರ್ನಾಟಕದ ಮುಸ್ಲಿಂ ಮತದಾರರು ಕಾಂಗ್ರೆಸ್ ಪಕ್ಷಕ್ಕೇ ತಮ್ಮ ಮತ ಚಲಾಯಿಸಿದರೆ, ಮುಸ್ಲಿಂ ಮತಗಳೆಲ್ಲವೂ ಕಾಂಗ್ರೆಸ್ ಪಕ್ಷದ ಪರವಾಗಿ ಕ್ರೋಢೀಕೃತವಾಗುತ್ತವೆ. ಅಂತಹ ಸನ್ನಿವೇಶದಲ್ಲಿ ಹಲವು ಕ್ಷೇತ್ರಗಳಲ್ಲಿ ಒಕ್ಕಲಿಗ ಹಾಗು ಮುಸ್ಲಿಂ ಮತಗಳ ಬಲದಿಂದ ಚುನಾವಣೆ ಗೆಲ್ಲುವ ಜೆಡಿಎಸ್, ಈಗ ಮುಸ್ಲಿಂ ಮತದಾರರ ಬೆಂಬಲವಿಲ್ಲದೆ, ಸಹಜವಾಗಿ ಬಿಜೆಪಿ ಕಡೆಗೆ ವಾಲುತ್ತದೆ.

ಹಾಗಾದಾಗ ಬಹುಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿಗರಿರುವ ಒಕ್ಕಲಿಗರು ಕೂಡ ಮುಸ್ಲಿಂರ ವಿರುದ್ಧ ಮುನಿಸಿಕೊಳ್ಳಬಹುದು. ಇಂತಹ ನಡೆ ದುರಂತಮಯವಾಗಬಹುದು. ಶಾಂತಿ, ಸಾಂಸ್ಕೃತಿಕ ಸೌಹಾರ್ದತೆಯನ್ನು ಕದಡಬಹುದು. ಪ್ರಾಂತ್ಯ ತನ್ನ ಸಹಜ ಸಾಂಸ್ಕೃತಿಕ ಸದ್ಗುಣಗಳನ್ನು ಕಳೆದುಕೊಳ್ಳಬಹುದು. ಬಿಜೆಪಿಗೆ ಈ ಪ್ರಾಂತ್ಯದಲ್ಲಿ ಅಸ್ತಿತ್ವ ಕೊಂಡುಕೊಳ್ಳಲು ನೆರವಾಗಬಹುದು.

ಹಳೆ ಮೈಸೂರು ಪ್ರಾಂತ್ಯದಲ್ಲಿ 61 ಕ್ಷೇತ್ರಗಳಿವೆ. ಬಿಜೆಪಿ ಈ ಪ್ರಾಂತ್ಯದಲ್ಲಿ ಸಾಂಸ್ಕೃತಿಕ ಹಾಗು ರಾಜಕೀಯ ಅಸ್ತಿತ್ವ ಪಡೆದುಕೊಂಡಿದ್ದೆ ಆದರೆ ಇಡೀ ರಾಜ್ಯದಲ್ಲಿ ಕಾಂಗ್ರೆ ಸ್ಸಿಗೆ ಏಕೈಕ ಪ್ರಬಲ ಎದುರಾಳಿಯಾಗಿ ಬಿಜೆಪಿ ಹೊರಹೊಮ್ಮುತ್ತದೆ. ದ್ವಿಮುಖ ಪೈಪೋಟಿಗಳಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನದಂತೆ ಇಲ್ಲೂ ಕೂಡ ಕಾಂಗ್ರೆಸ್ ಬರಿಯ ಬಿಜೆಪಿಯನ್ನು ಎದುರಿಸುವಂತಾಗಬಹುದು. ಮುಂದುವರೆದು ಕಳೆದ ಇಪ್ಪತೈದು ವರುಷಗಳಿಂದ ಸರ್ಕಾರ ರಚಿಸಲಾಗದೆ ಹತಾಶೆಯಿಂದ ಕಂಗಾಲಾಗುವ ಗುಜರಾತಿನ ಸನ್ನಿವೇಶವು ಕಾಂಗ್ರೆಸ್ಸಿಗೆ ಇಲ್ಲೂ ಎದುರಾದರೆ ಆಶ್ಚರ್ಯವಿಲ್ಲ.

ಸರದಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಒಂದೊಂದು ಅವಧಿಯ ಅಧಿಕಾರ ಭಾಗ್ಯ ಸಿಗುವ ರಾಜಸ್ಥಾನ ಅಥವಾ ಮಧ್ಯಪ್ರದೇಶ ಹೋಲುವ ರಾಜಕೀಯ ಪರಿಸ್ಥಿತಿ ಇಲ್ಲೂ ಸೃಷ್ಟಿಯಾಗುವುದೇ ಅಥವಾ ಇಪ್ಪತೈದು ವರ್ಷಗಳಿಂದ ಬಿಜೆಪಿಗೆ ಪರ್ಯಾಯ ಸರ್ಕಾರ ರಚಿಸಲಾಗದ ಗುಜರಾತಿನಂತಾಗುವುದೇ? ಹೇಳುವುದು ತೀರಾ ಕಷ್ಟ.

ಸದ್ಯದ ಈ ಎಲ್ಲಾ ಸನ್ನಿವೇಶಗಳಲ್ಲೂ ರಾಜಕೀಯ ಸೃಜನಶೀಲತೆಯನ್ನು, ಜವಾಬ್ದಾರಿಯನ್ನು, ನೈತಿಕ ಉದಾತ್ತತೆಯನ್ನು ತೋರುವ ಭಾರ ಕಾಂಗ್ರೆಸ್ ಪಕ್ಷದ ಮೇಲಿದೆ. ಕಾಂಗ್ರೆಸ್ ಯಾವ ರೀತಿ ಜೆಡಿಎಸ್ ಜೊತೆಗೆ ಹೊಸ ಬೆಸುಗೆ ಬೆಳೆಸಿಕೊಳ್ಳುತ್ತದೆ ಎಂಬುದರ ಮೇಲೆ ಕರ್ನಾಟಕದ ಪ್ರಜಾತಂತ್ರದ ಭವಿಷ್ಯ ನಿಂತಿದೆ. ಬಹುಶಃ ಭಾರತದ ಭವಿಷ್ಯ ಕೂಡ.

  • ಪ್ರೊ. ಚಂದನ್ ಗೌಡ

You cannot copy content of this page

Exit mobile version