Tuesday, June 25, 2024

ಸತ್ಯ | ನ್ಯಾಯ |ಧರ್ಮ

ನ್ಯಾಯಾಧೀಶೆಗೆ ಹಿರಿಯ ಜಡ್ಜ್‌ಗಳಿಂದ ಲೈಂಗಿಕ ಕಿರುಕುಳ: ಸಿಜೆಐಗೆ ಪತ್ರ

ಉತ್ತರ ಪ್ರದೇಶದ ನ್ಯಾಯಾಧೀಶೆಯೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ತಮ್ಮ ಹಿಂದಿನ ಹುದ್ದೆಯಲ್ಲಿ ಹಿರಿಯ ನ್ಯಾಯಾಧೀಶರು ಮತ್ತು ಅವರ ಸಹಚರರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಪತ್ರದಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಲು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಅನುಮತಿ ಕೋರಿದ್ದು, ತನ್ನ ಮೇಲಾದ ಅನ್ಯಾಯದ ಬಗ್ಗೆ ನ್ಯಾಯಯುತವಾದ ತನಿಖೆಯೂ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನಿರ್ದೇಶನದಂತೆ ಇವರು ಸಲ್ಲಿಸಿದ ಎಲ್ಲಾ ದೂರುಗಳ ಬಗ್ಗೆ ಮಾಹಿತಿಯನ್ನು ಕೋರಿ ಶುಕ್ರವಾರ ಅಲಹಾಬಾದ್ ಹೈಕೋರ್ಟ್‌ಗೆ ಸಂದೇಶವನ್ನು ಕಳುಹಿಸಲಾಗಿದೆ ಎಂದು ಬಾರ್ ಆಂಡ್‌ ಬೆಂಚ್ ವರದಿ ಮಾಡಿದೆ.

ಅಲಹಾಬಾದ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಅವರು ಕೂಡ ಈ ಪ್ರಕರಣದ ಬಗ್ಗೆ ಗಮನ ಹರಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ಗುರುವಾರ ರಾತ್ರಿ ತಿಳಿಸಲಾಗಿದೆ.

ಗುರುವಾರ ಮಾಧ್ಯಮಗಳಿಗೆ ನೀಡಲಾದ ಪತ್ರದಲ್ಲಿ: “ಒಬ್ಬ ನಿರ್ದಿಷ್ಟ ಜಿಲ್ಲಾ ನ್ಯಾಯಾಧೀಶರು ಮತ್ತು ಅವರ ಸಹಚರರಿಂದ ನನಗೆ ಲೈಂಗಿಕ ಕಿರುಕುಳವಾಗಿದೆ. ರಾತ್ರಿ ಜಿಲ್ಲಾ ನ್ಯಾಯಾಧೀಶರನ್ನು ಭೇಟಿಯಾಗಲು ನನಗೆ ಹೇಳಿದ್ದರು” ಎಂದು ಆರೋಪಿಸಲಾಗಿದೆ.

2022 ರಲ್ಲಿ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಾಧೀಶರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಈ ನ್ಯಾಯಾಧೀಶೆ ಹೇಳಿದ್ದಾರೆ. ಜುಲೈ 2023 ರಲ್ಲಿ ಅವರು ಹೈಕೋರ್ಟ್‌ನ ಆಂತರಿಕ ದೂರುಗಳ ಸಮಿತಿಗೆ ದೂರು ನೀಡಿದ್ದರು. “ವಿಚಾರಣೆಯನ್ನು ಪ್ರಾರಂಭಿಸಲು 6 ತಿಂಗಳು ಬೇಕಾಯ್ತು ಮತ್ತು ಒಂದು ಸಾವಿರ ಇಮೇಲ್‌ಗಳನ್ನು ಕಳಿಸಬೇಕಾಯಿತು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿಚಾರಣೆ ಬಾಕಿ ಇರುವಾಗ ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಿದರೂ ಅವರ ಮನವಿಯನ್ನು ಸ್ವೀಕರಿಸಲಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಪ್ರಕರಣದ ಸಾಕ್ಷಿಗಳು ಜಿಲ್ಲಾ ನ್ಯಾಯಾಧೀಶರ ಅಧೀನದಲ್ಲಿದ್ದಾರೆ ಎಂದು ದೂರುದಾರರು ಹೇಳಿದ್ದು, “ಇದೀಗ ಜಿಲ್ಲಾ ನ್ಯಾಯಾಧೀಶರು ಎಲ್ಲಾ ಸಾಕ್ಷಿಗಳ ನಿಯಂತ್ರಣದಲ್ಲಿ ವಿಚಾರಣೆ ನಡೆಸುತ್ತಾರೆ. ಅಂತಹ ವಿಚಾರಣೆಯ ಭವಿಷ್ಯ ಏನಾಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ,” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು