ಮೋದಿ ಜೊತೆ ಜಂಟಿ ಪತ್ರಿಕಾಗೋಷ್ಠಿ ಬೇಡವೆಂದರೂ ಟ್ರಂಪ್‌ ಅನಿರೀಕ್ಷಿತ ವರ್ತನೆ; ಇನ್ಮುಂದೆ ಭಾರತ ಎಚ್ಚರಿಕೆಯ ನಡೆ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ನಾಯಕರೊಂದಿಗೆ ನಡೆಸುವ ಸಾರ್ವಜನಿಕ ಸಂವಾದಗಳಲ್ಲಿ ತೋರುತ್ತಿರುವ ಅನಿರೀಕ್ಷಿತ ವರ್ತನೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ವೇಳೆ ಭಾರತ ಎಚ್ಚರಿಕೆಯ ರಾಜತಾಂತ್ರಿಕ ನಡೆ ಅನುಸರಿಸಿತ್ತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಫ್ರಾನ್ಸ್‌ನಲ್ಲಿ ಜೂನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಮಾತುಕತೆ ನಡೆದಿತ್ತು. ಈ ಭೇಟಿಯ ಬಳಿಕ ಜಂಟಿ ಮಾಧ್ಯಮಗೋಷ್ಠಿ ನಡೆಸದಿರಲು ಭಾರತ ನಿರ್ಧರಿಸಿತ್ತು. ಈ ಕುರಿತು ಅಮೆರಿಕದ ಅಧಿಕಾರಿಗಳಿಗೆ ಭೇಟಿಗೂ ಮುನ್ನವೇ ಮಾಹಿತಿ ನೀಡಲಾಗಿತ್ತು ಎಂದು ಮೂಲಗಳು ಹೇಳಿವೆ.

ಈ ನಡುವೆ ಅಮೆರಿಕದ ರಾಯಭಾರಿ ಸರ್ಗಿಯೊ ಗೊರ್ ಅವರು ನೀಡಿದ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. ಮೋದಿ–ಟ್ರಂಪ್ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳು ಹಾಜರಿರಬಹುದು, ಆದರೆ ಪೂರ್ಣ ಪ್ರಮಾಣದ ಸುದ್ದಿಗೋಷ್ಠಿ ಅಥವಾ ಪ್ರಶ್ನೋತ್ತರಕ್ಕೆ ಅವಕಾಶ ನೀಡದಂತೆ ಭಾರತದ ವಿದೇಶಾಂಗ ಸಚಿವಾಲಯ ಮನವಿ ಮಾಡಿತ್ತು ಎಂದು ಗೊರ್ ಹೇಳಿದ್ದರು.

ಭಾರತದ ಮನವಿಗೆ ಟ್ರಂಪ್ ಕೂಡ ಆರಂಭದಲ್ಲಿ ಸಮ್ಮತಿ ಸೂಚಿಸಿದ್ದರು. ಆದರೆ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದ್ದು, ಸುಮಾರು 45 ನಿಮಿಷಗಳ ಕಾಲ ಸಂವಾದ ನಡೆದಿತ್ತು ಎಂದು ಅಮೆರಿಕ ರಾಯಭಾರಿ ವಿವರಿಸಿದ್ದರು.

ಗೊರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಸರ್ಕಾರಿ ಮೂಲಗಳು, ಉನ್ನತ ಮಟ್ಟದ ನಾಯಕರ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದರ ಕುರಿತು ಮುಂಚಿತವಾಗಿ ಚರ್ಚಿಸುವುದು ಸಾಮಾನ್ಯ ರಾಜತಾಂತ್ರಿಕ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿವೆ.

ಟ್ರಂಪ್ ಅವರು ಈ ಹಿಂದೆ ವಿವಿಧ ವಿಶ್ವ ನಾಯಕರೊಂದಿಗಿನ ಮಾಧ್ಯಮ ಸಂವಾದಗಳ ವೇಳೆ ಅನಿರೀಕ್ಷಿತ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ, ಮೋದಿ ಭೇಟಿಯ ಸಂದರ್ಭದಲ್ಲಿ ಯಾವುದೇ ಅನಿರೀಕ್ಷಿತ ಪರಿಸ್ಥಿತಿ ಎದುರಾಗದಂತೆ ಭಾರತ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿತ್ತು ಎಂಬುದು ಇದೀಗ ಸರ್ಕಾರದ ಮೂಲಗಳ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು