Home ವಿದೇಶ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆಂದು ಮತ್ತೆ ಹೇಳಿದ ಟ್ರಂಪ್

ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆಂದು ಮತ್ತೆ ಹೇಳಿದ ಟ್ರಂಪ್

0
Narendra Modi and Donald Trump

ವಾಷಿಂಗ್ಟನ್: ಉಕ್ರೇನ್ ವಿರುದ್ಧದ ಸಮರ ಮುಂದುವರೆಸಿರುವ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಸ್ಥಗಿತಗೊಳಿಸುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಮತ್ತೊಮ್ಮೆ ಪ್ರಕಟಿಸಿದರು. ಒಂದು ವೇಳೆ ಭಾರತವು ಹಾಗೆ ಮಾಡದಿದ್ದರೆ, “ಬೃಹತ್” ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದರು.

‘ಏರ್ ಫೋರ್ಸ್ ಒನ್’ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, “ನಾನು ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ರಷ್ಯಾದೊಂದಿಗೆ ತೈಲ ವಹಿವಾಟನ್ನು ಮುಂದುವರಿಸುವುದಿಲ್ಲ ಎಂದು ನನಗೆ ತಿಳಿಸಿದ್ದಾರೆ,” ಎಂದು ಹೇಳಿದರು.

ಕಳೆದ ವಾರವೂ ಟ್ರಂಪ್ ಇದೇ ಮಾತುಗಳನ್ನು ಹೇಳಿದ್ದರು. ಆದರೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅದನ್ನು ತಳ್ಳಿಹಾಕಿತ್ತು. ಟ್ರಂಪ್ ಮತ್ತು ಮೋದಿ ನಡುವೆ ಯಾವುದೇ ಮಾತುಕತೆ ನಡೆದಿರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು. ಭಾರತದ ತೈಲ ಖರೀದಿ ನಿರ್ಧಾರವು ಗ್ರಾಹಕರ ಹಿತಾಸಕ್ತಿಗಳ ಆಧಾರದ ಮೇಲೆ ನಿಂತಿದೆ ಎಂದೂ ಸಚಿವಾಲಯ ಒತ್ತಿ ಹೇಳಿತ್ತು.

ಈ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅಮೆರಿಕದ ಅಧ್ಯಕ್ಷ, “ಅವರು (ಭಾರತ) ಆ ವಹಿವಾಟನ್ನು ಮುಂದುವರಿಸಿದರೆ, ಅವರು ಹೆಚ್ಚಿನ ಪ್ರಮಾಣದ ಸುಂಕವನ್ನು ಕಟ್ಟುವುದನ್ನು ಮುಂದುವರಿಸಬೇಕಾಗುತ್ತದೆ. ಅದನ್ನು ಅವರು ಬಯಸುವುದಿಲ್ಲ,” ಎಂದು ಪ್ರತಿಪಾದಿಸಿದರು.

ಭಾರತವು ತನಗೆ ಅಗತ್ಯವಿರುವ ತೈಲದ ಸುಮಾರು ಮೂರನೇ ಒಂದು ಭಾಗವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತವು ತೈಲ ಖರೀದಿಯನ್ನು ನಿಲ್ಲಿಸಿದರೆ, ರಷ್ಯಾದ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಇದರ ಪರಿಣಾಮವಾಗಿ ಉಕ್ರೇನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಬಹುದು ಎಂಬುದು ಅಮೆರಿಕದ ರಾಜಕೀಯ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.

You cannot copy content of this page

Exit mobile version