ವಿಶ್ವಸಂಸ್ಥೆ: ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UN Security Council) ಮಂಡಿಸಿದ್ದ ನಿರ್ಣಯವನ್ನು ಅಮೆರಿಕ ತನ್ನ ವೀಟೋ (Veto) ಅಧಿಕಾರ ಬಳಸಿ ತಿರಸ್ಕರಿಸಿದೆ.
15 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 14 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಆದರೆ, ಅಮೆರಿಕ ಮಾತ್ರ ಇದಕ್ಕೆ ವಿರುದ್ಧವಾಗಿ ಮತ ಹಾಕಿದ್ದರಿಂದ ನಿರ್ಣಯ ವಿಫಲವಾಯಿತು. ಗಾಜಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ನಿಲ್ಲಿಸಿ, ತಕ್ಷಣವೇ ಯುದ್ಧವನ್ನು ಅಂತ್ಯಗೊಳಿಸಬೇಕೆಂದು ನಿರ್ಣಯದಲ್ಲಿ ಒತ್ತಾಯಿಸಲಾಗಿತ್ತು. ಆದರೆ, ಅಮೆರಿಕ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
“ಅಮೆರಿಕ ಮತ್ತು ಇಯುನಂತಹ ರಾಷ್ಟ್ರಗಳು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವ ಹಮಾಸ್‌ನ ಕ್ರೂರ ಕೃತ್ಯಗಳನ್ನು ಈ ನಿರ್ಣಯದಲ್ಲಿ ಖಂಡಿಸಲು ವಿಫಲವಾಗಿದೆ, ಹಾಗಾಗಿ ಈ ನಿರ್ಣಯ ಒಪ್ಪತಕ್ಕದ್ದಲ್ಲ,” ಎಂದು ಅಮೆರಿಕದ ಸಲಹೆಗಾರ್ತಿ ಮೋರ್ಗಾನ್ ಒರ್ಟಾಗಸ್ ಭದ್ರತಾ ಮಂಡಳಿಯಲ್ಲಿ ಹೇಳಿದ್ದಾರೆ.
2023ರಿಂದ ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆ ಮಂಡಿಸಿದ ನಿರ್ಣಯಗಳನ್ನು ಅಮೆರಿಕ ವೀಟೋ ಮಾಡಿರುವುದು ಇದು ಆರನೇ ಬಾರಿ. ಗಾಜಾದಲ್ಲಿ ನಡೆಯುತ್ತಿರುವ ಈ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಭಾಗಿಯಾಗಿದ್ದು, ಇಸ್ರೇಲ್‌ನ ದಾಳಿಗಳಿಂದ ಇಲ್ಲಿಯವರೆಗೆ 64,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಈ ಯುದ್ಧವು 2023ರ ಅಕ್ಟೋಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದಾಗ ಆರಂಭವಾಯಿತು, ಆ ದಾಳಿಯಲ್ಲಿ 1,200 ಇಸ್ರೇಲಿ ನಾಗರಿಕರು ಮೃತಪಟ್ಟಿದ್ದರು.
ಇದೇ ವೇಳೆ, ಈ ತಿಂಗಳ 13ರಂದು ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಗಾಗಿ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ನಿರ್ಣಯಕ್ಕೆ ಭಾರತ ಬೆಂಬಲ ನೀಡಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಶಾಂತಿಯುತ ಪರಿಹಾರಕ್ಕಾಗಿ, ‘ಎರಡು ರಾಷ್ಟ್ರಗಳ ಪರಿಹಾರ ಮಾರ್ಗ’ ವನ್ನು (Two-State Solution) ಜಾರಿಗೆ ತರುವ ಕುರಿತ ನ್ಯೂಯಾರ್ಕ್ ಘೋಷಣೆಯನ್ನು ಒಪ್ಪಿಕೊಳ್ಳುವ ನಿರ್ಣಯಕ್ಕೆ ಭಾರತ ಅನುಕೂಲಕರವಾಗಿ ಮತ ಚಲಾಯಿಸಿದೆ. ಫ್ರಾನ್ಸ್ ಮಂಡಿಸಿದ ಈ ನಿರ್ಣಯಕ್ಕೆ ಅಚ್ಚರಿಯ ರೀತಿಯಲ್ಲಿ 142 ದೇಶಗಳ ಬೆಂಬಲ ದೊರೆತಿದೆ. ಎಲ್ಲಾ ಗಲ್ಫ್ ರಾಷ್ಟ್ರಗಳು ಇದರ ಪರವಾಗಿ ಮತ ಹಾಕಿದ್ದರೆ, ಇಸ್ರೇಲ್, ಯು.ಎಸ್., ಅರ್ಜೆಂಟೀನಾ, ಹಂಗೇರಿ, ನಾರ್ವೆ, ಪಪುವಾ ನ್ಯೂಗಿನಿಯಾ ಮತ್ತು ಟಾಂಗಾದಂತಹ ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. ಇದೇ ಸಂದರ್ಭದಲ್ಲಿ, 193 ಸದಸ್ಯ ರಾಷ್ಟ್ರಗಳ ಮಹಾಸಭೆಯು ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಖಂಡಿಸಿದೆ.