ಕೇರಳ : ಕೇರಳದ ನರಬಲಿ ಪ್ರಕರಣದಲ್ಲಿ ದಿನೇ ದಿನೇ ಬದಲಾವಣೆ ಕಾಣುತ್ತಿದ್ದು ಮಹಿಳೆಯರನ್ನು ಕೊಂದು ಮಾಂಸವನ್ನು ಬೇಯಿಸಿ ತಿನ್ನುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದ್ದು, ಈ ಬಗ್ಗೆ ಮಾಹಿತಿ ಮಾತ್ರ ಇದೆ ಸಾಕ್ಷಿಗಳಿಲ್ಲ ಎಂದು ಕೊಚ್ಚಿ ಪೊಲೀಸ್ ಕಮೀಷನರ್ ಸಿ.ಎಚ್ ನಾಗರಾಜು ಹೇಳಿದ್ದಾರೆ.
ಕೇರಳದಲ್ಲಿ ದಂಪತಿಗಳು ತಮ್ಮ ಕುಟುಂಬದ ಸಂಪತ್ತು ಅಭಿವೃದ್ಧಿ ಮಾಡಿಕೊಳ್ಳಲು ʼನರಬಲಿʼ ನೀಡುವ ಧಾರ್ಮಿಕ ಕ್ರಿಯೆ ನಡೆಸಿರುವ ಘಟನೆ ರಾಜ್ಯದ ಪತ್ತನಂತಿಟ್ಟದ ಎಳಂತೂರು ಗ್ರಾಮದಲ್ಲಿ ನಡೆದಿತ್ತು. ಅಮಾಯಕ ಮಹಿಳೆಯರನ್ನು ವಂಚಿಸಿ ಬಲಿ ನೀಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಮಹಿಳೆಯರನ್ನು ವಂಚಿಸಿ ದಂಪತಿಗಳಿಗೆ ನರಬಲಿಗೆಂದು ಅರ್ಪಿಸುತ್ತಿದ್ದ ಶಫಿ ಒಬ್ಬ ಲೈಂಗಿಕ ವಿಕೃತ. ಹೀಗೆ ಸುದ್ದಿಯಾಗಿದ್ದ ಈ ಭೀಕರ ನರಬಲಿ ಪ್ರಕರಣ ಬೇರೆ ರೀತಿಯೇ ತಿರುಚಿಕೊಂಡು ಎಲ್ಲೆಡೆ ವರದಿಯಾಗುತ್ತಿವೆ.
ವಾಮಾಚಾರಕ್ಕೆ ಬಲಿ ಕೊಟ್ಟ ಮಹಿಳೆಯರನ್ನು ಆರೋಪಿಗಳು ಕೊಂದು, ಮಾಂಸವನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದು, ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ್ದಾರೆ. ಅದನ್ನು ಆರೋಪಿಗಳು ಸೇವಿಸುತ್ತಿದ್ದರು ಎಂದು ಮಾಧ್ಯಮಗಳಲ್ಲಿ ಹೇಳಲಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ.
ಈ ಮೊದಲು ಮಹಿಳೆಯರನ್ನು ಕೊಂದು ಹಿತ್ತಲಲ್ಲಿ ಹೂಳಿದ್ದರು ಎಂದು ವರದಿಯಾಗಿತ್ತು. ಇದೀಗ ಕೊಂದು ಮಾಂಸವನ್ನು ಪ್ರಿಡ್ಜನಲ್ಲಿ ಇಟ್ಟು ಅದನ್ನು ತಿಂದಿದ್ದಾರೆ ಎಂದು ವರದಿಯಾಗುತ್ತಿದೆ.
ಮಾಂಸಭಕ್ಷಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೊಚ್ಚಿ ಪೊಲೀಸ್ ಕಮೀಷನರ್ ಸಿ.ಎಚ್ ನಾಗರಾಜು, ʼಶಫಿ ವಂಚಿಸಿ ಕೊಲೆ ಮಾಡಿದ್ದ ರೋಸ್ಲಿಯ ಮಾಂಸವನ್ನು ಸೇವಿಸಿದ್ದಾನೆ ಎಂದು ಮಾಹಿತಿ ಇದೆ. ಆದರೆ ಈ ಕುರಿತು ನಮ್ಮ ಬಳಿ ಯಾವುದೇ ರೀತಿಯ ಸಾಕ್ಷಿಗಳಿಲ್ಲʼ ಎಂದು ಹೇಳಿದ್ದಾರೆ.