ಇತ್ತೀಚಿನ ದಿನಗಳಲ್ಲಿ ಸುಂಕ ಹೆಚ್ಚಳದಿಂದ ಹೆಚ್ಚು ಸುದ್ದಿ ಮಾಡುತ್ತಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭಾರತಕ್ಕೆ ಭಾರೀ ಸುಂಕದ ಹೊರೆ ಹೇರಿದ್ದಾರೆ. ಭಾರತಕ್ಕೆ ಹೆಚ್ಚುವರಿ ಶೇ 50% ಸುಂಕ ಏರಿಕೆಯ ಬರೆಯ ನಡುವೆ, ಭಾರತದಿಂದ ಅಮೇರಿಕಾಗೆ ತಲುಪುವ ಎಲ್ಲಾ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಿಗಳು ಶೇ.100% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಇದನ್ನು ಘೋಷಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ಅವರು ಅಡುಗೆಮನೆ ಕ್ಯಾಬಿನೆಟ್‌ಗಳು, ಸ್ನಾನಗೃಹದ ವ್ಯಾನಿಟಿಗಳು ಮತ್ತು ಸಂಬಂಧಿತ ವಸ್ತುಗಳ ಮೇಲೆ ಶೇ.50 ಸುಂಕವನ್ನು ಮತ್ತು ಭಾರೀ ಟ್ರಕ್‌ಗಳ ಮೇಲೆ ಶೇ.25 ಸುಂಕವನ್ನು ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಆಮದು ಶುಲ್ಕವನ್ನು ಶೇ.25ರಿಂದ 50ಕ್ಕೆ ಏರಿಸಿದ್ದರು.
ಇದಾದ ನಂತರ ನರೇಂದ್ರ ಮೋದಿ ನನ್ನ ಆಪ್ತ ಸ್ನೇಹಿತ, ಅವರು ನಮ್ಮ ಸಲಹೆಯನ್ನು ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಲೇ ಭಾರತದ ಔಷಧಿಗಳಿಗೆ ದುಪ್ಪಟ್ಟು ಸುಂಕ ಹೇರಿದ್ದಾರೆ.
ಈ ಸುಂಕವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಆದಾಗ್ಯೂ, ಔಷಧ ಕಂಪನಿಗಳು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕಗಳ ಸ್ಥಾಪಿಸಿದರೆ, ಅವು ಸುಂಕಗಳಿಂದ ಪ್ರಭಾವಿತವಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಈ ಘೋಷಣೆಯಿಂದಾಗಿ ಭಾರತೀಯ ಔಷಧ ಕಂಪನಿಗಳಿಗೆ ದೊಡ್ಡ ಹಿನ್ನಡೆಯಾಗಬಹುದು. ಅಮೆರಿಕ ಭಾರತದ ಅತಿದೊಡ್ಡ ಔಷಧ ರಫ್ತು ಮಾರುಕಟ್ಟೆಯಾಗಿದೆ.ಅಮೆರಿಕದಲ್ಲಿ ಕೈಗೆಟುಕುವ ಜೆನೆರಿಕ್ ಔಷಧಿಗಳಿಗೆ ಭಾರಿ ಬೇಡಿಕೆಯಿದೆ.
2024 ರಲ್ಲಿ, ಭಾರತವು ಅಮೆರಿಕಕ್ಕೆ 3.6 ಬಿಲಿಯನ್ ಡಾಲರ್ (ಸುಮಾರು ರೂ. 31,626 ಕೋಟಿ) ಮೌಲ್ಯದ ಔಷಧಿಗಳನ್ನು ರಫ್ತು ಮಾಡಿತ್ತು. ಆದರೆ 2025 ರ ಮೊದಲಾರ್ಧದಲ್ಲಿ, ಈ ಅಂಕಿ ಅಂಶವು 3.7 ಬಿಲಿಯನ್ ಡಾಲರ್ (ಸುಮಾರು ರೂ. 32,505 ಕೋಟಿ) ತಲುಪಿತ್ತು.