2029ರ ಲೋಕಸಭಾ ಚುನಾವಣೆಯೊಳಗೆ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ಮರುದಿನವೇ ಎನ್‌ಡಿಎ ಮೈತ್ರಿಕೂಟದಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯುನೈಟೆಡ್) ಬಿಹಾರದಲ್ಲಿ ಯುಸಿಸಿ ಜಾರಿಗೊಳಿಸಲು ಸಾರಾಸಗಟಾಗಿ ನಿರಾಕರಿಸಿದೆ. ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಎಡಪಕ್ಷಗಳು ಇದನ್ನು ತೀವ್ರವಾಗಿ ಖಂಡಿಸಿದ್ದರೆ, ತೆಲುಗು ದೇಶಂ ಪಕ್ಷ (ಟಿಡಿಪಿ) ಅಮಿತ್ ಶಾ ಅವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದೆ.
ಎನ್‌ಡಿಎ ಪ್ರಮುಖ ಮಿತ್ರಪಕ್ಷ ಜೆಡಿಯು ನಾಯಕ ಶ್ಯಾಮ್ ರಜಕ್ ಈ ಕುರಿತು ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಈ ಮಸೂದೆಗೆ ತಮ್ಮ ಪಕ್ಷ ಬೆಂಬಲ ನೀಡಬಹುದಾದರೂ, ಬಿಹಾರದಲ್ಲಿ ಮಾತ್ರ ಜಾರಿಗೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೇಶಾದ್ಯಂತ ವ್ಯಾಪಕ ಸಮಾಲೋಚನೆ ಮತ್ತು ಒಮ್ಮತ ಮೂಡಿದ ನಂತರವೇ ಯುಸಿಸಿ ಜಾರಿಗೆ ತರಬೇಕೆಂಬುದು ನಿತೀಶ್ ಕುಮಾರ್ ಅವರ ನಿರಂತರ ನಿಲುವಾಗಿದೆ. ಈ ವಿಷಯದ ಕುರಿತು ಗೃಹ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸುವುದಾಗಿ ಜೆಡಿಯು ಹಿರಿಯ ನಾಯಕ ಸಂಜಯ್ ಝಾ ತಿಳಿಸಿದ್ದಾರೆ. ಬಿಹಾರದ ಮತ್ತೊಂದು ಮಿತ್ರಪಕ್ಷವಾದ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಬಹಿರಂಗ ಬೆಂಬಲ ನೀಡಲು ನಿರಾಕರಿಸಿದ್ದು, ಕರಡು ಮಸೂದೆ ಬಂದ ನಂತರ ಅದರ ಪರಿಣಾಮ ಮತ್ತು ಕಾನೂನು ಅಂಶಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಅಮಿತ್ ಶಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುಸಿಸಿಯನ್ನು ಸಂಸತ್ತಿನಲ್ಲಿ ಚರ್ಚಿಸಿ ಕಾಯ್ದೆ ರೂಪಿಸುವ ಬದಲು, ರಾಜ್ಯಗಳ ಮೂಲಕ ಹಿಂಬಾಗಿಲಿನಿಂದ ಜಾರಿಗೆ ತರಲು ಬಿಜೆಪಿ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ಬಹುಮತವಿದ್ದರೂ ಅಲ್ಲಿ ಚರ್ಚೆಗೆ ತರದೆ ಇರುವುದೇಕೆ ಎಂದು ಪ್ರಶ್ನಿಸಿದ ಅವರು, ಸ್ವತಃ ಎನ್‌ಡಿಎ ಮಿತ್ರಪಕ್ಷಗಳೇ ಇದನ್ನು ಒಪ್ಪದಿದ್ದಾಗ ಇಡೀ ದೇಶದಲ್ಲಿ ಹೇಗೆ ಜಾರಿಗೊಳಿಸಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. ಕೇವಲ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಜಾರಿಯಾದರೆ ಅದನ್ನು ‘ಸಾರ್ವತ್ರಿಕ’ ಎನ್ನಲಾಗದು ಎಂದು ಅವರು ಪ್ರತಿಪಾದಿಸಿದ್ದಾರೆ.
ಹಿಂದೆ ಅಲ್ಪಸಂಖ್ಯಾತರ ಹಿತಾಸಕ್ತಿಗೆ ಧಕ್ಕೆಯಾಗುವ ಕಾಯ್ದೆಗಳನ್ನು ಒಪ್ಪುವುದಿಲ್ಲ ಎಂದಿದ್ದ ತೆಲುಗು ದೇಶಂ ಪಕ್ಷ (ಟಿಡಿಪಿ) ಇದೀಗ ತನ್ನ ನಿಲುವನ್ನು ಬದಲಾಯಿಸಿದೆ. ಟಿಡಿಪಿ ರಾಜ್ಯಾಧ್ಯಕ್ಷ ಪಲ್ಲಾ ಶ್ರೀನಿವಾಸರಾವ್ ಮಾತನಾಡಿ, ತಾವು ಅಮಿತ್ ಶಾ ಅವರ ನಿಲುವಿಗೆ ಬದ್ಧರಾಗಿದ್ದು, ಯುಸಿಸಿ ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುತ್ತದೆ ಎಂದಿದ್ದಾರೆ. ಟಿಡಿಪಿಯೊಂದಿಗೆ ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಸೆಕ್ಯುಲರ್) ಕೂಡ ಯುಸಿಸಿಗೆ ಬೆಂಬಲ ಸೂಚಿಸಿವೆ.
ಮತ್ತೊಂದೆಡೆ, ಸಿಪಿಐ(ಎಂ) ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದು, ಇದು ಮಹಿಳೆಯರ ಹಕ್ಕುಗಳಿಗಾಗಿ ಮಾಡುತ್ತಿರುವ ಕ್ರಮವಲ್ಲ, ಬದಲಿಗೆ ಲೋಕಸಭಾ ಚುನಾವಣೆಗೆ ಮುನ್ನ ಧ್ರುವೀಕರಣ ನಡೆಸಿ ಹಿಂದೂತ್ವ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ನಡೆಸುತ್ತಿರುವ ರಾಜಕೀಯ ತಂತ್ರ ಎಂದು ಟೀಕಿಸಿದೆ. ಏಕರೂಪತೆ ಎಂದಿಗೂ ಸಮಾನತೆಯಾಗಲಾರದು ಎಂದು ಹೇಳಿರುವ ಸಿಪಿಎಂ, ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ವಿಭಜಕ ರಾಜಕೀಯವನ್ನು ತರಲಾಗಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗರ್ಹಿ ಸಹ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಯುವಜನತೆಯ ಪ್ರತಿಭಟನೆ ಮತ್ತು ನಿರುದ್ಯೋಗ ವೈಫಲ್ಯಗಳನ್ನು ಮುಚ್ಚಿಹಾಕಲು ಸರ್ಕಾರ ಇಂತಹ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ ಎಂದಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಅಲ್ಲಿ ಆದಷ್ಟು ಬೇಗ ಯುಸಿಸಿ ಜಾರಿಗೊಳಿಸುವುದಾಗಿ ಘೋಷಿಸಿದೆ. ಪ್ರಸ್ತುತ ಲೋಕಸಭೆಯಲ್ಲಿ ಟಿಡಿಪಿ 16, ಶಿವಸೇನೆ 13, ಜೆಡಿಯು 12, ಎಲ್‌ಜೆಪಿ 5 ಮತ್ತು ಹೆಚ್‌ಎಎಂ 1 ಸಂಸದರ ಬಲವನ್ನು ಹೊಂದಿವೆ.
