ತುಮಕೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಜನರ ಅನುಕಂಪ ಪಡೆದುಗೊಳ್ಳಲು ಬಿಜೆಪಿ ಮಾಜಿ ಶಾಸಕ ಬಿ. ಸುರೇಶ್ ಗೌಡ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ ಕಿಡಿಕಾರಿದ್ದಾರೆ.
ಅರಿಯೂರು ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿಜೆಪಿ ಮಾಜಿ ಶಾಸಕ ಸುರೇಶ್‌ಗೌಡ, ʼಗೌರಿಶಂಕರ್ ನನ್ನನ್ನು ಕೊಲೆ ಮಾಡುವುದಕ್ಕೆ ಬೆಂಗಳೂರು ಜೈಲಿನಲ್ಲಿರುವ ಕೈದಿಗಳಿಗೆ ಸುಫಾರಿ ಕೊಟ್ಟಿದ್ದಾರೆʼ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಗೌರಿಶಂಕರ್, ʼಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಜನರ ಬಳಿ ಅನುಕಂಪ ಗಳಿಸಿಕೊಳ್ಳಲು ಈ ರೀತಿಯ ಕೆಲಸ ಮಾಡುತ್ತಿದ್ದಾರೆ. ಇವರ ಈ ಹೇಳಿಕೆಯ ವಿರುದ್ಧ ಸಮಗ್ರ ತನಿಖೆಯಾಗಿ ಜನರಿಗೆ ಸತ್ಯ ತಿಳಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆʼ ಎಂದು ತಿಳಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಈ ವಿಚಾರವನ್ನು ಬೇಕಿದ್ದರೆ ಸಿಬಿಐನಿಂದ ತನಿಖೆ ಮಾಡಿಸಲಿ. ಅದನ್ನೆಲ್ಲಾ ಬಿಟ್ಟು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಗ್ರಾಮಾಂತರ ಕ್ಷೇತ್ರಗಳಲ್ಲಿ ಕೋಮು ಗಲಭೆಗಳನ್ನು ಹಬ್ಬಿಸಿ, ನನ್ನನ್ನೇ ಕೊಲೆ ಮಾಡಲು ಸಂಚು ಮಾಡಿರಬಹುದು. ಅದಕ್ಕೇ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆʼ ಎಂದು ಹೇಳಿದ್ದಾರೆ.