Home ಬೆಂಗಳೂರು ಮೋದಿಯವರ ಆಪ್ತ ಕುಮಾರಸ್ವಾಮಿ ಬೆಂಗಳೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ? ಡಿಕೆ ಶಿವಕುಮಾರ್‌ ಪ್ರಶ್ನೆ

ಮೋದಿಯವರ ಆಪ್ತ ಕುಮಾರಸ್ವಾಮಿ ಬೆಂಗಳೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ? ಡಿಕೆ ಶಿವಕುಮಾರ್‌ ಪ್ರಶ್ನೆ

0

ಬೆಂಗಳೂರು: ರಸ್ತೆಗುಂಡಿಗಳನ್ನು ಮುಚ್ಚಲು ಗಡುವು ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮಳೆ ಬಂದಾಗ ರಸ್ತೆಗುಂಡಿ ಬೀಳುವುದು ಸಹಜ. ಇದು ಪ್ರಕೃತಿ ಮತ್ತು ನಾವು ನಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ನಾಯಕರು ರಸ್ತೆಗುಂಡಿಗಳ ಬಗ್ಗೆ ರಾಜಕೀಯ ಮಾಡುವುದನ್ನು ಖಂಡಿಸಿದ ಡಿ.ಕೆ. ಶಿವಕುಮಾರ್, ಕೇವಲ ಟ್ವೀಟ್ ಮಾಡಿದರೆ ಅಥವಾ ಹೇಳಿಕೆ ನೀಡಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಬೆಂಗಳೂರಿನಲ್ಲಿ ಮಾತ್ರ ಯಾಕೆ ಈ ಚರ್ಚೆ ನಡೆಯುತ್ತದೆ? ಮಹಾರಾಷ್ಟ್ರ ಅಥವಾ ದೆಹಲಿಯಲ್ಲಿರುವ ರಸ್ತೆಗುಂಡಿಗಳನ್ನು ನಾನು ತೋರಿಸಬಲ್ಲೆ ಎಂದು ಅವರು ಹೇಳಿದರು.

‘ಕೇಂದ್ರ ಸಚಿವ ಕುಮಾರಸ್ವಾಮಿ ಬೆಂಗಳೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ?’

ರಸ್ತೆಗುಂಡಿಗಳಿಂದ ಐಟಿ ಮತ್ತು ಸ್ಟಾರ್ಟ್‌ಅಪ್ ಕಂಪನಿಗಳು ಬೆಂಗಳೂರು ತೊರೆಯುತ್ತಿವೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ನೀವು ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಬೆಂಗಳೂರಿಗೆ ನಿಮ್ಮ ಕೊಡುಗೆ ಏನು ಎಂದು ಮೊದಲು ತಿಳಿಸಿ. ಯುಪಿಎ ಸರ್ಕಾರದ ಅವಧಿಯಲ್ಲಿ ಜೆಎನ್ ನರ್ಮ್ ಯೋಜನೆ ಮೂಲಕ ಬೆಂಗಳೂರಿಗೆ ಸಾಕಷ್ಟು ಅನುದಾನ ಬಂದಿತ್ತು. ಹಾಗೆಯೇ, ನೀವು ಪ್ರಧಾನಿಗಳಿಗೆ ಬಲಗೈ ಬಂಟರಾಗಿರುವಾಗ, ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ವಿಶೇಷ ಅನುದಾನ ಏಕೆ ತರಲಿಲ್ಲ?” ಎಂದು ನೇರ ಪ್ರಶ್ನೆ ಹಾಕಿದರು.

ಅಲ್ಲದೆ, “ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಐದೇ ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದೀರಿ, ಇದುವರೆಗೂ ಏಕೆ ಕೊಡಿಸಲಿಲ್ಲ? ಮಾಧ್ಯಮಗಳ ಮುಂದೆ ಮಾತನಾಡಿ, ಟ್ವೀಟ್ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ,” ಎಂದರು.

‘ಬೆಂಗಳೂರು ಜಾಗತಿಕ ಮಟ್ಟದ ನಗರ’

ರಸ್ತೆಗುಂಡಿಗಳಿಂದ ಉದ್ಯಮಿಗಳು ಬೆಂಗಳೂರನ್ನು ಬಿಟ್ಟು ಹೋಗುವುದಿಲ್ಲ. ಆಂಧ್ರ ಪ್ರದೇಶಕ್ಕೆ ಬರುವಂತೆ ಉದ್ಯಮಿಗಳಿಗೆ ನಾ.ರಾ. ಲೋಕೇಶ್ ಪತ್ರ ಬರೆದಿರುವ ಬಗ್ಗೆ ಮಾತನಾಡಿದ ಡಿಕೆಶಿ, “ಅವರಿಗೆ ಅಲ್ಲಿ ಜನರಿಲ್ಲ, ಅದಕ್ಕೆ ಕರೆಯುತ್ತಾರೆ. ವಿಶ್ವದ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನಲ್ಲಿ ಇರುವುದು ಇಲ್ಲಿನ ವ್ಯವಸ್ಥೆ ಮತ್ತು ಉತ್ತಮ ಪ್ರತಿಭೆಗಳು ಇರುವುದರಿಂದಲೇ. ಇಲ್ಲಿ 25 ಲಕ್ಷ ಇಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಇರುವುದು ಕೇವಲ 13 ಲಕ್ಷ ಮಾತ್ರ,” ಎಂದು ಬೆಂಗಳೂರಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ರಸ್ತೆ ರಿಪೇರಿಗಾಗಿ ಶಾಸಕರಿಗೆ ನೀಡಿರುವ ಅನುದಾನವನ್ನು ಬಳಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಶನಿವಾರ ಸಭೆ ನಡೆಸಲಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ನೀಡಿಲ್ಲ ಎಂದು ಅವರು ಆರೋಪಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಇತರ ಇಲಾಖೆಗಳ ಅನುದಾನ ಕಡಿತಗೊಳಿಸಲಾಗುತ್ತಿದೆ ಎಂಬ ವರದಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದರು.

You cannot copy content of this page

Exit mobile version