ಭಾನುವಾರ ಮುಂಜಾನೆ ರಷ್ಯಾದ ರಾಜಧಾನಿ ಮಾಸ್ಕೋ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ಭಾರಿ ಪ್ರಮಾಣದ ಡ್ರೋನ್ ದಾಳಿಗಳನ್ನು ನಡೆಸಿದೆ. ಈ ದಾಳಿಯ ಸಂದರ್ಭದಲ್ಲಿ ಭಾರತದ ಒಬ್ಬ ಕಾರ್ಮಿಕ ಸೇರಿದಂತೆ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮತ್ತಿಬ್ಬರು ಭಾರತೀಯ ಕಾರ್ಮಿಕರು ಸೇರಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು (Indian Embassy) ಈ ಆಘಾತಕಾರಿ ಘಟನೆಯನ್ನು ಅಧಿಕೃತವಾಗಿ ಧೃಡಪಡಿಸಿದೆ. ರಾಯಭಾರ ಕಚೇರಿಯ ಅಧಿಕಾರಿಗಳು ತಕ್ಷಣವೇ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಭಾರತೀಯ ಕಾರ್ಮಿಕರ ಆರೋಗ್ಯ ವಿಚಾರಿಸಿದ್ದಾರೆ.
ದಾಳಿಯಲ್ಲಿ ಭಾರತೀಯ ಕಾರ್ಮಿಕ ಮೃತಪಟ್ಟಿರುವುದಕ್ಕೆ ತೀವ್ರ ಸಂತಾಪ ಸೂಚಿಸಿರುವ ರಾಯಭಾರ ಕಚೇರಿಯು, ಸಂತ್ರಸ್ತ ಕಾರ್ಮಿಕರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಮತ್ತು ವೈದ್ಯಕೀಯ ನೆರವು ನೀಡಲು ಸ್ಥಳೀಯ ಆಡಳಿತ ಹಾಗೂ ಕಂಪನಿಯ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ರಷ್ಯಾದ ವಿವಿಧ ಭಾಗಗಳ ಕಡೆಗೆ ನುಗ್ಗುತ್ತಿದ್ದ ಉಕ್ರೇನ್‌ನ ಸರಿಸುಮಾರು 1,000 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಘೋಷಿಸಿದೆ. ಇನ್ನು ಮಾಸ್ಕೋ ನಗರದತ್ತ ಧಾವಿಸುತ್ತಿದ್ದ ಸುಮಾರು 81 ಡ್ರೋನ್‌ಗಳನ್ನು ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯು (Air Defence System) ಗಾಳಿಯಲ್ಲೇ ಧ್ವಂಸಗೊಳಿಸಿದೆ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೋಬಯಾನಿನ್ ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ಈ ಡ್ರೋನ್‌ಗಳ ಅವಶೇಷಗಳು ಬಿದ್ದಿದ್ದರಿಂದ ಹಲವಾರು ವಸತಿ ಕಟ್ಟಡಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳಿಗೆ ಭಾರಿ ಹಾನಿ ಉಂಟಾಗಿದೆ. ಮೃತಪಟ್ಟ ನಾಲ್ವರಲ್ಲಿ ಮೂವರು ಮಾಸ್ಕೋ ಪ್ರಾಂತ್ಯದವರಾಗಿದ್ದು, ಮತ್ತೊಬ್ಬರು ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
