ಹಬ್ಬದ ಸೀಸನ್ ಮುಗಿಯುವವರೆಗೆ ಯುಪಿಐ ಮೇಲಿನ ಎಂಡಿಆರ್ ಶುಲ್ಕ ಮುಂದೂಡಿಕೆ ಸಾಧ್ಯತೆ?

2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಯುಪಿಐ (UPI) ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸುವ ನಿಯಮವನ್ನು ಹಬ್ಬದ ಋತು ಮುಗಿಯುವವರೆಗೆ ಮುಂದೂಡುವ ಸಾಧ್ಯತೆಯಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಶುಲ್ಕ ಜಾರಿಯನ್ನು ಮುಂದಿನ ವರ್ಷದ ಜನವರಿಯವರೆಗೆ ಮುಂದೂಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ವಿವಿಧ ಎಂಡಿಆರ್ ದರಗಳು, ಬೇರೆ ಬೇರೆ ವಹಿವಾಟುಗಳಿಗೆ ಅವುಗಳ ಅನ್ವಯ ಹಾಗೂ ಹೊಸ ವ್ಯವಸ್ಥೆಗೆ ಸಿದ್ಧವಾಗಲು ವ್ಯಾಪಾರ ಸಂಸ್ಥೆಗಳಿಗೆ ಬೇಕಾಗುವ ಕಾಲಾವಕಾಶದ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಜಾರಿಯನ್ನು ಸದ್ಯಕ್ಕೆ ಮುಂದೂಡಬೇಕೆಂದು ವ್ಯಾಪಾರ ಸಂಘಟನೆಗಳು, ಫಿನ್‌ಟೆಕ್ ಮತ್ತು ಡಿಜಿಟಲ್ ಪಾವತಿ ಸೇವಾ ಸಂಸ್ಥೆಗಳು ಎನ್‌ಪಿಸಿಐಗೆ ಮನವಿ ಸಲ್ಲಿಸಿವೆ.

ಹಣಕಾಸು ಸಚಿವಾಲಯದೊಂದಿಗೆ ಈ ಕುರಿತು ಮಾತುಕತೆ ನಡೆಯುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ಎನ್‌ಪಿಸಿಐ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಈ ನಿಯಮವು ಅಕ್ಟೋಬರ್ 15 ರಿಂದ ಜಾರಿಗೆ ಬರಬೇಕಿತ್ತು.

ಡಿಜಿಟಲ್ ಪಾವತಿ ಸೇವೆ ಒದಗಿಸಿದ್ದಕ್ಕಾಗಿ ವ್ಯಾಪಾರಿಗಳು ಬ್ಯಾಂಕುಗಳಿಗೆ ಪಾವತಿಸುವ ಶುಲ್ಕವೇ ಈ ಎಂಡಿಆರ್. ಈ ಲೆಕ್ಕಾಚಾರದ ಪ್ರಕಾರ 10,000 ರೂಪಾಯಿ ವಹಿವಾಟಿನ ಮೇಲೆ 40 ರೂಪಾಯಿ ಶುಲ್ಕ ಬೀಳಲಿದೆ.

Related Articles

ಇತ್ತೀಚಿನ ಸುದ್ದಿಗಳು