Wednesday, June 19, 2024

ಸತ್ಯ | ನ್ಯಾಯ |ಧರ್ಮ

ಎಲೆಕ್ಟೋರಲ್ ಬಾಂಡ್‌: ಮೇಘಾ ಇಂಜಿನಿಯರಿಂಗ್ ಕೊಟ್ಟಿದ್ದೆಷ್ಟು?

ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – 2

ಎಲೆಕ್ಟೋರಲ್ ಬಾಂಡ್‌ಗಳ ಮಾಹಿತಿ ಹೊರಬಂದಂತೆ ದೇಶ ಕಂಡು ಕೇಳರಿಯದ ಅನೇಕ ಭ್ರಷ್ಟಾಚಾರಗಳು ಹೊರಗೆ ಬಂದಿವೆ. ಈ ಡೇಟಾವು ಏಪ್ರಿಲ್ 12, 2019 ರಿಂದ ಪ್ರಾರಂಭವಾಗುವ ಮತ್ತು ಜನವರಿ 15, 2024 ರವರೆಗೆ (ಕೊನೆಯ ಬಾಂಡ್‌ಗಳನ್ನು ಮಾರಾಟ ಮಾಡಿದಾಗ) ಅವಧಿಗೆ ಸಂಬಂಧಿಸಿದೆ. ಇದು ಯೋಜನೆಯ ಮೊದಲ ವರ್ಷದ ಡೇಟಾವನ್ನು ಒಳಗೊಂಡಿಲ್ಲ.

ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್

ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಏಪ್ರಿಲ್ 12, 2019 ಮತ್ತು ಜನವರಿ 11, 2024 ರ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದಾನ ನೀಡಿದ ಎರಡನೇ ಅತಿದೊಡ್ಡ ದಾನಿ. ಹೊಸ ಡೇಟಾದ ಪ್ರಕಾರ ಇದು ಬಿಜೆಪಿಗೆ 584 ಕೋಟಿ ರುಪಾಯಿ ನೀಡಿದೆ. ತೆಲಂಗಾಣ ಮೂಲದ ಈ ಕಂಪನಿಯ ಚೇರ್‌ಮನ್ ಪಾಮಿರೆಡ್ಡಿ ಪಿಚಿ ರೆಡ್ಡಿ ಮತ್ತು ಅವರ ಸಂಬಂಧಿ ಪಿವಿ ಕೃಷ್ಣಾ ರೆಡ್ಡಿ ಈ ಅವಧಿಯಲ್ಲಿ 966 ಕೋಟಿ ರುಪಾಯಿ ನೀಡಿದ್ದಾರೆ.

ಗುರುವಾರ ಭಾರತೀಯಚುನಾವಣಾ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯಲ್ಲಿ 966 ಕೋಟಿ ರೂಪಾಯಿಗಳಲ್ಲಿ ಮೇಘಾ ಇಂಜಿನೀಯರಿಂಗ್‌ ಕಂಪನಿಯಿಂದ 584 ಕೋಟಿ ರೂಪಾಯಿಗಳನ್ನು ಬಿಜೆಪಿಗೆ ನೀಡಿದೆ. ಎಂಐಇಎಲ್ ಖರೀದಿಸಿದ ಎಲೆಕ್ಟೋರಲ್ ಬಾಂಡ್‌ಗಳಿಂದ ಲಾಭ ಪಡೆದ ಎರಡನೇ ಅತಿ ದೊಡ್ಡ ಪಕ್ಷವೆಂದರೆ ಆಡಳಿತಾರೂಢ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ. ಇದು 195 ಕೋಟಿ ರುಪಾಯಿಗಳನ್ನು ಪಡೆದಿದೆ. ಅಲ್ಲದೇ, ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ 37 ಕೋಟಿ ರುಪಾಯಿ, ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ 85 ಕೋಟಿಯನ್ನು ಪಡೆದಿವೆ.

ಬಿಹಾರದ ಆಡಳಿತ ಪಕ್ಷವಾದ ನಿತೀಶ್ ಕುಮಾರ್ ಅವರ ಜನತಾ ದಳಕ್ಕೆ (ಯುನೈಟೆಡ್ ) ಈ ಎಂಐಇಎಲ್ ಕಂಪನಿ 10 ಕೋಟಿ ರುಪಾಯಿ ದೇಣಿಗೆ ನೀಡಿದೆ.

MIEL ವಿರೋಧ ಪಕ್ಷಗಳಿಗೆ ನೀಡಿದ ದೇಣಿಗೆ ಅತ್ಯಂತ ಸಣ್ಣ ಮೊತ್ತ. ಆಂಧ್ರ ಮೂಲದ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) 28 ಕೋಟಿ, ಕಾಂಗ್ರೆಸ್ 18 ಕೋಟಿ, ಜನತಾ ದಳ (ಜಾತ್ಯತೀತ) 5 ಕೋಟಿ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಕ್ಕೆ 4 ಕೋಟಿ ರುಪಾಯಿಗಳನ್ನು ನೀಡಿದೆ.

ಎಪ್ರಿಲ್ 12, 2023 ರ ಮೊದಲು MIEL ನ ಚುನಾವಣಾ ಬಾಂಡ್‌ಗಳ 89.75 ಕೋಟಿ ರೂಪಾಯಿಗಳಲ್ಲಿ ಜನತಾ ದಳ (ಜಾತ್ಯತೀತ) 50 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಮಾಹಿತಿಗಳಿಂದ ತಿಳಿದು ಬಂದಿದೆ. ಒಟ್ಟು ಮೊತ್ತದ ಸುಮಾರು 56% ಭಾಗವನ್ನು ಮೇ 2023 ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಮೊದಲೇ ಜೆಡಿಎಸ್‌ ಸ್ವೀಕರಿಸಿದೆ.

ಈ ಅವಧಿಯಲ್ಲಿ MIEL ಅನೇಕ ಸರ್ಕಾರಿ ಮೂಲಸೌಕರ್ಯ ಯೋಜನೆಗಳನ್ನು ತನ್ನ ಪಾಲಿಗೆ ದಕ್ಕಿಸಿಕೊಂಡಿತ್ತು. ಕಂಪನಿಯು 14,400 ಕೋಟಿ ರುಪಾಯಿಯ ಥಾಣೆ-ಬೊರಿವಲಿ ಜೋಡಿ ಸುರಂಗ ಯೋಜನೆಗೆ ಟೆಂಡರ್ ಪಡೆದುಕೊಂಡಿದೆ. ಈ ಟೆಂಡರ್‌ 2023 ರ ಏಪ್ರಿಲ್ 11 ರಂದು 140 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದ ಒಂದು ತಿಂಗಳ ನಂತರ ಸಿಕ್ಕಿದೆ. 140 ಕೋಟಿ ರೂಪಾಯಿಗಳಲ್ಲಿ, 115 ಕೋಟಿ ರುಪಾಯಿಗಳನ್ನು ಈ ಕಂಪನಿ ಬಿಜೆಪಿಗೆ, ಉಳಿದ 25 ಕೋಟಿ ರುಪಾಯಿಗಳನ್ನು ತೆಲುಗು ದೇಶಂ ಪಕ್ಷ, ಜನಸೇನಾ ಪಕ್ಷ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಹಂಚಿದೆ.

ಆಗ ಒಂದು ಟೆಂಡರ್ ಪ್ರಕ್ರಿಯೆ ವಿವಾದಕ್ಕೀಡಾಗಿತ್ತು. ಮಹಾರಾಷ್ಟ್ರ ಸರ್ಕಾರದ ಮುಂಬೈ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ (MMRDA) 2023 ರ ಜನವರಿಯಲ್ಲಿ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅಡಿಯಲ್ಲಿ ಎರಡು ರಸ್ತೆ ಸುರಂಗಗಳ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು. ಇದರಲ್ಲಿ MEIL ನ ಬಿಡ್ ಮಾತ್ರ ಸರ್ಕಾರ ಸ್ಪಂದಿಸಿತ್ತು. MIEL ಟೆಂಡರ್ ಪಡೆದುಕೊಂಡ ಕೂಡಲೇ MIEL ನ ಪ್ರತಿಸ್ಪರ್ಧಿ L&T ಮೇ 2023 ರಲ್ಲಿ ನ್ಯಾಯಾಲಯದಲ್ಲಿ ನಿರ್ಧಾರವನ್ನು ಪ್ರಶ್ನಿಸಿತ್ತು. ಆದರೆ ಬಾಂಬೆ ಉಚ್ಚ ನ್ಯಾಯಾಲಯವು ತಾಂತ್ರಿಕ ಆಧಾರದ ಮೇಲೆ L&T ಕಂಪನಿಯ ಮನವಿಯನ್ನು ವಜಾಗೊಳಿಸಿತು.

ಒಂದು ಸಣ್ಣ ಕಂಪನಿಯಾಗಿದ್ದ MIEL ಭಾರತದಲ್ಲಿ ಅತಿದೊಡ್ಡ ಮೂಲಸೌಕರ್ಯ ನಿರ್ಮಾಣದ ದೈತ್ಯ ಕಂಪನಿಯಾಗಿ ಬೆಳೆದಿದೆ. ಪ್ರಸ್ತುತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ವಿವಾದಗಳನ್ನೂ ಮೈಗೆಳೆದುಕೊಂಡಿದೆ. ತೆಲಂಗಾಣದಲ್ಲಿ ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಕೆಲವು ತಿಂಗಳ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ, 1 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆಯಲ್ಲಿ ಹಲವಾರು ಗುತ್ತಿಗೆಗಳನ್ನು ಈ ಕಂಪನಿಗೆ ಹಸ್ತಾಂತರಿಸುವಲ್ಲಿ ನಡೆದಿರುವ ಅವ್ಯವಹಾರಕ್ಕಾಗಿ ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ಆರೋಪಗಳನ್ನು ಮಾಡಿದ್ದರು.

ಆಂಧ್ರಪ್ರದೇಶದಲ್ಲಿ, ವೈಎಸ್ ಜಗನ್ ಮೋಹನ್ ರೆಡ್ಡಿ ಅವರು 2014 ರಿಂದ 2019 ರ ನಡುವೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು ಬೃಹತ್ ಪಟ್ಟಿಸೀಮಾ ನೀರಾವರಿ ಯೋಜನೆಯಲ್ಲಿ ಎಂಐಇಎಲ್‌ ಕಡೆ ಹೆಚ್ಚಿನ ಒಲವು ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪ ಮಾಡಿದ್ದ ಇದೇ ಜಗನ್ ತಾವು ಅಧಿಕಾರಕ್ಕೆ ಬಂದ ನಂತರ, MIEL ಗೆ ಹೆಚ್ಚಿನ ಗುತ್ತಿಗೆಗಳನ್ನು ನೀಡಿದರು. ಇದರಲ್ಲಿ ಪೋಲವರಂ ಅಣೆಕಟ್ಟು ಯೋಜನೆ ಕೂಡ ಒಂದು. ಜಗನ್‌, ನವಯುಗ ಇಂಜಿನಿಯರಿಂಗ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಈ ಯೋಜನೆಯನ್ನು MIELಗೆ ನೀಡಿದರು.

MIEL ಸಹ ಆದಾಯ ತೆರಿಗೆ ಇಲಾಖೆಯ ಸ್ಕ್ಯಾನರ್ ಅಡಿಯಲ್ಲಿ ಬರುತ್ತದೆ. ಅಕ್ಟೋಬರ್, 2019 ರಲ್ಲಿ ಅದರ ಕಚೇರಿಯ ಮೇಲೆ ದಾಳಿ ನಡೆಸಲಾಯಿತು, ಅದರ ನಂತರ ಈ ಕಂಪನಿ ಬೃಹತ್‌ ಪ್ರಮಾಣದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಝೋಝಿ-ಲಾ ಸುರಂಗವನ್ನು ನಿರ್ಮಿಸುವ 4,509 ಕೋಟಿ ಮೌಲ್ಯದ ಯೋಜನೆಯನ್ನು ಈ ಕಂಪನಿ ಆಗಸ್ಟ್ 2020 ರಲ್ಲಿ ಪಡೆದುಕೊಂಡಿದೆ.

ಕಳೆದ ಕೆಲವು ವರ್ಷಗಳಿಂದ MIEL ಹೈದರಾಬಾದ್ ಮೂಲದ ಮೈ ಹೋಮ್ ಗ್ರೂಪ್‌ನ ಸಹಭಾಗಿತ್ವದಲ್ಲಿ ಮಾಧ್ಯಮ ಕ್ಷೇತ್ರದ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದೆ. ಇದು ಪ್ರಭಾವಿ TV9TElugu ಚಾನೆಲನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಮತ್ತು NTV ಚಾನೆಲ್‌ನ 22% ಷೇರನ್ನು ಖರೀದಿಸಿದೆ. MIEL ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದಿಸುವ ಉದ್ಯಮಕ್ಕೆ ಯೋಜನೆಗಳನ್ನು ಹಾಕಿಕೊಂಡಿದೆ.

ಎಂಐಇಎಲ್‌ನ ಸಹಭಾಗಿತ್ವ ಹೊಂದಿರುವ ಕಂಪನಿಗಳನ್ನೂ ಸೇರಿಸಿದರೆ, ಬಿಜೆಪಿಗೆ ಈ ಕಂಪನಿ ನೀಡಿದ ದೇಣಿಗೆಗಳು ಇನ್ನೂ ಹೆಚ್ಚಾಗುತ್ತವೆ. MIEL ಸಹಭಾಗಿತ್ವದ ಕಂಪನಿಗಳು ನೀಡಿದ ಕಡಿಮೆ ಮೊತ್ತದ ದೇಣಿಗೆಗಳಲ್ಲಿ ಹೆಚ್ಚಿನವು ಕಾಂಗ್ರೆಸ್‌ಗೆ ಹೋಗಿವೆ.
ಎಂಐಇಎಲ್ ಒಡೆತನದ ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ 220 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿ ಮಾಡಿದೆ. ಇದು ಬಿಜೆಪಿಗೆ 80 ಕೋಟಿ ಬಾಂಡ್ ನೀಡಿದ್ದರೆ, ಕಾಂಗ್ರೆಸ್ ಗೆ 110 ಕೋಟಿ ದೇಣಿಗೆ ನೀಡಿದೆ. ಅಲ್ಲದೆ, ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ ಟಿಡಿಪಿಗೆ ರೂ 20 ಕೋಟಿ ಮತ್ತು ಜನಸೇನಾಗೆ ಬಾಂಡ್‌ಗಳ ಮೂಲಕ ರೂ 10 ಕೋಟಿ ದೇಣಿಗೆ ನೀಡಿದೆ.

40 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ MIEL ನ ಮತ್ತೊಂದು ಕಂಪನಿ SEPC Power, ಕಾಂಗ್ರೆಸ್‌ಗೆ 30 ಕೋಟಿ ರುಪಾಯಿಗಳನ್ನೂ, ಬಿಜೆಪಿ ಮತ್ತು ಟಿಡಿಪಿಗೆ ತಲಾ 5 ಕೋಟಿ ರುಪಾಯಿಗಳನ್ನು ನೀಡಿದೆ. MIEL ನ ಮತ್ತೊಂದು ಕಂಪನಿ Evey Trans Private Limited ಬಿಆರ್‌ಎಸ್‌ ಪಕ್ಷಕ್ಕೆ ಬಾಂಡ್‌ಗಳ ಮೂಲಕ 6 ಕೋಟಿ ರುಪಾಯಿ ನೀಡಿದೆ.

ಎಲ್ಲವನ್ನೂ ಸಮಗ್ರವಾಗಿ ನೋಡಿದಾಗ MIEL ಮತ್ತು ಅದರ ಸಂಬಂಧಿತ ಕಂಪನಿಗಳ ಪಾಲು 1232 ಕೋಟಿ ರುಪಾಯಿಗಳಷ್ಟಿದೆ. ಅದರಲ್ಲಿ ಬಿಜೆಪಿ ಮಾತ್ರ 669 ಕೋಟಿ ರುಪಾಯಿಗಳನ್ನು ಪಡೆದುಕೊಂಡಿದೆ. ಇದು ಒಟ್ಟು ದೇಣಿಗೆಯ ಸುಮಾರು 54.3% ಪಾಲು. ಈ ಕಂಪನಿಯಿಂದ ದೇಣಿಗೆ ಪಡೆದುಕೊಂಡಿರುವ ಎರಡನೇ ಅತಿದೊಡ್ಡ ಪಕ್ಷ ಬಿಆರ್‌ಎಸ್.

Related Articles

ಇತ್ತೀಚಿನ ಸುದ್ದಿಗಳು