ಕೊಪ್ಪಳ, ಮೇ 15: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ತುಂಗಭದ್ರಾ ಸೇತುವೆ ಮೇಲೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಮಂದಿಯ ದುರ್ಮರಣದ ಪ್ರಕರಣ ನಡೆದಿದೆ. ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಮನೆ ಮಾಡಿದೆ.
ಅಪಘಾತ ನಡೆದಿದ್ದು ಹೇಗೆ?
ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಭದ್ರಾ ಸೇತುವೆ ಮೇಲೆ ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಟ್ಯಾಂಕರ್ ವಾಹನವೊಂದು ಭಾರೀ ರಭಸದಿಂದ ಢಿಕ್ಕಿ ಹೊಡೆದಿದೆ. ಈ ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಸೇತುವೆಯಿಂದ ನೇರ ಕೆಳಗೆ ಬಿದ್ದಿದ್ದು, ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಒಂದೇ ಕುಟುಂಬಕ್ಕೆ ಆಘಾತ
ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಏಳು ಮಂದಿಯೂ ಒಂದೇ ಕುಟುಂಬಕ್ಕೆ ಸೇರಿದವರು ಎಂಬ ಮಾಹಿತಿ ತೀವ್ರ ಸಂಕಟ ತಂದಿದೆ. ಮೃತರೆಲ್ಲರೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಹುಲಿಗೆಮ್ಮ ದೇವಸ್ಥಾನಕ್ಕೆ ದರ್ಶನಕ್ಕಾಗಿ ತೆರಳುತ್ತಿದ್ದ ವೇಳೆ ಒಂದೇ ಮನೆಯ ಸದಸ್ಯರ ಮೇಲೆ ಕಾಲ ಕ್ರೂರವಾಗಿ ಎರಗಿದೆ.
ಗಾಯಾಳುಗಳ ಚಿಕಿತ್ಸೆ
ಅಪಘಾತದಲ್ಲಿ ಗಾಯಗೊಂಡ ಹತ್ತಕ್ಕೂ ಹೆಚ್ಚು ಮಂದಿಯನ್ನು ತಕ್ಷಣ ಹೊಸಪೇಟೆ ಮತ್ತು ಕೊಪ್ಪಳ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಮೃತದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೆಲ ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಕಾರಣ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು
ಮುನಿರಾಬಾದ್ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಟ್ಯಾಂಕರ್ ಚಾಲಕನ ನಿರ್ಲಕ್ಷ್ಯ ಅಥವಾ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿರಬಹುದೆಂದು ಅನುಮಾನಿಸಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದೇವರ ದರ್ಶನಕ್ಕೆ ಹೊರಟ ಕುಟುಂಬ ಶವವಾಗಿ ಮರಳಿದ ಈ ದುರಂತ ಘಟನೆ ಮರ್ಲಾಯನಹಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸುವಂತೆ ಮಾಡಿದೆ.
