Home ರಾಜಕೀಯ ಗೋಬ್ಯಾಕ್‌ ಶೋಭಾ ಅಭಿಯಾನ: ಸಂಸದೆ ಪರವಾಗಿ ಕಣಕ್ಕಿಳಿದ ಹಿರಿಯ ನಾಯಕ ಯಡಿಯೂರಪ್ಪ

ಗೋಬ್ಯಾಕ್‌ ಶೋಭಾ ಅಭಿಯಾನ: ಸಂಸದೆ ಪರವಾಗಿ ಕಣಕ್ಕಿಳಿದ ಹಿರಿಯ ನಾಯಕ ಯಡಿಯೂರಪ್ಪ

0

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಹಾಗೆಯೇ ಸಂತೋಷಕೂಟ ಮತ್ತು ಯಡಿಯೂರಪ್ಪ ಬಣಗಳ ನಡುವಿನ ಪೈಪೋಟಿ ರಾಜಕಾರಣ ಆರಂಭಗೊಂಡಿದ್ದು ಅದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಿಫಲಿಸತೊಡಗಿದೆ. ಬಿಜೆಪಿ ಭದ್ರಕೋಟೆಯಾಗಿರುವ ಹಾಗೂ ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳನ್ನು ಹೊಂದಿರುವ ಈ ಕ್ಷೇತ್ರವನ್ನು ತಮ್ಮ ಕೈವಶ ಮಾಡಿಕೊಳ್ಳಲು ʼಸಂತೋಷ ಕೂಟʼ ಈಗಾಗಲೇ ಪ್ರಯತ್ನವನ್ನು ಆರಂಭಿಸಿತ್ತು.

ಅದರ ಭಾಗವಾಗಿ ಉಡುಪಿ ಭಾಗದಲ್ಲಿ ʼಶೋಭಾ ಗೋಬ್ಯಾಕ್‌ʼ ‘ಶೋಭಾ ಹಠಾವೋ ಬಿಜೆಪಿ ಬಚಾವೋ’ ಇತ್ಯಾದಿ ಘೋಷಣೆಯೊಂದಿಗೆ ಹಿಂದುತ್ವ ಕಾರ್ಯಕರ್ತರು ತಮ್ಮ ಕಾರ್ಯಾಚರಣೆಯನ್ನೂ ಆರಂಭಿಸಿತ್ತು. ಆದರೆ ಈಗ ಈ ಬೆಳವಣಿಗೆಗೆ ಹೊಸ ತಿರುವು ದೊರೆತಿದ್ದು, ಯಡಿಯೂರಪ್ಪ ಪ್ರವೇಶದೊಂದಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ರಾಜಕಾರಣಕ್ಕೆ ಮತ್ತಷ್ಟು ರಂಗೇರಿದೆ.

ಈ ಕುರಿತು ಚಿಕ್ಕಮಗಳೂರಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಜಿಲ್ಲಾಧ್ಯಕ್ಷರೊಂದಿಗೆ ಸಭೆ ನಡೆಸಿದ್ದು, “ಶೋಭಾ ವಿರುದ್ಧ ಷಡ್ಯಂತ್ರಗಳು ನಡೆಯುತ್ತಿದ್ದು, ಈ ಕುರಿತು ತಲೆ ಕೆಡಿಸಿಕೊಳ್ಳದೆ ಕಾರ್ಯಕರ್ತರು ಅವರ ಗೆಲುವಿಗೆ ಶ್ರಮಿಸಬೇಕು” ಎಂದು ಯಡಿಯೂರಪ್ಪ ಸಭೆಯಲ್ಲಿದ್ದವರನ್ನು ಹುರಿದುಂಬಿಸಿದ್ದಾರೆ. ಹಾಗೆಯೇ ಇನ್ನೊಂದೆರಡು ಮೂರು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಹೊರಬರಲಿದ್ದು ಅದರಲ್ಲಿ ಶೋಭಾ ಹೆಸರು ಇರಲಿದೆ. ಈ ಕುರಿತು ಕಾರ್ಯಕರ್ತರಲ್ಲಿ ಗೊಂದಲ ಬೇಡ ಎಂದಿದ್ದಾರೆ.

ಶೋಭಾ ಕರಂದ್ಲಾಜೆಯವರು ಕೇಂದ್ರ ಸಚಿವೆಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅವರಿಗೆ ಖಾತರಿಯಾಗಿ ಟಿಕೆಟ್‌ ದೊರೆಯಲಿದೆ ಎಂದು ಯಡಿಯೂರಪ್ಪ ವಿಶ್ವಾಸ ತೋರಿಸಿದ್ದಾರೆ.

ಇತ್ತ ಕಾಂಗ್ರೆಸ್ಸಿನಿಂದ ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿಯಾಗಿ ಜಯಪ್ರಕಾಶ್‌ ಹೆಗಡೆಯವರ ಹೆಸರು ಕೇಳಿಬರುತ್ತಿದ್ದು, ಇದು ಬಿಜೆಪಿ ಕಾರ್ಯಕರ್ತರನ್ನು ಒಂದಷ್ಟು ಆತಂಕ್ಕಕೆ ಈಡು ಮಾಡಿದೆ.

ಇತ್ತ ಉಡುಪಿಯಲ್ಲಿ ಸಂಸದೆಯ ನಿಷ್ಕ್ರಿಯತೆಯ ಕುರಿತು ಜನರಲ್ಲಿ ಆಕ್ರೋಶವಿದೆ. ಅತ್ತ ಚಿಕ್ಕಮಗಳೂರು ಚಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ನೆಲೆ ಕಳೆದುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಪರಭಾವಗೊಂಡಿದೆ. ಹೀಗಾಗಿ ಕ್ಷೇತ್ರದ ಕಾರ್ಯಕರ್ತರು ಒಂದಷ್ಟು ಗೊಂದಲದಲ್ಲಿದ್ದಾರೆ. ಈ ನಡುವೆ ಮೋದಿ ಅಲೆ ಕುಸಿಯುತ್ತಿದೆ ಎನ್ನಲಾಗಿದ್ದು, ಇದಕ್ಕೆ ತಕ್ಕಂತೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಈ ಬಾರಿ ಬಿಜೆಪಿ ಸಾಕಷ್ಟು ಸ್ಥಾನ ಪಡೆಯಲಿದೆ ಆದರೆ ಅದಕ್ಕೆ ಮೋದಿ ಮ್ಯಾಜಿಕ್ ಕಾರಣವಾಗಿರುವುದಿಲ್ಲ ಎಂದಿದ್ದಾರೆ.

ಹೀಗಾಗಿ ಈಗಾಗಲೇ ಗೊಂದಲದ ಗೂಡಾಗಿರುವ ಉಡುಪಿ – ಚಿಕ್ಕಮಗಳೂರು ಕ್ಷೇತ್ರವು ಯಡಿಯೂರಪ್ಪನವರ ಪ್ರವೇಶದೊಂದಿಗೆ ಇನ್ನೊಮ್ಮೆ ಕುತೂಹಲ ಕೆರಳಿಸಿದೆ.

You cannot copy content of this page

Exit mobile version