ಉತ್ತರಾಖಂಡ್‌ನ ನ್ಯೂ ತೆಹ್ರಿಯ ಪ್ರತಾಪ್ ನಗರ ಬ್ಲಾಕ್ ವ್ಯಾಪ್ತಿಯ ದೇವಲ್ ಗ್ರಾಮದ ಕೇತನ್ ಲಾಲ್ ಎಂಬ 18 ವರ್ಷದ ದಲಿತ ಯುವಕ, ಕಳೆದ ಆರು ತಿಂಗಳಿಂದ ಮೇಲ್ಜಾತಿಯ ಅಪ್ರಾಪ್ತ ಯುವತಿಯೊಂದಿಗೆ ಸ್ನೇಹ ಹೊಂದಿದ್ದನು. ಇವರ ಸ್ನೇಹವನ್ನು ಯುವತಿಯ ಕುಟುಂಬಸ್ಥರು ತೀವ್ರವಾಗಿ ವಿರೋಧಿಸಿದ್ದರು ಮತ್ತು ಆತನನ್ನು ಕೊಲ್ಲಲು ಸಂಚು ರೂಪಿಸಿದ್ದರು.
ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಯುವತಿಯು ಕೇತನ್‌ಗೆ ಫೋನ್ ಮಾಡಿ ತನ್ನ ಗ್ರಾಮಕ್ಕೆ ಬರುವಂತೆ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಕೇತನ್ ತನ್ನ ಸ್ನೇಹಿತ ದಿವಾಕರ್ ದಿಮ್ರಿ ಎಂಬಾತನನ್ನು ಕರೆದುಕೊಂಡು ಯುವತಿಯ ಗ್ರಾಮವಾದ ಖೋಲ್‌ಗಡ್‌ಗೆ ತೆರಳಿದ್ದಾನೆ. ಇವರಿಬ್ಬರು ಅಲ್ಲಿಗೆ ತಲುಪುತ್ತಿದ್ದಂತೆ ಯುವತಿಯ ಕುಟುಂಬಸ್ಥರು ಅವರನ್ನು ಕೋಣೆಯೊಂದರಲ್ಲಿ ಬಂಧಿಸಿ, ಮರದ ದಂಡೆಗಳಿಂದ ಅತ್ಯಂತ ಅಮಾನುಷವಾಗಿ ಥಳಿಸಿದ್ದಾರೆ. ಮಾರನೆಯ ದಿನ ಅಂದರೆ ಸೋಮವಾರ ಬೆಳಗ್ಗೆ ಯುವತಿಯ ತಂದೆಯು ಕೇತನ್‌ನ ತಂದೆ ಧನ್‌ಪಾಲ್‌ಗೆ ಫೋನ್ ಮಾಡಿ, ಮಗನನ್ನು ಬಂದು ಕರೆದುಕೊಂಡು ಹೋಗುವಂತೆ ಹೇಳಿದ್ದಾನೆ.
ತಕ್ಷಣ ಧನ್‌ಪಾಲ್ ಸ್ಥಳಕ್ಕೆ ಧಾವಿಸಿದಾಗ, ಕೇತನ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಚೌಂಡ್ ಲಾಂಬ್‌ಗಾವ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೇತನ್ ಮೃತಪಟ್ಟಿದ್ದಾನೆ. ಈ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಕೇತನ್ ಸ್ನೇಹಿತ ದಿವಾಕರ್ ದಿಮ್ರಿ ಬೌರಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತನ ತಂದೆ ಧನ್‌ಪಾಲ್ ನೀಡಿದ ದೂರಿನ ಮೇರೆಗೆ ತೆಹ್ರಿ ಗರ್ವಾಲ್‌ನ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (SSP) ಶ್ವೇತಾ ಚೌಬೇ ಅವರು ಕೊಲೆ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಶ್‌ವೀರ್ ಸಿಂಗ್ ಪನ್ವಾರ್ ಎಂಬಾತನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
