ಲಖನೌ: ದೇವಾಲಯದ ಆಡಳಿತ ಮತ್ತು ಆವರಣದ ಮೇಲೆ ಹಿಡಿತ ಸಾಧಿಸುವ ದುರುದ್ದೇಶದಿಂದ ವ್ಯಕ್ತಿಯೊಬ್ಬ ಇಬ್ಬರು ವೃದ್ಧ ಸಾಧುಗಳನ್ನು ರಾಡ್ನಿಂದ ಹೊಡೆದು ಕೊಲೆ ಮಾಡಿ, ಶವಗಳಿಗೆ ಬೆಂಕಿ ಹಚ್ಚಿದ ಭೀಕರ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಸುಥಾ ಗ್ರಾಮದ ಸ್ಥಳೀಯ ದೇವಾಲಯದಲ್ಲಿ ಬಾಬಾ ಗೋಪಾಲ್ ದಾಸ್ ಮತ್ತು ಬಾಬಾ ಬಿಹಾರಿ ದಾಸ್ ಎಂಬ ಸಾಧುಗಳು ವಾಸವಾಗಿದ್ದು, ದೇವಾಲಯದ ಪೂಜೆ ಹಾಗೂ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಅಕ್ಟೋಬರ್ 1 ರಂದು ಮುಂಜಾನೆ ದೇವಾಲಯಕ್ಕೆ ಬಂದ ಗ್ರಾಮಸ್ಥರಿಗೆ ಸಾಧುಗಳ ಮೃತದೇಹಗಳು ಆವರಣದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ 35 ವರ್ಷದ ಸುಮಿತ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ದೇವಾಲಯದ ಮೇಲೆ ಪೂರ್ಣ ಹಿಡಿತ ಸಾಧಿಸಿ ಅಲ್ಲಿಯೇ ಶಾಶ್ವತವಾಗಿ ವಾಸಿಸುವ ಉದ್ದೇಶದಿಂದ ರಾತ್ರಿ ಮಲಗಿದ್ದ ಸಾಧುಗಳ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ.
ಬಳಿಕ ಸಾಕ್ಷ್ಯ ನಾಶಪಡಿಸಲು ಗುಡಿಯಲ್ಲಿದ್ದ ಕಟ್ಟಿಗೆ ಹಾಗೂ ತುಪ್ಪವನ್ನು ಬಳಸಿ ಮೃತದೇಹಗಳಿಗೆ ಬೆಂಕಿ ಹಚ್ಚಿದ್ದಾಗಿ ತಿಳಿಸಿದ್ದಾನೆ. ಕೃತ್ಯಕ್ಕೆ ಬಳಸಲಾದ ಕಬ್ಬಿಣದ ರಾಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
