Home ಅಂಕಣ ಕಳ್ಳುಬಳ್ಳಿ – 5: ಸೌಂದರ್ಯ ಪ್ರಜ್ಞೆಯ ಕೊಲೆಗಳು

ಕಳ್ಳುಬಳ್ಳಿ – 5: ಸೌಂದರ್ಯ ಪ್ರಜ್ಞೆಯ ಕೊಲೆಗಳು

0

ಇತ್ತೀಚೆಗೆ ನವವಿವಾಹಿತನೋರ್ವ ಹೆಂಡತಿಗಾಗಿ ಸುಂದರವಾಗಿ ನಗುವಂತೆ ಕಾಣಲು ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಮರಣಶಯ್ಯೆಗೆ ಹೊರಟುಹೋದ ಘಟನೆ ನಮ್ಮ ಕರ್ನಾಟಕದಲ್ಲೇ ನಡೆದಿದೆ. ಮೆಚ್ಚಿದ ಪತ್ನಿ ಗಾಗಿ ಸರ್ಜರಿ ಮಾಡಿಸಿಕೊಳ್ಳದೆ ಹಾಗೆ ಸುಮ್ಮನಿದ್ದರೂ ಸಹ ಒಂದೊಳ್ಳೆ ಸಂಸಾರದ ಸೌಂದರ್ಯ ಕೆಡುತ್ತಿರಲಿಲ್ಲ.

ನಮ್ಮ ಭಾರತೀಯ ಸಮಾಜದಲ್ಲಿ ಸೌಂದರ್ಯಕ್ಕೆ ತುಸು ಹೆಚ್ಚು ಮಾನ್ಯತೆ ಕೊಡುವುದಿದೆ. ಹಲ್ಲು ಉಬ್ಬಿದ್ದರೆ ಮದುವೆಗೆ ಮುಂಚೆ ಹೋಗಿ ಹಲ್ಲಿಗರ ಕ್ಲಾಂಪ್ ಹಾಕಿಸಿಕೊಳ್ಳುವುದಿದೆ. ಇಷ್ಟು ಸಮಯ ಇದ್ದದ್ದು ಸುಂದರವಾಗಿರಲಿಲ್ಲ ಅನ್ಬುವ ಮಿಥ್ಯೆ ಇವರುಗಳ ಮನಸ್ಸಿನಲ್ಲಿ ನಾಟಿಕೊಂಡಿರುವುದು. ಅದಕ್ಕೆ ಕಾರಣ ನಮ್ಮ ಸಮಾಜ, ನೆರೆಹೊರೆ, ಕುಟುಂಬದ ಸದಸ್ಯರು ಎಲ್ಲರೂ.

ದೈಹಿಕ ನ್ಯೂನ್ಯತೆಗಳನ್ನೇ ಎತ್ತಿ ಎತ್ತಿ ತೋರುವ ಜನಗಳು ನಮ್ಮವರು. ಬಣ್ಣದಲ್ಲಿ ಸ್ವಲ್ಪ ಕಪ್ಪಿದ್ದರೆ ಅದನ್ನೇ ಹೆಚ್ಚುಗಾರಿಕೆ ಮಾಡುವವರಿರುತ್ತಾರೆ. ಮದುವೆಯ ಸಂಧರ್ಭದಲ್ಲಿ ಇಂತಹ ಸಣ್ಣ ಪುಟ್ಟ ವಿಷಯಗಳು ಎದೆಯ ಮಂಟ ಬೆಳೆದು ಕುತ್ತಿಗೆಗೆ ಬಂದಿರುತ್ತವೆ. ವಧು, ವರ ಇವರುಗಳ ಬಗ್ಗೆ ಪರಿಚಯ ಮಾಡಿಕೊಡುವ ಸಂದರ್ಭದಲ್ಲಿ ಸಹ ಸ್ವಲ್ಪ ಕಪ್ಪು, ಹಲ್ಲುಬ್ಬು, ಕಾಲು ಸ್ವಲ್ಪ ಹದು, ಮಾತು ತೊದ್ಲು, ರೊಡ್ಡ ಅಥವಾ ರೊಡ್ಡಿ ಹೀಗೆ ವಧು, ವರರ ಕೆಲವು ದೈಹಿಕ ಗುಣಲಕ್ಷಣಗಳನ್ನು ನ್ಯೂನ್ಯತೆ ಎನ್ನುವಷ್ಟರ ಮಟ್ಟಿಗೆ ಜಗಜ್ಜಾಹೀರು ಮಾಡಿಬಿಡುತ್ತಾರೆ. ಹೀಗೆ ಹೇಳುವ ಮೂಲಕ ಆತ್ಮ ಸೌಂದರ್ಯಕ್ಕೆ ಎಡೆಯಿಲ್ಲದಂತೆ ಮಾಡುವವರೂ ಇದ್ದಾರೆ.

ವಧು-ವರರ ಮುಖಾಮುಖಿ ಆಗುವ ಮೊದಲೇ ಈ ತರದ್ದೊಂದು ಪರಿಚಯ ತಿಳಿಸಿ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಗೂಬೆ ಕೂರಿಸುವ ಕ್ರಮ ಸಲೀಸಾಗಿ ನಡೆದಿರುತ್ತದೆ.

ಈ ಕ್ರಮ ಇಂದು ನಿನ್ನೆಯದಲ್ಲ. ಶೂರ್ಪನಖಿಯನ್ನು ಆ ಹೆಸರಿನಿಂದ ಕರೆಯುವುದು ಇನ್ನೇತಕ್ಕಾಗಿ ಹೇಳಿ? ಮಂಥರೆಯನ್ನು ಕುರೂಪಿ ಎಂದೇ ಬಿಂಬಿಸಿಲ್ಲವೇ? ಕುಂಭಕರ್ಣ ನಿದ್ದೆ ಮಾಡುವುದು ವರ್ಷಾನುಗಟ್ಟಲೆ, ಆದರೂ ಅವನು ತಿನ್ನುವುದನ್ನು ವರ್ಣಿಸುವುದು ಗಮನಿಸಿದವರಿಗೆ ಅವನೋರ್ವ ಬಕಾಸುರನ ಅಣ್ಣ ಎನಿಸಿವುದು. ಭೀಮ, ಬಕಾಸುರರೂ ತಿನ್ನುವ ಅಭ್ಯಾಸದಿಂದಲೇ ಖ್ಯಾತರು. ಭಾರತೀಯ ಪುರಾಣ ಪರಂಪರೆಯಲ್ಲಿ ಸಹ ಇಂತಹ ಆತ್ಮಸೌಂದರ್ಯದ ಅವಗಣನೆ ನಡೆದೇ ಇದೆ.

ಮನುಷ್ಯನ ಒಳಗಿನ ಗುಣಗಳ ಬಗ್ಗೆ ಮಾತನಾಡದೆ ಹೊರಗಿನ ದೇಹದ ಗುಣಾವಗುಣಗಳ ಭಜನೆ ಮಾಡುವುದು ಅದೆಷ್ಟು ಸರಿ? ಇಂತಹ ಮನೋಧೋರಣೆಗಳೇ ಯುವಜನರ ಮನಸ್ಸಿನಲ್ಲಿ ತಮ್ಮಗಳ ದೇಹದ ಬಗ್ಗೆ ಕೀಳರಿಮೆ ಮಾಡಿಸಿಕೊಳ್ಳಲು ಕಾರಣಗಳಾಗಿವೆ.

ಕಡ್ಡಿ ಗುಡ್ಡ ಮಾಡಿದಂತೆ ಇವೆಲ್ಲಾ. ಕೆಲವರ ಚರ್ಮದ ಮೇಲೆ ತೊನ್ನಿದ್ದರೆ ಅದನ್ನು ನೋಡುತ್ತಿದ್ದ ರೀತಿಯೇ ಬೇರೆ.

ಸಾಮೂಹಿಕ ಸನ್ನಿಯಂತೆ ದೈಹಿಕ ನ್ಯೂನ್ಯತೆಗಳನ್ನು ಬೊಟ್ಟು ಮಾಡಿ ತೋರಿಸುವ ಜನರಿಂದಲೇ ಸೌಂದರ್ಯ ಹೆಚ್ಚಿಸುವ ಸರ್ಜರಿಗಳೂ ಅದನ್ನು ನಡೆಸುವ ವೈದ್ಯಕೀಯ ಸಮಾಜಕ್ಕೂ ಅಧಿಕ ಡಿಮ್ಯಾಂಡ್ ಸೃಷ್ಟಿ ಆಗಿದೆ.

ಸಿನೆಮಾ ಪ್ರಪಂಚಕ್ಕೆ ಈ ಸೌಂದರ್ಯ ಹೆಚ್ಚಿಸುವ ಸರ್ಜರಿಗಳು ಮಾಮೂಲಿ. ಬಾರ್ಬಿ ತರಹ ಕಾಣಲು, ಶುಗರ್ ಬೇಬಿ ಎನಿಸಿಕೊಳ್ಳುವ ಉದ್ದೇಶದಿಂದ ಕೆಲವು ಜನರು ಇಂಥಾ ಸರ್ಜರಿಗಳಿಗೆ ಒಳಗಾಗಿ ದೇಹ ಕೆಡಿಸಿಕೊಂಡದ್ದೂ ಇದೆ.

ಇದಕ್ಕೆಲ್ಲ ಕಾರಣ ಸೌಂದರ್ಯ ಪ್ರಜ್ಞೆಯು ಕೇವಲ ದೇಹದ ಸುತ್ತಾ ಸುತ್ತುವ ಖಯಾಲಿ ಆಗಿರುವುದು. ಆತ್ಮ ಸೌಂದರ್ಯ ಅಥವಾ ಮನುಷ್ಯನ ಗುಣಗಳನ್ನ ಅವಗಣನೆ ಮಾಡುವುದು.

ವಿಶೇಷ ಚೇತರು ಸ್ವಾವಲಂಬಿಗಳಾಗಿ ನಡೆದು ಸಾಧನೆ ಮಾಡುತ್ತಿರುವಾಗ ಅವರ ಛಲ ನಾವೂ ಕಲಿತು ಸಾಧನೆಯ ಹಾದಿಯನ್ನು ಕ್ರಮಿಸಬೇಕೆಂಬುದು ಸಹಜ ತಿಳುವಳಿಕೆ. ವಿಶೇಷ ಚೇತನರಿಂದ ನಾವು ಕಲಿಯಬೇಕಾದ್ದು ಬೇಕಾದಷ್ಟು ಇದೆ.

ದೇವರು ಕೊಟ್ಟ ಮಾನವ ಜನ್ಮ ದೊಡ್ಡದು, ಅದನ್ನು ಸೌಂದರ್ಯ ಸರ್ಜರಿ ಅಂತೆಲ್ಲಾ ಹಾಳಾಡಿಕೊಳ್ಳಬಾರದು ಹುಚ್ಚಪ್ಪಗಳಿರಾ..

ನಳಿನಾ ಚಿಕ್ಕಮಗಳೂರು

You cannot copy content of this page

Exit mobile version