Home ಅಂಕಣ ಸಂಸತ್ತಿನ ಪೂರ್ವಸೂರಿಗಳು – 25: ಸಂವಿಧಾನ ಸಭೆಯಿಂದ ಸಂಸತ್ತಿನವರೆಗೆ ಎನ್‌. ಗೋಪಾಲಸ್ವಾಮಿ ಅಯ್ಯಂಗಾರ್‌ ಬಿಟ್ಟು ಹೋದ...

ಸಂಸತ್ತಿನ ಪೂರ್ವಸೂರಿಗಳು – 25: ಸಂವಿಧಾನ ಸಭೆಯಿಂದ ಸಂಸತ್ತಿನವರೆಗೆ ಎನ್‌. ಗೋಪಾಲಸ್ವಾಮಿ ಅಯ್ಯಂಗಾರ್‌ ಬಿಟ್ಟು ಹೋದ ಹೆಜ್ಜೆ ಗುರುತುಗಳು

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತೈದನೆಯ ಲೇಖನ

ಸಮರ್ಥ ಆಡಳಿತಗಾರ ಮತ್ತು ನಾಗರಿಕ ಸೇವಕರಾಗಿದ್ದ ಅಯ್ಯಂಗಾರ್‌ ಅವರು 1947 ತ ತನಕ, ಬ್ರಿಟಿಷ್‌ ವೈಸ್‌ರಾಯ್‌ ನೀಡುವ ಅತ್ಯುನ್ನತ ಬಿರುದಾಗಿದ್ದ ದಿವಾನ್‌ ಬಹದ್ದೂರ್‌ ಸಹಿತ ಏಳು ಬಿರುದುಗಳನ್ನು ಪಡೆದುಕೊಂಡಿದ್ದರು.

ನರಸಿಂಹ ಗೋಪಾಲಸ್ವಾಮಿ ಅಯ್ಯಂಗಾರ್ ಭಾರತೀಯ ನಾಗರಿಕ ಸೇವೆಯಲ್ಲಿದ್ದ ವ್ಯಕ್ತಿ. ನಂತರ ರಾಜಕಾರಣಿಯಾಗಿ, ಸಂಸದರಾಗಿ ಮತ್ತು ರಾಜಪ್ರಭುತ್ವವಿದ್ದ ಕಾಶ್ಮೀರ ರಾಜ್ಯದ ಪ್ರಧಾನ ಮಂತ್ರಿಯಾಗಿ (1937–1943) ಕೆಲಸ ಮಾಡಿದ್ದರು. ಸ್ವತಂತ್ರ ಭಾರತದ ಮೊಟ್ಟ ಮೊದಲ ಸಚಿವ ಸಂಪುಟದಲ್ಲಿ ಅವರು ಸಚಿವರಾಗಿದ್ದರು.

1943 ರಲ್ಲಿ ಸ್ಟೇಟ್‌ ಕೌನ್ಸಿಲ್‌ಗೆ ಆಯ್ಕೆಯಾಗಿದ್ದ ಅಯ್ಯಂಗಾರ್‌ 1947 ರವರೆಗೆ ಸೇವೆ ಸಲ್ಲಿಸಿದ್ದರು. ತನ್ನ ಸೇವಾವಧಿಯಲ್ಲಿ “ಸೇನೆಯ ಭಾರತೀಕರಣ ಸಮಿತಿ”ಯ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದರು. 1945 ರಲ್ಲಿ ಪ್ರಕಟಗೊಂಡ ಸಾಂವಿಧಾನಿಕ ಸುಧಾರಣೆಗಳ ಕುರಿತ ಸಪ್ರು ಸಮಿತಿ ವರದಿಯ ಸಹ ಲೇಖಕರಾಗಿದ್ದರು.

1946 ರಲ್ಲಿ ಅವರು ಮದರಾಸು ರಾಜ್ಯದಿಂದ ಭಾರತದ ಸಂವಿಧಾನ ಸಭೆಗೆ ಆಯ್ಕೆಯಾಗಿದ್ದರು. 1946 ಡಿಸೆಂಬರ್‌ ತಿಂಗಳಲ್ಲಿ ಅದು ಸಭೆ ಸೇರಿತ್ತು. ಭಾರತದ ಸಂವಿಧಾನವನ್ನು ರಚಿಸಿದ ಏಳು ಸದಸ್ಯರಿದ್ದ ಸಮಿತಿಗೆ ಕೂಡ ಅವರನ್ನು ನೇಮಿಸಲಾಗಿತ್ತು.

ಆರಂಭ ಜೀವನ
1882 ರಂದು ಮದ್ರಾಸ್ ಪ್ರೆಸಿಡೆನ್ಸಿಯ ತಂಜಾವೂರು ಜಿಲ್ಲೆಯಲ್ಲಿ ಜನನ. ಅವರು ವೆಸ್ಲಿ ಶಾಲೆ ಮತ್ತು ಮದರಾಸಿನ ಪ್ರೆಸಿಡೆನ್ಸಿ ಆಂಡ್‌ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸುತ್ತಾರೆ. 1904 ರಲ್ಲಿ ಕೆಲಕಾಲ ಪಾಚ್ಚಿಯಪ್ಪ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಾರೆ.

1905 ರಲ್ಲಿ ಅವರು ಮದರಾಸ್‌ ನಾಗರಿಕ ಸೇವೆಗೆ ಸೇರುತ್ತಾರೆ. 1919 ರವರೆಗೆ ಅವರು ಡೆಪ್ಯುಟಿ ಕಲೆಕ್ಟರ್‌ ಆಗಿ ಕೆಲಸ ಮಾಡುತ್ತಾರೆ. 1920 ರಲ್ಲಿ ಅವರಿಗೆ ಕಲೆಕ್ಟರ್‌ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿ ಭಡ್ತಿ ನೀಡಲಾಗುತ್ತದೆ. 1921 ರಿಂದ ಏಳು ವರ್ಷಗಳ ಅವಧಿಯಲ್ಲಿ ಪಂಚಾಯತುಗಳ ರಿಜಿಸ್ಟ್ರಾರ್‌ ಜನರಲ್‌ ಮತ್ತು ಸ್ಥಳೀಯಾಡಳಿತ ಮಂಡಳಿಗಳ ಇನ್ಸ್‌ಪೆಕ್ಟರ್‌ ಆಗಿದ್ದರು. ಈ ಅವಧಿಯಲ್ಲಿ ಅವರು ರಾಮನಾಡು ಮತ್ತು ಗುಂಟೂರು ಜಿಲ್ಲೆಗಳಲ್ಲಿ ಹಲವು ಗ್ರಾಮ ಪಂಚಾಯತ್‌ಗಳನ್ನು ಸಂಘಟಿಸಿದ್ದರು. ನಂತರ ಮೂರು ವರ್ಷಗಳ ಕಾಲ ಅನಂತಪುರದಲ್ಲಿ ಕಲೆಕ್ಟರ್‌ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿ ಕೆಲಸ ಮಾಡಿದ್ದರು.

ಅದರ ನಂತರ 1932 ರವರೆಗೆ ಅಯ್ಯಂಗಾರ್‌ ಅವರು ಪುರಸಭೆ ಮತ್ತು ಸ್ಥಳೀಯಾಡಳಿತ ಮಂಡಳಿಗಳ ಇನ್ಸ್‌ಪೆಕ್ಟರ್ ಆಗಿದ್ದರು. 1932 ರಿಂದ 1934 ರವರೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಸರಕಾರದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ. ಕೊನೆಗೆ 1937 ರವರೆಗೆ ಕಂದಾಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಸಮರ್ಥ ಆಡಳಿತಗಾರ ಮತ್ತು ನಾಗರಿಕ ಸೇವಕರಾಗಿದ್ದ ಅಯ್ಯಂಗಾರ್‌ 1947 ರವರೆಗೆ, ಬ್ರಿಟಿಷ್‌ ವೈಸ್‌ರಾಯ್‌ ನೀಡುವ ಅತ್ಯುನ್ನತ ಬಿರುದಾಗಿದ್ದ ದಿವಾನ್‌ ಬಹದ್ದೂರ್‌ ಸಹಿತ ಏಳು ಬಿರುದುಗಳನ್ನು ಪಡೆದುಕೊಂಡಿದ್ದರು. ಬ್ರಿಟಿಷ್‌ ಸರಕಾರ ಅವರಿಗೆ ನೀಡಿದ್ದ ಇತರ ಬಿರುದುಗಳೆಂದರೆ, 1935 ರ ರಜತ ಮಹೋತ್ಸವ ಮತ್ತು ಹುಟ್ಟುಹಬ್ಬದ ಗೌರವ ಪಟ್ಟಿಯಲ್ಲಿ ಕಂಪಾನಿಯನ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಇಂಡಿಯನ್‌ ಎಂಪೈರ್‌ (CIE), 1937 ರ ಕೊರೊನೇಷನ್‌ ಗೌರವ ಪಟ್ಟಿಯಲ್ಲಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಇಂಡಿಯಾ (CSI) ಮತ್ತು 1941 ರ ಹೊಸ ವರ್ಷದ ಗೌರವ ಪಟ್ಟಿಯಲ್ಲಿ ನೈಟ್‌ಹುಡ್.

ಕಾಶ್ಮೀರದ ಕುರಿತು ಮಾಡಿದ ಕೆಲಸ
1947-48 ರಲ್ಲಿ ಜವಹರ್‌ಲಾಲ್ ನೆಹರೂ ಅವರ ಮೊದಲ ಸಂಪುಟದಲ್ಲಿ ಸಚಿವರಾಗಿದ್ದ ಅವರಿಗೆ ಯಾವುದೇ ಖಾತೆಯನ್ನು ನೀಡದೆ ಕಾಶ್ಮೀರದ ವ್ಯವಹಾರಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು. ಸ್ವತಃ ನೆಹರೂ ಅವರೇ ಕಾಶ್ಮೀರದ ಒಟ್ಟು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಇದು ಆಗ ಗೃಹ ಸಚಿವರಾಗಿದ್ದ ಸರ್ದಾರ್‌ ಪಟೇಲರೊಂದಿಗೆ ಸಣ್ಣ ಮಟ್ಟದ ಸಂಘರ್ಷಕ್ಕೂ ಕಾರಣವಾಗಿತ್ತು. ಯಾಕೆಂದರೆ, ರಾಜಪ್ರಭುತ್ವವಿದ್ದ ಇತರ ಸಂಸ್ಥಾನಗಳ ಜವಾಬ್ದಾರಿ ಗೃಹ ಸಚಿವರಾಗಿತ್ತು. 1947 ಅಕ್ಟೋಬರ್‌ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಲೀನದ ನಂತರ 1948 ರಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಯೋಗಕ್ಕೆ ಅಯ್ಯಂಗಾರ್‌ ನೇತೃತ್ವ ವಹಿಸಿದ್ದರು. ಅದರ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತತೆಯನ್ನು ಕಲ್ಪಿಸುವ 370 ನೇ ವಿಧಿಯನ್ನು ರಚಿಸುವುದು ಕೂಡ ಅಯ್ಯಂಗಾರ್‌ ಅವರೇ ಆಗಿದ್ದರು.

ಅಯ್ಯಂಗಾರ್‌ ಅವರಿಗಿದ್ದ ಕಾಶ್ಮೀರ ನಂಟು ಕೊನೆಗಾಲದರೆಗೂ ಮುಂದುವರಿದಿತ್ತು. 1952 ರಲ್ಲಿ ಜಿನಿವಾದ ಲೇಕ್‌ ಸಕ್ಸಸ್‌ನಲ್ಲಿ ನಡೆದಿದ್ದ ಕಾಶ್ಮೀರ ಕುರಿತ ಮಾತುಕತೆಗಳು ಮತ್ತು ಚರ್ಚೆಗಳಿಗೆ ಭಾರತದ ಪ್ರತಿನಿಧಿಯಾಗಿ ಅಯ್ಯಂಗಾರ್‌ ಅವರನ್ನು ನೆಹರೂ ನೇಮಿಸಿದ್ದರು. ಅಲ್ಲಿ ಮತ್ತು ಇತರ ಎಲ್ಲ ಕಡೆಗಳಲ್ಲಿಯೂ ಅವರು ಭಾರತದ ನಿಲುವನ್ನು ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ವಿವರಿಸಿದ್ದರು.

ಕಾಶ್ಮೀರದ ದಿವಾನರಾಗಿದ್ದ ಅವಧಿಯು ಅವರಿಗೆ ಕ್ಲಿಷ್ಟಕರ ಸಮಯವಾಗಿತ್ತು. ಕಾಶ್ಮೀರ ಸಮಿತಿಯು ಮಹಾರಾಜನನ್ನು ಕಿತ್ತು ಹಾಕಲು ನಡೆಸಿದ ಪ್ರಯತ್ನವು ಕೊನೆಗೆ ದಂಗೆಯಾಗಿ, ಕೋಮುವಾದಿ ತಿರುವು ಪಡೆದುಕೊಂಡಿತ್ತು.

2023 ರ ಆಗಸ್ಟ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ 370 ನೇ ವಿಧಿಯ ರದ್ದತಿ ಕುರಿತು ವಿಚಾರಣೆ ನಡೆಸುತ್ತಿದ್ದಾಗ, ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಅಯ್ಯಂಗಾರ್‌ ಅವರು ಜಮ್ಮು ಮತ್ತು ಕಾಶ್ಮೀರದ ಜನತೆಯ ಜೊತೆಗೆ ಹೊಂದಿದ್ದ ಬದ್ಧತೆಯ ಕುರಿತು ಕೂಡ ಉಲ್ಲೇಖಿಸಿತ್ತು.

ಸಂಸದೀಯ ಬದುಕು
1948-1952 ರ ಅವಧಿಯಲ್ಲಿ ಅಯ್ಯಂಗಾರ್‌ ಅವರು ರೈಲ್ವೇ ಮತ್ತು ಸಾರಿಗೆ ರಾಜ್ಯ ಸಚಿವರಾಗಿ ಮತ್ತು ಕೊನೆಗೆ 1952-1953 ರವರೆಗೆ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1952 ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. 1952 ಮೇ 13 ರಿಂದ 1953 ಫೆಬ್ರವರಿ 10 ರ ತನಕ ಅವರು ರಾಜ್ಯಸಭೆಯಲ್ಲಿ ಸದನದ ನಾಯಕರಾಗಿದ್ದರು.

ಅವರು ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ರೈಲ್ವೇ ಸೇವೆಗಳು ಮತ್ತು ಸಲಕರಣೆಗಳಲ್ಲಿ ಗಣನೀಯ ಬೆಳವಣಿಗೆ ಮತ್ತು ವಿಸ್ತರಣೆ ಕಂಡಿತ್ತು. ಭಾರತೀಯ ರೈಲ್ವೆಯನ್ನು ಮಧ್ಯ, ಪೂರ್ವ, ಉತ್ತರ, ಈಶಾನ್ಯ, ದಕ್ಷಿಣ ಮತ್ತು ಪಶ್ಚಿಮ ಎಂದು ಆರು ವಲಯಗಳಾಗಿ ಮರುಸಂಘಟಿಸುವಲ್ಲಿ ಅವರು ಪ್ರಮುಖ ಶಕ್ತಿಯಾಗಿ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ರೈಲ್ವೇ ಹೆಚ್ಚುವರಿ ಗಳಿಕೆಯನ್ನು ಕೂಡ ದಾಖಲಿಸಿತ್ತು.

1949 ರಲ್ಲಿ ಸರಕಾರಿ ಸೇವೆಗಳನ್ನು ಸವ್ಯವಸ್ಥೆಗೊಳಿಸುವ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ದಕ್ಷತೆಯನ್ನು ತರುವ ಪ್ರಯತ್ನವಾಗಿ ಅವರು “ಸರಕಾರಿ ಯಂತ್ರದ ಮರುಸಂಘಟನೆ” ಎಂಬ ವರದಿಯನ್ನು ಮಂಡಿಸಿದ್ದರು.

ಅದರಲ್ಲಿ ಅವರು ನಾಲ್ಕು ಸ್ಥಾಯಿ ಸಮಿತಿಗಳನ್ನು ರೂಪಿಸಲು ಶಿಫಾರಸ್ಸು ಮಾಡಿದ್ದರು. ಅವರ ವರದಿಯ ಪರಿಣಾಮವಾಗಿ ಕೇಂದ್ರ ಸರಕಾರವು ನಾಲ್ಕು ಸಮಿತಿಗಳನ್ನು ರಚಿಸುತ್ತದೆ. ಅವುಗಳು: ರಕ್ಷಣಾ ಸಮಿತಿ, ಆರ್ಥಿಕ ಸಮಿತಿ, ಸಂಸದೀಯ ಮತ್ತು ಕಾನೂನು ವ್ಯವಹಾರಗಳ ಸಮಿತಿ ಹಾಗೂ ಆಡಳಿತಾತ್ಮಕ ಸಂಘಟನಾ ಸಮಿತಿ.

1953 ಫೆಬ್ರವರಿ 10 ರಂದು ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ, ತಮ್ಮ 71 ನೇ ವಯಸ್ಸಿನಲ್ಲಿ ಮದರಾಸಿನಲ್ಲಿ ಅಯ್ಯಂಗಾರ್‌ ನಿಧನರಾಗುತ್ತಾರೆ. ಅವರು ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದರು. ಮಗ ಜಿ. ಪಾರ್ಥಸಾರಥಿ ದಿ ಹಿಂದೂ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು ಮತ್ತು ನಂತರದಲ್ಲಿ ಒಬ್ಬ ನಿಪುಣ ರಾಜತಾಂತ್ರಿಕನಾಗಿ ಹೆಸರು ಪಡೆದವರು.

1953 ಫೆಬ್ರವರಿ 11ರಂದು ಪ್ರಧಾನ ಮಂತ್ರಿ ಜವಹರ್‌ಲಾಲ್‌ ನೆಹರೂ ಅವರು ಅಯ್ಯಂಗಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಭಾವುಕರಾಗಿ ಮಾತನಾಡಿದರು. “ನಾವು ಹಲವಾರು ವಿಷಯಗಳಲ್ಲಿ ಅವರನ್ನು ಅವಲಂಬಿಸಿದ್ದೆವು. ಸರಕಾರದ ಒಳಗಡೆ ಅವರು ತಮ್ಮದೇ ಶೈಲಿಯಲ್ಲಿ ಸ್ವತಃ ಒಂದು ಸಂಸ್ಥೆಯಾಗಿ ಬದಲಾಗಿದ್ದರು. ನಾವು ಯಾವಾಗಲೂ, ಯಾವುದೇ ಸಮಸ್ಯೆ ಎದುರಾದಾಗಲೂ ಅವರ ಕಡೆಗೆ ತಿರುಗಿ ನೋಡುತ್ತಿದ್ದೆವು. ಹಾಗಾಗಿಯೇ ಬಹುಷ ಆ ಸಂಸ್ಥೆಯನ್ನು ನಾವು ಬಹಳ ಲಘುವಾಗಿ ಪರಿಗಣಿಸಿದೆವು ಕೂಡ. ಅನಪೇಕ್ಷಿತ ಘಟನೆಗಳು ಘಟಿಸುವಾಗ, ಅದು ಒಟ್ಟು ಸಂರಚನೆಯನ್ನೇ ಅಲ್ಲಾಡಿಸುತ್ತವೆ. ಅದು ಇಲ್ಲೀಗ ಸಂಭವಿಸಿದೆ. ನಾವು ಅವರ ಅಗಲಿಕೆಗಾಗಿ ದುಃಖಿಸುತ್ತಿದ್ದರೂ, ವಾಸ್ತವದಲ್ಲಿ ನಾವು ನಮಗಾಗಿಯೇ ದುಃಖಿಸುತ್ತಿದ್ದೇವೆ. ಯಾಕೆಂದರೆ, ಅವರಿನ್ನು ನಮ್ಮ ಸಹಾಯಕ್ಕೆ ಒದಗಿ ಬರುವುದಿಲ್ಲ.”

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

You cannot copy content of this page

Exit mobile version