Tuesday, April 30, 2024

ಸತ್ಯ | ನ್ಯಾಯ |ಧರ್ಮ

ಗ್ರಾಚಾರ ನೆಟ್ಟಗಿಲ್ಲ ಅಂದ್ರೆ ಕಷ್ಟದ ಮ್ಯಾಲೆ ಕಷ್ಟವಂತೆ: ತಿರುಗಾಡಿ ಬಂದೊ-6

ಕುತುಬ್‌ ಮಿನಾರ್ ನೋಡಿ ಮುಗಿಸಿದ ತಂಡವು ತಾಜ್‌ ಮಹಲ್‌ ನೋಡಲು ಹೊರಟು ನಿಂತಿತು. ಆದರೆ ದಾರಿಯುದ್ದಕ್ಕೂ ವಿಘ್ನದ ಮೇಲೆ ವಿಘ್ನ! ಗ್ರಾಚಾರ ನೆಟ್ಟಗಿಲ್ಲ ಅಂದ್ರೆ ಕಷ್ಟದ ಮ್ಯಾಲೆ ಕಷ್ಟವಂತೆ! ಅನ್ನೋದು ಹಿರಿಯರ ಗಾದೆ ಮಾತು. ದೆಹಲಿಯಿಂದ ಆಗ್ರಾಕ್ಕೆ ಹೊರಟ ನಮಗೂ ಅದೇ ಅನುಭವವಾಯಿತು ಎನ್ನುತ್ತಾರೆ ರೋಹಿತ್‌ ತಮ್ಮ ಈ ಬಾರಿಯ ತಿರುಗಾಡಿ ಬಂದೋ ಆರನೇ ಕಂತಿನಲ್ಲಿ. ಈ ಪ್ರವಾಸ ಕಥನ ಸರಣಿಯ ಉಳಿದ ಭಾಗಗಳನ್ನು ನೀವು ಇಲ್ಲಿ ಓದಬಹುದು

ಕುತುಬ್ ಮಿನಾರ್ ನೋಡಿ ವಾಪಾಸು ಹೊರಡೋ ದಾರಿಯಲ್ಲಿ ಊಟ ಮುಗಿಸಿ ಹೋದರಾಯ್ತೆಂದು ದಿಲ್ಲಿ ಹೃದಯಭಾಗದ ಮೆಟ್ರೋ ಸ್ಟೇಷನ್ನಿನಲ್ಲಿ ಇಳಿದುಕೊಂಡೆವು. ಊರು ಬಿಟ್ಟು ಐದು ದಿನವಾಗಿದ್ದರೂ ಒಂದು ಬಿಡಿಗಾಸಿನ ಶಾಪಿಂಗ್ ಕೂಡ ಮಾಡಲಾರದೆ ನಮ್ಮ ತಂಡದ ಪ್ರಮೀಳೆಯರ ಕೈ ಕಡಿಯುತ್ತಿತ್ತೆಂದು ಕಾಣುತ್ತದೆ. ಪಾಲಿಕಾ ಬಝಾರ್ ಬಳಿ ಹೋದರೆ ಅದು ಕ್ಲೋಸ್ ಆಗಿ ಬಹಳ ದಿನ ಆಯ್ತು ಎಂದರು. ಅಂದೇ ಸಂಜೆ ಆಗ್ರಾಗೆ ಟ್ರೇನ್ ಬುಕ್ ಆಗಿತ್ತು. ಯೂಪಿ ರಾಜಸ್ತಾನಗಳಲ್ಲಿ ಸೌತ್ ಇಂಡಿಯನ್ ಊಟ ಸಿಕ್ತದೋ ಇಲ್ಲೋ ಎಂದು ಸರವಣ ಹೋಟೆಲ್ ಹುಡುಕಿ ಹೋದರೆ ಅಲ್ಲೋ ಅಣ್ಣೋರ್ ಪಿಚ್ಚರ್ ಟಿಕೆಟ್ಗೆ ಮೊದಲ ದಿನದ ಕ್ಯೂನಂತೆ ಜನ ತುಂಬಿದ್ದರು. ಕಾಯುವ ತಾಳ್ಮೆ, ಸಮಯ ಎರಡೂ ಇಲ್ಲದ ನಾವು ಪಕ್ಕದಲ್ಲಿಯೇ ಇದ್ದ ಮದ್ರಾಸ್ ಕೆಫೆಗೆ ನುಗ್ಗಿದೆವು. ದಕ್ಷಿಣದ ಚೂರು ಘಮಲು ದಕ್ಕಿದಂತಾಯ್ತು.( ಇದೇ ಹೆಸರಿನ ಹಿಂದಿ ಸಿನೆಮಾ ಒಂದನ್ನು ಕಂಡಿದ್ದ ನೆನಪಾಯ್ತು. ರಾಜೀವ್ ಹತ್ಯೆಗೆ ಸಂಬಂಧಿಸಿದ್ದು) ಊಟ ಮುಗಿಸಿ ಮತ್ತೆ ಎರಡು ತಂಡವಾಗಿ ಶಾಪಿಂಗಿಗೆ ತಾವು ಹುಡುಕಿದೆವು. ನಾವು ಪಕ್ಕದಲ್ಲೇ ಇದ್ದ ಖಾದಿ ಭಂಡಾರ ಹೊಕ್ಕರೆ, ದಿನೇಶ್ ಕುಟುಂಬ ಕೊಂಚ ದೂರಕ್ಕೆ ಪಾಲಿಕಾ ಬಝಾರಿನ ಅಂಗಡಿಗಳು ಶಿಫ್ಟ್ ಆಗಿವೆ ಎಂದು ಯಾರೋ ಹೇಳಿದ ಕಡೆ ಹೋದರು. ಎರಡೂ ಕಡೆ ಅಂತ ವ್ಯಾಪಾರವೇನೂ ಕುದುರಿದಂತೆ‌ ಕಾಣಲಿಲ್ಲ. ಮತ್ತೆ ಎಲ್ಲರೂ ಬೇಗ ಗೆಸ್ಟ್ ಹೌಸ್ ಸೇರಿ ಲಗ್ಗೇಜ್ ಪ್ಯಾಕ್ ಮಾಡಿ ಚೆಕ್ ಔಟ್ ಮಾಡಲು ತಯಾರಾದೆವು.

ಚೆಕ್ ಔಟ್ ಮುಗಿಸಿ ಲಗ್ಗೇಜ್ ಸಮೇತ ಹೊರಬಂದಾಗ ನಾವು ಏರಬೇಕಿದ್ದ ರೈಲು ಗಾಡಿ ಹೊರಡೋಕೆ ಇನ್ನೂ ಒಂದೂವರೆ ತಾಸಿತ್ತು. ರಸ್ತೆಯಿಂದ ಮುನ್ನೂರು ಮೀಟರ್ ದೂರದವರೆಗೆ ಏಕೆ ಮಣಭಾರದ ಲಗ್ಗೇಜ್ ಎಳೆಯಬೇಕೆಂದು  ಅಲ್ಲಿಂದಲೇ ಒಂದು ಟ್ಯಾಕ್ಸಿ ನಾನೇ ಬುಕ್ ಮಾಡಿದೆ. ಡ್ರೈವರ್ ಫೋನ್ ಕೂಡ ಮಾಡಿದ, ಆದರೆ ಬರಲೇ ಇಲ್ಲ. ಹೆಚ್ಚು ಹೊತ್ತು ಕಾಯುವುದು ಅಪಾಯ ಎನಿಸಿ ಗೇಟ್ ಬಳಿ ಹೋದರೂ ಆತ ಪತ್ತೆ ಇಲ್ಲ. ಬುಕಿಂಗ್ ಕ್ಯಾನ್ಸೆಲ್ ಮಾಡಿ ಪರ್ಯಾಯ ಬುಕಿಂಗಿಗೆ ಟ್ರೈ ಮಾಡುತ್ತಿರುವ ಹೊತ್ತಿಗೆ ಆತ ಬಂದ. ನಮ್ಮ ದುರಾದೃಷ್ಟಕ್ಕೆ ಜಿಪಿಎಸ್ ಮೋಸ ಮಾಡಿತ್ತು. ನಾವಿದ್ದ ಗೆಸ್ಟ್ ಹೌಸ್ ಮೇನ್ ರೋಡಿನಿಂದ ಒಳಗಾದಂತೆ‌ ಇದ್ದುದು‌ ಮಾತ್ರವಲ್ಲ, ಅಲ್ಲಿ ಕಾಂಪೌಂಡ್ ದಾಟಿದರೆ ಹಿಂದೊಂದು ರಸ್ತೆಯಂತೆ.‌ನಮ್ಮ ಲೊಕೇಶನ್ ಆತನಿಗೆ ಆ ರಸ್ತೆಗೆ ಸಮೀಪ ತೋರಿಸಿ ಆತ ಅಲ್ಲೆಲ್ಲಾ ಅಲೆದಾಡಿದ್ದ. ಈಗ ಅವನನ್ನೇ ಆನ್ಲೈನ್ ಬೇಡ ನೀನೇ ಬಾರಪ್ಪ ಅಂದರೆ ಒಂದಕ್ಕೆರಡರಷ್ಟು ಬಾಡಿಗೆ ಕೇಳಿದ. ದಿನೇಶ್ ಗೆ ಈ ವಿಳಂಬ ತಮಗೆ ತೊಡಕಾಗಬಹುದು ಎನಿಸಿತೇನೊ, ಹೋಗಿಬಿಡೋಣ ಸಾರ್ ಅಂದ್ರು. ನಾನು ಅಪರೂಪಕ್ಕೆ ದುಡ್ಡು ಉಳಿಸೋ ಹುಕಿಗೆ ಬಿದ್ದು ‘ ಇರಿ ಸಾರ್ ಇವನಲ್ಲಾಂದ್ರೆ ಇಂತೋರು ಹತ್ತು ಮಂದಿ ಸಿಕ್ತಾರೆ’ ಅಂದು ಪರ್ಯಾಯ ಹುಡುಕತೊಡಗಿದೆ. ಕೆಲವೇ ನಿಮಿಷಗಳಲ್ಲಿ ನಮಗೆ ಅವನಲ್ಲದೇ ಬೇರೆ ಗತಿ‌ ಇಲ್ಲ ಎನಿಸಿ ಕೇಳಿದರೆ‌ ಆಸಾಮಿ ಈಗ ನಾ ಬರಲ್ಲ ಎಂದ! ಅವನ ಪ್ರಕಾರ ಇದು ಟ್ರಾಫಿಕ್ ಪೀಕ್ ಟೈಮು. ನೀವು ಹೇಳೋ ರೇಲ್ವೇ ನಿಲ್ದಾಣಕ್ಕೆ ಇಷ್ಟು ಸಮಯದಲ್ಲಿ ಹೋಗೋದು ಸಾಧ್ಯವಿಲ್ಲ ಎಂದ. ಆಮೇಲೆ ನಮ್ಮ ಒದ್ದಾಟ ನೋಡಿ ಏನೆನ್ನಿಸಿತೋ ಏನೋ, ಬನ್ನಿ ಎಂದ. ದಿಲ್ಲಿಯಲ್ಲಿ ಬಹುಶಃ ಐದಾರು ರೈಲ್ವೇ ನಿಲ್ದಾಣಗಳಿವೆ. ನಮ್ಮ ಬುಕಿಂಗ್ ಇದ್ದುದು ದಿಲ್ಲಿ ಕ್ಯಾಪಿಟಲ್ ಸ್ಟೇಷನ್ನಿಂದ‌.

ಟ್ಯಾಕ್ಸಿ ಹೊರಟಲ್ಲಿಂದ  ರೈಲ್ವೇ ನಿಲ್ದಾಣ ಮುಟ್ಟೋವರೆಗೂ ತಲುಪುತ್ತೀವೋ ಇಲ್ಲವೋ ಎನ್ನುವ ಆತಂಕದಲ್ಲಿ ಎಲ್ಲರೂ ತಮ್ಮ ತಮ್ಮ ಮೊಬೈಲುಗಳಲ್ಲಿ ಐಆರ್‌ಸಿಟಿಸಿ, ವ್ಹೇರ್ ಈಸ್ ಮೈ ಟ್ರೈನ್ ಆ್ಯಪುಗಳ ಕಡೆ ದಿಟ್ಟಿ ನೆಟ್ಟು ನೋಡಿದ್ದೇ ಬಂತು. ಎಲ್ಲೆಲ್ಲೋ ಸುತ್ತಾಡಿಸಿ ತನ್ನ ಪಾಲು ಪಡೆದು ಡ್ರೈವರಣ್ಣ ಗಾಡಿ ಬಿಟ್ಟ. ಆದರೆ ನಮ್ಮ ಟ್ರೈನು ಹೋಗಿ ಕೆಲ ನಿಮಿಷಗಳಾಗಿತ್ತು. ಇದಕ್ಕೆ ಮುಂಚೆ ನಾವು ಹಲವು ಸಾರ್ತಿ ಬೇರೆ ಬೇರೆ ಕಾರಣಗಳಿಂದ ರಿಸರ್ವೇಶನ್ ಕ್ಯಾನ್ಸೆಲ್ ಮಾಡಿದ್ದೇ ಸುಮಾರು ರೊಕ್ಕ ನೀರಲ್ಲಿ ಹುಣಸೇ ಹಣ್ಣು ತೊಳೆದಂತಾಗಿತ್ತು. ಅದಕ್ಕೇ ಇದೊಂದು ಸೇರ್ಪಡೆ! ಏನು ಮಾಡುವುದು ದಾರಿ ಸಾಗುವುದೆಂತೊ ನೋಡಬೇಕಿತ್ತು. ದಿಲ್ಲಿಯಿಂದ ಆಗ್ರಾ ಕಡೆಗೆ ಮನಾಮನಿ ಟ್ರೈನ್ ಇವೆ. ಅದೂ ಪ್ರತೀ ಹತ್ತದಿನೈದು ನಿಮಿಷಕ್ಕೊಂದರಂತೆ.‌ಬಹಳ ಹೊತ್ತು ಕಾಯದೆ ನಂತರ ಬಂದ ಟ್ರೈನಿನ ಜೆನರಲ್ ಬೋಗಿಗೆ ಹತ್ತಿ ಕುಳಿತೆವು. ಒಂದೇ ಕಡೆ ಎಲ್ಲರಿಗೂ ಸೀಟು ಸಿಗಲಿಲ್ಲ. ನಾನು, ಪ್ರಣತಿ ಒಂದೆಡೆ, ಉಳಿದ ನಾಲ್ವರು ಒಂದೆಡೆ ಜಾಗ ಹಿಡಿದರು. ಜೆನರಲ್ ಬೋಗಿಯಾದರೂ ರಶ್ಶೇನೂ ಇರಲಿಲ್ಲ.

ಟಿಕೆಟ್ ದರ ಕೂಡ ಹೆಚ್ಚಿಲ್ಲ‌. ಪ್ಲಾಟ್ ಫಾರ್ಮ್ ನಂಬರ್ ಐದಾದ್ದರಿಂದ ಆನ್ಲೈನ್ ಟಿಕೇಟೇ ಖರೀದಿಸಬೇಕಿತ್ತು. ನಿಂತಿದ್ದ ಟ್ರೈನು ಸೀಟಿ ಊದೋದಕ್ಕೂ ದಿನೇಶ್ ಅವರು ಪಕ್ಕದ ಸೀಟಿಂದ ‘ ಸಾರ್ ಆನ್ಲೈನ್ ಟಿಕೆಟ್ ಆಗ್ತಿಲ್ಲ. ಟ್ರೈನಿನಿಂದ ಐವತ್ತು ಮೀಟರ್ ಮಿನಿಮಮ್ ದೂರ ಇರಬೇಕಂತೆ ಅಂದ್ರು’! ಅವರು ಈ ಬ್ರೇಕಿಂಗ್ ನ್ಯೂಸ್ ಕೊಡೋ ಹೊತ್ತಿಗೆ ಗಾಡಿ ಹೊರಟೇ ಬಿಟ್ಟಿತು. ನಾವು ನಮ್ಮ ಲಗ್ಗೇಜು, ಮಕ್ಕಳನ್ನ ಇಳಿಸಿಕೊಳ್ಳೋಕು ಸಮಯವಿರಲಿಲ್ಲ.

2010ರಲ್ಲಿ ಕೂಡ ಇದೇ ರೂಟಲ್ಲಿ ನಾನು- ಸುಜಾತ ಜೆನರಲ್ ಬೋಗಿಯಲ್ಲಿ ಪಯಣಿಸಿದ್ದೆವು. ಅದು ಆಗ್ರಾ ಟು ದಿಲ್ಲಿ. ಆ ದಿನ ಏನೋ ಭಾರೀ ಜನಸಂದಣಿ. ಲಗ್ಗೇಜ್ ಇಡುವ ಜಾಗದಲ್ಲಿ ಎಡೆ ಹಿಡಿದು ಎರಡು ತಾಸಿನ ದಾರಿಯನ್ನು ನಾಕು ತಾಸು ಸವೆಸಿದ್ದೆವು. ಅದನ್ನೇ ನೆನೆಯೋ ಹೊತ್ತಿಗೆ ದಿನೇಶ್ ಈ ಶಾಕಿಂಗ್ ನ್ಯೂಸ್ ಬ್ರೇಕ್ ಮಾಡಿದ್ದರು. ಅಂತೂ ಅನುದ್ದೇಶಪೂರ್ವಕವಾಗಿ ಟಿಕೆಟ್ ರಹಿತ ಪಯಣಿಗರಾಗಿದ್ದೆವು. ತಕ್ಷಣ ಏನೇನೊ ಬುದ್ಧಿ ಉಪಯೋಗಿಸಿ ಟಿಕೆಟ್ ಗಿಟ್ಟಿಸಲು ಯತ್ನಿಸಿದೆವು. ನಾನು ಕೂಡಲೆ ಮೈಸೂರಿನ ಗೆಳೆಯ ಗಣೇಶನಿಗೆ ಫೋನ್ ಮಾಡಿ ಹೀಗಾಗಿದೆ,ನೀನು ಈ ಕೂಡಲೆ ದಿಲ್ಲಿ ಟು ಆಗ್ರಾಗೆ ಆರು ಟಿಕೆಟ್ ಖರೀದಿಸಿ ಡೀಟೇಲ್ಸ್ ಫೋನ್ ಮೂಲಕ ಕಳಿಸು ಎಂದು ರೈಲಿನ ಮತ್ತು ನಮ್ಮೆಲ್ಲರ ಮಾಹಿತಿ ಹಂಚಿಕೊಂಡೆ. ಐದು ನಿಮಿಷ ಬಿಟ್ಟು ಕೇಳಿದರೆ ಆತ ನೆಟ್ವರ್ಕ್ ಪ್ರಾಬ್ಲೆಮಿನ ಕಾರಣದಿಂದ ಆಗುತ್ತಿಲ್ಲ ಎಂದ‌. ಆ ಹೊತ್ತಿಗೆ ದಿನೇಶ್ ಮತ್ಯಾವುದೋ ಆ್ಯಪಿನಲ್ಲಿ ಟ್ರೈ ಮಾಡಿದರೆ, ಟ್ರೈನು ಹೊರಟಾಗಿದೆ ಟಿಕೆಟ್ ಲಭ್ಯವಿಲ್ಲ ಎಂದು ತೋರಿಸುತ್ತಿದ್ದಾರೆ ಎಂದರು. ಆಗ ನಂಗೆ ಬೆಂಗಳೂರಿನ ಗೆಳೆಯ ರವಿ ನೆನಪಾಗಿ ಅವರಿಗೆ ಫೋನು ಹಚ್ಚಿದೆ‌. ಅವರು ಫ್ರೀಕ್ವೆಂಟಾಗಿ ರೈಲು ಪಯಣ ಮಾಡುತ್ತಾರೆಂದು. ಅವರಿಗೆ ದಿಲ್ಲಿ ಬದಲಿಗೆ ಮುಂದೆ ಈ ರೈಲು ನಿಲ್ಲುವ ನಿಲ್ದಾಣದಿಂದ ಬುಕ್ ಮಾಡಲು ಹೇಳಿದೆವು. ಅವರು ಕೂಡ ರೈಲು ಸ್ಟೇಷನ್ ಬಿಟ್ಟಿದೆ ಎಂದು ತೋರಿಸ್ತಿದೆ  ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ನಮಗಿನ್ನುಳಿದದ್ದು ಎರಡೇ ದಾರಿಗಳು. ಒಂದು ನಡುವೆ ಎಲ್ಲಿಯಾದರೂ ರೈಲು ನಿಂತ ಎರಡು ನಿಮಿಷದಲ್ಲಿ ಓಡಿಹೋಗಿ ಟಿಕೆಟ್ ತರುವುದು, ಮತ್ತೊಂದು ತಪ್ದಂಡ!

ಅದೊಂದು ಎಕ್ಸಪ್ರೆಸ್ ಟ್ರೇನ್ ಆದ ಕಾರಣಕ್ಕೋ ಏನೋ ನಿಲುಗಡೆಯೇ ಕಡಮೆ, ಅದೂ ಅಲ್ಲದೆ ನಿಂತಿದ್ದೆಲ್ಲಾ ಮೂರು ನಾಕನೇ ಪ್ಲಾಟ್ಫಾರ್ಮೇ. ಕಡೆಗುಳಿದದ್ದು ಒಂದೇ ದಾರಿ…ಉಪ್ಪಾ ತಿಂದಾ ಮ್ಯಾಲೆ ನೀರಾ ಕುಡಿಯಲೆಬೇಕು.. ತಪ್ಪಾ ಮಾಡಿದ ಮ್ಯಾಲೆ ಶಿಕ್ಷೆ ಅನುಭವಿಸಲೆಬೇಕು..( ಬಿಜಿಎಲ್ ಸ್ವಾಮಿ ಅವರ ಕಾಲೇಜು ರಂಗ ಸಿನೆಮಾದ ಹಾಡು. ಪುಟ್ಟಣ್ಣ ಡೈರೆಕ್ಟ್ರು)

ನಾನು ಮೆಲ್ಲಗೆ ಗೂಗಲಿಸಿ ನೋಡಿದೆ ಸಿಗೇಬಿದ್ದರೆ ದಂಡ ಎಷ್ಟೆಂದು! ದಂಡದ ಮೊತ್ತ ಹಾಗೆ ಕಮ್ಮಿಯೇನೂ ಇರಲಿಲ್ಲ‌. ಒಂದರ್ಧ ತಾಸು ಮನಸಿಗೆ ಕಸಿವಿಸಿ ಎನಿಸಿದರೂ ಆಮೇಲೆ ಸಹಜ ಸ್ಥಿತಿಗೆ ಬಂದೆವು. ನಮಗೆ ಒಂದು ಧೈರ್ಯವಿತ್ತು. ಟಿಕೆಟ್‌ ಕೇಳಲು ಯಾರೂ ಬರಲಾರರೆಂದು.  ಹಿಂದೊಮ್ಮೆ ಹೀಗೆ ಜೆನರಲ್ ಬೋಗಿಯಲ್ಲಿ ಪಯಣಿಸಿದಾಗ ಯಾವ ಟಿ.ಸಿ. ಯೂ ಬಂದು ಟಿಕೆಟ್ ಕೇಳಿರಲಿಲ್ಲ. ಅಷ್ಟೇ ಯಾಕೆ ಬೆಂಗಳೂರಿನಿಂದ ದಿಲ್ಲಿಗೆ ಬರುವಾಗ ಕೂಡ ಎಷ್ಟು ಮಂದಿ ಇದೀರಿ ಹೆಸರೇನು ಎಂದು ಟಿ.ಸಿ.ಕೇಳಿದ್ದನೇ ಹೊರತು, ಆಧಾರ್ ಇತ್ಯಾದಿ ದಾಖಲೆ ಕೇಳಿರಲಿಲ್ಲ‌. ಅಷ್ಟೂ ಆಗಿ ಬಂದರೆ ಹಿಂದಿನ ಟ್ರೈನಿನ ಎಸಿ ಚೇರ್ ಕಾರ್ ಬುಕಿಂಗ್ ಟಿಕೆಟ್ ತೋರಿಸಿ ಅವನಿಗೆ ಕರುಣೆ ಹುಟ್ಟುವಂತೆ ನಮ್ಮ ಕಷ್ಟ ಹೇಳಿಕೊಳ್ಳುವುದು ಎಂದುಕೊಂಡೆವು. ಆದರೆ ಇದ್ದ ಆರು ಮಂದಿಯಲ್ಲಿ ಯಾರಿಗೂ ಹಿಂದಿ ಭಾಷೆಯಲ್ಲಿ ಕರುಳು ಕಿತ್ತು ಬರುವಂತೆ ಕತೆ ಹೊಸೆದು ಹೇಳುವಷ್ಟು ಭಾಷೆ ಗೊತ್ತಿರಲಿಲ್ಲ!

 ಒಂದೊಂದೇ ಸ್ಟೇಷನ್ ದಾಟಿ ಮಥುರಾ ದಾಟಿ ಆಗ್ರಾ ಸ್ಟೇಷನ್ ಕೂಡ ಬಂತು. ಬಚಾವಾದೆವು. ಇಳಿದ ಮೇಲೆ ಪ್ಲಾಟ್ ಫಾರ್ಮಿನಲ್ಲಿ ಕೇಳಿದರೆ ತೋರಿಸಲು ಬೇರೆ ಟಿಕೆಟ್ ಹೇಗೂ ಇದ್ದವು. ಹೀಗೆ ನೈತಿಕ ಸಮರ್ಥನೆ ಇದ್ದರೂ, ಟೆಕ್ನಿಕಲಿ ಇಲ್ಲೀಗಲ್ ಪಯಣವೊಂದು ಸುಖಾಂತವಾಗಿ ಮುಗಿದಿತ್ತು.

ಗ್ರಾಚಾರ ನೆಟ್ಟಗಿಲ್ಲ ಅಂದ್ರೆ ಕಷ್ಟದ ಮ್ಯಾಲೆ ಕಷ್ಟವಂತೆ. ಆಗ್ರಾ ತಲುಪಿದಾಗ ರಾತ್ರಿ ಹತ್ತು ಮೀರಿತ್ತು. ಊಟದ್ದೇ ಭಯ. ವಸತಿಗೆ ಹೋಟೆಲ್ ಬುಕ್ ಆಗಿತ್ತು. ರೈಲ್ವೇ ಪ್ಲಾಟ್ ಫಾರ್ಮಿನಲ್ಲೇ ಇದ್ದ ಹೋಟೆಲಿನಲ್ಲಿ ನಾನು ಪಾರ್ಸೆಲ್ ತರಲು ಹೋದೆ, ದಿನೇಶ್ ಟ್ಯಾಕ್ಸಿ ಸ್ಟ್ಯಾಂಡ್ ಕಡೆ ತಿರುಗಿದರು. ಎರಡು ಪಾರ್ಸೆಲ್ ಮಾಡೋ ಹೊತ್ತಿಗೆ ದಿನೇಶ್ ಫೊನ್ ಮಾಡಿ ಪಾರ್ಸೆಲ್ ಬೇಡ ಒಳ್ಳೆ ಟ್ಯಾಕ್ಸಿವಾಲ ಸಿಕ್ಕಿದಾನೆ ಬನ್ನಿ ಅಂದ್ರು. ಆಗಲೇ ಕಟ್ಟಿಯಾಗಿದೆ ಇಷ್ಟು ಮಾತ್ರ ತರದೇ ಇರಲಾಗದೆಂದು ಎರಡು ಪ್ಲೇಟ್ ಬಿರಿಯಾನಿ‌ ಮಾತ್ರ  ತಂದೆ‌. ಡ್ರೈವರಣ್ಣ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡುತ್ತಿದ್ದ‌. ನಾಳೆ ತಾಜ್ ಮಹಲ್ ಬಳಿ ಸೂರ್ಯೋದಯ ತೋರಿಸುವೆ ಬೇಗ ತಯಾರಾಗಿ ಬಿಡಿ ಎಂದ. ರೋಹಿಣಿ ಮೇಡಂ ಅವರಿಗೆ ಕೊಂಚ ಗಂಟಲು ಸಮಸ್ಯೆ ಆಗಿದ್ದರಿಂದ ಮೆಡಿಕಲ್ ಸ್ಟೋರ್ ಹುಡುಕಿ ಮದ್ದು ಕೂಡ ತಂದಾಯ್ತು. ಊಟದ ವಿಚಾರ ಬರುತ್ತಿದ್ದಂತೇ ಅವನು ಇಲ್ಲೆಲ್ಲ ಏಕೆ ಸಾರ್ ನೀವು ಹೋಗುತ್ತಿರುವ ಸ್ಟಾರ್ ಹೋಟೆಲಿನಲ್ಲೇ ಒಳ್ಳೆ ಊಟ ಸಿಗ್ತದೆ ಎಂದ. ನಾವು ಒಂದು ಕ್ಷಣ ಅವಾಕ್ಕಾದೆವು. ಹೋಟೆಲ್ ಬುಕ್ಕಿಂಗ್ ದಿನೇಶ್ ಮಾಡಿದ್ದರು. ಅವನಿಗೆ ಹೋಟೆಲ್ ವಿಳಾಸ ಹೇಳುವಾಗ ಲ್ಯಾಂಡ್ ಮಾರ್ಕಿಗೆಂದು ಹೇಳಿದ್ದು ಒಂದು ಸ್ಟಾರ್ ಹೋಟೆಲಿನ ಹೆಸರಾಗಿತ್ತು. ಹೀಗಾಗಿ ಅವನು‌ ಭರ್ಜರಿ ಬೇಟೆಯ ಹುರುಪಿನಲ್ಲಿ ನಮ್ಮನ್ನು ನಾಳಿನ ಸೈಟ್ ಸೀಯಿಂಗ್  ಬುಕಿಂಗ್ ಗೆ ಕಟ್ಟಿಹಾಕಲು ಪ್ರಯತ್ನಿಸುತ್ತಿದ್ದ. ಯಾವಾಗ ನಾವು ಹೋಗುತ್ತಿರುವ ಹೋಟೆಲಿನ ಚುಕ್ಕಿಗಳ ಸಂಖ್ಯೆ ಕುಸಿಯಿತೋ ಅವನು ಕೊಡುತ್ತಿದ್ದ ಹುಸಿಗೌರವವೂ ಕುಸಿಯಿತು. ನಾವು ಹೇಳಿದ್ದ ಜಾಗದಲ್ಲಿ ಲಗ್ಗೇಜು ಇಳಿಸೋದೆ ತಡ ಕ್ಷಣವೂ ನಿಲ್ಲದೆ ಹೇಳಿದ್ದಕ್ಕಿಂತ ನೂರು ಹೆಚ್ಚೇ ವಸೂಲಿ ಮಾಡಿ ದುರ್ದಾನ ತೆಗೆದುಕೊಂಡವನಂತೆ  ಅಲ್ಲಿಂದ ಎಸ್ಕೇಪಾದ‌. ಆಗ ಸಮಯ ನಡುರಾತ್ರಿಗೆ ತಾಸೊಂದು ಬಾಕಿ.

ಭರ್ಜರಿಯಾಗಿಯೇ ಇದ್ದ ಹೋಟೆಲ್ ರಿಸೆಪ್ಶನ್ ಹೊಕ್ಕರೆ ರೂಮು ಕೊಡಲಾಗದು ಎಂದು ಕೈಎತ್ತಿಬಿಡಬೇಕೆ. ಅಡ್ವಾನ್ಸ್ ಆಗಿ ಆನ್ಲೈನ್ ಮೂಲಕ ಬುಕ್ ಆಗಿದ್ದ ರೂಮುಗಳವು. ನಮಗೋ ಅವನೊಂದಿಗೆ ಜಗಳವಾಡುವಷ್ಟು ವಕ್ಯಾಬುಲರಿ ಇಲ್ಲ‌. ಆತನ ಮಾತಿನ ಸಾರಾಂಶ ಇಷ್ಟೇ ಮೊಬೈಲ್ ಆ್ಯಪಿನವರು ಫಾಲ್ಸ್ ರೇಟಿಗೆ ಬುಕಿಂಗ್ ಕೊಟ್ಟಿದಾರೆ. ಅವರೊಂದಿಗೆ ನಮಗೆ ಇಷ್ಯೂ ಇವೆ. ಹಾಗಾಗಿ ರೂಮು ಕೊಡೆವು. ರೀಫಂಡ್ ಕೂಡ ಪೂರ ಆಗಲಿಲ್ಲ. ಆಗ ಎದುರೇ ಕಾಣುತ್ತಿದ್ದ ಅಷ್ಟೇ ಭರ್ಜರಿ ಹೋಟೆಲಿನಲ್ಲಿ ಒಂದಕ್ಕೆರಡು ರೇಟು ಕೊಟ್ಟು ರೂಮು ಪಡೆದೆವು. ಒಳ್ಳೆ ನಿದ್ದೆಯೂ ಮಾಡಿದೆವು.

ಹಿಂದಿನ ದಿನದ ಹಳವಂಡಗಳನ್ನು ಮೀರಿಸುವಷ್ಟಿತ್ತು ನಮ್ಮ ತಾಜ್ ಮಹಲ್ ನೋಡುವ ಉತ್ಸಾಹ. ದಿನೇಶ್ ಅವರ ಗ್ಯಾಂಗಂತೂ ತಾಜ್ ನೋಡುವ ದಿನ (ಅಂದು ಆರುಷನ ಬರ್ತ್ ಡೇ ಕೂಡ ಆಗಿತ್ತು)ಕ್ಕೆಂದೇ ಹೊಸ ಡ್ರೆಸ್ ರೆಡಿ ಮಾಡಿಕೊಂಡೇ ಬಂದಿತ್ತು. ನಾನು ಕೂಡ ದಿಲ್ಲಿಯ ಖಾದಿ ಬಂಡಾರದಲ್ಲಿ ಕೊಂಡಿದ್ದ ಕುರ್ತಾದ ಆರಂಭೋತ್ಸದ ಅಂದೇ ಇಟ್ಟುಕೊಂಡೆ. ಎಂದಿನಂತೆ ಬೆಳಗ್ಗೆದ್ದು ಸೌತ್ ಇಂಡಿಯನ್ ತಿಂಡಿಗೆ ಹುಡುಕಾಟ ಶುರು. ಆಗ ನಮಗೆ ಸಿಕ್ಕವ ಆಟೋ ಡ್ರೈವರ್ ಸಲ್ಮಾನ್. ಅತ ತಾನು ಸೌತ್ ರೆಸ್ಟೋರೆಂಟ್ ತೋರಿಸುವುದಾಗಿ ಆಸೆ ಹುಟ್ಟಿಸಿದ. ಒಯ್ದ ಕೂಡ. ಆದರೆ ಅಲ್ಲಿನ ಇಡ್ಲಿ ಬಾಯಿಗೆ ಹೇಗೆ ಇಡ್ಲಿ ಎಂಬಂತೆಯೂ, ದೋಸೆ ಆಸೆ ತೋರಿಸಿ ಮೋಸ ಮಾಡಿದಂತೆಯೂ ಇದ್ದವು. ಇಡ್ಲಿಗೆ ಸಾಸಿವೆ ಎಣ್ಣೆ, ಚಟ್ನಿಗೆ ಕೊಬ್ಬರಿ ಎಣ್ಣೆ ಬಳಸಿದ್ದರು. ಅಲ್ಲಿದ್ದ ಏಳು ಜನರಲ್ಲಿ ನಾವೇ ಅರು ಮಂದಿ, ಇನ್ನೊಬ್ಬ ಗಲ್ಲಾ ಪೆಟ್ಟಿಗೆ ಯಜಮಾನ. ನಮಗೆ ಪಾಪ ಎನಿಸಿದ್ದು ಸಲ್ಮಾನನ ಪಾಡು. ಈ ಭಯಾನಕ ತಿಂಡಿ‌‌ ತಿನ್ನಲು ಮುಕ್ಕಾಲು ಗಂಟೆ ಹಿಡಿಯಿತು. ನಾವು ಮಾತಾಡಿದ್ದ ಬರೀ ಐವತ್ತಕ್ಕೆ ಆತ ಮುಕ್ಕಾಲು ಗಂಟೆ ಕಾಯ್ತಿದ್ದ. ಪಾಪ ಅನ್ನಿಸಿ ಐವತ್ತರ ಬದಲು ನೂರು ಕೊಟ್ಟು ಚಿಲ್ಲರೆ ಅವನಿಗೇ ಬಿಟ್ಟೆವು. ನಾವು ಆಗ್ರಾ ಬಿಡೋವರೆಗೂ ಎಲ್ಲಿ ಹೋದರೂ ಅವನೇ ನಮ್ಮ ಸಾರಥಿ! ಇಷ್ಟಾಗಿದ್ದೇ ತನ್ನ ನಂಬರ್ ಕೊಟ್ಟು, ಹೊರಬಂದ ಕೂಡಲೆ ಫೋನ್ ಮಾಡಿ ಎಲ್ಲಿದ್ದರೂ ಬರುವೆ ಎಂದ. ನಾವು ಹಿಂದೊಮ್ಮೆ ಆಗ್ರಾ ನೋಡಿದ್ದರಿಂದ ಭಯಂಕರ ಜನ ಇರ್ತಾರೆ ಆರಕ್ಕೇ ಹೋಗಿ ಕ್ಯೂ ನಿಲ್ಲೋಣ ಎಂದೆಲ್ಲ ಮಾತಾಡಿಕೊಂಡಿದ್ದರೂ ಹಿಂದನ ದಿನದ ಹಳವಂಡಗಳ ಕಾರಣಕ್ಕೆ ಹೊರಟಿದ್ದು ತಡವೇ ಆಗಿತ್ತು. ಅಂದು ಬಿಸಿಲಿನ ಬದಲಿಗೆ ತಂಪೆರೆಯೋ ಮಳೆ. ಬಿರುಬಿಸಿಲಿನ ಆಗ್ರಾ ತಂಪನೆಯ ಊಟಿಯಂತಮಹಲಿಗೆ

ತಾಜ ಮಹಲಿಗೆ ಪ್ರವೇಷಕ್ಕೆ ಮೂರು ಗೇಟುಗಳಿವೆ. ಎರಡು ವಿಸ್ತಾರ ಸ್ಥಳಾವಕಾಶ ಇರುವ ಗೇಟುಗಳು, ಮತ್ತೊಂದು ನೇರ ಮಾರುಕಟ್ಟೆ ಕಡೆಯಿಂದ ಬರುವ ಕಿರಿದಾದ ಗೇಟು.  ಆದರಿದು ಹೆಬ್ಬಾಗಿಲಿನ ನೇರಕ್ಕಿದೆ. ಗೇಟು ಪ್ರವೇಷಕ್ಕೆ ಮುನ್ನ ಅಂಗಡಿಯೊಂದರ ಬಳಿ ಹೋದಾಗ ಆತ ಛತ್ರಿ ತೆಗೆದುಕೊಳ್ಳಿ ಎಂದ. ಬೇಡವೆಂದಾಗ ಮಳೆ ಜೋರು ಬಂದರೆ ಕಷ್ಟವೆಂದ, ಆಗಲೂ ನಿರಾಕರಿಸಿದಾಗ ಕೊಳ್ಳಲಲ್ಲ, ಬಾಡಿಗೆಗೆ ಲಭ್ಯ ಎಂದ. ಒಟ್ಟು ಗುಂಪಿಗೆ ಎರಡು ಛತ್ರಿ ಬಾಡಿಗೆ ಪಡೆದು ಹೊರಟೆವು. ಪ್ರವೇಷದ ದಾರಿಯಲ್ಲಿ ತಾಜಮಹಲ್ ಮತ್ತದರ ಆವರಣವನ್ನು ರೀಸ್ಟೋರ್ ಮಾಡುವಾಗಿನ ಹಳೆಯ ಫೋಟೋಗಳನ್ನು ಪ್ರದರ್ಶಿಸಿದ್ದರು.

ಅದಾಗಿ ಮುಂದೆ ಹೋದಾಗ ವಿಶಾಲವಾದ ಹೆಬ್ಬಾಗಿಲು ಅಥವಾ ದರ್ವಾಜಾ ಕಣ್ಣಿಗೆ ಬಿತ್ತು. ಅದನ್ನು ದಾಟಿದ ಮೇಲಷ್ಟೇ ತಾಜ್ ಕಣ್ಣಿಗೆ ಬೀಳೋದು. ಮಳೆ ತುಂತುರಾಗಿ ಹನಿಯುತ್ತಿತ್ತು.

ಜನ ಆಗಲೇ ಗಿಜಿಗುಡುತ್ತಿತ್ತು. ಹೊರಗೆ ಟಿಕೆಟ್ ಕೌಂಟರಿನ ಆಸುಪಾಸಿನಲ್ಲಿ ಬಳಸಿ ಬಿಸಾಡುವ ಕಾಲುಚೀಲ ಮಾರುತ್ತಿದ್ದರು. ಮೇಲೆ ಹೋಗಲು ಇವು ಕಡ್ಡಾಯವೆಂದೂ ಹೇಳಿದರು. ಆದರೆ ನಾವು ಕೊಳ್ಳಲು ನಿರಾಕರಿಸಿ ಮುಂದೆ ಹೋದೆವು. ಹಿಂದೆ ಬಂದಿದ್ದಾಗ ಇದ್ದ ಹತ್ತು ರೂಪಾಯಿ‌ ಈಗ ನಲವತ್ತಕ್ಕೇರಿತ್ತು. ಇಷ್ಟೇನಾ ಎಂದುಕೊಂಡು ಟಿಕೆಟ್ ಕೊಂಡು ಒಳಹೋದ ಮೇಲೆ ಅಲ್ಲಿದ್ದ ಹಕೀಕತ್ ಅರ್ಥವಾಯ್ತು.

ವಾವ್ ತಾಜ್….

ಕೆಂಪು ಮರಳುಶಿಲೆ ಮತ್ತು ಬಿಳಿ ಅಮೃತಶಿಲೆಗಳನ್ನು ಬಳಸಿ ಕಲಾತ್ಮಕವಾಗಿ ನಿರ್ಮಿಸಲಾದ ದರ್ವಾಜ ದಾಟಿದ ಕೂಡಲೆ ತಾಜ್ ಕಣ್ಣಿಗೆ ಬಿತ್ತು. ವಾವ್ ತಾಜ್. ಆ ಹೊತ್ತಿಗೆ ಮಳೆ ಕೊಂಚ ಬಿರುಸಾಯ್ತು. ಜನ ಅಲ್ಲಿ ತಲುಪಿದ ಕೂಡಲೆ ತಮ್ಮ ಕೆಮೆರಾ ಮತ್ತು ಮೊಬೈಲ್ ಓಪನ್ ಮಾಡಿಕೊಂಡೇ , ಕೆಲವರಂತೂ ಶಿಳ್ಳೆ ಹಾಕುತ್ತಾ ತಾಜಮಹಲನ್ನು ದೂರದಿಂದಲೇ ಕಣ್ತುಂಬಿಕೊಳ್ಳುತ್ತಿದ್ದರು. ತಾಜ್ ಮಹಲ್ ಅಗ್ರಾ, ಉತ್ತರಪ್ರದೇಶಕ್ಕೆ ಮಾತ್ರವಲ್ಲ ದೇಶದ ಹೆಮ್ಮೆ. ಜಗತ್ತಿನ ಈಗಿನ ಅದ್ಭುತಗಳಲ್ಲಿ ಒಂದು‌. ಷಹಜಹಾನ್ ಆಳ್ವಿಕೆಯ ಮೂವತ್ತು ವರ್ಷಗಳು ರಾಜಕೀಯವಾಗಿ ಮುಘಲರ ಕಾಲದಲ್ಲಿ ಯಶಸ್ವಿಯೋ, ಅಯಶಸ್ವಿಯೋ ಕಾಣೆ, ಆದರೆ ವಾಸ್ತುಶಿಲ್ಪದ ವಿಷಯದಲ್ಲಿ ಸುವರ್ಣಯುಗವೇ ಸರಿ.  ತಾಜಮಹಲನ್ನು ಸೂರ್ಯೋದಯದಿಂದ ಹಿಡಿದು ಬಿಸಿಲೇರಿ, ಮತ್ತೆ ಸೂರ್ಯಾಸ್ತದವರೆಗೆ ನೋಡಬೇಕು. ಒಂದೊಂದು ಹೊತ್ತಿನ ಬಿಸಿಲು/ ಬೆಳಕಿಗೂ ಒಂದೊಂದು ರೀತಿ ಕಾಣುತ್ತದೆ. ಆದರೆ ಆಂದು ಮಳೆ ಇದ್ದ ಕಾರಣ ಆ ವೇರಿಯೇಶನ್ಸ್ ನಮಗೆ‌ ಲಭ್ಯವಾಗಲಿಲ್ಲ; ಆದರೆ ತುಂತುರು ಮಳೆಯಲ್ಲಿ ತಾಜ್ ನೋಡುವ ಭಾಗ್ಯ ನಮ್ಮದಾಗಿತ್ತು.

ಭಾರತಕ್ಕೆ ಭೇಟಿ ನೀಡುವ ಬಹುತೇಕ ವಿದೇಶೀಯರು ತಾಜ್ ನೋಟವನ್ನು ಮಿಸ್ ಮಾಡಲಾರರು. ನಾವು ಚದುರಿ ದೂರದೂರದಿಂದ ನಮನಮಗೆ ದಕ್ಕುತ್ತಿದ್ದ ತಾಜನ್ನು ಅನುಭವಿಸುವಾಗ ವಿದೇಶೀ ಮಹಿಳೆಯೊಟ್ಟಿಗೆ ಸುಜಾತ ಮಾತನಾಡುತ್ತಿದ್ದುದ ಕಂಡೆ. ಏನೆಂದು ಕೇಳಿದೆ. ವಿದೇಶೀ ಹೆಣ್ಣು ಮಗಳು  ತಾನು ಹಿಡಿದಿದ್ದ  ನೀರಿನ ಬಾಟಲೊಂದನ್ನು ಈಕೆಯ ಕೈಗೆ  ಕೊಟ್ಟು ತನಗೆ ಬೇಡ, ನೀವು ಬಳಸಬಹುದು ಎಂದಳಂತೆ. ಈಕೆಗೆ ಅದು ವಿಚಿತ್ರವೆನ್ನಿಸಿ ತನಗೂ ಬೇಡ ನೀವೇ ಇಟ್ಟುಕೊಳ್ಳಿ ಎಂದು ವಾಪಾಸು ಮಾಡಿದಳಂತೆ. ಬಹುಶಃ ಆಗಿದ್ದಿಷ್ಟು.  ಅಕ್ಟೋಬರಿನಲ್ಲಿ ಆಗ್ರಾದಲ್ಲಿ ಬಿಸಿಲು ಚುರುಗುಡುವಂತಿರುತ್ತದೆ.ಅಂದು ಮಳೆ ಇದ್ದ ಕಾರಣ, ನೀರಿನ ಬಾಟಲು ಹಿಡಿದು ಓಡಾಡುವುದು ಆ ವಿಲಾಯ್ತಿ ಅಕ್ಕಂಗೆ ತ್ರಾಸಾಗಿರಬೇಕು. ನೋಡಿದ ಕೂಡಲೆ ಭಾರತೀಯ ಹೆಣ್ಣು ಮಗಳು ಎಂದು ಗುರುತಾಗುವ ಈಕೆಗೆ ಬಾಟಲು ನೀರು ಕೊಳ್ಳುವ ಶಕ್ತಿ ಇರಲಿಕ್ಕಿಲ್ಲ ಎಂಬ ಅರೆ ತಿಳುವಳಿಕೆಯ ಕಾರಣದಿಂದಲೂ ಹಾಗೆ ಮಾಡಿದ್ದಿರಬಹುದು. ನಮ್ಮ ದೇಶಕ್ಕೆ ಪ್ರವಾಸಕ್ಕೆ ಬರುವ ವಿದೇಶೀಯರು ತಮ್ಮದೇ ಆದ ರೀತಿಯ ಹೋಂ ವರ್ಕ್ ಮಾಡಿಕೊಂಡು ಬಂದಿರುತ್ತಾರೆ. ಮೌಢ್ಯಗಳಿಂದ ತುಂಬಿದ ಬಡ ದೇಶ ಎಂಬುದಕ್ಕೆ ಬಾಹ್ಯ ಸಾಕ್ಷ್ಯಗಳೂ ಅವರ ಕಣ್ಣಿಗೆ ಬೀಳುವುದರಿಂದ ಇಂಥ ಟೇಕನ್ ಫಾರ್ ಗ್ರಾಂಟೆಡ್ ಥರಹದ ವರ್ತನೆಗಳು ಹುಟ್ಟುತ್ತವೆ ಎಂದು ಕಾಣುತ್ತದೆ.

ತಾಜಮಹಲಿನ ವಾಸ್ತುಶಿಲ್ಪಿ ದಿಲ್ಲಿಯ ಕೆಂಪು ಕೋಟೆಯ ಡಿಸೈನರ್  ಉಸ್ತಾದ್ ಅಹ್ಮದ್ ಲಹೋರಿ. ಅವನ ಸಹಾಯಕ್ಕಿದ್ದ ಕುಶಲಕರ್ಮಿಗಳ ಸಂಖ್ಯೆ ಬರೋಬ್ಬರಿ 20 ಸಾವಿರ. 1643ರಲ್ಲಿ ಆರಂಭವಾಗಿ 1653ರಲ್ಲಿ ಮುಕ್ತಾಯವಾಗುತ್ತದೆ. ತಾಜಮಹಲಿಗೆ ಸ್ಫೂರ್ತಿಯಾಗಿ ಇರೋ ಎರಡು ಕಟ್ಟಡಗಳೆಂದು ಆಗ್ರಾದಲ್ಲಿಯೇ ಇರುವ ಇತ್ಮತ್ ಉದ್ ದೌಲ ಮತ್ತು ದಿಲ್ಲಿಯ ಹುಮಾಯೂನ್ ಟಾಂಬ್. ಹುಮಾಯೂನ್ ಟಾಂಬ್ ಗಿಂತ ಎತ್ತರ ವಿಸ್ತಾರ ಮತ್ತು ನಾಕು ಮೀನಾರುಗಳನ್ನು ಹೊರತುಪಡಿಸಿದರೆ ಹಲವು ಸಾಮ್ಯಗಳಿವೆ. ಹುಮಾಯೂನ್ ಟಾಂಬ್ ಮತ್ತು ತಾಜ್ ಎರಡೂ ಎತ್ತರದ ಚಚ್ಚೌಕ ಜಗಲಿಯ ಮೇಲಿವೆ. ಜಗಲಿ ಮೇಲಕ್ಕೆ ಮೆಟ್ಟಿಲು ಹು.ಟಾಂಬಿನಲ್ಲಿ ನಾಲ್ಕೂ ಕಡೆ ಇದ್ದರೆ, ತಾಜಿನಲ್ಲಿ ಎಡ ಮತ್ತು ಬಲಬದಿಯಲ್ಲಿವೆ. ತಾಜಮಹಲಿನ ಮತ್ತೊಂದು ಬದಿಯಲ್ಲಿ ಯಮುನಾ ನದಿ ಇರೋದರಿಂದ ಈ ಏರ್ಪಾಟಿರಬಹುದು. ಇನ್ನು ಇತ್ಮತ್ ಉದ್ ದೌಲ ಆಗ್ರಾದಲ್ಲಿಯೇ ಯಮುನಾ ನದಿ ತೀರದಲ್ಲಿಯೇ ಇರೋ ಗಾತ್ರದಲ್ಲಿ ಚಿಕ್ಕದಾದರೂ ಸುಂದರವಾದ್ದು. ಇದನ್ನು ಬೇಬಿ ತಾಜ್ ಎಂದೂ ಕರೆಯಲಾಗುತ್ತದಂತೆ.

ಕಾರಂಜಿ ಎಲ್ಲ ದಾಟಿ ತಾಜ್ ಬುಡಕ್ಕೆ ಹೋದಾಗ ಅನಿರೀಕ್ಷಿತವೊಂದು ಕಾದಿತ್ತು. ನಾವು ಕೊಂಡಿದ್ದ ಟಿಕೇಟು ಅಲ್ಲಿಗೇ ಮುಕ್ತಾಯ. ಜಗತಿಯ ಮೇಲೆ ಹತ್ತಿ ತಾಜ್ ಗೋಡೆ- ಮೀನಾರುಗಳನ್ನು ಸಮೀಪದಿಂದ ನೋಡಲು 200 ರ ಪ್ರತ್ಯೇಕ ಟಿಕೇಟು ಮಾಡಿದ್ದಾರೆ. ಈ ಟಿಕೇಟಿಗೆ ಕನೆಕ್ಟ್ ಆಗಿಯೇ ಹೊರಗೆ ಕಾಲುಚೀಲ ಮಾರುತ್ತಿದ್ದುದು. ಈ ಪದ್ಧತಿ ಹಿಂದೆ ವಿದೇಶೀಯರಿಗೆ ಮಾತ್ರ ಅನ್ವಯಿಸುತ್ತಿತ್ತು. ಈಗ ಎಲ್ಲರಿಗೂ ಅನ್ವಯ. ಇದಕ್ಕೆ ಕಾರಣವೂ ಇದೆ. ನಾವು ಹಿಂದೊಮ್ಮೆ ತಾಜ್ ನೋಡಲು ಹೋದಾಗಲೇ ಅದರ ಪ್ರವೇಶಕ್ಕಿರುವ ಅಮೃತ ಶಿಲೆಯ ಮೆಟ್ಟಿಲುಗಳು ದಿನದಿನವೂ ಲಕ್ಷಾಂತರ ಜನರ ತುಳಿತಕ್ಕೆ ಸಿಕ್ಕಿ ಅಕ್ಷರಶಃ ಸವೆದೇ ಹೋಗಿವೆ. ಆ ಸವೆತ ತಡೆಯಲಾರದ ASI ಮರದ ಹಲಗೆಗಳನ್ನು ಮೆಟ್ಟಿಲುಗಳ ಮೇಲೆ ಮುಚ್ಚಿ ಸವಕಳಿ ತಡೆಯುವ ವ್ಯರ್ಥ ಪ್ರಯತ್ನ ಮಾಡಿತ್ತು. ಅದನ್ನು ಕಂಡಾಗಲೇ ಇನ್ನು ಬಹಳ ವರ್ಷಗಳ‌ಕಾಲ ತಾಜಮಹಲಿನ ಒಳಗೆ ಪ್ರವಾಸಿಗರಿಗೆ ಒಳಹೋಗಲು ಪ್ರವೇಶ ಸಿಗಲಾರದು ಎಂದುಕೊಳ್ಳುತ್ತಿದ್ದೆ. ಅದೀಗಾಗಲೇ ಒಂದಷ್ಟು ಜಾರಿ ಆಗಿಯೇಬಿಟ್ಟಿದೆ. ತಾಜ್ ಸಂರಕ್ಷಣೆಗೆ ಇರುವ ಉಪಾಯಗಳಲ್ಲಿ ಅದನ್ನು ದೂರದಿಂದಲೇ ಮಾತ್ರ ನೋಡುವುದೂ ಒಂದು ಎಂದು ನಿಪುಣರು ವರದಿ ನೀಡಿರುವರು ಎಂದು ಪತ್ರಿಕೆಯಲ್ಲಿ ಓದಿನ ನೆನಪು. ತನ್ನ ಪತ್ನಿ ಮುಮ್ತಾಜ ಮಹಲಳ ನೆನಪಿಗೆ ಷಹಜಹಾನನು ಕಟ್ಟಿಸಿದ ಈ ಕಟ್ಟಡದ ತಾಜ್ ಎಂದರೆ ಕಿರೀಟವಂತೆ. ತಾಜ್ ನಿಜವಾಗಿಯೂ ಭಾರತೀಯ ವಾಸ್ತುಶಿಲ್ಪದ ಕಿರೀಟವೇ ಸರಿ.

ಇತ್ತೀಚೆಗೆ ತಾಜ್ ಮಹಲ್ ಷಹಜಹಾನ್ ಕಟ್ಟಿಸಿದ್ದೇ ಅಲ್ಲ, 13 ನೇ ಶತಮಾನದ ಶಿವ ದೇವಾಲಯ ಎಂದು ಹೇಳುವ ತಮಾಷೆಯ ಸಂಗತಿಗಳಿಗೂ ಬಹಳ‌ ಮೈಲೇಜ್ ಇತ್ತೀಚೆಗೆ ಸಿಗುತ್ತಿದೆ. ಪಿ.ಎನ್. ಓಕ್ ಥರಹದವರ ಬರವಣಿಗೆ ಇದಕ್ಕೆ ಇಂಬುನೀಡಿದ್ದೂ ಸುಳ್ಳಲ್ಲ. ಭಾರತೀಯ ಇಂಡೋ ಇಸ್ಲಾಮಿಕ್ ವಾಸ್ತುಶೈಲಿಯ ಪ್ರಾಥಮಿತ ತಿಳುವಳಿಕೆ ಇರುವ ಯಾವ ಮೂರ್ಖನಿಗೂ ಇದೊಂದು ಇಸ್ಲಾಮೇತರ ಧಾರ್ಮಿಕ ಕಟ್ಟಡ ಎಂಬ ಊಹೆ ಬರಲಾರದು. ನಾವು ಈಗಾಗಲೇ ತಾಜ ಮಹಲಿನ ಒಳಾಂಗಣವನ್ನು ಓಡಾಡಿ ನೋಡಿದ್ದರಿಂದ ಮತ್ತೊಮ್ಮೆ ಜಗತಿಯ ಮೇಲೆ ಹೋಗಿ ನೋಡುವ ಹುಕಿ ಇರಲಿಲ್ಲ, ದಿನೇಶ್ ಕೂಡ ದೂರದಿಂದಲೇ ಮತ್ತೆ ಮತ್ತೆ ನೋಡಿ‌ ಅದ್ಭುತ‌ ಎಂಬ ಉದ್ಘಾರ ತೆಗೆಯುತ್ತಾ‌ ಜಗತಿಯ ಮೇಲೆ ಏರುವ ಉತ್ಸಾಹ ತೋರಲಿಲ್ಲ. ಅಂತೂ ತಾಜ್ ಆವರಣ ಪ್ರವೇಷ ಮಾಡಿ ಮದ್ಯಾಹ್ನ ಹೊರಹೋಗುವ ಹೊತ್ತಿಗೆ ನಾವು ನಮ್ಮ ಮೊಬೈಲುಗಳಲ್ಲಿ ಒಬ್ಬೊಬ್ಬರೂ ನೂರಕ್ಕೂ ಮೀರಿದ ಫೋಟೋಗಳನ್ನು ಸೆರೆಹಿಡಿದಿದ್ದೆವು. ಚುರುಗುಟ್ಟುತ್ತಿದ್ದ ಹೊಟ್ಟೆ ನಮ್ಮನ್ನು ತಾಜ್ ಆವರಣದಿಂದ ಹೊರಗೊಯ್ದಿತು.

ಇವನ್ನೂ ಓದಿ

ತಿರುಗಾಡಿ ಬಂದೊ ಐದನೇ ಕಂತುಕುತುಬ್‌ ಮಿನಾರ್‌ ಎಂಬ ಭಾರತ ವೈಭವ

ತಿರುಗಾಡಿ ಬಂದೊ ನಾಲ್ಕನೇ ಕಂತು– ಕೆಂಪು ಕೋಟೆಗೊಂದು ಸುಸ್ತಿನ ಸುತ್ತು

ತಿರುಗಾಡಿ ಬಂದೊ ಮೂರನೇ ಕಂತು– ದೆಹಲಿಯಲ್ಲಿ ಸಿಕ್ಕ ʼಅಕ್ಕಲಕೋಟೆ ಸ್ವಾಮಿಗಳುʼ

ತಿರುಗಾಡಿ ಬಂದೊ ಎರಡನೇ ಕಂತು- ಆರರಲ್ಲಿ ಐದು ವಿಕೆಟ್ ರಿಟೈರ್ಡ್ ಹರ್ಟ್….

ತಿರುಗಾಡಿ ಬಂದೊ ಒಂದನೇ ಕಂತು- ಲೆಕ್ಕಾಚಾರ ತಪ್ಪೋಯ್ತು..

Related Articles

ಇತ್ತೀಚಿನ ಸುದ್ದಿಗಳು