ದೆಹಲಿ: ಬಿಜೆಪಿಯ ಮಡಿಲಿನ ಕೆಂಡವಾಗಿರುವ ಸುಬ್ರಮಣಿಯನ್ ಸ್ವಾಮಿ ಮತ್ತೆ ಬಿಜೆಪಿಯ ಮಡಿಲಿಗೆ ಕಿಚ್ಚಾಗಿ ಕಾಡಿದ್ದಾರೆ. ಈ ಬಾರಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಟಿಕೆಟ್ ನೀಡದಿರುವ ಕುರಿತು ಮೋದಿಯವರನ್ನು ಟೀಕಿಸಿರುವ ಸ್ವಾಮಿ ಮೋದಿಯನ್ನು ಸೋಲಿಸುವುದೊಂದೇ ಉಳಿದಿರುವ ದಾರಿ ಎಂದಿದ್ದಾರೆ.
ಪ್ರಜ್ಞಾ ಸಿಂಗ್ ಅವರಿಗೆ ಭೋಪಾಲ್ ಟಿಕೆಟ್ ತಪ್ಪಿಸಿ ಈ ಹಿಂದೆ RSS ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದಿದ್ದ ವ್ಯಕ್ತಿಗೆ ಟಿಕೆಟ್ ಕೊಟ್ಟ ಹಿನ್ನೆಲೆಯಲ್ಲಿ ಸ್ವಾಮಿ ಈ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಜ್ಞಾ ಸಿಂಗ್ ಎದುರು ಟಿಕೆಟ್ ಪಡೆದಿರುವ ಕೃಪಾ ಶಂಕರ್ ಸಿಂಗ್ ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದು, ಈ ಹಿಂದೆ 26/11 ಮುಂಬೈ ದಾಳಿ ಪ್ರಕರಣದಲ್ಲಿ RSS ಕೈವಾಡವಿದೆಯೆಂದು ಆರೋಪಿಸಿದ್ದರು. ಕೃಪಾ ಶಂಕರ್ ಈ ಹಿಂದೆ ಅಹ್ಮದ್ ಪಟೇಲ್, ದಿಗ್ವಿಜಯ ಸಿಂಗ್ ಮೊದಲಾದ ಕಾಂಗ್ರೆಸ್ ನಾಯಕರಿಗೆ ಹತ್ತಿರದವರಾಗಿದ್ದರು. ಮತ್ತು ಎರಡು ಪ್ಯಾನ್ ಕಾರ್ಡ್ ಹೊಂದಿರುವ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿತ್ತು. ಬಾಂಬ್ ದಾಳಿಯ ಹಿಂದೆ RSS ಪಾತ್ರವಿದೆ ಎನ್ನುವ ಪುಸ್ತಕವೊಂದರ ಬಿಡುಗಡೆಯಲ್ಲಿಯೂ ಅವರು ಪಾಲ್ಗೊಂಡಿದ್ದರು ಎನ್ನುಲಾಗಿದೆ.
ಈ ಕುರಿತು ವರದಿ ಮಾಡಿದ್ದ ಸುದ್ದಿ ಸಂಸ್ಥೆಯೊಂದರ ಸುದ್ದಿಯನ್ನು ಹಂಚಿಕೊಂಡಿರುವ ಸ್ವಾಮಿ “2024ರಲ್ಲಿ ಬಿಜೆಪಿ ಬಹುಮತ ಗಳಿಸುವುದರ ಜೊತೆಗೆ ಮೋದಿ ವಾರಣಾಸಿಯಲ್ಲಿ ಸೋತರೆ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣ ಸಾಧ್ಯ” ಎಂದು ಬರದುಕೊಂಡಿದ್ದಾರೆ.