ಪ್ರಜಾವಾಣಿಯಲ್ಲಿ ಪ್ರಕಟವಾದ, ಗಣಪತಿ ಸಚ್ಚಿದಾನಂದ ಸ್ವಾಮಿ ಎನ್ನುವವರು ಮಹಿಳೆಯರ ಬಗ್ಗೆ ಬರೆದ ವಿಷಯವನ್ನು ಮತ್ತು ಅದನ್ನು ಪ್ರಕಟಿಸಿ ಪ್ರಚಾರಕ್ಕೆ ತರುತ್ತಿರುವ ಪ್ರಜಾವಾಣಿ ಪತ್ರಿಕೆಯನ್ನು ನಾನು ಮೊದಲಾಗಿ ಖಂಡಿಸುತ್ತೇನೆ.
ಇವರು ಯಾವ ಮಹಿಳೆ ಬಗ್ಗೆ ಮಾತನಾಡುತ್ತಿದ್ದಾರೆ? ನಮ್ಮ ದೇಶದಲ್ಲಿ ಇರುವ ಎಷ್ಟು ಮಹಿಳೆಯರ ಬಗ್ಗೆ ಇವರಿಗೆ ತಿಳಿದಿದೆ? ದುಡಿದುದನ್ನು ಖರ್ಚು ಮಾಡಿ ಕಂಠಪೂರ್ತಿ ಕುಡಿದು ತೂರಾಡುತ್ತಾ ಮನೆಗೆ ಬಂದು ಹೆಂಡತಿ ಮಕ್ಕಳನ್ನು ಹೊಡೆದು ಉಪವಾಸ ಮಲಗುವ ಎಷ್ಟು ಮಹಿಳೆಯರ ಬಗ್ಗೆ ಇವರಿಗೆ ಗೊತ್ತಿದೆ? ಕಟ್ಟಿಕೊಂಡ ಹೆಂಡತಿಯನ್ನು ಪರಪುರುಷನ ಜೊತೆ ಮಲಗು ಎಂದು ಹೊಡೆದು ಅಂತವರ ಕೈಯಲ್ಲಿ ದಿನ ಪೆಟ್ಟು ಬೈಗುಳ ತಿನ್ನುವ ಎಷ್ಟು ಮಹಿಳೆಯರ ಬಗ್ಗೆ ಇವರಿಗೆ ಗೊತ್ತಿದೆ?
ನಾವು ಮಹಿಳೆಯರು ಬಾಯಿ ತುಂಬ ನಗಬಾರದು, ತನ್ನ ಇಚ್ಛೆಯಂತೆ ಸ್ನಾನ ಮಾಡಬಾರದು, ಹೊಟ್ಟೆ ತುಂಬಾ ಊಟ ಮಾಡಬಾರದು, ಜೋರು ಮಾತನಾಡಬಾರದು ಎಂದು ಹೇಳಲು ಇವರಿಗೆ ಯಾವ ಹಕ್ಕು ಇದೆ? ಇವರು ಪ್ರಸ್ತುತ ಪಡಿಸಿದ ಮಾತ್ರಕ್ಕೆ ಇಂತಹ ಲಜ್ಜೆ ಗೆಟ್ಟ ಬರಹವನ್ನು ಪ್ರಕಟಣೆ ಮಾಡಿದ ಪ್ರಜಾವಾಣಿ ಎಂಬ ಪತ್ರಿಕೆಯವರ ಮನಸ್ಥಿತಿ ಎಂತಹದು? ಇವರ ಮನೆಯಲ್ಲಿ ತಾಯಿ ಅಕ್ಕ ತಂಗಿ ಮಗಳು ಎಂಬ ಬೇರೆ ಬೇರೆ ಸಂಬಂಧದ ಮಹಿಳೆಯರು ಇಲ್ಲವೇ?
ಇಂತಹ ಲಜ್ಜೆ ಗೆಟ್ಟ ಬರಹವನ್ನು ಎತ್ತಿ ಹಿಡಿದ ಸ್ವಾಮೀಜಿಗೆ ತನ್ನ ಅಮ್ಮ ಎಂಬ ಎರಡಕ್ಷರದ ಮಹಿಳೆಯ ಬಗ್ಗೆ ಎಷ್ಟು ಗೊತ್ತಿರಬಹುದು? ಪ್ರತಿಯೊಬ್ಬರಿಗೂ ಯಾವ ಸಂಬಂಧವೂ ಇಲ್ಲದಿದ್ದರೂ ಅಮ್ಮ ಎಂಬುದು ಇಲ್ಲದೆ ಈ ಭೂಮಿ ಮೇಲೆ ಯಾರೂ ಬರಲು ಸಾಧ್ಯವಿಲ್ಲ. ಈ ಅಮ್ಮ ಒಬ್ಬ ಮಹಿಳೆ ಎಂಬುದು ತಿಳಿದಿರಲಿ..
ಇತ್ತೀಚೆಗೆ ಹೆಣ್ಣು ಮಕ್ಕಳ ಅತ್ಯಾಚಾರ,ಕೊಲೆ, ಸುಲಿಗೆ ಪ್ರಕರಣಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಸಾಮಾನ್ಯ ಜನರಿಗೂ ಇದು ಮಾಮೂಲು ಎನ್ನುವಂತಹ ವಾತಾವರಣವನ್ನು ಆಳುವ ವರ್ಗ ಮತ್ತು ಮಾಧ್ಯಮ ನಿರ್ಮಾಣ ಮಾಡಿದೆ ಎಂದರೆ ತಪ್ಪಾಗಲಾರದು. ಪರಿಸ್ಥಿತಿ ಹೀಗಿರುವಾಗ ಇಂತಹ ಹೇಳಿಕೆಗಳಿಂದ ಅಧಿಕಾರ, ಆರ್ಥಿಕವಾಗಿ ಸಬಲರಲ್ಲದ ಮಹಿಳೆಯರ ಸ್ಥಿತಿ ಏನಾಗಬಹುದು? ಸಮಾಜದ ಸ್ಥಿತಿ ಏನಾಗಬಹುದು? ಎಂಬ ಕಲ್ಪನೆ ಏನಾದರೂ ಇವರಿಗಿದೆಯೇ?
ಸ್ವಾಮೀಜಿ ಎನಿಸಿ ಕೊಂಡಿರುವ ವ್ಯಕ್ತಿಯೇ ಇದನ್ನು ಪ್ರೋತ್ಸಾಹಿಸಿದರೆ, ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾದ ಪತ್ರಿಕೆಯೇ ಇಂತಹ ಲೇಖನ ಪ್ರಕಟಿಸಿದರೆ ಈಗಾಗಲೇ ಹದಗೆಟ್ಟಿರುವ ಮಹಿಳೆಯರ ಸ್ಥಿತಿ ಹೇಗಾಗುತ್ತದೆ ಎಂಬ ಪರಿಜ್ಞಾನ ಇವರಿಗೆ ಇದೆಯಾ?
ದಿನ ಬೆಳಗಾದರೆ ಸ್ವಾಮಿಜಿಗಳು, ಗುರುಗಳು ಎಂದು ಅವರ ಪಾದಪೂಜೆ ಮಾಡುವುದನ್ನು, ಅವರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುವ ಅನಕ್ಷರಸ್ಥ ಮುಗ್ಧ ಮಹಿಳೆಯರು ಹಾಗೂ ಅಧಿಕಾರ ಹಾಗೂ ಆರ್ಥಿಕವಾಗಿ ಬಲಾಢ್ಯರಾದ ಅಕ್ಷರಸ್ಥ ಮಹಿಳೆಯರೂ ಸ್ವಾಮಿಜಿಗಳು ಎನ್ನಿಸಿಕೊಂಡ ವ್ಯಕ್ತಿ ಇಂತಹ ಮೂಢನಂಬಿಕೆಗಳನ್ನು ಬಿತ್ತುವ ಬರಹದ ಮೂಲಕ ಮಹಿಳೆಯರಾದ ನಮ್ಮನ್ನು ತುಳಿಯುವುದನ್ನು ನಾವೆಲ್ಲರೂ ಒಟ್ಟಾಗಿ ಖಂಡಿಸಬೇಕಿದೆ. ಹಾಗೂ ಇಂಥವರ ಬಗ್ಗೆ ಜಾಗೃತರಾಗೋಣ. ಇಂಥವರು ದೇವರು ಧರ್ಮ ಎಂದು ಹೇಳಿಕೊಂಡು ನಮ್ಮನ್ನು ಬಲಿಪಶು ಮಾಡುವುದನ್ನು ಅರಿಯೋಣ.
ಇತ್ತೀಚೆಗೆ ಸ್ವಾಮಿಜಿ ಎನಿಸಿಕೊಂಡಿರುವ ಹಲವಾರು ವ್ಯಕ್ತಿಗಳು ಹೆಣ್ಣು ಮಕ್ಕಳನ್ನು , ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ತಮ್ಮ ಅಧಿಕಾರ ಬಳಸಿ ಪುರುಷರನ್ನು ಸಂತೃಪ್ತಿ ಪಡಿಸುವ ಸರಕಾಗಿ ಮಾಡಿಕೊಂಡಿರುವ ವಿಚಾರದ ಬಗ್ಗೆ ನಮಗೆ ಅರಿವಿರಬೇಕು. ಇಷ್ಟು ಮಾಡಿಯೂ ಸಂಸ್ಕೃತಿ, ಧರ್ಮ, ದೇವರು, ಸನಾತನ ಎಂದುಕೊಂಡು ತಮ್ಮ ಅಡಿಯಾಳನ್ನಾಗಿ ಮಾಡುತ್ತಿರುವುದರ ಬಗ್ಗೆ ಮಹಿಳೆಯರಾದ ನಾವು ಜಾಗೃತರಾಗಬೇಕು.
ಸರಕಾರ ಹಾಗೂ ಪೊಲೀಸರು, ಗಣಪತಿ ಸಚ್ಚಿದಾನಂದ ಸ್ವಾಮಿ ಎಂಬ ವ್ಯಕ್ತಿ ಹಾಗೂ ಪ್ರಜಾವಾಣಿ ಪತ್ರಿಕೆಯ ಮೇಲೆ ಕೇಸು ದಾಖಲು ಮಾಡಬೇಕು. ಇಂತಹ ಹೇಳಿಕೆಗಳ ಮೂಲಕ ಸಾಮಾಜಿಕ ಅಸಮಾನತೆಯನ್ನು, ದೌರ್ಜನ್ಯವನ್ನು ಹೆಚ್ಚಿಸುವ ಮನಸ್ಥಿತಿಯವರನ್ನು ಪ್ರಜ್ಞಾವಂತರೆಲ್ಲರೂ ಖಂಡಿಸಬೇಕು.
ವನಿತಾ, ಮಂಗಳೂರು