Home ಬೆಂಗಳೂರು ಮಾಹಿತಿ ನೀಡದ ಕಸಾಪ: ಅನುಮಾನಕ್ಕೆ ಎಡೆ ಮಾಡಿದ ವಿಳಂಬ ನೀತಿ

ಮಾಹಿತಿ ನೀಡದ ಕಸಾಪ: ಅನುಮಾನಕ್ಕೆ ಎಡೆ ಮಾಡಿದ ವಿಳಂಬ ನೀತಿ

0

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಭೆಗಳ ಚರ್ಚೆಯ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾಗಿದ್ದ ಮಾಹಿತಿಯನ್ನು ಏಳು ತಿಂಗಳಾದರೂ ಕೊಡದೇ ವಿಳಂಬನೀತಿ ಅನುಸರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ಕನ್ನಡ ಸಾಹಿತ್ಯ ಪರಿಷತ್ತಿನ ಮೂರು ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಆದ ಚರ್ಚೆಗಳು, ಸಭೆಗಳ ನಡಾವಳಿಗಳ ವಿಡಿಯೋ ಚಿತ್ರೀಕರಣ, ನಡಾವಳಿಗಳ ಮುದ್ರಿತ ಪ್ರತಿಗಳು ಮತ್ತು ಅದಕ್ಕೆ ಸಂಬಂಧಪಟ್ಟ ಇತರೆ ಪತ್ರಗಳ ಮಾಹಿತಿ ಒದಗಿಸುವಂತೆ ಕಸಾಪದ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಬಳಿ ಕಳೆದ 7 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಮಾಹಿತಿ ಹಕ್ಕಿನಡಿ ಕೇಳಿದ ಯಾವೊಂದು ಮಾಹಿತಿಗಳನ್ನು ಸಕಾಲದಲ್ಲಿ ನೀಡದಿರುವುದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

2021ರ ಡಿಸೆಂಬರ್‌ 4, 2022ರ ಫೆಬ್ರವರಿ 25  ಮತ್ತು 2022ರ ಏಪ್ರಿಲ್‌ 7ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಗಳು  ನಡೆದಿದ್ದವು. ಈ ಮೂರೂ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಆದ ಚರ್ಚೆಗಳು, ಸಭೆಗಳ ನಡಾವಳಿಗಳ ವಿಡಿಯೋ ಚಿತ್ರೀಕರಣ, ನಡಾವಳಿಗಳ ಮುದ್ರಿತ ಪ್ರತಿಗಳು ಮತ್ತು ಅದಕ್ಕೆ ಸಂಬಂಧಪಟ್ಟ ಇತರೆ ಪತ್ರಗಳ ಮಾಹಿತಿ ಒದಗಿಸುವಂತೆ  ಮೇ 4ರಂದು ಮಾಹಿತಿ ಹಕ್ಕಿನ ಅಡಿ ಕನ್ನಡ ಸಾಹಿತ್ಯ ಪರಿಷತ್ತಿನ ʼಸಾರ್ವಜನಿಕ ಮಾಹಿತಿ ಅಧಿಕಾರಿಗಳಲ್ಲಿ ಮನವಿ ಸಲ್ಲಿಸಲಾಗಿತ್ತು.

ಕಸಾಪದಿಂದ ಅರ್ಜಿದಾರರಿಗೆ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಮಾಹಿತಿಗಾಗಿ ಜೂನ್‌ 10, ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಮಾಹಿತಿಯನ್ನು ದೊರಕಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಕಾಯಿದೆ ಪ್ರಕಾರ ವಾಯಿದೆ ಮುಗಿದರೂ ಅಲ್ಲಿಂದಲೂ ಯಾವುದೇ ಮಾಹಿತಿಗಳನ್ನು ನೀಡದೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಇದಾದ ನಂತರ ಆಗಸ್ಟ್‌ 5 ಮತ್ತು ಸೆಪ್ಟೆಂಬರ್‌ 17 ರಂದು ಕರ್ನಾಟಕ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿಯನ್ನು ಸಲ್ಲಿಸಿದ್ದರೂ, ಇವತ್ತಿನವರೆಗೂ ಯಾವುದೇ ಮಾಹಿತಿ ದೊರೆತಿಲ್ಲ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಾಮಾಜಿಕ ಕಾರ್ಯಕರ್ತ, ಹನುಮೇಗೌಡ ಮಾಹಿತಿ ಹಕ್ಕಿನಡಿ ಕೋರಲಾದ ವಿವರಗಳನ್ನು ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ, ಗೌರವ ಮತ್ತು ಪಾರದರ್ಶಕತೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ಅದರ ಅಧ್ಯಕ್ಷರು ಮತ್ತು ಸಂಬಂಧಪಟ್ಟವರದಾಗಿರುತ್ತದೆ, ಆದರೆ ಕಸಾಪ ಯಾಕೆ ಮಾಹಿತಿ ನೀಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಮಾಹಿತಿ ಹಕ್ಕಿನಡಿ ಕೋರಿದ ಯಾವ ವಿವರಗಳನ್ನೂ ನೀಡದೆ ವಿಳಂಬನೀತಿ ಅನುಸರಿಸುವುದು ಪರಿಷತ್ತಿನ ಹೊಣೆಗೇಡಿತನಕ್ಕೆ ಮತ್ತು ನೈತಿಕವಲ್ಲದ ನಡೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹನುಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version