ಮೊದಲೆಲ್ಲ, ಎಂದರೆ ಸುಮಾರು 90ರ ದಶಕಗಳಲ್ಲಿ ಬಲಪಂಥೀಯ ಸಂಘಟನೆಗಳು ಸಣ್ಣ ಸಣ್ಣ ವಿಷಯಗಳಿಗೂ ಜಿಲ್ಲೆ, ಪಟ್ಟಣಗಳಲ್ಲಿ ಗಲಭೆ ಎಬ್ಬಿಸಿ ಮೂರು ನಾಲ್ಕು ದಿನಗಳ ಕಾಲ ಅಲ್ಲಿನ ವಾತಾವರಣವನ್ನು ಸೂಕ್ಷ್ಮವಾಗಿಸಿ ಪೋಲಿಸ್ ಮತ್ತು ಸರಕಾರಕ್ಕೆ ತಲೆ ನೋವು ತರುತ್ತಿದ್ದವು. ಕೆಲವು ಊರುಗಳಂತೂ ಸದಾ ಬೂದಿ ಮುಚ್ಚಿದ ಕೆಂಡದಂತಿರುತ್ತಿದ್ದವು. (ಈಗಲೂ) ಕೆಲವು ಊರುಗಳಲ್ಲಂತೂ ಸದಾ ಮೀಸಲು ಪಡೆಯ ಒಂದೆರಡು ವಾಹನಗಳು ನಿಂತೇ ಇರುತ್ತಿದ್ದವು. ಆಗೆಲ್ಲ ಇಂತಹ ಗಲಭೆಗಳು ಅಂತಹ ಊರಿಗಷ್ಟೇ ಸೀಮಿತವಾಗಿರುತ್ತಿದ್ದವು. ಇದಕ್ಕೆ ಮುಖ್ಯ ಕಾರಣ ಈಗಿನಷ್ಟು ಆಗ ಸಂಪರ್ಕ ಸಾಧ್ಯತೆಗಳ ಲಭ್ಯತೆ ಇಲ್ಲವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಗಲಭೆಗಳು ಆಗುತ್ತವೆಯಾದರೂ ಮೊದಲಿನಷ್ಟು ʼಮಾಮೂಲಿʼ ಎನ್ನುವಷ್ಟಿಲ್ಲ. ಇದಕ್ಕೆ ಮುಖ್ಯ ಕಾರಣ ಆಗ ಗಲಾಟೆ ಎಬ್ಬಿಸುತ್ತಿದ್ದ ಪಕ್ಷವೇ ಈಗ ಬಹುತೇಕ ಎಲ್ಲೆಡೆ ಅಧಿಕಾರದಲ್ಲಿರುವುದು.
ಹಾಗೆಂದು ಇಂದು ಅಂತಹ ಗಲಭೆಗಳು ಕಡಿಮೆಯಾಗಿವೆಯೇ ಎಂದು ಕೇಳಿದರೆ ಉತ್ತರ ಇಲ್ಲವೆಂದೇ ಹೇಳಬೇಕಾಗುತ್ತದೆ. ಆದರೆ ಅಂತಹ ಗಲಭೆಗಳು ನಡೆಯುವ ವೇದಿಕೆಗಳು ಬದಲಾಗಿವೆ. ಭಾರತದಲ್ಲಿ ಅಂತರ್ಜಾಲ ಕ್ರಾಂತಿಯೊಂದಿಗೆ ಇಂತಹ ಗಲಭೆಗಳ ವಿಷಯದಲ್ಲಿಯೂ ಬಹುತೇಕ ಕ್ರಾಂತಿಯಾಗಿದೆ. ಅಂತಹ ಗಲಭೆಗಳು ಈಗೀನ ಸಾಮಜಿಕ ವಿಷಯಗಳ ಚರ್ಚೆಯ ಅಡ್ಡೆಯಾಗಿರುವ ಸಾಮಾಜಿಕ ಜಾಲತಾಣಗಳನ್ನು ಆ ಗಲಭೆಗಳು ತಲುಪಿವೆ. ಹಾಗೆಂದು ಬೀದಿ ಗಲಭೆಗಳು ಈಗ ನಡೆಯುವುದಿಲ್ಲವೆಂದಲ್ಲ. ಅವು ಈಗಲೂ ನಡೆಯುತ್ತವೆಯಾದರೂ ಹೆಚ್ಚಿನವರಿಗೆ ಬೀದಿಯಲ್ಲಿ ನಿಂತು ಗಲಭೆ ಎಬ್ಬಿಸುವುದಕ್ಕಿಂತಲೂ ಮೊಬೈಲ್ ಪರದೆಯ ಹಿಂದೆ ಅಡಗಿ ವ್ಯಕ್ತಿಗಳನ್ನು ಹುಡುಕಿ ಹೊಡೆಯುವುದು ಹೆಚ್ಚು ಸೇಫ್ ಎನ್ನಿಸತೊಡಗಿದೆ. ಮತ್ತು ಇಲ್ಲಿ ಸಂಘಟಿತರಾಗುವುದು ಕೂಡಾ ಸುಲಭ.

ಇದನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ನಾವು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಎದ್ದ ಗದ್ದಲಗಳನ್ನು ಗಲಭೆಗಳನ್ನು ನೆನಪಿಸಿಕೊಳ್ಳಬೇಕು. ಅವುಗಳಲ್ಲಿ ತೀರಾ ಇತ್ತೀಚಿನದೆಂದರೆ ಇಸ್ರೇಲಿ ಸಿನೆಮಾ ನಿರ್ಮಾಪಕ ದಿ ಕಾಶ್ಮೀರ್ ಫೈಲ್ಸ್ ಕುರಿತು ನೀಡಿದ ಹೇಳಿಕೆಯನ್ನು ಉದ್ದೇಶಿಸಿ “ನೀವು ಹೇಳಿಕೆಯನ್ನು ನೀಡಿ ಹೋಗಿ ಬಿಡುತ್ತೀರಿ, ನಿಮ್ಮ ಧೈರ್ಯದ ಕುರಿತು ಹೆಮ್ಮೆಯನ್ನೂ ಅನುಭವಿಸುತ್ತೀರಿ. ಆದರೆ ನಿಮ್ಮ ಧೈರ್ಯದ ಪರಿಣಾಮವನ್ನು ನೀವು ನಮ್ಮ ಡಿಎಮ್ (ಡೈರೆಕ್ಟ್ ಮೆಸೇಜ್)ಗಳಲ್ಲಿ ನೋಡಬೇಕು” ಎಂದು ಹೇಳಿರುವುದು ಸಾಮಾಜಿಕ ಗುಂಪು ದಾಳಿ ಬಂದು ನಿಂತಿರುವ ತಿರುವಿನ ಕುರಿತು ಮಾತನಾಡುತ್ತದೆ.
ಇಂದು ಜನಪ್ರಿಯ ಅಭಿಪ್ರಾಯಗಳ ಕುರಿತು ಯಾರೇ ಮಾತನಾಡಿದರೂ ಅವರ ಇನ್‌ಬಾಕ್ಸ್ ದ್ವೇಷಪೂರಿತ ಬೆದರಿಕೆಗಳಿಂದ ತುಂಬಿ ತುಳುಕುತ್ತದೆ. ಮತ್ತು ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಹಾಕುವುದು, ಮೇಮೆ ಕ್ರಿಯೆಟ್ ಮಾಡುವುದು, ಅವರ ಕುರಿತಾದ ಸುದ್ದಿ ಬಂದಿರುವ ಹ್ಯಾಂಡಲ್‌ಗಳಲ್ಲಿ ಅವರನ್ನು ಬಾಯಿಗೆ ಬಂದಂತೆ ನಿಂದಿಸುವುದು ಇವೆಲ್ಲವೂ ದಂಗೆಯ ಮನಸ್ಥಿತಿಯ ಜನರು ತಮ್ಮ ಬೀದಿ ಗಲಭೆಯ ತೆವಲನ್ನು ತೀರಿಸಿಕೊಳ್ಳುವ ಹೊಸ ಬಗೆಯೇ ಆಗಿದೆ. ಭಾರತದಲ್ಲಿ ಇಂದು ಆನ್‌ಲೈನ್ ದ್ವೇಷವೆನ್ನುವುದು ಯಾರೂ ನಿಯಂತ್ರಿಸಲಾಗದ ಮಟ್ಟಿಗೆ ಬೆಳೆದು ನಿಂತಿದೆ. ನಾಳೆ ಇದನ್ನು ಸೃಷ್ಟಿಸಿದವರೇ ಅದನ್ನು ತಡೆಯಲು ಪ್ರಯತ್ನಸಿದಲ್ಲಿ ಅವರ ವಿರುದ್ಧವೇ ಈ ದ್ವೇಷಪೂರಿತ ಜನರು ಮುರಿದುಬೀಳುವುದು ಗ್ಯಾರಂಟಿ.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆಯನ್ನು ಹರಾಜಿಗಿಟ್ಟಿರುವ ಈ ಟ್ರೋಲ್ ಸೈನ್ಯಗಳು ತಯಾರಾಗಿದ್ದು ಕೇವಲ ವೋಟ್ ಪಡೆಯುವ ಕಾರಣಕ್ಕಾಗಿ ಎನ್ನುವುದು ವಿಪರ್ಯಾಸ.