ಸೆಪ್ಟೆಂಬರ್ 13, 2024, ಉಮರ್ ಖಾಲಿದ್ ಜೈಲಿನಲ್ಲಿ ಬಂಧಿಯಾಗಿ 4 ವರ್ಷಗಳು ಕಳೆದಿವೆ. ಫೆಬ್ರವರಿ 2020 ರಂದು ಭುಗಿಲೆದ್ದ ದೆಹಲಿ ಗಲಭೆಯಲ್ಲಿ ಉಮರ್ ವಿರುದ್ಧ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿದೆ. ಸಿಎಎ ವಿರುದ್ಧದ ಹೋರಾಟದಲ್ಲಿ ರಾಜಕೀಯ ಪ್ರೇರಿತವಾಗಿ ಉಮ್ಮರ್ ವಿರುದ್ಧ ಈ ಪ್ರಕರಣವನ್ನು ದಾಖಲಿಸಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಯಾದ ವಿಚಾರ. ಜವಾಬ್ದಾರಿಯುತವಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಪ್ರಜಾಪ್ರಭುತ್ವವಾದಿ ದೇಶದ ಅವಿಭಾಜ್ಯ ಅಂಗವಾಗಿರುವಾಗ ಉಮ್ಮರ್ ವಿರುದ್ಧ ದಾಖಲಾಗಿರುವ, ನಾಲಕು ವರ್ಷಗಳಿಂದ ಜೈಲಿನಲ್ಲಿ ಇಡಲಾಗಿರುವ ಈ ಪ್ರಕರಣ ದೇಶದ ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನಕ್ಕೆ ಒಂದು ಕಪ್ಪು ಚುಕ್ಕೆ.
ನೀವು ಪ್ರತಿಭಟನೆಗೆ ಇಳಿದಿದ್ದೀರಿ. ಅದು ನಿಮ್ಮ ಹಕ್ಕು ಎಂದು ನೀವು ಭಾವಿಸುತ್ತೀರಿ. ನಿಮ್ಮ ನಿರೀಕ್ಷೆಗೆ ಮೀರಿ ಆ ಪ್ರತಿಭಟನೆ ಗಲಾಟೆಗೆ ಬದಲಾದರೆ, ಮಾರನೇ ದಿನ ನಿಮ್ಮ ಮನೆಯ ಬಾಗಿಲು ತಟ್ಟುತ್ತಾರೆ ತನಿಖಾ ಸಂಸ್ಥೆಗಳ ಅಧಿಕಾರಿಗಳು. ನೀವೊಬ್ಬ ಭಯೋತ್ಪಾದಕ ಎಂದು ಘೋಷಿಸುತ್ತಾರೆ. ದೇಶದ ಮಾಧ್ಯಮಗಳೂ ನಿಮ್ಮನ್ನು ಭಯೋತ್ಪಾದಕ ಎಂದೇ ಕರೆಯುತ್ತವೆ. ನಿಮ್ಮನ್ನು ಜೈಲಿಗೆ ಹಾಕಲಾಗುತ್ತದೆ. ನಿಮ್ಮ ಬೈಲ್ ಅಪ್ಲಿಕೇಷನ್‌ಗಳನ್ನು ನ್ಯಾಯಾಲಯಗಳು ತಿರಸ್ಕರಿಸುತ್ತವೆ. ವರ್ಷಗಳು ಕಳೆದಂತೆ ನಿಮ್ಮ ಪ್ರಕರಣದ ವಿಚಾರಣೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ನೀವಿನ್ನೂ ಜೈಲಿನಲ್ಲಿಯೇ ಇರುತ್ತೀರಿ.
ಇದು ಒಂದು ಕಾಲ್ಪನಿಕ ಸನ್ನಿವೇಷವಾದರೆ, ಉಮ್ಮರ್ ಖಾಲಿದ್ ಬದುಕಿನಲ್ಲಿ ಇದೇ ಸತ್ಯ!
ಡಿಸೆಂಬರ್ 2019 ರಿಂದ ಪ್ರಧಾನಿ ನರೇಂದ್ರ ಮೋದಿಯವರ ಕರಿಛಾಯೆಯ ಕನಸಾದ ಪೌರತ್ವ ತಿದ್ದುಪಡಿ ಕಾಯ್ದೆ-ಸಿಎಎಯನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ಆರಂಭವಾದವು. ದೆಹಲಿಯಲ್ಲಿ, 2020 ರ ಫೆಬ್ರವರಿ ತಿಂಗಳ ಮಧ್ಯದದಲ್ಲಿ ಅನೇಕ ಸಿಎಎ ಪರ ಮೋದಿ ಸರ್ಕಾರದ ಬೆಂಬಲಿಗರು, ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದರು. ಫೆಬ್ರವರಿ 23 ರ ಹೊತ್ತಿಗೆ, ನಗರದಲ್ಲಿ ಮುಸ್ಲಿಮರ ವಿರುದ್ಧ ದುರುದ್ದೇಶಿತ ಮತ್ತು ಸಂಘಟಿತ ಹಿಂಸಾಚಾರ ಆರಂಭವಾಯಿತು, ಇದು ಮೂರು ದಿನಗಳವರೆಗೆ ಮುಂದುವರೆಯಿತು.
ವಿಡಿಯೋ ನೋಡಿ:
ಕಪಿಲ್ ಮಿಶ್ರಾ ಅವರಂತಹ ಕೆಲವು ಬಿಜೆಪಿ ನಾಯಕರು ಗಲಭೆಗೆ ಪ್ರಚೋದನೆ ನೀಡಿದ್ದರು. ಈ ಮಾರಣಾಂತಿಕ ಗಲಭೆಗಳಲ್ಲಿ 53 ಜನರು ಸಾವನ್ನಪ್ಪಿದರು. ಅವರಲ್ಲಿ ಮುಕ್ಕಾಲು ಭಾಗ ಮುಸ್ಲಿಮರು. ಹತ್ತಕ್ಕೂ ಹೆಚ್ಚು-ಹಿಂದೂಗಳು ಮೃತರಾದರು. 700 ಮಂದಿ ಗಾಯಗೊಂಡಿದ್ದರು. ಶವಗಳು ರಸ್ತೆ, ಚರಂಡಿಗಳಲ್ಲಿ ಬಿದ್ದಿದ್ದವು, ಅನೇಕ ಮುಸ್ಲಿಮರು ನಾಪತ್ತೆಯಾಗಿದ್ದಾರೆ. ಹಲವಾರು ಮಸೀದಿಗಳಿಗೆ ಬೆಂಕಿ ಹಚ್ಚಿ ನೆಲಸಮಗೊಳಿಸಲಾಯಿತು. ಅನೇಕ ಮುಸ್ಲಿಂ ಕುಟುಂಬಗಳು ಈ ಪ್ರದೇಶವನ್ನು ತೊರೆದರು, ಮತ್ತೆ ತಮ್ಮ ಮನೆಗಳಿಗೆ ಹಿಂತಿರುಗಲಿಲ್ಲ. ಆ ಮೂರು ದಿನಗಳ ರಕ್ತಪಾತದಲ್ಲಿ ಅನೇಕರ ಬದುಕು ಕಂಗೆಟ್ಟುಹೋಯಿತು.
2024 ರ ಫೆಬ್ರವರಿಯಲ್ಲಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ ದೆಹಲಿ ಪೊಲೀಸರು ಗಲಭೆಗೆ ಸಂಬಂಧಿಸಿದಂತೆ 2,619 ಜನರನ್ನು ಬಂಧಿಸಿದ್ದಾರೆ. ಗಲಭೆಗೆ ಪ್ರಚೋದನೆ ನೀಡಲು 21 ಮಂದಿ ಸಂಚು ರೂಪಿಸಿದ್ದಾರೆ ಎಂದು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಆರೋಪಿಸಿದೆ. ಈ ಆರೋಪಿಗಳಲ್ಲಿ ಉಮರ್ ಖಾಲಿದ್ , ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಮತ್ತು ಗುಲ್ಫಿಶನ್ ಫಾತಿಮಾ , ಸಲೀಂ ಮಲಿಕ್ ಮತ್ತು ದೇವಾಂಗನಾ ಕಲಿತಾ ಮುಂತಾದವರು ಸೇರಿದ್ದಾರೆ.
ಸೆಪ್ಟೆಂಬರ್ 2020 ರಿಂದ ಪೊಲೀಸರು ಇದುವರೆಗೆ ಒಟ್ಟು 25,000 ಪುಟಗಳ ಐದು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದಾರೆ. 21 ಮಂದಿಯ ವಿರುದ್ಧ ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ನಡೆಸಿ ರಸ್ತೆ ತಡೆ, ಕೋಮುಗಲಭೆ ಮಾಡಿದ್ದಾರೆ, ಮತ್ತು 2020ರ ಫೆಬ್ರವರಿ 22-23 ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತದ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಮತ್ತೊಂದೆಡೆ, ಅನೇಕ ಆರೋಪಿಗಳು ತಾವು ಯಾವುದೇ ಪ್ರಚೋದನಕಾರಿ ಭಾಷಣಗಳನ್ನು ಮಾಡಿಲ್ಲ, ನಡೆದ ಗಲಭೆಗೆ ಜವಾಬ್ದಾರರಲ್ಲ ಎಂದು ಹೇಳಿದ್ದಾರೆ. ತಮ್ಮ ಮೂಲಭೂತ ಹಕ್ಕಾಗಿ ಶಾಂತಿಯುತ ಪ್ರತಿಭಟನೆಗಳನ್ನು ಮಾತ್ರ ನಡೆಸಿದ್ದೇವೆ ಎಂದಿದ್ದಾರೆ. ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ 21 ಆರೋಪಿಗಳ ಪೈಕಿ 9 ಮಂದಿಗೆ ಮಾತ್ರ ಜಾಮೀನು ಸಿಕ್ಕಿದೆ.
ಉಳಿದವರು, ಪ್ರಮುಖವಾಗಿ ಉಮರ್ ಖಾಲಿದ್ ಸೇರಿದಂತೆ ಮುಸ್ಲಿಂ ಆರೋಪಿಗಳು ಜಾಮೀನಿಗಾಗಿ ನ್ಯಾಯಾಲಯಗಳ ಮೊರೆ ಹೋದರೂ ನ್ಯಾಯಾಲಯಗಳು ಸುಮ್ಮನೆ ಇವೆ. ಅವರೆಲ್ಲರಿಗೂ ಕೆಳಹಂತದ ನ್ಯಾಯಾಲಯಗಳಿಂದ ಜಾಮೀನು ನಿರಾಕರಿಸಲಾಗಿದೆ ಮತ್ತು ಕೆಲವರಿಗೆ ದೆಹಲಿ ಹೈಕೋರ್ಟ್‌ನಿಂದ ಜಾಮೀನು ನಿರಾಕರಿಸಲಾಗಿದೆ.
ಈಗಾಗಲೇ ಅವರು 3-4 ವರ್ಷಗಳಿಗಿಂತ ಜೈಲಿನಲ್ಲಿಯೇ ಇದ್ದಾರೆ. ಆದರೆ ಜಾಮೀನು ನೀಡಲು ನ್ಯಾಯಾಲಯಗಳು ಹಿಂದೇಟು ಹಾಕುತ್ತಿರುವುದು ಏಕೆ?
ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ವಿರುದ್ಧ ವ್ಯಾಪಕ ದುರ್ಬಳಕೆಗಾಗಿ ಮಾಡಲಾಗಿರುವ ಕುಖ್ಯಾತ ಕಠಿಣ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪೊಲೀಸರು ಈ 21 ಮಂದಿಯ ವಿರುದ್ಧ ಆರೋಪ ಹೊರಿಸಿದ್ದಾರೆ. ಇದಲ್ಲದೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) 25 ಸೆಕ್ಷನ್‌ಗಳು, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ 2 ಸೆಕ್ಷನ್‌ಗಳು ಮತ್ತು ಶಸ್ತ್ರಾಸ್ತ್ರ ಕಾಯ್ದೆಯ 2 ಸೆಕ್ಷನ್‌ಗಳನ್ನೂ ಹಾಕಲಾಗಿದೆ.
ಯುಎಪಿಎ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯಗಳಿಂದ ಯಾವುದೇ ಬದಲಾವಣೆ ಸಾಧ್ಯ ಇಲ್ಲವೇ? ನ್ಯಾಯಾಲಯ ಈ 21 ಮಂದಿಯ ವಿಚಾರದಲ್ಲಿ ಯಾವುದೇ ಸಮರ್ಪಕ ತೀರ್ಪನ್ನು ನೀಡಲು ಸಾಧ್ಯ ಇಲ್ಲವೇ?
ದೆಹಲಿ ಹೈಕೋರ್ಟ್‌ನ ಜಸ್ಟಿಸ್ ಸಿದ್ಧಾರ್ಥ್ ಮೃದುಲ್ ಮತ್ತು ಜಸ್ಟಿಸ್ ಅನುಪ್ ಜೈರಾಮ್ ಭಂಭಾನಿ ಅವರ ಇಬ್ಬರು ನ್ಯಾಯಾಧೀಶರ ಪೀಠವು ಈ 21 ಆರೋಪಿಗಳ ಪೈಕಿ – ದೇವಾಂಗನಾ ಕಲಿತಾ , ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ – ಈ ಮೂವರಿಗೆ ಜಾಮೀನು ನೀಡಿದೆ.
ಇದೊಂದು ಮಹತ್ವದ ತೀರ್ಪು. ಸರ್ಕಾರ ಯುಎಪಿಎ ಬಳಸಿ ನಡೆಸುವ ಅನ್ಯಾಯದ ವಿರುದ್ಧ ರಕ್ಷಣೆಯಾಗಿ ಈ ತೀರ್ಪು ನಿಲ್ಲುತ್ತದೆ. ಪ್ರತಿಭಟನೆ ನಡೆಸುವ ಸಾಂವಿಧಾನಿಕ ಹಕ್ಕು ಮತ್ತು ಭಯೋತ್ಪಾದನೆಯ ನಡುವೆ ಒಂದು ಗೆರೆ ಇದೆ. ಎರಡೂ ಬೇರೆ ಬೇರೆ. ಆದರೆ ಸರ್ಕಾರದ ಕಣ್ಣಿಗೆ ಈ ಗೆರೆ ಮಬ್ಬ ಮಬ್ಬಾಗಿ ಕಾಣುತ್ತಿದೆ ಎಂದು ಈ ದ್ವಿಸದಸ್ಯ ಪೀಠ ತೀರ್ಪಿನಲ್ಲಿ ಹೇಳಿತ್ತು. . ಗಲಭೆಯಲ್ಲಿ ಈ ಮೂವರ ಆಪಾದಿತ ಪಾತ್ರಗಳ ಕುರಿತು ನ್ಯಾಯಾಲಯವು ಅವರದ್ದು ‘ಭಯೋತ್ಪಾದಕ ಕೃತ್ಯ’ ಅಥವಾ ‘ಪಿತೂರಿ’ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿ, ಮೂವರನ್ನೂ ಬಿಡುಗಡೆ ಮಾಡಿತು.
ಈ ತೀರ್ಪು ಯುಎಪಿಎ ದುರ್ಬಳಕೆಯ ಮೇಲೆ ದೊಡ್ಡ ತಡೆಯನ್ನು ತರುತ್ತದೆ. ಆದರೆ ದೆಹಲಿ ಪೊಲೀಸರು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಿಂದ ತಡೆಯನ್ನು ತಂದರು. ಮೂವರು ಆರೋಪಿಗಳಿಗೆ ಜಾಮೀನಿನ ಮೇಲೆ ಹೊರಗೆ ಉಳಿಯಲು ಅವಕಾಶ ನೀಡಿದ್ದರೂ, ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ರಾಮಸುಬ್ರಮಣ್ಯಂ ಅವರ ಪೀಠವು ಇತರ ಪ್ರಕರಣಗಳಿಗೆ ದೆಹಲಿ ಹೈಕೋರ್ಟ್‌ನ ಈ ತೀರ್ಪನ್ನು ಅವಲಂಬಿಸದಂತೆ ನ್ಯಾಯಾಲಯಗಳಿಗೆ ಹೇಳಿದೆ. ಇದರಿಂದಾಗಿ, ದೆಹಲಿ ಹೈಕೋರ್ಟ್‌ನ ಒಂದು ಪ್ರಗತಿಪರ ತೀರ್ಪು ಯಾವುದೇ ಉಪಯೋಗಕ್ಕೆ ಬಾರದೆ ಹೋಯ್ತು. ಉಮರ್ ಖಾಲಿದ್ ಜಾಮೀನಿಗಾಗಿ ಕೋರ್ಟ್ ಅಲೆಯಬೇಕಾಗಿ ಬಂತು.
ಆದರೂ ನ್ಯಾಯಾಲಯಗಳ ಮೇಲೆ ಬರವಸೆಯನ್ನು ಕಳೆದುಕೊಳ್ಳಬೇಕೇ? ಯುಎಪಿಎಯಲ್ಲಿ ತೀರ್ಪು ಸಂಪೂರ್ಣವಾಗಿ ರಾಜ್ಯದ ಪರವಾಗಿ ಬಂದರೂ ಉನ್ನತ ನ್ಯಾಯಾಲಯಗಳು ತನಿಖಾ ಸಂಸ್ಥೆಗಳು ಸಲ್ಲಿಸಿದ ಮೆಟೀರಿಯಲ್‌ಗಳ ಆಧಾರದ ಮೇಲೆ ಅವು “ಭಯೋತ್ಪಾದಕ ಕೃತ್ಯಗಳು” ಅಲ್ಲ ಎಂದು ಹೇಳಿ, ಅಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಾದ ಜಾಮೀನು ಷರತ್ತು ಅನ್ವಯಿಸುವುದಿಲ್ಲ ಎಂದು ತೀರ್ಮಾನಿಸಿವೆ. ಕಟ್ಟುನಿಟ್ಟಾದ ಜಾಮೀನು ಷರತ್ತು “ಭಯೋತ್ಪಾದಕ ಕೃತ್ಯಗಳಿಗೆ” ಮಾತ್ರ ಅನ್ವಯಿಸುತ್ತದೆ ಎಂದಿವೆ. ಆರೋಪಿಗಳ ವಿರುದ್ಧದ ಆರೋಪಗಳು “ಭಯೋತ್ಪಾದಕ ಕೃತ್ಯಗಳು” ಅಲ್ಲ ಎಂದು ನ್ಯಾಯಾಲಯ ಹೇಳಿದರೆ, ಕಠಿಣ ಜಾಮೀನು ಷರತ್ತು ಸ್ವಾಭಾವಿಕವಾಗಿ ಅನ್ವಯಿಸುವುದಿಲ್ಲ. ಇದರ ಪರಿಣಾಮವಾಗಿ ಅವರು ಕೆಲವು ಯುಎಪಿಎ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಉದಾಹರಣೆಗೆ, ಭೀಮಾ ಕೋರೆಗಾಂವ್ ಪ್ರಕರಣದ ಆನಂದ್ ತೇಲ್ತುಂಬ್ಡೆ , ವೆರ್ನಾನ್ ಗೊನ್ಸಾಲ್ವೆಸ್ , ಅರುಣ್ ಫೆರೇರಾ , ಶೋಮಾ ಸೇನ್ ಮತ್ತು ಇತರರು. ಆದರೆ ಅವರೆಲ್ಲರೂ ಈಗಾಗಲೇ 4 ಅಥವಾ 5 ವರ್ಷಗಳ ಸುದೀರ್ಘ ಜೈಲುವಾಸವನ್ನು ಅನುಭವಿಸಿದ್ದರು.
ಆದರೂ ಇವರು ಕಳೆದಿರುವ ಇಷ್ಟು ವರ್ಷಗಳನ್ನು ಮರಳಿ ಇವರಿಗೆ ನೀಡಲು ಸಾಧ್ಯವೇ? ಇನ್ನೂ ಜೈಲಿನಲ್ಲಿ ಇರುವ ಉಮ್ಮರ್ ಖಾಲಿದ್ ಅವರ ಕಥೆ ಏನು? ಅವರಿಗೆ ಜಾಮೀನು ನೀಡಲು ಅವರ ವಿಚಾರಣೆಗಳನ್ನೂ ವರ್ಷಗಳಾದಂತೆ ತಿಂಗಳು ತಿಂಗಳು ಮುಂದೂಡಲಾಗುತ್ತಿದೆ. ನ್ಯಾಯಾಧೀಶರೂ ಬದಲಾಗುತ್ತಲೇ ಇದ್ದಾರೆ.
ಒಮರ್ ಖಾಲಿದ್ ಅವರ ಜಾಮೀನು ಅರ್ಜಿ ವಿಚಾರಣೆಯಲ್ಲಿ ಬಾಕಿ ಇತ್ತು. ಸುಮಾರು 9 ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಇದನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಿಂದಿರುಗಿಸಿತು. ಪೊಲೀಸರು ಒಮ್ಮೆ ಜಾಮೀನು ನೀಡಲು ಹಿಂದೇಟು ಹಾಕುತ್ತಾರೆ. ಭಯೋತ್ಪಾದನೆ ಆರೋಪಗಳ ಮೇಲೆ ಅವರ ಜಾಮೀನುನನ್ನು 2024 ರ ಮೇ ತಿಂಗಳಲ್ಲಿ ಜಿಲ್ಲಾ ನ್ಯಾಯಾಲಯ ಎರಡನೇ ಬಾರಿಗೆ ತಿರಸ್ಕರಿಸಿತು. ಉಮರ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರುಸತತವಾಗಿ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ.
ದೆಹಲಿ ಹೈಕೋರ್ಟಿನ ನ್ಯಾಯಾಧೀಶರು ಮೂವರಿಗೆ ಜಾಮೀನು ನೀಡಿದರು. ಆದರೆ ಉಳಿದ ಆರೋಪಿಗಳಿಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡಲಿಲ್ಲ.
ಸರ್ಕಾರವನ್ನು ಪ್ರಶ್ನಿಸಿದರೆ ಏನಾಗುತ್ತದೆ ಎಂಬುದನ್ನು ತೋರಿಸಲು ಕೇಂದ್ರ ನಡೆದ ಈ ಅಸಂವಿಧಾನಿಕ ನಡೆಯಿಂದಾಗಿ ದೇಶವೇ ತಲೆತಗ್ಗಿಸುವಂತಾಗಿದೆ. ಪ್ರಪಂಚ ಇದನ್ನು ಗಮನಿಸುತ್ತಿದೆ. ಇತಿಹಾಸ ಇದನ್ನು ದಾಖಲಿಸಿಕೊಳ್ಳುತ್ತದೆ. ಮನುಷ್ಯನ ಸಾಂವಿಧಾನಿಕ ಹಾಗೂ ನೈಸರ್ಗಿಕ ಹಕ್ಕನ್ನು ನಾಶ ಮಾಡುವ ಜೊತೆಗೆ, ಅವನ ಸಾಮಾಜಿಕ ಘನತೆಯ ಬದುಕಿಗೆ ಕುಂದನ್ನು ತರುವ ಸರ್ವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಉಮ್ಮರ್‌ನ ಈ ಪರಿಸ್ಥಿತಿಯನ್ನು ಇಂದು ಅನೇಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಇದು ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಉಮ್ಮರ್‌ನ ಕಥೆ ಮಾತ್ರವಲ್ಲ, ಇದು ಮುಂದೆ ನಾವೆಲ್ಲರೂ ಸಾಕ್ಷಿಯಾಗಬಲ್ಲ ದುರಂತಗಳಿಗೆ ಮುನ್ನುಡಿ.