ನನ್ನ ಮನೆಗೆ ನಿನ್ನೆ ತಡರಾತ್ರಿ ಬಂದ ಪೊಲೀಸರ ತಂಡ ಸಮನ್ಸ್ ನೀಡಿದೆ. ಮಂಗಳೂರು ಕಮೀಷನರ್ ಕಚೇರಿಯಿಂದ ಕಳುಹಿಸಿದ ಸಮನ್ಸ್ ನೋಟೀಸ್ ನಲ್ಲಿ ನಮ್ಮನ್ನು ಏಕವಚನದಲ್ಲಿ ಕ್ರಿಮಿನಲ್ ರೀತಿ ಪದಗಳನ್ನು ಬಳಸಿ ಸಂಬೋಧಿಸಲಾಗಿದೆ. ಇರಲಿ. ಬಿಜೆಪಿ ಪೊಲೀಸರ ನೀತಿಯೇ ಹಾಗಿರಬಹುದು.
ಹೆಚ್ಚು ಕಮ್ಮಿ ಐವತ್ತಕ್ಕೂ ಹೆಚ್ಚು ಜನರಿಗೆ ಹೀಗೆ ಮಧ್ಯರಾತ್ರಿಯಲ್ಲಿ ನೋಟೀಸು ನೀಡಲಾಗಿದೆ. ಹೋರಾಟಕ್ಕೆ ಸಂಬಂಧ ಪಡದ ಕೆಲವು ಅಮಾಯಕರಿಗೂ ನೋಟೀಸು ಬಂದಿದೆ. ಕ್ರಿಮಿನಲ್ ಗಳ ರೀತಿ ಮನೆಗಳನ್ನು ಪೊಲೀಸರು ಸುತ್ತುವರಿದಿದ್ದಾರೆ. ನಾವೀಗ (ಹೋರಾಟ ಸಮಿತಿ) ದೃಢ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಕಾನೂನು ವಿಭಾಗದ ಜವಾಬ್ದಾರಿ ಹೊತ್ತಿರುವ ಜನಪರ ವಕೀಲರ ತಂಡದೊಂದಿಗೆ ಸಭೆ ನಡೆಸಿ ಕೆಲವು ತೀರ್ಮಾನಕ್ಕೆ ಬಂದಿದ್ದೇವೆ.
ಯಾವುದೇ ಕಾರಣಕ್ಕೂ ಮುಚ್ಚಳಿಕೆ ಬರೆದುಕೊಡುವುದಿಲ್ಲ. ವಾರಂಟ್ ಹೊರಡಿಸಿ ಬಂಧಿಸುವುದಾದರೆ ತುಳುನಾಡಿನ ಜನ ಸಾಮಾನ್ಯರ ಪರವಾಗಿ ಜೈಲಿಗೆ ಹೋಗಲು ಸಿದ್ದರಾಗುವುದು. ಅಕ್ಟೋಬರ್ 18 ರ ಅಕ್ರಮ ಟೋಲ್ ಸ್ಥಗಿತ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನಾವು ಜೈಲು ಸೇರಿದರೂ ಅಂದು ಹೋರಾಟ ನಡೆಯುತ್ತದೆ. ನೂರಾರು ಸಂಘಟನೆ, ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿರುವ ಈ ಮಹತ್ವದ ಹೋರಾಟಕ್ಕೆ ನಾಯಕರುಗಳ ಕೊರತೆ ಇಲ್ಲ. ಸಂಚಾಲಕ ಮುನೀರ್ ಕಾಟಿಪಳ್ಳ ಜೈಲು ಸೇರಿದರೆ ನೂರಾರು ಜನ ಆ ಸ್ಥಾನವನ್ನು ತುಂಬಲು ಸಿದ್ದರಿದ್ದಾರೆ. ನಮ್ಮ ಮುತ್ತಿಗೆ ಪ್ರತಿಭಟನೆ ಅಂದು ನಿಗದಿಯಂತೆ ಶಾಂತಿಯುತವಾಗಿ ನಡೆಯಲಿದೆ. ಯಾರೂ ಪ್ರಚೋದನೆಗೆ ಒಳಗಾಗಬಾರದು.
ತುಳುನಾಡಿನ ಸಮಸ್ತ ಜನತೆ ಬಿಜೆಪಿ ಸರಕಾರದ ನಮ್ಮ ಮೇಲೆ ದಾಳಿ ನಡೆಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಹೋರಾಟದ ಜೊತೆ ನಿಲ್ಲಬೇಕು. ಹೋರಾಟದ ಧ್ವನಿಯನ್ನು ಮತ್ತಷ್ಟು ಎತ್ತರಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಗುಲಾಮಗಿರಿಯ ಸಂಕೇತವಾಗಿರುವ ಟೋಲ್ ಗೇಟ್ ಸುಲಿಗೆ ಮುಂದುವರಿಯಬಾರದು. ಮುಂದುವರಿಯಲು ಅವಕಾಶಕೊಡುವುದಿಲ್ಲ ಎಂದು ಒಕ್ಕೊರಲಿನಿಂದ ಗಟ್ಟಿಯಾಗಿ ಬಿಜೆಪಿ ಶಾಸಕ, ಸಂಸದ ಶಾಸಕರುಗಳಿಗೆ ಹೇಳುವಂತಾಗಬೇಕು.
ಯಾವುದೇ ಕಾರಣಕ್ಕೂ ಹೋರಾಟ ಸೋಲುವುದಿಲ್ಲ. ಅಕ್ಟೋಬರ್ 18 ರಂದು ಟೋಲ್ ಸಂಗ್ರಹ ಅಂತ್ಯಗೊಳ್ಳಲೇಬೇಕು. ನಮ್ಮ ಮೇಲೆ ಪೊಲೀಸ್ ದೌರ್ಜನ್ಯ ಹರಿಯಬಿಟ್ಟು ಬಿಜೆಪಿ ಶಾಸಕರುಗಳು ಬೀಗುವುದು ಬೇಡ. ಜನ ಆಕ್ರೋಶಗೊಂಡಿದ್ದಾರೆ. ಅವರು ನಿಮಗೆ ಸರಿಯಾಗಿ ಉತ್ತರಿಸುತ್ತಾರೆ.
ಮುನೀರ್ ಕಾಟಿಪಳ್ಳ
ಸಂಚಾಲಕರು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ.