ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾಜಪ (BJP) ಎದುರು ಹೀನಾಯವಾಗಿ ಸೋತು ಅಧಿಕಾರ ಕಳೆದುಕೊಂಡ ಕೇವಲ ಮೂರು ವಾರಗಳಲ್ಲೇ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮತ್ತು ಪತನ ಬುಧವಾರವೂ ಮುಂದುವರೆದಿದ್ದು, ಪಕ್ಷಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದೆ.
ಇಲ್ಲಿಯವರೆಗೆ ಪಕ್ಷದ 100ಕ್ಕೂ ಹೆಚ್ಚು ಪುರಸಭೆ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬುಧವಾರ ಟಿಎಂಸಿ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಪಕ್ಷದ ಎಲ್ಲಾ ಸಾಂಸ್ಥಿಕ ಹುದ್ದೆಗಳನ್ನು ತ್ಯಜಿಸಿದ್ದಾರೆ.
ಆಡಳಿತ ಬದಲಾವಣೆಯ ಬೆನ್ನಲ್ಲೇ ಆರಂಭವಾದ ಪೊಲೀಸ್ ಕಾನೂನು ಕ್ರಮಗಳು ಟಿಎಂಸಿ ನಾಯಕರನ್ನು ಗುರಿಯಾಗಿಸುವುದನ್ನು ಮುಂದುವರೆಸಿವೆ.
ಪಕ್ಷದ ಶಾಸಕರಲ್ಲಿ ಒಬ್ಬರಾದ ದಿಲೀಪ್ ಮಂಡಲ್ ಅವರನ್ನು ಒಡಿಶಾದ ಪುರಿಯಲ್ಲಿ ಬಂಧಿಸಲಾಗಿದೆ. ಭಾಜಪ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಅವರು ಬೆದರಿಕೆ ಹಾಕುತ್ತಿರುವಂತೆ ತೋರಿರುವ ವಿಡಿಯೋಗೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ ಎಂದು ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಭ್ರಷ್ಟಾಚಾರ ಮತ್ತು ರಾಜಕೀಯ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಜ್ಯಾದ್ಯಂತ 80ಕ್ಕೂ ಹೆಚ್ಚು ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಟಿಎಂಸಿಯ ಪ್ರಭಾವಿ ನಾಯಕ ಸುಜಿತ್ ಬೋಸ್ ಅವರನ್ನು ಪೌರಾಡಳಿತ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ಮೇ 10ರಂದು ಬಂಧಿಸಿದೆ.
ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಕಾಕೋಲಿ ಅವರು, ವಿಧಾನಸಭಾ ಚುನಾವಣೆಯಲ್ಲಿ ಕೋಲ್ಕತಾದ ಭವಾನಿಪುರ ಕ್ಷೇತ್ರದಲ್ಲಿ ಮಮತಾ ಅವರನ್ನು ಸೋಲಿಸಿ ಮೇ 9ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸುವೇಂದು ಅಧಿಕಾರಿ ಅವರು ಕರೆದಿದ್ದ ಆಡಳಿತಾತ್ಮಕ ಸಭೆಯಲ್ಲಿ ತಾವೂ ಸೇರಿದಂತೆ ಟಿಎಂಸಿಯ ಆರು ಹೊಸದಾಗಿ ಆಯ್ಕೆಯಾದ ಶಾಸಕರು ಭಾಗವಹಿಸಿದ ಕೇವಲ ಒಂದು ದಿನದ ನಂತರ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಅವರು ಬಾರಾಸತ್‌ನ ಟಿಎಂಸಿ ಸಾಂಸ್ಥಿಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಪಕ್ಷದ ಚುನಾವಣಾ ಸೋಲಿಗೆ ಟಿಎಂಸಿ ನೇಮಿಸಿಕೊಂಡಿದ್ದ ರಾಜಕೀಯ ಸಲಹಾ ಸಂಸ್ಥೆ ‘ಐ-ಪ್ಯಾಕ್’ (I-PAC) ಕಾರಣ ಎಂದು ಅವರು ಬಹಿರಂಗವಾಗಿ ದೂಷಿಸಿದ್ದಾರೆ.
ಕಾಕೋಲಿ ಅವರು ಉತ್ತರ 24 ಪರಗಣ ಜಿಲ್ಲೆಯ ಬಾರಾಸತ್ ಕ್ಷೇತ್ರದಿಂದ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರನ್ನು ಇತ್ತೀಚೆಗಷ್ಟೇ ಲೋಕಸಭೆಯ ಪಕ್ಷದ ಮುಖ್ಯ ಸಚೇತಕ (ಚೀಫ್ ವಿಪ್) ಹುದ್ದೆಯಿಂದ ಮುಕ್ತಗೊಳಿಸಿ, ಮತ್ತೊಬ್ಬ ಟಿಎಂಸಿ ಹಿರಿಯ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿತ್ತು.
ಟಿಎಂಸಿ ಸಂಸದರ ನಡುವೆ ಸಮನ್ವಯದ ಕೊರತೆಯಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಲ್ಯಾಣ್ ಅವರು ರಾಜೀನಾಮೆ ನೀಡಿದ ನಂತರ, ಆಗಸ್ಟ್ 2025ರಲ್ಲಿ ಕಾಕೋಲಿ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿತ್ತು.
“ನಾಲ್ಕು ದಶಕಗಳ ಕಾಲ ನಾನು ತೋರಿದ ನಿಷ್ಠೆಗೆ ಇಂದು ನನಗೆ ಪ್ರತಿಫಲ ಸಿಕ್ಕಿದೆ,” ಎಂದು ತಮ್ಮ ಸ್ಥಾನಕ್ಕೆ ಕಲ್ಯಾಣ್ ಅವರನ್ನು ಬದಲಾಯಿಸಿದ ದಿನದಂದು ಅವರು ‘ಎಕ್ಸ್’ (X) ಜಾಲತಾಣದಲ್ಲಿ ಬರೆದುಕೊಂಡಿದ್ದರು.
“ಪಕ್ಷದ ಅಸಂಸ್ಕೃತ ಮತ್ತು ಉದ್ಧಟ ಸಂಸದನೊಬ್ಬ ಮತ್ತೊಬ್ಬ ಮಹಿಳಾ ಸಂಸದೆಯ ಕಡೆಗೆ ತೋರುವ ಅಸಭ್ಯ ನಡವಳಿಕೆಯನ್ನು ತಡೆಯಲು ಸಾಧ್ಯವಾಗದ ಮತ್ತು ಉನ್ನತ ನಾಯಕತ್ವದಿಂದ ಬೆಂಬಲ ಹಾಗೂ ಸಹಾನುಭೂತಿ ಸಿಗದ ಇಂತಹ ಹುದ್ದೆಯಲ್ಲಿ ಮುಂದುವರೆಯುವುದರಲ್ಲಿ ಯಾವುದೇ ಅರ್ಥವಿಲ್ಲ,” ಎಂದು ಅವರು ಟಿಎಂಸಿ ರಾಜ್ಯ ಅಧ್ಯಕ್ಷ ಸುಬ್ರತಾ ಬಕ್ಷಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
