ಹೊಳೆನರಸೀಪುರ – ಕೇಂದ್ರ ಗೃಹ ಸಚಿವ ರಾದ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ರವರ ಬಗ್ಗೆ ಸಂಸತ್ತಿನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿ ಪಟ್ಟಣದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅನುಯಾಯಿಗಳು ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಡಾಕ್ಟರ್ ಬಿಆರ್ ಅಂಬೇಡ್ಕರ್ ನಗರದಿಂದ ಮೆರವಣಿಗೆಯಲ್ಲಿ ಸಾಗಿದ ಸಾವಿರಾರು ಅಂಬೇಡ್ಕರ್ ಅಭಿಮಾನಿಗಳು ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ರಾಜಬೀದಿ ಕೋಟೆ ಮುಖ್ಯರಸ್ತೆಯ ಮೂಲಕ ಸಾಗಿದ ಪ್ರತಿಭಟನಾಕಾರರು ಶ್ರೀ ಜಯಚಾಮರಾಜೇಂದ್ರ ವೃತ್ತದ ಮೂಲಕ ರಿವರ್ ಬ್ಯಾಂಕ್ ರಸ್ತೆಯಲ್ಲಿ ಸಾಗಿ ಪೇಟೆ ಮುಖ್ಯ ರಸ್ತೆ ಮೂಲಕ ಡಾ. ಬಿಆರ್ ಅಂಬೇಡ್ಕರ್ ವೃತ್ತವನ್ನು ತಲುಪಿ ನಂತರ ಶ್ರೀ ಜಯಚಾಮರಾಜೇಂದ್ರ ವೃತ್ತಕ್ಕೆ ತೆರಳಿ ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸಿದರು. ಪ್ರತಿ ಕೃತಿ ದಹನ ಬಳಿಕ ತಾಲೂಕು ಕಚೇರಿಗೆ ತೆರಳಿ ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ದಲಿತ ಮುಖಂಡ ಎಚ್ ವೈ ಚಂದ್ರಶೇಖರ್, ಡಿಎಸ್ಎಸ್ ನ ಎಂ ಕೃಷ್ಣಪ್ಪ ಬಣದ ರಾಜ್ಯ ಸಂಚಾಲಕ ಸೋಮಶೇಖರ್, ದಲಿತ ಮುಖಂಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಟಿ ಲಕ್ಷ್ಮಣ , ವಕೀಲರುಗಳಾದ ಹರೀಶ್, ಮಂಜುನಾಥ, ಶಿವಕುಮಾರ, ಕಾಮಾಕ್ಷಿ, ದಲಿತ ಮುಖಂಡರುಗಳಾದ ಕೃಷ್ಣಮೂರ್ತಿ, ಲಕ್ಷ್ಮಣ, ಎಚ್ ಡಿ ಉಮೇಶ್, ರಂಗಸ್ವಾಮಿ, ಮುತ್ತುರಾಜ,ಸುಪ್ರೀತ್ ಪಾಸ್ವಾನ್, ಚಿನ್ನಸ್ವಾಮಿ, ಆನಂದ, ರಾಧಾಮಣಿ, ಸೇರಿದಂತೆ ಸಾವಿರಾರು ಡಾ. ಬಿಆರ್ ಅಂಬೇಡ್ಕರ್ ಅನುಯಾಯಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.