ದಾವಣಗೆರೆ: ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಬಿಸಿ ಉಟಕ್ಕೆ ವಿತರಿಸುವ ಆಹಾರ ಪದಾರ್ಥಗಳಲ್ಲಿ ಹುಳುಗಳು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ, ರಾಜ್ಯ ಕಾಂಗ್ರೆಸ್ ಘಟಕವು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಬಿಸಿ ಉಟಕ್ಕೆ ವಿತರಿಸುವ ಆಹಾರ ಪದಾರ್ಥಗಳಲ್ಲಿ, ಹುಳುಗಳು ಕಂಡುಬರುವುದನ್ನು ಶಾಲೆಯ ಮಕ್ಕಳು ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಪೋಷಕರು ಮಕ್ಕಳ ಜೊತೆ ಗ್ರಾಮ ಪಂಚಾಯಿತಿಗೆ ವಿಷಯ ತಿಳಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಕ್ಕಳು ಮತ್ತು ಪೋಷಕರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಒಂದು ವಾರದಿಂದ ಬಿಸಿ ಊಟದಲ್ಲಿ ಸಿಗುವ ಬೇಳೆಗಳಲ್ಲಿ, ಹುಳುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ನಾವುಗಳು ಊಟ ಮಾಡಲು ಭಯವಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದಲ್ಲದೇ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿರುವ ಪೋಷಕರು, ಸರ್ಕಾರ ಕೂಡಲೇ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದ್ದು, ಮಕ್ಕಳ ಬಿಸಿಯೂಟದಲ್ಲೂ ಲೂಟಿಗೆ ಇಳಿದಿದೆಯೇ 40% ಸರ್ಕಾರ. ಕಳಪೆ ಆಹಾರ ಸಾಮಗ್ರಿಗಳನ್ನು ನೀಡಿ, ಅನ್ನದ ಬದಲು ಅನ್ನದಲ್ಲಿ ಹುಳುಗಳನ್ನು ಕೊಡುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಮಿತಿ ಇಲ್ಲದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮಕ್ಕಳ ತಟ್ಟೆಯಲ್ಲಿನ ಹುಳುಗಳ ಹುಳುಕನ್ನ ಮುಚ್ಚಿಕೊಳ್ಳಲು ಶಾಲೆಗಳಿಗೆ ಬಣ್ಣ ಬಳಿಯಲು ಹೊರಟಿರಾ? ಎಂದು ಕಿಡಿಕಾರಿದೆ.