ಗೌತಮ್ ಅದಾನಿ ವಿರುದ್ಧ ದಾಖಲಾಗಿದ್ದ ಲಂಚದ ಪ್ರಕರಣವನ್ನು ವಜಾಗೊಳಿಸಿದ ಅಮೆರಿಕ ನ್ಯಾಯಾಲಯ

ನ್ಯೂಯಾರ್ಕ್: ಅಡಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಗೆ ಅಮೆರಿಕದ ನ್ಯಾಯಾಲಯದಲ್ಲಿ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲಿದ್ದ ಅಪರಾಧ ಆರೋಪಗಳನ್ನು ಅಮೆರಿಕ ನ್ಯಾಯಾಲಯವು ವಜಾಗೊಳಿಸಿದೆ.

ಅಮೆರಿಕದಲ್ಲಿ ಅದಾನಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್ ಜಿಲ್ಲಾ ನ್ಯಾಯಾಲಯವು ವಜಾಗೊಳಿಸಿದೆ. ಗೌತಮ್ ಅಡಾನಿ, ಸಾಗರ್ ಅಡಾನಿ ಮತ್ತು ಅದಾನಿ ಗ್ರೀನ್ ಸಿಇಒ ವಿನೀತ್ ಜೈನ್ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುತ್ತಿರುವುದಾಗಿ ನ್ಯಾಯಾಲಯ ತಿಳಿಸಿದೆ. ನ್ಯಾಯಮೂರ್ತಿ ನಿಕೋಲಸ್ ಗಾರೌಫಿಸ್ ಈ ತೀರ್ಪನ್ನು ಪ್ರಕಟಿಸಿದ್ದಾರೆ. ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿರುವುದರಿಂದ, ಈ ಆರೋಪಗಳನ್ನು ಶಾಶ್ವತವಾಗಿ ವಜಾಗೊಳಿಸಿದಂತಾಗಿದೆ. ಅಂದರೆ, ಇದೇ ವಿಷಯವಾಗಿ ಮತ್ತೆ ಅದೇ ರೀತಿಯ ಆರೋಪಗಳನ್ನು ಹೊರಿಸುವಂತಿಲ್ಲ.

2024 ರ ನವೆಂಬರ್‌ನಲ್ಲಿ ಗೌತಮ್ ಅದಾನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಸೋಲಾರ್ ಪವರ್ ಕೆಲಸಗಳನ್ನು ಪಡೆಯಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ (ಸುಮಾರು 2,100 ಕೋಟಿ ರೂ.) ಲಂಚ ನೀಡಿದ್ದಾರೆ ಎಂದು ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಆರೋಪ ಮಾಡಿದ್ದರು. ಈ ಯೋಜನೆಗಳ ಮೂಲಕ ಸುಮಾರು 2 ಬಿಲಿಯನ್ ಡಾಲರ್ ಲಾಭ ಗಳಿಸಲು ಅಡಾನಿ ಗ್ರೂಪ್ ಯೋಜಿಸಿತ್ತು ಎಂದು ಆರೋಪಿಸಲಾಗಿತ್ತು. ಅಲ್ಲದೆ, ಅಮೆರಿಕದ ಮಾರುಕಟ್ಟೆಯಲ್ಲಿ ಬಾಂಡ್‌ಗಳನ್ನು ವಿತರಿಸುವ ಮೂಲಕ 3 ಬಿಲಿಯನ್ ಡಾಲರ್ ಸಂಗ್ರಹಿಸುವ ವೇಳೆ ಹೂಡಿಕೆದಾರರನ್ನು ತಪ್ಪು ದಾರಿಗೆ ಎಳೆಯಲಾಗಿದೆ ಎಂದೂ ಆರೋಪಿಸಲಾಗಿತ್ತು. ಆದರೆ ಅದಾನಿ ಗ್ರೂಪ್ ಈ ಎಲ್ಲಾ ಆರೋಪಗಳನ್ನು ಆರಂಭದಿಂದಲೂ ನಿರಾಕರಿಸುತ್ತಾ ಬಂದಿತ್ತು. ಇವೆಲ್ಲವೂ ನಿರಾಧಾರ ಆರೋಪಗಳಾಗಿದ್ದು, ತಾವು ಸಂಪೂರ್ಣವಾಗಿ ಕಾನೂನು ಮತ್ತು ನಿಯಮಾವಳಿಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿತ್ತು.

ತೀರ್ಪನ್ನು ಸ್ವಾಗತಿಸಿದ ಅದಾನಿ

ಅಮೆರಿಕ ನ್ಯಾಯಾಲಯ ನೀಡಿದ ಈ ತೀರ್ಪನ್ನು ಗೌತಮ್ ಅದಾನಿ ಸ್ವಾಗತಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ (X) ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ತಮಗೆ ಅಪಾರ ಗೌರವವಿದೆ ಎಂದಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಸತ್ಯ ಮತ್ತು ಕಾನೂನಿನ ಮೇಲಿನ ನಂಬಿಕೆಯೇ ತಮ್ಮನ್ನು ಮುನ್ನಡೆಸಿತು ಎಂದು ಹೇಳಿದ್ದಾರೆ.

ತಮ್ಮ ಮೇಲೆ ನಂಬಿಕೆ ಇಟ್ಟಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿರುವ ಅದಾನಿ, ರಾಷ್ಟ್ರ ನಿರ್ಮಾಣ, ಮೌಲ್ಯವರ್ಧನೆ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ತಮ್ಮ ಕಾರ್ಯವನ್ನು ನಿರಂತರವಾಗಿ ಮುಂದುವರಿಸುವುದಾಗಿ ಪುನರುಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು