ಮಂಗಳವಾರ ಸೆಲೂನ್ ಶಾಪ್ ಗಳಿಗೆ ರಜಾದಿನ. ಆರು ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆವರೆಗೂ ದುಡಿದ ಕೈಗಳಿಗೆ ಆ ಒಂದು ದಿನ ವಿಶ್ರಾಂತಿ. ಆದರೆ ಆದಿ ಉಡುಪಿಯಲ್ಲೊಬ್ಬರಿದ್ದಾರೆ. ಸತೀಶ್ ಸುವರ್ಣ. ಮಂಗಳವಾರ ಇರುವ ಒಂದು ದಿನವೂ ಮನೆಯಲ್ಲಿರದೆ, ಯಾರಿಗೂ ಬೇಡವಾದ, ಸಮಾಜ ನಿರ್ಲಕ್ಷಿಸುವ ಬುದ್ದಿಮಾಂದ್ಯರ ಆಶ್ರಮ, ವೃದ್ಧಾಶ್ರಮಗಳಿಗೆ ಹೋಗುತ್ತಾರೆ. ಉಚಿತವಾಗಿಯೇ ಕ್ಷೌರ ಮಾಡಿ ಬರುತ್ತಾರೆ.
ಸೇವೆಯ ರೂಪಗಳು ಅದೆಷ್ಟಿವೆ ನೋಡಿ. ಸಾಮಾನ್ಯವಾಗಿ ಹಣಕೊಟ್ಟರೂ ಕೆಲವರು ಇಂಥವರ ಸೇವೆಗೆ ಹಿಂದೆ ಸರಿಯುತ್ತಾರೆ. ಹೀಗಿರುವಾಗ ಸತೀಶ್ ಸುವರ್ಣಾರ ನಿಸ್ವಾರ್ಥ ಕಾರ್ಯ ಶ್ಲಾಘನೀಯ. ಅಭಿನಂದನಾರ್ಹ.
ಆದಿ ಉಡುಪಿಯ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ಇರುವ ಗೌರವ್ ಹೇರ್ ಡ್ರೆಸ್ಸಿಂಗ್ ಸತೀಶ್ ಸುವರ್ಣರ ಸೆಲೂನು. ಅವರು ಉಚಿತವಾಗಿ ಹೇರ್ ಕಟ್ಟಿಂಗ್ ಮಾಡುವ ಆಶ್ರಮಗಳು
- ಸ್ಪಂದನ ಬುದ್ಧಿ ಮಾಂದ್ಯರ ಆಶ್ರಮ ಸಾಲ್ಮರ ಉಪ್ಪೂರು
- ವಿಜೇತ ಬುದ್ದಿ ಮಾಂದ್ಯರ ಆಶ್ರಮ ಕಾರ್ಕಳ
- ಹೊಸ ಬೆಳಕು ವೃಧ್ಧಾಶ್ರಮ ರಂಗನ ಪಲ್ಕೆ
- ಕಾರುಣ್ಯ ವೃಧ್ಧಾಶ್ರಮ ಕಟಪಾಡಿ
ಸಮಾಜ ಇಂಥವರ ಕಾರ್ಯವನ್ನು ಗಮನಿಸಿ, ಗೌರವಿಸಲಿ.
ಈ ಮಾಹಿತಿ ನೀಡಿ, ಬರೆವಣಿಗೆಗೆ ಪ್ರೋತ್ಸಾಹ ನೀಡಿ, ನನಗೆ ಹೋಗಲಿಕ್ಕೆ ಆಗದಿದ್ದಾಗ ಆಶ್ರಮಕ್ಕೆ ಹೋಗಿ ಫೋಟೋ ತೆಗೆದು ಕಳಿಸಿಕೊಟ್ಟವರು ಅಂಬಲಪಾಡಿಯ ರಾಘವೇಂದ್ರ ಸರ್. ಧನ್ಯವಾದಗಳು.
ಪ್ರಶಸ್ತಿಗಳಿಗೆ, ಪ್ರಶಂಸನೆಗೆ ಅರ್ಹ ವ್ಯಕ್ತಿಗಳನ್ನು ಗುರುತಿಸುವ ಪ್ರಯತ್ನ ಉಡುಪಿಯ ಕಂಡೀರಾ ತಂಡ ನಿರಂತರವಾಗಿ ಮಾಡಲು ಬಯಸುತ್ತಿದೆ. ನಿಸ್ವಾರ್ಥ ಸೇವೆ ಮಾಡುವ ಎಲೆ ಮರೆ ಕಾಯಿಗಳನ್ನು ನೀವು ನಮಗೆ ತೋರಿಸಿ. ಅಜ್ಞಾತವಾಗಿರುವುದೂ ಒಂದು ತಪಸ್ಸೇ. ಆದರೆ ಲೋಕಕ್ಕೆ ಗೊತ್ತಾದಾಗ ಅದು ಎಷ್ಟೋ ಜನರನ್ನು ಪ್ರಭಾವಿಸುತ್ತದೆ, ಎಷ್ಟೋ ಜನರನ್ನು ಬದಲಾಯಿಸುತ್ತದೆ.
ಸತೀಶ್ ಸುವರ್ಣಾರ ಬಗ್ಗೆ ಇನ್ನೊಂದು ಆಸಕ್ತಿಯ ವಿಷಯ ಗೊತ್ತಾಯ್ತು. ನಿತ್ಯ ಪತ್ರಿಕೆ ಓದುವ ಅವರು ಪರೋಪಕಾರದ ವ್ಯಕ್ತಿಗಳ ಬಗ್ಗೆ ಓದಿದರೆನ್ನಿ ಯಾರಲ್ಲೂ ಹೇಳದೆ ಅವರ ಬಳಿ ಹೋಗಿ ಬರುತ್ತಾರೆ. ಒಂದು ಶಾಲು, ಮತ್ತೊಂದು ಹಾರ ಹಿಡಿದು ಕವರಿನಲ್ಲಿ ತನ್ನ ಉಳಿತಾಯದ ಒಂದು ಮೊತ್ತವನ್ನು ಅವರ ಕೈಗಿತ್ತು ಮೌನವಾಗಿ ಮರಳಿ ಬರುತ್ತಾರೆ. ಇಂಥವರು ನಿಜಕ್ಕೂ ನಮಗೆ ಪ್ರೇರಣೆ.
ಸತೀಶ್ ಸುವರ್ಣಾ ಅವರನ್ನು ಅಭಿನಂದಿಸಲು ಬಯಸುವವರು 9916241561 ಸಂಪರ್ಕಿಸಬಹುದು.
ಮಂಜುನಾಥ್ ಕಾಮತ್
(ಆಧಾರ: ಉಡುಪಿಯ ಕಂಡೀರ ಫೇಸ್‌ಬುಕ್ ಪೇಜ್)