ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ಇಂಧನ ವೆಚ್ಚಗಳು ಗಗನಕ್ಕೇರಿರುವುದರಿಂದ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ದೇಶದಲ್ಲಿ ಗೃಹಬಳಕೆಯ ಎಲ್‌ಪಿಜಿ ಅಡುಗೆ ಅನಿಲದ ದರವನ್ನು ಪ್ರತಿ ಸಿಲಿಂಡರ್‌ಗೆ ₹29 ರಷ್ಟು ಹೆಚ್ಚಿಸಿವೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ನಡೆದಿರುವ ಎರಡನೇ ಭಾರಿ ದರ ಏರಿಕೆ ಇದಾಗಿದೆ.
ಈ ಕುರಿತು ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ, “ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿರುವುದಕ್ಕೆ ನಮಗೂ ಅತೀವ ಬೇಸರ ಮತ್ತು ವಿಷಾದವಿದೆ. ಆದರೆ ಕೇಂದ್ರ ಸರ್ಕಾರವನ್ನು ಟೀಕಿಸುವ ಮುನ್ನ ಪ್ರತಿಯೊಬ್ಬರೂ ಪ್ರಸ್ತುತ ಇಡೀ ಜಗತ್ತು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಇಡೀ ವಿಶ್ವವೇ ಈಗ ಅತ್ಯಂತ ಗಂಭೀರವಾದ ಇಂಧನ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ” ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾ ವಲಯದಲ್ಲಿ ಸೃಷ್ಟಿಯಾಗಿರುವ ಯುದ್ಧದ ವಾತಾವರಣದಿಂದಾಗಿ ಹಡಗುಗಳ ಮೂಲಕ ಸರಕು ಸಾಗಣೆ (ಟ್ರಾನ್ಸ್‌ಶಿಪ್‌ಮೆಂಟ್) ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಮತ್ತು ಅತ್ಯಂತ ಸೀಮಿತ ಮೂಲಗಳಿಂದ ಮಾತ್ರವೇ ಪ್ರಸ್ತುತ ಎಲ್‌ಪಿಜಿ ಲಭ್ಯವಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಗ್ಯಾಸ್ ಮತ್ತು ಪೆಟ್ರೋಲ್/ಡೀಸೆಲ್ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪರ್ಯಾಯ ಮೂಲಗಳಿಂದ ಇಂಧನವನ್ನು ಖರೀದಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೆ, ಪ್ರಸ್ತುತ ಭಾರತದಿಂದ ಅತ್ಯಂತ ದೂರದಲ್ಲಿರುವ ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಹಡಗುಗಳ ಸಂಚಾರ ಮಾರ್ಗ ಬದಲಾಗಿರುವುದರಿಂದ ಸಾಗಣೆ ಅವಧಿಯು 40 ರಿಂದ 45 ದಿನಗಳಷ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಸಾರಿಗೆ ವೆಚ್ಚ, ಮೂಲ ಬೆಲೆ ಹಾಗೂ ಇನ್ಶೂರೆನ್ಸ್ (ವಿಮೆ) ವೆಚ್ಚಗಳು ವಿಪರೀತವಾಗಿ ಹೆಚ್ಚಳವಾಗಿವೆ. ಹೀಗಾಗಿ ನಮಗೂ ಸಾಮಾನ್ಯ ಜನರ ಬಗ್ಗೆ ಅಷ್ಟೇ ಕಾಳಜಿ ಮತ್ತು ಆತಂಕವಿದ್ದರೂ, ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಈ ಬೆಲೆ ಏರಿಕೆಯು ಅನಿವಾರ್ಯವಾಗಿದೆ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ಪಶ್ಚಿಮ ಏಷ್ಯಾದಲ್ಲಿ ಉಂಟಾದ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಮಾರ್ಚ್ 7 ರಂದು ಪ್ರತಿ ಸಿಲಿಂಡರ್ ಬೆಲೆಯನ್ನು ₹60 ರಷ್ಟು ಹೆಚ್ಚಿಸಲಾಗಿತ್ತು. ಪ್ರಸ್ತುತ ದರ ಪರಿಷ್ಕರಣೆಗೂ ಮುನ್ನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾರಾಟ ಮಾಡುವ ಪ್ರತಿ ಸಿಲಿಂಡರ್ ಮೇಲೆ ಸುಮಾರು ₹703 ರಷ್ಟು ನಷ್ಟ ಅನುಭವಿಸುತ್ತಿದ್ದವು ಎಂದು ಅಂದಾಜಿಸಲಾಗಿದೆ.
ಇರಾನ್ ಮೇಲಿನ ಜಂಟಿ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದ ಬಿಕ್ಕಟ್ಟಿನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದರೂ, ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತದ ಗ್ರಾಹಕರು ಇಂದಿಗೂ ಅತ್ಯಂತ ಕಡಿಮೆ ದರದಲ್ಲೇ ಅಡುಗೆ ಅನಿಲವನ್ನು ಪಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಪ್ರಸ್ತುತ ಅಂತಾರಾಷ್ಟ್ರಿಯ ಮಾರುಕಟ್ಟೆಯ ದರದನ್ವಯ ಭಾರತಕ್ಕೆ ಒಂದು ಗೃಹಬಳಕೆಯ ಸಿಲಿಂಡರ್ ಪೂರೈಸಲು ₹1,600 ಕ್ಕೂ ಅಧಿಕ ವೆಚ್ಚವಾಗುತ್ತಿದೆ.
ಭಾರತದ ಎಲ್‌ಪಿಜಿ ಆಮದು ವೆಚ್ಚವು ಸೌದಿ ಕಾಂಟ್ರಾಕ್ಟ್ ಪ್ರೈಸ್ (CP) ಅನ್ನು ಅವಲಂಬಿಸಿದ್ದು, ಹಾರ್ಮುಜ್ ಜಲಸಂಧಿಯ ಮಾರ್ಗದಲ್ಲಿ ಉಂಟಾಗಿರುವ ಅಡಚಣೆಗಳಿಂದಾಗಿ ಗಲ್ಫ್ ವಲಯದಿಂದ ಸರಬರಾಜು ಕುಂಠಿತಗೊಂಡಿದ್ದು, ಫೆಬ್ರವರಿಯಿಂದೀಚೆಗೆ ಜಾಗತಿಕ ಇಂಧನ ದರ ಶೇಕಡಾ 46 ರಷ್ಟು ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರವು ಭ್ರಷ್ಟಾಚಾರ, ವಂಶಾವಳಿ ರಾಜಕಾರಣ ಮತ್ತು ಬಣ ರಾಜಕೀಯದಿಂದ ನರಳುತ್ತಿದ್ದು, ಆಡಳಿತ ಪಕ್ಷದೊಳಗಿನ ತೀವ್ರ ಆಂತರಿಕ ಅಸಮಾಧಾನ ಬೀದಿಗೆ ಬಂದಿದೆ ಎಂದು ಲೇವಡಿ ಮಾಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಚಿವರೊಬ್ಬರು ರಾಜೀನಾಮೆ ನೀಡಿದ್ದು, ಇನ್ನೂ ಕೆಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಈ ಬೆಳವಣಿಗೆಗಳೇ ಸಾಬೀತುಪಡಿಸುತ್ತವೆ ಎಂದು ಅವರು ಟೀಕಿಸಿದರು.
